* ಚಂಸು ಪಾಟೀಲ್
response@134.209.153.225
ಕೆಲ ದಿನದ ಹಿಂದೆ ಮುದೇನೂರಿನ ಸಹಜ ಕೃಷಿಕರೂ ಹಿರಿಯರೂ ಆದ ಶಂಕರಗೌಡ ಪಾಟೀಲರು ಹಾಗೂ ರಾಣೇಬೆನ್ನೂರಿನ ಹಿರಿಯರಾದ ಎಮ್‌ಜಿ ಪಾಟೀಲರು ನಮ್ಮ ಮನೆಗೆ ಬಂದಿದ್ದರು. ಸಹಜಕೃಷಿಯಲ್ಲಿ ನನಗೆ ತಿಳಿದಿರುವ ಮಟ್ಟಿಗೆ ಕರ್ನಾಟಕದ ಪುಕುವೋಕಾ ಎಂದು ಕರೆಯಬಹುದಾದರೆ ಅದು ಈ ನಮ್ಮ ಶಂಕರಗೌಡರನ್ನೆ ಕರೆಯಬೇಕು. ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಅವರು ಪುಕುವುಕಾ ಮಾದರಿಯ ಕೃಷಿ ಬದುಕಿಗೆ ತಮ್ಮನ್ನೆ ಸಮರ್ಪಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇದರ ಜತೆಗೆ ಈ ಭಾಗದಲ್ಲಿನ ಸಾವಯವ/ಸಹಜ/ ಪಾರಂಪರಿಕ ಕೃಷಿಕರನ್ನು ಒಂದೆಡೆ ಸೇರಿಸಿ, ಪರಸ್ಪರ ವಿಚಾರ ವಿನಿಮಯ ಮಾಡಿಸುವ, ಅಂಥ ರೈತರ ಆಹಾರೋತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಕುರಿತಂತೆ ಏನು ಮಾಡಬಹುದೆಂಬ ಪ್ರಯತ್ನದಲ್ಲೂ ಶಂಕರಗೌಡರು ಪ್ರಯತ್ನಶೀಲರಾಗಿದ್ದಾರೆ.
ಇನ್ನು ಎಮ್‌ಜಿ ಪಾಟೀಲರ ಬಗೆಗೂ ಕೆಲ ಮಾತುಗಳನ್ನು ಇಲ್ಲಿ ಹೇಳಲೇಬೇಕು. 1983/84ರ ಸುಮಾರಿನಲ್ಲಿ ಜನತಾ ಸರ್ಕಾರ ಇದ್ದಾಗ ರಾಣೇಬೆನ್ನೂರಿನ ಶಾಸಕರಾಗಿದ್ದ ಬಿಜಿ ಪಾಟೀಲರ ಸೋದರರಾದ ಎಂಜಿ ಪಾಟೀಲರು, ಅದೇ ಸುಮಾರಿನಲ್ಲಿ ಈ ಭಾಗದಲ್ಲಿ ಕಾಲೂರಿದ ಬಹಳಷ್ಟು ಬೀಜೋತ್ಪಾದಕ ಕಂಪನಿಗಳ ಬೆಳವಣಿಗೆಗೆ ಸಹಕರಿಸಿದರು. ಇದರ ಪರಿಣಾಮ ಮುಂದೆ ಕೆಲವೇ ವರ್ಷಗಳಲ್ಲಿ ಈ ಎಂಎನ್ಸಿ ಕಂಪನಿಗಳು ದೈತ್ಯವಾಗಿ ಬೆಳೆದು ರಾಜ್ಯದ ತುಂಬೆಲ್ಲ ತಮ್ಮ ಬೇರು ಚಾಚಿದವು.
ಅಪ್ಪನಿಗೂ ಎಂಜಿ ಪಾಟೀಲರಿಗೂ ಒಳ್ಳೆಯ ಸ್ನೇಹ ಸಂಬಂಧ, ಒಡನಾಟವಿತ್ತು. ಅವರು ಮಹೀಕೋ ಕಂಪನಿಯ ಜತೆಗಿದ್ದಾಗ ಅಪ್ಪ ಎರಡು ಟೊಮ್ಯಾಟೋ ಪ್ಲಾಟು ಮಾಡಿದ್ದು ನನಗೆ ಈಗಲೂ ನೆನಪಿದೆ. ಆಗ ಈ ಕಂಪನಿಗಳು ಒಂದು ಕೆಜಿ ಟೊಮ್ಯಾಟೋ ಬೀಜಕ್ಕೆ 500ರೂ. ಕೊಡುತ್ತಿದ್ದವು. ಎಲ್ಲ ರೈತರಿಗೂ ಇದರಿಂದ ಲಾಭವಾಗುತ್ತಿರಲಿಲ್ಲ. ಅದಕ್ಕೆ ಕಾರಣ ಬಹಳ ಸರಳವಾಗಿತ್ತು. ಹೆಚ್ಚು ಬೀಜವನ್ನು ಹೊಂದಿರುವ ತಳಿ ಯಾವ ರೈತರಿಗೆ ಸಿಗುತಿತ್ತೋ ಅವರು 50/60 ಕೆಜಿವರೆಗೂ ಬೀಜ ತೆಗೆಯುತಿದ್ದರು. ಕಡಿಮೆ ಬೀಜದ ತಳಿ ಸಿಕ್ಕವರು 20/ 30 ಕೆಜಿ ಬೀಜ ತೆಗೆಯುತಿದ್ದರು. ನೀರಾವರಿಯಲ್ಲಿ ಅದೂ ತರಕಾರಿ ಬೆಳೆಗಳಲ್ಲಿ, ಯಾವ ಯಾವ ಅವಧಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಹೇಗೆ ಗೊಬ್ಬರೌಷಧಿ ಉಪಚಾರ ನೀಡಬೇಕೆಂಬುದು ನಮ್ಮ ರೈತರಿಗೆ ತಿಳಿದಿದ್ದೇ ಈ ಕಂಪನಿಗಳು ಬಂದ ನಂತರ. ಒಂದು ಪ್ಲಾಟಿಗೆ ಆಗ ಏನಿಲ್ಲವೆಂದರೂ 15/20 ಸಾವಿರ ರೂ. ವರೆಗೆ ಖರ್ಚು ಬರುತಿತ್ತು. ಆದ್ದರಿಂದ 50/60 ಕೇಜಿ ಬೀಜ ತೆಗೆದವರಿಗೆ ಮಾತ್ರ ಈ ಪ್ಲಾಟ್‌ಗಳಿಂದ ಲಾಭಾಂಶ ಸಿಗುತಿತ್ತು. ಆದರೆ, ಪ್ರತಿ ರೈತರಿಗೂ ನಾವೂ ಹೆಚ್ಚು ಬೀಜ ತೆಗೆಯಬೇಕೆಂಬ ಉಮೇದು. ಈ ವರ್ಷವಿಲ್ಲದಿದ್ದರೆ ಮುಂದಿನ ವರ್ಷವಾದರೂ ಹೆಚ್ಚು ಬೀಜ ತೆಗೆದೆವೆಂಬ ನಂಬುಗೆ. ಇದು ರೈತರಲ್ಲಿ ಒಂದು ರೀತಿಯ ಪೈಪೋಟಿಗೇ ಕಾರಣವಾಗಿತ್ತು. ಟೊಮ್ಯಾಟೋ, ಬದನೆ, ಹತ್ತಿ, ಕರಬೂಜ, ಕಲ್ಲಂಗಡಿ, ಸೌತೆ, ಮೆಣಸಿನಕಾಯಿ, ಸಜ್ಜೆ, ಗೋವಿನಜೋಳ ಹೀಗೆ ವಿವಿಧ ಬೀಜಗಳಿಗಾಗಿ ಈ ಬೀಜೋತ್ಪಾದನೆ ಹಲವು ವರ್ಷ ಎಗ್ಗಿಲ್ಲದೇ ನಡೆಯಿತು. ಈ ಮಧ್ಯೆ ಈ ಎಲ್ಲ ಬೆಳೆಗಳ ಜವಾರಿ ಬೀಜಗಳು ಕಣ್ಮರೆಯಾಗಿ ಹೋಗಿದ್ದೆ ಯಾರಿಗೂ ಗೊತ್ತಾಗಲಿಲ್ಲ. ಅಪ್ಪ ಕೂಡ ಆಗ ಟೊಮ್ಯಾಟೋ ಅಲ್ಲದೇ, ಸೂರ್ಯಪಾನ, ಸಜ್ಜೆ, ಹತ್ತಿ, ಗೋವಿನ ಜೋಳದ ಪ್ಲಾಟುಗಳನ್ನು ಮಾಡಿದ್ದ. ಹತ್ತಿಯ ಪ್ಲಾಟ್ ಮಾಡಿದಾಗ ನಾನು ರಾಣೇಬೆನ್ನೂರಿ ಶಿವಾ ಹಾಸ್ಟೇಲ್‌ನಲ್ಲಿದ್ದೆ. ನಮ್ಮ ಪ್ಲಾಟಿನಲ್ಲಿನ ಗಂಡು ಹತ್ತಿಗಿಡಗಳ ಬೆಳವಣಿಗೆ ಸ್ವಲ್ಪ ಕುಂಠಿತಗೊಂಡು ಪರಾಗಸ್ಪರ್ಶ ಕ್ಕೆ ಗಂಡು ಹೂವಿನ ಕೊರತೆ ಉಂಟಾಗಿತ್ತು. ಆಗ ಅಪ್ಪ ನನಗೆ ಒಂದು ಸೈಕಲ್ ಕೊಡಿಸಿ, ಬೆಳಿಗ್ಗೆ ಬೇಗ ಎದ್ದು ಎಂಜಿ ಪಾಟೀಲರ ತೋಟದಲ್ಲಿ ಹತ್ತಿಯ ಗಂಡು ಹೂ ತೆಗೆದುಕೊಂಡು ಬರಲು ಹೇಳಿ, ನನಗೆ ಆ ಜವಾಬ್ದಾರಿ ವಹಿಸಿದ್ದ. ಎಂಜಿ ಪಾಟೀಲರ ಹೊಲ ರಾಣೇಬೆನ್ನೂರಿನ ಪಕ್ಕದಲ್ಲೆ ನಮ್ಮೂರಿನ ರಸ್ತೆಯಲ್ಲಿ ಇತ್ತು. ಆಗ ಅವರೂ ಅದೇ ಕಂಪನಿಯ ಹತ್ತಿ ಪ್ಲಾಟ್ ಮಾಡಿದ್ದರು.
ಬೀಜೋತ್ಪಾದನೆಯ ಈ ಹೊಸ ಕೃಷಿ ನಮ್ಮ ರೈತರಲ್ಲಿ ಏನಾದರೂ ಬದಲಾವಣೆ ತಂದಿತೇ ಎಂದು ಕೇಳಿದರೆ ಉತ್ತರ ಶೂನ್ಯ. ಕಂಪನಿಗಳ ಈ ಆಗಮನದಿಂದ ಕೃಷಿಯಲ್ಲಿ ಗೊಬ್ಬರ ಔಷಧಿಗಳ ತಿಳುವಳಿಕೆ ಮುಖಾಂತರ ಬಳಕೆಯೂ ಹೆಚ್ಚಿತು. ಅದು ಹೆಚ್ಚಿನ ಖರ್ಚಿಗೆ ದಾರಿ ಮಾಡಿಕೊಟ್ಟಿತು. ಹತ್ತುಪಟ್ಟು ಹೆಚ್ಚು ದರದಲ್ಲಿ ಬೀಜ ಮಾರತೊಡಗಿದ ಕಂಪನಿಗಳು ದಷ್ಟಪುಷ್ಟವಾಗಿ ಬೆಳೆದವೆ ವಿನಃ ರೈತರು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳಲ್ಪಟ್ಟರು.