Saturday, December 10, 2022

ಐಟಿ ಬಿಟ್ಟು ಮೇಟಿಯಾದ ದಂಪತಿ

Follow Us


ಅಮೆರಿಕದಲ್ಲಿ ಐಟಿ ಉದ್ಯೋಗವೊಂದಿದ್ದರೆ ಬದುಕಿಗೆ ಇನ್ನೇನು ಬೇಕು ಎನ್ನುವವರು ಅನೇಕ. ಆದರೆ, ಆಧುನಿಕ ಕರಾಳತೆಗೆ ಬೆಚ್ಚಿ ಸಂಪೂರ್ಣ ಸಾವಯವ ಕೃಷಿಕರಾಗಿ ಬದಲಾಗಿದ್ದಾರೆ ಗುಜರಾತ್’ನ ಈ ಐಟಿ ದಂಪತಿ. ಇವರು ವಿವೇಕ್ ಷಾ ಮತ್ತು ಬೃಂದಾ.


newsics.com@gmail.com

 ಸ್ವಂ ತದ್ದೊಂದು ಸೂರು, ಪತಿ-ಪತ್ನಿಯಲ್ಲಿ ಪ್ರೀತಿ-ನಂಬುಗೆ, ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಸಿಲಿಕಾನ್ ಸಿಟಿಯಲ್ಲಿ ಕೈ ತುಂಬ ಸಂಬಳದ ಐಟಿ ಉದ್ಯೋಗ… ನೆಮ್ಮದಿಯ ಬದುಕಿಗೆ ಇನ್ನೇನು ಬೇಕು? ಈ ದಂಪತಿಯೂ ಹೀಗೆಯೇ ಅಂದುಕೊಂಡಿದ್ದರೆ ಅಮೆರಿಕದ ಎಲ್ಲ ಸವಲತ್ತುಗಳನ್ನು ಸ್ವಲ್ಪವೂ ಹಿಂಜರಿಕೆಯಿಲ್ಲದೆ ಅನುಭವಿಸುತ್ತ, ಭಾರತದಂಥ ದೇಶದ ಸ್ಥಿತಿಯನ್ನು ಹೀಗಳೆಯುತ್ತ ಇಡೀ ಜೀವನವನ್ನು ಕಳೆದುಬಿಡುತ್ತಿದ್ದರೇನೋ. ಆದರೆ, ಬದುಕಿಗೆ ನಿಜವಾಗಿಯೂ ಬೇಕಾದುದೇನು ಎಂದು ತಮಗೆ ತಾವೇ ಕೇಳಿಕೊಂಡ ಪ್ರಶ್ನೆಯಿಂದಾಗಿ ಈ ದಂಪತಿಯೀಗ ಕೃಷಿಕರಾಗಿದ್ದಾರೆ. ಸಂಪೂರ್ಣ ಸಾವಯವ ಕೃಷಿಕರಾಗಿ ನೆಮ್ಮದಿ ಕಂಡುಕೊಂಡಿದ್ದಾರೆ. ಇವರು ಗುಜರಾತ್ ಮೂಲಕ ವಿವೇಕ್ ಷಾ ಮತ್ತು ಬೃಂದಾ ದಂಪತಿ.
ಭಾರತದಲ್ಲಿ ಹುಟ್ಟಿ ಬೆಳೆದ ವಿವೇಕ್ ಮತ್ತು ಬೃಂದಾ, ಮಾಹಿತಿ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಓದಿ ತಮ್ಮ ಕನಸಿನ ಅಮೆರಿಕದ ಬೆನ್ನತ್ತಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿ ಸ್ವಂತ ಅಲ್ಲಿಯೇ ಸ್ವಂತ ಮನೆಯನ್ನೂ ಮಾಡಿಕೊಂಡಿದ್ದವರು.
ಜತೆಯಾಗಿ ಅಡುಗೆ ಮಾಡುವುದು, ಜತೆಯಾಗಿಯೇ ಊಟ ಮಾಡುವುದು ಇವರ ದಿನಂಪ್ರತಿ ಅಭ್ಯಾಸ. “ಅಡುಗೆ ಮಾಡಲು ಬಳಸುವ ಈ ತರಕಾರಿ, ಹಣ್ಣುಗಳು ಎಲ್ಲಿಂದ ಬರುತ್ತವೆ?’ಎಂದು ಪರಸ್ಪರ ಸಮಾಲೋಚನೆ ನಡೆಸುತ್ತಿದ್ದರು. ಆಗೆಲ್ಲ ವಿವೇಕ್ ಅವರಿಗೆ ತಮ್ಮ ಬಾಲ್ಯದ ನೆನಪಾಗುತ್ತಿತ್ತು. ಹಣ್ಣಿನ ಮರಗಳನ್ನು ಹತ್ತಿ ಹಣ್ಣು ತಿನ್ನುವ ಬಾಲ್ಯ, ಆ ಮರಗಳ ಸೊಗಸು ಎಲ್ಲವೂ ನೆನಪಾಗಿ ಮತ್ತದೇ ದಿನಗಳು ಬಂದರೆ ಎಷ್ಟು ಚೆನ್ನ ಎಂದುಕೊಳ್ಳುತ್ತಿದ್ದರು. ಅಮೆರಿಕದ ಹೊಲಗಳನ್ನು ನೋಡುವ ಹುಮ್ಮಸ್ಸಿನಿಂದ ಹೊರಗೆ ಸುತ್ತಾಡಲು ಆರಂಭಿಸಿದರು. ನಿಧಾನವಾಗಿ ಕೃಷಿಯ ಮೇಲೆ ಆಸಕ್ತಿ ಮೂಡಿ ರಜೆಯ ಅವಧಿಯಲ್ಲಿ ಕೃಷಿಯ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು.

ಸ್ಟ್ರಾಬೆರಿ ತೋಟದ ವಿಷ!
ಒಮ್ಮೆ, ವಿವೇಕ್ ಅಮೆರಿಕದ ವಿಶಾಲವಾದ ಹೊಲ, ತೋಟಗಳ ನಡುವೆ ಅಡ್ಡಾಡುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಸ್ಟ್ರಾಬೆರಿ ತೋಟ ಕಣ್ಮನ ತಣಿಸುವಂತಿತ್ತು. ಹಾಗೆಯೇ ಮುಂದೆ ಸಾಗಿದರೆ, ಕಾರ್ಮಿಕನೊಬ್ಬ ತನ್ನ ದೇಹಕ್ಕೆ ರಕ್ಷಣಾ ಕವಚ ತೊಟ್ಟು ರಾಸಾಯನಿಕ ಸಿಂಪಡಣೆ ಮಾಡುವುದನ್ನು ಕಂಡರು. ಈ ಸನ್ನಿವೇಶವೇ ಅವರನ್ನು ಆಧುನಿಕ ಕೃಷಿಯ ಕರಾಳತೆಯ ಬಗ್ಗೆ ಚಿಂತಿಸುವಂತೆ ಮಾಡಿತು. ಸಾವಯವ ಕೃಷಿಯ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿತು. “ಕಾರ್ಮಿಕನೇನೋ ತನ್ನ ದೇಹಕ್ಕೆ ರಕ್ಷಣಾ ಕವಚ ತೊಡುತ್ತಾನೆ. ಆದರೆ, ಮರ ಹಾಗೂ ಹಣ್ಣುಗಳಿಗೆ ರಾಸಾಯನಿಕದಿಂದ ರಕ್ಷಣೆ ಹೇಗೆ?’ ಎಂದು ಯೋಚಿಸಿದರು. ದಂಪತಿ ಇಬ್ಬರೂ ಕುಳಿತು ತರಕಾರಿ, ಹಣ್ಣುಗಳ ಮೂಲಕ ತಮ್ಮ ದೇಹವನ್ನು ಸೇರುತ್ತಿರುವ ರಾಸಾಯನಿಕಗಳ ಪ್ರಮಾಣವೆಷ್ಟು ಎನ್ನುವುದನ್ನು ಅಂದಾಜಿಸಿ ಹೌಹಾರಿದರು. ಆದರೆ, ಏನನ್ನೂ ಮಾಡದೆ ಕೈಚೆಲ್ಲಿ ಕುಳಿತುಕೊಳ್ಳುವುದು ಅವರ ಜಾಯಮಾನವಲ್ಲ. ಏನಾದರೂ ಪರಿಹಾರ ಬೇಕಲ್ಲವೇ ಎಂದುಕೊಂಡು ತಿಂಗಳುಗಟ್ಟಲೆ ವಿಚಾರ ಮಾಡಿ ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ತವರಿಗೆ ವಾಪಸಾದರು.
ಅಮೆರಿಕದಿಂದ ಮರಳಿ ಮನೆಯವರೊಂದಿಗೆ ಈ ಕುರಿತು ಚರ್ಚಿಸಿದಾಗ ಅವರಿಂದ ಸ್ಪಂದನೆಯೇನೋ ದೊರೆಯಿತು. ಆದರೆ, ಯಾರಿಗೂ ಕೃಷಿ ಹಿನ್ನೆಲೆ ಇರಲಿಲ್ಲ. ಇದರಿಂದ ಸ್ವಲ್ಪ ಆರಂಭಿಕ ತೊಡಕುಂಟಾದರೂ ಬಳಿಕ ಗುಜರಾತ್ ನ ನಾಡಿಯಾದ್ ಎಂಬಲ್ಲಿ ಹತ್ತು ಎಕರೆ ಭೂಮಿ ಖರೀದಿಸಿದರು. ಅಲ್ಲಿಂದಲೇ ಆರಂಭವಾಗಿದ್ದು ಇವರ ಕೃಷಿ ಪಯಣ.
ಮೊಟ್ಟಮೊದಲನೆಯದಾಗಿ ಅವರು ಮಾಡಿದ ಕೆಲಸವೆಂದರೆ, ತಮ್ಮ ಜಮೀನಿನ ಸುತ್ತಲೂ ಕಂದಕ ನಿರ್ಮಿಸಿ ಮಳೆ ನೀರನ್ನು ಇಂಗಿಸಿದರು. ಭೂಮಿಯನ್ನು ಏಳು ವಿಭಾಗ ಮಾಡಿ ಬಹುಬೆಳೆ ಕೃಷಿ ಪದ್ಧತಿ ಅಳವಡಿಸಿಕೊಂಡರು.

ಬಹುಬೆಳೆ ಕೃಷಿಯಲ್ಲಿ ಖುಷಿ
ವಿಭಾಗಿಸಿಕೊಂಡಿದ್ದ ಪ್ರದೇಶದಲ್ಲಿ ಸಿರಿಧಾನ್ಯ, ಆಲೂಗಡ್ಡೆ, ಗೋಧಿ, ಬಾಳೆ, ನುಗ್ಗೆ, ಪಪ್ಪಾಯ, ಮಾವು ಹೀಗೆ ವಿವಿಧ ಕಾಲದಲ್ಲಿ ಬೆಳೆ ನೀಡುವ ಬೆಳೆಗಳನ್ನು ಬೆಳೆದರು. ನೀರು ಸಂಗ್ರಹಣೆಗೆ ದೊಡ್ಡ ಹೊಂಡ ನಿರ್ಮಿಸಿದರು. ಭೂಮಿಯ ಸುತ್ತ ತುಳಸಿ ಮತ್ತು ಲಿಂಬೆ ಹುಲ್ಲನ್ನು ಬೆಳೆಸಿದರು. ತುಳಸಿ ಮತ್ತು ಲಿಂಬೆ ಹುಲ್ಲುಗಳಿದ್ದಲ್ಲಿ ಕ್ರಿಮಿಕೀಟಗಳ ಹಾವಳಿ ಅತಿ ಕಡಿಮೆ. ಈ ಮೂಲಕ, ನೈಸರ್ಗಿಕವಾಗಿಯೇ ಬೆಳೆಯನ್ನು ರಕ್ಷಿಸಿಕೊಂಡರು. ಅದಕ್ಯಾವ ಔಷಧಿಯೂ ಇವರಿಗೆ ಬೇಕಾಗಲಿಲ್ಲ.
ಆದರೆ, ಕೃಷಿಯಲ್ಲಿ ಕಲಿಕೆ ಎನ್ನುವುದು ಮುಗಿಯುವುದಿಲ್ಲ.ಅದರಲ್ಲೂ ತಮ್ಮ ತೋಟ ರಾಸಾಯನಿಕದಿಂದ ಮುಕ್ತವಾಗಿರಬೇಕು ಎಂದು ಬಯಸುವವರು ದಿನದಿನವೂ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ವಿವೇಕ್ ಷಾ ಕೂಡ ಇದೇ ಹಾದಿ ಹಿಡಿದರು.

ಪರಾಗಸ್ಪರ್ಶಕ್ಕೆ ಹೂವಿನ ಗಿಡಗಳು
ಪರಿಣಾಮವಾಗಿ, ಗೊಬ್ಬರಕ್ಕೆಂದು ನಾಟಿ ತಳಿಯ ಗೋವುಗಳನ್ನು ಸಾಕಿದ್ದಾರೆ. ದೊರೆತ ಸಗಣಿಯಿಂದ ಹಟ್ಟಿಗೊಬ್ಬರ ಸಿದ್ಧಪಡಿಸಿ, ಅದಕ್ಕೆ ತಮ್ಮ ಜಮೀನಿನಲ್ಲಿರುವ ಸೊಪ್ಪನ್ನೇ ಬೆರೆಸಿ ಸಂಪೂರ್ಣ ಸಾವಯವ ಗೊಬ್ಬರ ಸಿದ್ಧಪಡಿಸುತ್ತಾರೆ. ಹಕ್ಕಿಗಳು, ಜೇನು ನೊಣಗಳು, ಚಿಟ್ಟೆಗಳು ತೋಟಕ್ಕೆ ಹೆಚ್ಚು ಬರುವಂತಾಗಲು ಬೆಳೆಗಳ ನಡುವೆ ಹೂವಿನ ಗಿಡಗಳನ್ನು ಹಾಕಿದ್ದಾರೆ. ಇದರಿಂದ ಪರಾಗಸ್ಪರ್ಶ ಉತ್ತಮವಾಗಿ ಬೆಳೆಯೂ ಚೆನ್ನಾಗಿ ಬರುತ್ತಿದೆ.
ಹಿಂದಿನ ಕಾಲದಂತೆ, ಮಣ್ಣು, ದನದ ಸೆಗಣಿ, ಕಲ್ಲುಗಳನ್ನು ಮಾತ್ರವೇ ಬಳಸಿದ ಮನೆಯನ್ನು ನಿರ್ಮಿಸಿದ್ದಾರೆ. 2017ರಿಂದ ಆರಂಭವಾದ ಈ ಪಯಣದಲ್ಲಿ ಇದುವರೆಗೆ ಇವರು ಸಾಕಷ್ಟು ಬೆವರನ್ನು ಸುರಿಸಿದ್ದಾರೆ. ಹೀಗಾಗಿ, ಇವರ ಹತ್ತು ಎಕರೆ ತೋಟ ಈಗ ನಳನಳಿಸುತ್ತಿದೆ. ಹಣ್ಣಿನ ಮರಗಳು ಫಲ ನೀಡಲು ಆರಂಭಿಸಿವೆ. ಇಷ್ಟೆಲ್ಲ ಶ್ರಮ ಪಟ್ಟ ವಿವೇಕ್ ಷಾ ದಂಪತಿ ತಮ್ಮ ತೋಟಕ್ಕೆ ಇಟ್ಟ ಹೆಸರೇನು ಗೊತ್ತೇ? “ಬೃಂದಾವನ’ ಎಂದು. ಯಾವುದೇ ಆಡಂಬರದ ಸೋಂಕಿಲ್ಲದೆ ಸಾವಯವ ಕೃಷಿಯಲ್ಲಿ ತೃಪ್ತಿ ಕಂಡಿರುವ ಈ ದಂಪತಿ ಕಣ್ಣಲ್ಲೀಗ ಬದುಕನ್ನು ಸಂಭ್ರಮಿಸುವ ಖುಷಿ ಮನೆ ಮಾಡಿದೆ.

ಮತ್ತಷ್ಟು ಸುದ್ದಿಗಳು

vertical

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...

ಕೆಎಂಎಫ್ ಸಿಹಿ ತಿನಿಸು, ತುಪ್ಪದ ದರ ಏರಿಕೆ

newsics.com ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. ಕೆಎಂಎಫ್  ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ....

18-25 ವರ್ಷದ ಒಳಗಿನ ಯುವಜನತೆಗೆ ಉಚಿತ ಕಾಂಡೋಮ್‌

newsics.com ಪ್ಯಾರಿಸ್: ಯುವಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫ್ರಾನ್ಸ್‌  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ...
- Advertisement -
error: Content is protected !!