Thursday, June 17, 2021

ಸಾವಯವದಲ್ಲಿ ತರಕಾರಿ ಬೆಳೆದ ಖುಷಿ!

ಬೇಸಾಯದ ಕತೆ- 1
* ಚಂಸು ಪಾಟೀಲ್
response@134.209.153.225
chamsupatil@gmail.com

ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಗಳನ್ನು ಬೆಳೆಯೋದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು. 2010/11 ರವರೆಗೂ ಪ್ರತಿ ವರ್ಷ ಒಂದೆಕರೆ ತರಕಾರಿ ಬೆಳೆಯುತ್ತಿದ್ದೆವು. ನಮ್ಮ ಸಂಪೂರ್ಣ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲೆ ಬೆಳೆ ಬೆಳೆಯಬೇಕೆಂದು ನಿರ್ಧರಿಸಿದ ಮೇಲೆ ತರಕಾರಿಗಳನ್ನೂ ಹಾಗೆ ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೆ ಎದುರಾಗಿತ್ತು. ಹಾಗೆ ಬೆಳೆದ ಅನೇಕ ಕೃಷಿಕರ ದೃಷ್ಟಾಂತಗಳು ಕಣ್ಣೆದುರಿಗೆ ಇದ್ದವಾದ್ದರಿಂದ ಅದಕ್ಕಾಗಿ ಹಿಂಜರಿವ ಅಗತ್ಯವಿರಲಿಲ್ಲ. ಆದರೂ ಕೃಷಿಯಲ್ಲಿ ನೋಡಿದ್ದನ್ನು ನೋಡಿದಂತೆಯೆ, ಕೇಳಿದ್ದನ್ನು ಕೇಳಿದಂತೆಯೆ ಮಾಡಲಾಗುವುದಿಲ್ಲ.
ಮಾಡಿದರೂ ಪ್ರಾಯೋಗಿಕ ನೆಲದ ಗುಣ, ಹವಾಮಾನ, ಕಾಲಮಾನ ಹಾಗೂ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮೀ ಆದರೂ ಫಲಿತಾಂಶ ಬೇರೆಯೆ ಆಗಿರುತ್ತದೆ. ಎಲ್ಲ ಬೆಳೆಗಳ ಬೆಲೆ ಅನಿಶ್ಚಿತ, ಮಳೆಗಾಲವೂ ಅನಿಶ್ಚಿತ
ಇಂಥ ಅನಿಶ್ಚಿತತೆಯ ಮಧ್ಯೆಯೆ ರೈತ ಸುನಿಶ್ಚಿತನಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅವನ ಕೆಲಸಗಳೂ ಅನಿಶ್ಚಿತವಾದರೆ ಅವನ ಬೆಳೆ ಹಾಳಾದಂತೆಯೆ!
ಏನೇ ಆಗಲಿ, ಒಂದೆಕರೆಯಲ್ಲಿ ಮೂರು ಬಗೆಯ ತರಕಾರಿ ಬೆಳೆದೇ ಬಿಡೋಣ ಎಂದು ನಿರ್ಧರಿಸಿದೆ.
ಸಹಜ ಸಮೃದ್ಧದ ಕೃಷ್ಣಪ್ರಸಾದ ಅವರು ಟೊಮ್ಯಾಟೋ, ಮೆಣಸಿನಕಾಯಿ ಹಾಗೂ ಮುಳಗಾಯಿಯ ಜವಾರಿ ಬೀಜಗಳನ್ನು ಕೊಡುವುದಾಗಿ ಭರವಸೆ ಕೊಟ್ಟರು.
ಅದರ ಪ್ರಕಾರ, ಕೃಷ್ಣ ಪ್ರಸಾದ ಅವರಿಂದ ಬೀಜ ಪಡೆದು ಮೇನಲ್ಲಿಯೇ ಟೊಮೇಟೋ, ಮುಳಗಾಯಿ ಮತ್ತು ಮೆಣಸಿನ ಬೀಜ ಚೆಲ್ಲಿ ಮಡಿಗಳಲ್ಲಿ ಸಸಿಗಳನ್ನು ಬೆಳೆಸಿದೆವು. ಜೂನ್ ಎರಡನೇ ವಾರಕ್ಕೆ ಟೊಮೇಟೋ ಸಸಿಗಳು ಆಗಲೇ ಒಂದು ಗೇಣಿನ ಮೇಲೆ ಬೆಳೆದು ಹಚ್ಚಲು ಬಂದಿದ್ದವು. ಹಚ್ಚಬೇಕಾದ ಹೊಲವೂ ಸಿದ್ಧಗೊಂಡಿತ್ತು. ಎರಡೂವರೆ ಅಡಿ ಅಂತರದಲ್ಲಿ ದಾಯ ಸೀಳಿ, ಮೊಳಕ್ಕೆ ಒಂದರಂತೆ ಸಸಿಯನ್ನು ಹಚ್ಚುವ ಯೋಜನೆ ಹಾಕಿಕೊಂಡಿದ್ದೆವು. ಅದೇ ರೀತಿ ಹಚ್ಚುವಾಗ ಟೊಮೆಟೋ ಸಸಿಗಳ ಬೇರುಗಳನ್ನು ನೀರಿನಲ್ಲಿ ತೊಳೆದು, ಬೇರೊಂದೆಡೆ ಕಲಸಿಟ್ಟಿದ್ದ ಸಗಣಿ ನೀರಿನಲ್ಲಿ ಎದ್ದಿ ಸಸಿ ನಾಟಿ ಮಾಡಿದೆವು. ಸಸಿಗಳು ಚೆನ್ನಾಗಿ ಹತ್ತಿದವು. ಮುಳಗಾಯಿ ಮತ್ತು ಮೆಣಸಿನ ಸಸಿಗಳು ನಾಟಿಗೆ ಬರುವುದು ಸ್ವಲ್ಪ ತಡವಾಗುತ್ತದೆ. ಟೊಮ್ಯಾಟೋ ಇಪ್ಪತ್ತೈದು ಮೂವತ್ತೆ ದಿನಕ್ಕೆ ಹಚ್ಚಲು ಬಂದರೆ, ಮುಳಗಾಯಿ ಮತ್ತು ಮೆಣಸಿನ ಸಸಿಗಳಿಗೆ ಮೂವತ್ತರಿಂದ ನಲವತ್ತು ದಿನಗಳು ಬೇಕಾಗುತ್ತದೆ. ಆನಂತರ ಬಂದ ಅವುಗಳನ್ನೂ ಇದೇ ರೀತಿಯಾಗಿ ಹಚ್ಚಿದೆವು. ಅವು ಕೂಡ ಚೆನ್ನಾಗಿ ಹತ್ತಿದ್ದು ಕಂಡು ಖುಷಿಯಾಯಿತು‌.
ವಿಷಸಿಂಪರಣೆ ಮತ್ತು ರಸಾಯನಿಕ ಗೊಬ್ಬರವಿಲ್ಲದೇ ಈಗಿಗಂತೂ ತರಕಾರಿ ಬೆಳೆಯೋಕೆ ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆಲ್ಲ ಕಾರಣ ಬೀಜೌಷಧ ಮತ್ತು ರಸಗೊಬ್ಬರದ ಕಂಪನಿಗಳೇ! ಅವು ಪೈಪೋಟಿಯಿಂದ ನಡೆಸುತ್ತಿರುವ ಜಾಹೀರಾತಿನ ಕಾಳಗದಲ್ಲಿ ರೈತ ಮತ್ತು ಗ್ರಾಹಕರು ಸಾವಿನದವಡೆಗೆ ಸಿಕ್ಕಿದ್ದರೆ, ಅವು ಪೈಶಾಚಿಕ ಲಾಭಗಳಿಕೆಯಲ್ಲೆ ಮಗ್ನವಾಗಿವೆ. ಇಂಥ ಸಂದರ್ಭದಲ್ಲಿ ಇದಾವುದೂ ಇಲ್ಲದೆ ತರಕಾರಿ ಬೆಳೆಯೋದು ನನಗೆ ಸವಾಲೆನಿಸಿದರೂ ಅದರಲ್ಲೇನೋ ಖುಷಿ ಇತ್ತು.
ಈ ಮೂರೂ ತರಕಾರಿ ಬೆಳೆಗಳಿಗೆ ನಾನೇನೂ ಹೆಚ್ಚಿನ ಕಾಳಜಿ ತೋರಲಿಲ್ಲ. ಸಮಯಕ್ಕೆ ಸರಿಯಾಗಿ ಎಡೆ ಹೊಡೆದೆವು. ಒಂದೆರಡು ಬಾರಿ ಜೀವಾಮೃತ ಕೊಟ್ಟೆವು. ಕಹಿ ಗುಣವುಳ್ಳ ತರುಲತೆಗಳ ಎಲೆಯನ್ನು ಗೋಮೂತ್ರದಲ್ಲಿ ಕಳೆ ಹಾಕಿ ಅದನ್ನೆ ಔಷಧಿಯಾಗಿ ಸಿಂಪರಿಸಿದೆವು. ಇದರಲ್ಲಿ ಟೊಮ್ಯಾಟೋ ಅದ್ಭುತ ಇಳುವರಿ ಬಂದಿತ್ತು. ದಿನವೂ ಹಣ್ಣು ಹರಿಯುತ್ತಲೇ ಇದ್ದರೂ ಅದು ಹಾಗೇ ಹೂಕಾಯಿ ಕಚ್ಚುತ್ತಲೇ ಇತ್ತು. ಅದು ಫಲಕ್ಕೆ ಸುರುವಿಟ್ಟುಕೊಳ್ಳುತ್ತಲೆ ಟೊಮ್ಯಾಟೋ ಬೆಲೆ ಕುಸಿದುಬಿಟ್ಟಿತು.
ಮೊದಲೆಲ್ಲ ಒಂದು ವಾರ ಕೆಜಿಗೆ ಒಂದು/ಒಂದೂವರೆ ರೂ.ನಂತೆ ಮಾರಾಟವಾಯ್ತು. ಮಾರನೇ ವಾರ ಹಣ್ಣನ್ನು ಕೊಳ್ಳುವರೆ ಇಲ್ಲದ ಹಾಗಾಯಿತು. ಅಂದರೆ ಅಷ್ಟೊಂದು ವಿಪರೀತ ಹಣ್ಣು ಪೇಟೆಗೆ ಬರತೊಡಗಿತ್ತು. ಹೀಗಾಗಿ ನಾವು ಹಣ್ಣು ಹರಿಯುವುದನ್ನೇ ನಿಲ್ಲಿಸಿದೆವು. ಇಡೀ ಹೊಲ ಟೊಮ್ಯಾಟೋ ಹಣ್ಣುಗಳಿಂದ ಕೆಂಪಗೆ ಕಾಣುತಿತ್ತು. ಅದು ಹಾಗೆ ಕೆಟ್ಟು ಹೋಯಿತು.
ಮೆಣಸಿನ ಕಾಯಿ, ಮತ್ತು ಮುಳಗಾಯಿ ಇಳುವರಿ ಸ್ವಲ್ಪ ಕುಂಠಿತಗೊಂಡವು. ಏಕೆಂದರೆ, ಟೊಮ್ಯಾಟೋ‌ಕ್ಕೆ ಹೋಲಿಸಿದರೆ ಇವುಗಳಿಗೆ ರೋಗಬಾಧೆ ಹೆಚ್ಚು. ಇವೆರಡಕ್ಕೂ ಚಿಗುರಿನಲ್ಲೆ ರಂಧ್ರ ಕೊರೆದು ಗಿಡವನ್ನ್ನೆ ಬೆಳೆಯದಂತೆ ಮಾಡುವ ಸುಳಿಹುಳದ ಕಾಟ. ಇದನ್ನು ಜೈವಿಕ ಔಷಧಿಯಿಂದ ನಿಯಂತ್ರಿಸುವುದು ಸ್ವಲ್ಪ ನಿಧಾನವಾಗಿ, ಹೆಚ್ಚು ದಿನಗಳೆದಿದ್ದರಿಂದ ಅವುಗಳ ಇಳುವರಿ ಸಾಧಾರಣ ಆಯಿತು. ಬೆಲೆಯೂ ಅಷ್ಟಕ್ಕಷ್ಟೆ ಅತ್ತ ದುಬಾರಿಯೂ ಅಲ್ಲದ , ಇತ್ತ ಕನಿಷ್ಠವೂ ಅಲ್ಲದ ಬೆಲೆ ಸಿಕ್ಕಿತು.
ಒಟ್ಟಾರೆ, 2012ರಲ್ಲಿನ ನನ್ನೀ ಸಾಹಸದಲ್ಲಿ ಯಾವುದೇ ನಷ್ಟವೂ ಆಗದೇ, ಲಾಭವೂ ಬಾರದೇ ಅಷ್ಟಕ್ಕಷ್ಟೇ ಎಂಬಂತಾಯ್ತು‌.! ಆದರೆ, ಉತ್ತಮ ಬೆಲೆ ನಿಶ್ಚಿತವಾದರೆ, ಯಾವುದೇ ವಿಷೋಪಚಾರಗಳಿಲ್ಲದೇ ತರಕಾರಿಯನ್ನೂ ಮಾಡಿ ಗೆಲ್ಲಬಹುದೆಂಬ ಆತ್ಮವಿಶ್ವಾಸ ಮೂಡಿಸುವಲ್ಲಿ ನನ್ನೀ ಪ್ರಯತ್ನ ಸಫಲವಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ...

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ ಸುರಿದಂತೆ ಮಳೆ, ರಾಜ್ಯದಲ್ಲೇ ಅತ್ಯಧಿಕ ದಾಖಲೆಯ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...
- Advertisement -
error: Content is protected !!