Wednesday, July 6, 2022

ಮರಾಠವಾಡಾ ಮಹಿಳೆಯರ ಕೃಷಿ‌ ಕ್ರಾಂತಿ!

Follow Us

* ಕೃಷಿಯಾಯ್ತು ಸಬಲೀಕರಣದ ಸೋಪಾನ…

ಮಹಾರಾಷ್ಟ್ರದ ಮರಾಠವಾಡಾ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮುಂದೆ ಸಾಗುತ್ತಿದೆ. ಬರಪೀಡಿತ ಪ್ರದೇಶವಾಗಿದ್ದರೂ ಕೃಷಿಯನ್ನು ನೆಚ್ಚಿಕೊಂಡು ಬದುಕು ಮಾಡಬಹುದು ಎನ್ನುವ ಭರವಸೆ ಮೂಡಿಸುತ್ತಿದೆ. ಇಲ್ಲಿನ ಲಕ್ಷಾಂತರ ಮಹಿಳೆಯರು ಅತಿ ಕಡಿಮೆ ನೀರು ಬಳಸಿ, ಬಹುಬೆಳೆ ವಿಧಾನವನ್ನು ಅನುಸರಿಸುತ್ತ ಸಬಲೀಕರಣದತ್ತ ದಾಪುಗಾಲಿಟ್ಟಿದ್ದಾರೆ.


* ಸಮಾಹಿತ
newsics.com@gmail.com

ಸಾವಯವ ಮಾದರಿಯಲ್ಲಿ ಬೆಳೆದರೆ ಬೆಳೆ ಕಡಿಮೆ, ಗುಣಮಟ್ಟ ಉತ್ಕೃಷ್ಟವಾಗಿರುವುದಿಲ್ಲ, ಭೂಮಿಯ ವಿಸ್ತಾರಕ್ಕೆ ತಕ್ಕಂತೆ ಬೆಳೆ ಬರುವುದಿಲ್ಲ ಇತ್ಯಾದಿ ನಂಬಿಕೆಗಳು ರೈತರಲ್ಲಿವೆ. ಆದರೆ, ಇವೆಲ್ಲ ಸತ್ಯಕ್ಕೆ ದೂರವಾದದ್ದು ಎನ್ನುವುದನ್ನು ಮಹಾರಾಷ್ಟ್ರದ ಮರಾಠವಾಡಾದ ರೈತ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

ಬರಪೀಡಿತ ಪ್ರದೇಶ ಎಂದೇ ಕುಖ್ಯಾತಿ ಗಳಿಸಿರುವ ಪ್ರದೇಶ ಮರಾಠವಾಡಾ. ಇಲ್ಲಿನ ಮಹಿಳೆಯರು ಒಣ ನೆಲದಲ್ಲೇ ಕಡಿಮೆ ನೀರು ಬಳಸಿ, ಸಾವಯವ ಮಾದರಿಯಲ್ಲಿ ಬೆಳೆಗಳನ್ನು ಬೆಳೆದು ತೋರಿಸಿಕೊಟ್ಟಿದ್ದಾರೆ. ಇಂಥ ಸಾಧನೆ ಮಾಡಿರುವುದು ಒಬ್ಬಿಬ್ಬರಲ್ಲ, ಸಮಗ್ರ ಪ್ರದೇಶದ ಮಹಿಳೆಯರು ಇಂಥದ್ದೊಂದು ಸಾಧನೆಗೆ ಕೊಡುಗೆ ನೀಡಿದ್ದಾರೆ. ಈ ಮೂಲಕ, ಬರೋಬ್ಬರಿ 1.38 ಲಕ್ಷ ಮಹಿಳೆಯರು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಂಡಿದ್ದಾರೆ.

ಇವರೆಲ್ಲರೂ ತಮಗಿರುವ ಸೀಮಿತ ಜಮೀನಿನಲ್ಲೇ ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಕೇವಲ ಒಂದು ಎಕರೆ ಜಮೀನು ಹೊಂದಿರುವ ಮಹಿಳೆಯರೇ ಇಲ್ಲಿ ಅಧಿಕವಾಗಿದ್ದಾರೆ ಎಂದರೆ ಅವರ ಪರಿಶ್ರಮದ ಅರಿವಾಗುತ್ತದೆ.
ಪತಿ ಜತೆಯೇ ಸವಾಲು…
ಲಾತೂರ್ ಜಿಲ್ಲೆಯ ಸಂತೋಷಿ ಸುರ್ವಾಸೆ ಎಂಬಾಕೆಗೆ ಬದುಕಿನಲ್ಲಿ ಹೇಗಾದರೂ ಜಯಿಸಲೇಬೇಕಿತ್ತು. ಅದಕ್ಕಾಗಿ ಆಕೆ ನೆಚ್ಚಿಕೊಂಡಿದ್ದು ಒಂದೆಕರೆ ಒಣ ಭೂಮಿಯನ್ನು! ಹೊಸ ಮಾದರಿಯ ಸಾವಯವ ಕೃಷಿಯ ಕುರಿತು ಪಡೆದ ತರಬೇತಿಯ ಜ್ಞಾನ ಬೆನ್ನಿಗಿತ್ತು. ಒಂದು ಎಕರೆ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾದಳು. ಅಚ್ಚರಿಯ ಸಂಗತಿ ಎಂದರೆ, ಇಲ್ಲಿ ಆಕೆಯ ಎದುರಾಳಿ ಬೇರಾರೂ ಆಗಿರಲಿಲ್ಲ, ಸ್ವತಃ ಆಕೆಯ ಪತಿ! ಆತ ನಾಲ್ಕು ಎಕರೆ ಭೂಮಿಯಲ್ಲಿ ಉನ್ನತ ಮಟ್ಟದ ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಸಾಕಷ್ಟು ನೀರು ಸುರಿದು ತಾನೇ ಹೆಚ್ಚು ಬೆಳೆ ತೆಗೆಯುವುದಾಗಿ ಸವಾಲೊಡ್ಡಿದ್ದ. “ಯಾರ ಕೃಷಿ ಪದ್ಧತಿಯಿಂದ ಹೆಚ್ಚು ಬೆಳೆ ಬರುತ್ತದೆ ನೋಡೋಣ’ ಎನ್ನುವ ಸವಾಲನ್ನು ಸಂತೋಷಿ ಸ್ವೀಕರಿಸಿದ್ದಳು.

ಗುಣಮಟ್ಟದ ಸಾವಯವ ಗೊಬ್ಬರ ಸಿದ್ಧ ಮಾಡಿಕೊಂಡು, ನಿರ್ದಿಷ್ಟ ಅಂದಾಜಿಗೆ ತಕ್ಕಂತೆ ಬೀಜ ಬಿತ್ತನೆ ಮಾಡಿದಳು. ನಿಯಿಮಿತವಾಗಿ ನೀರು ಪೂರೈಸಿದಳು. ಜೋಳ, ಟೊಮ್ಯಾಟೊ, ಹೆಸರುಬೇಳೆ, ಬದನೆಕಾಯಿಗಳನ್ನು ಬೆಳೆದಳು. ಬರದ ಸನ್ನಿವೇಶವಿದ್ದರೂ ಆಕೆಯ ಹೊಲದಲ್ಲಿ ಬೆಳೆಗಳು ಬೆಳೆದಿದ್ದವು. ಆದರೆ, ಸೋಯಾಬೀನ್ ಬೆಳೆದಿದ್ದ ಆಕೆಯ ಪತಿಯ ಹೊಲ ಒಣಗಿ ನಿಂತಿತ್ತು. ಅತಿ ಸಣ್ಣ ಪ್ರಮಾಣದ ಬೆಳೆಯಷ್ಟೇ ಬಂದಿತ್ತು. ಆಕೆ ಗೆದ್ದಿದ್ದಳು. ಮುಂದಿನ ವರ್ಷ ತಮ್ಮ ಪೂರ್ತಿ ಐದು ಎಕರೆಯಲ್ಲೂ ಆಕೆಯ ಕೃಷಿ ಪದ್ಧತಿಯೇ ಜಾರಿಗೆ ಬಂದಿತ್ತು. ಮುಂದಿನ ಮೂರು ವರ್ಷಗಳಲ್ಲಿ ಕೃಷಿ ಸಂಬಂಧಿತ ಎಲ್ಲ ನಿರ್ಧಾರಗಳನ್ನೂ ಆಕೆಯೇ ತೆಗೆದುಕೊಳ್ಳುವಂಥವಳಾದಳು. ಎಕರೆಗೆ ವಾರ್ಷಿಕ 3 ಲಕ್ಷ ರೂಪಾಯಿ ಆದಾಯ ಸಿಗತೊಡಗಿತು. ಈಗ ಸತತವಾಗಿ 2018ರಲ್ಲಿ ದೊರೆತ ಆದಾಯಕ್ಕಿಂತ ಶೇ.72ರಷ್ಟು ಹೆಚ್ಚು ಆದಾಯ ದೊರೆಯುತ್ತಿದೆ.

ಒಂದು ಎಕರೆ ಮಾದರಿ!
ಸಂತೋಷಿಯಿಂದ ಪ್ರೇರಣೆ ಪಡೆದ ಮಮ್ದಾಪುರ ಗ್ರಾಮದ 20 ಮಹಿಳೆಯರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರು. ಇದನ್ನು “ಒಂದು ಎಕರೆ ಮಾದರಿ’ ಎಂದೇ ಕರೆಯಲಾಗುತ್ತಿದೆ. ಮಮ್ದಾಪುರದಂತೆಯೇ ಮರಾಠವಾಡಾ ವಲಯದ ಹಲವು ಗ್ರಾಮಗಳು ಈಗ ಇದೇ ಪದ್ಧತಿ ಅನುಸರಿಸುತ್ತಿವೆ. ಇಡೀ ಭಾರತದಲ್ಲೇ ಅತ್ಯಂತ ಕೆಟ್ಟ ಬರಪೀಡಿತ ಪ್ರದೇಶ ಎಂದೇ ಗುರುತಿಸಲ್ಪಟ್ಟಿರುವ ಈ ಪ್ರದೇಶದ ಮಹಿಳೆಯರು ಹೊಸ ಕೃಷಿ ಪದ್ಧತಿಯಿಂದ ಆದಾಯ ಹೆಚ್ಚಿಕೊಂಡಿದ್ದಾರೆ ಎಂದರೆ ಬಹುಶಃ ದೇಶದ ಇತರ ಭಾಗಗಳ ಬಹಳಷ್ಟು ರೈತ ಜನರು ನಂಬಲಿಕ್ಕಿಲ್ಲ.

ಮರಾಠವಾಡಾ ಪ್ರದೇಶದಲ್ಲಿ ಕೇವಲ ಮೂರ್ನಾಲ್ಕು ವರ್ಷಗಳ ಹಿಂದೆ ವರ್ಷಕ್ಕೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಬೆಳೆ ಕೈಗೆ ಸಿಗದೆ, ನೀರು ಲಭ್ಯವಾಗದೆ, ಬೆಳೆಗಳು ಒಣಗುವುದನ್ನು ನೋಡಿ ಹತಾಶೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದ ಸಂಖ್ಯೆ ದೇಶದಲ್ಲೇ ಹೆಚ್ಚಾಗಿತ್ತು. ಮಳೆಗಾಲದಲ್ಲಿ ಪ್ರವಾಹವೂ ಸಂಭವಿಸುತ್ತಿದ್ದುದರಿಂದ ವರ್ಷವಿಡೀ ಹಾನಿಯಾಗುವ ಬೆಳೆ ಪ್ರಮಾಣ ಹೆಚ್ಚಾಗಿತ್ತು. ಆದರೆ, ಇದೀಗ, ಚಿತ್ರಣ ಬದಲಾಗಿದೆ.

ಬಹುಬೆಳೆ ವಿಧಾನದ ಕೃಷಿ

ಒಂದೆರಡು ಎಕರೆಯಲ್ಲಿಯೇ ಬಹು ವಿಧದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರವಾಹದಿಂದ ಬೆಳೆ ಹಾನಿಯಾದರೂ, ಬರದಿಂದ ಬೆಳೆ ಹಾನಿಯಾದರೂ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಏಕೆಂದರೆ, ಒಂದು ಬೆಳೆ ಹಾನಿಯಾದರೆ ಇನ್ನೊಂದು ಕೈಗೆ ಸಿಗುತ್ತಿದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಗಳನ್ನು ಬೇಳೆಕಾಳು, ತರಕಾರಿ, ಧಾನ್ಯ, ಕಿರುಧಾನ್ಯಗಳನ್ನು ಲೆಕ್ಕಾಚಾರದ ಪ್ರಕಾರ ಬಿತ್ತನೆ ಮಾಡಲಾಗುತ್ತದೆ. ಬೆಳೆಗಳು ಒಂದಕ್ಕೊಂದು ಪೂರಕವಾಗಿ, ಒಂದಕ್ಕೆ ಇನ್ನೊಂದು ನೆರಳಾಗಿ ಬೆಳೆಯುತ್ತವೆ. ವಿಧ ವಿಧದ ಬೆಳೆಗಳನ್ನು ಹತ್ತಿರದಲ್ಲೇ ಬೆಳೆಸುವುದರಿಂದ ರಾಸಾಯನಿಕ ಗೊಬ್ಬರದ ಅವಲಂಬನೆ ಬೇಕಾಗುವುದಿಲ್ಲ ಎನ್ನುವುದು ರೈತ ಮಹಿಳೆ ತಬಸ್ಸುಮ್ ಅನುಭವ.

ಬೀಜ…ಗೊಬ್ಬರ…

ಬಿತ್ತನೆಗೆ ಬೇಕಾಗುವ ಬೀಜವನ್ನೂ ಇವರು ತಾವೇ ತಯಾರಿಸಿಕೊಳ್ಳುವುದು ವಿಶಿಷ್ಟ. ಹೀಗಾಗಿ, ಮೊದಲ ವರ್ಷವನ್ನು ಹೊರತುಪಡಿಸಿ ಮುಂದಿನ ವರ್ಷಗಳಲ್ಲಿ ಇವರದ್ದು ಝೀರೋ ಬಜೆಟ್ ಕೃಷಿಯೇ ಆಗಿದೆ. ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಸುವ ತರಬೇತಿಯನ್ನೂ ಈ ಮಹಿಳೆಯರು ಪಡೆದಿದ್ದಾರೆ. ಮನೆಯಲ್ಲೇ ಗೊಬ್ಬರ ತಯಾರಿಸುವುದರಿಂದ ಅದರ ವೆಚ್ಚವೂ ಉಳಿತಾಯವಾಗುತ್ತದೆ.
ಮರಾಠವಾಡಾದ ಮಹಿಳೆಯರಿಗೆ ಕೃಷಿ ಎನ್ನುವುದು ಸಬಲೀಕರಣದ ಮಾರ್ಗವೂ ಆಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!