newsics.com
ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಸೆಪ್ಟೆಂಬರ್ 9ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದಂತೆ ಸೆಪ್ಟೆಂಬರ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಲಿದೆ. ಈ ಮೂಲಕ ಈ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಸೋಮವಾರ ನ್ಯಾಯಮೂರ್ತಿ ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ನಡೆದಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದ ಆಲಿಸಿದ ನ್ಯಾಯಾದೀಶರು ವಿಚಾರಣೆಯನ್ನ ಮುಂದಿನ ಸೋಮವಾರ ಅಂದರೆ ಸೆಪ್ಟೆಂಬರ್ 9ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರಿಗೆ ಇನ್ನೂ 8 ದಿನ ರಿಲೀಫ್ ಸಿಕ್ಕಂತಾಗಿದೆ.
ಸೆಪ್ಟೆಂಬರ್ 9ರಂದು ಎಜಿ ವಾದ ಮಂಡಿಸಲಿದ್ದಾರೆ. ಸೆಪ್ಟೆಂಬರ್ 12ರಂದು ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ಪ್ರತ್ಯುತ್ತರ ನೀಡಲಿದ್ದಾರೆ.