-
ಚಂದ್ರಶೇಖರ ಪಾಟೀಲ್
esponse@134.209.153.225
chamsupatil@gmail.com
ಇವತ್ತಿನ ಸಮಕಾಲೀನ ಬದುಕು ಯಶಸ್ಸಿನ ಬೆನ್ನು ಹತ್ತಿದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅಲ್ಲಿ ನಾವು ಯಶಸ್ಸನ್ನೆ ಹಂಬಲಿಸುವ ಪ್ರವೃತ್ತಿ ಸಹಜ ಎನ್ನಿಸಿದರೂ, ಈ ಯಶಸ್ಸು ಎಂದರೆ ಏನು? ಯಾವುದು ನಿಜವಾದ ಯಶಸ್ಸು? ಮುಂತಾದ ಪ್ರಶ್ನೆಗಳಿಗೆ ನಮ್ಮಷ್ಟಕ್ಕೆ ನಾವೇ ಉತ್ತರ ಕಂಡುಕೊಳ್ಳುವುದು ಈ ಹಂತದಲ್ಲಿ ಅವಶ್ಯವಿದೆ ಎಂದು ನನಗೆ ಅನೇಕ ಬಾರಿ ಅನ್ನಿಸುತ್ತಿರುತ್ತದೆ. ನಾವು ಚಿಕ್ಕವರಾಗಿದ್ದಾಗಲೇ ಒಂದು ಬಗೆಯ ನೇತ್ಯಾತ್ಮಕ ಪ್ರೋತ್ಸಾಹ ಅಥವಾ ಶಹಭ್ಭಾಷಗಿರಿ ನಮ್ಮನ್ನು ದಾರಿ ತಪ್ಪಿಸುತ್ತ ಬಂದಿದೆ. ಅದು ಏನೆಂದರೆ, ನಮಗೆ ಅರಿವಿದ್ದೋ ಇಲ್ಲವೋ ಪ್ರಾಮಾಣಿಕತೆಯ ಬದಲಾಗಿ ಅಪ್ರಾಮಾಣಿಕತೆಯನ್ನೆ ಪ್ರೋತ್ಸಾಹಿಸುವ ಸಾಮಾಜಿಕತೆ ಇಂದು ಬೆಳೆದು ನಿಂತಿದೆ. ಉದಾಹರಣೆಗೆ ಒಬ್ಬ ಹುಡುಗ ಅಂಗಡಿಗೆ ಹೋಗಿ ಏನೋ ತಂದ ಅಂತಿಟ್ಕೊಳ್ಳಿ. ಇವನು ಹತ್ತು ರೂ. ಕೊಟ್ಟು ನಾಲ್ಕು ರೂ. ವಸ್ತು ವಗೈರೆ ಏನೋ ತಂದಿರ್ತಾನೆ. ಅಂಗಡಿಯವ ಇವನಿಗೆ ಆರು ರೂ. ವಾಪಸು ಕೊಡಬೇಕಿರುತ್ತೆ. ಏನೋ ಕಣ್ಚುಕ್ ಆಗಿಯೋ, ಲಕ್ಷ್ಯ ಬೇರೆಡೆ ಹೋಗಿಯೋ ಅವನು ಇವನಿಗೆ ಏಳು ರೂ. ಕೊಟ್ಟಿರುತ್ತಾನೆ. ಹೀಗೆ ಆದಾಗ, ಆ ಹುಡುಗ ತಾನೇ ಪ್ರಾಮಾಣಿಕವಾಗಿ ಆ ಹಣವನ್ನೆಲ್ಲ ಎಣಿಸಿ ಆ ಅಂಗಡಿಯವನಿಗೆ ಕೊಟ್ಟ ಅಂತಿಟ್ಕೊಳ್ಳಿ. ಆ ಅಂಗಡಿಯವ ಆ ಹಣವನ್ನು ವಾಪಾಸು ಪಡೆದು ತನ್ನ ದಡ್ಡತನಕ್ಕೆ ಹಳಹಳಿಸುತ್ತಾನೆ ಹೊರತು ಅದೇ ಒಂದು ರೂ. ವನ್ನು ಆ ಹುಡುಗನಿಗೆ ಕೊಟ್ಟು ಅವನನ್ನು ಅವನ ಪ್ರಾಮಾಣಿಕತೆಯನ್ನೂ ಪ್ರೋತ್ಸಾಹಿಸುವುದು ಅಪರೂಪವೆ ಸರಿ. ಇನ್ನು ಆ ಹುಡುಗ ಮನೆಗೆ ಬಂದರೆ, ಅಲ್ಲೂ ಇದೇ ಕಥೆ ಪುನರಾವರ್ತನೆಯಾಗುವ ಸಂಭವವೇ ಹೆಚ್ಚು. ಹೇಗೆಂದರೆ, ಹುಡುಗ ಹೀಗಾಗಿತ್ತು ಹೀಗೆ ಮಾಡಿದೆ ಎಂದು ಹೇಳಿದರೆ ` ಅಯ್ಯೋ ಅದನ್ಯಾಕೆ ಕೊಡಾಕ ಹೋದೆ… ಸುಮ್ಮನೆ ಬರೋದು ಬಿಟ್ಟು! ಇಂಥಾ ಎಷ್ಟು ರೂಪಾಯಿಗಳನ್ನೆಲ್ಲ ಅವನು ನಮ್ಮಿಂದ ದೋಚಿಲ್ಲ’ ಎನ್ನುವವರೆ ಜಾಸ್ತಿ. ಅಲ್ಲದೇ, ಇಲ್ಲಿ ಹುಡುಗನ ಪ್ರಾಮಾಣಿಕತೆಗೆ ದಡ್ಡ, ಬುದ್ಧಿಗೇಡಿ ಎಂಬ ಬಿರುದು ಸಿಗುವ ಸಾಧ್ಯತೆಗಳೆ ಹೆಚ್ಚು. ಒಂದು ವೇಳೆ ಹುಡುಗ ಏಳು ರೂಪಾಯಿಯೊಂದಿಗೇ ಮರಳಿದ್ದರೆ ಅವನನ್ನು ಶಾಣ್ಯಾ, ಜಾಣ ಎಂದು ಹೊಗಳಲೂಬಹುದು.
ಇಂಥ ಸಣ್ಣ ಘಟನೆಗಳೇ ಇವತ್ತು ನಮ್ಮೆದುರಿನ ಸಮಾಜವನ್ನು ರೂಪಿಸುತ್ತವೆ. ಆದ್ದರಿಂದ ಇಂದು ನಮ್ಮೆದುರಿನ ಸಮಾಜ ಇಂಥವುಗಳೆಲ್ಲದರ ಪ್ರತಿಫಲನವಾಗಿರುತ್ತದೆ ಮತ್ತು ಅದೇ ಉತ್ತರದಾಯಿ ಆಗಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಾಮಾಣಿಕವಾದ, ಸರಳ ಬದುಕೆ ಯಶಸ್ಸಿನ ಮಾನದಂಡವಾಗಿ ಬೆಳೆಯಬೇಕಾದಲ್ಲಿ, ಹಣ ಹಾಗೂ ಐಶಾರಾಮಿ ಬದುಕೆ ಯಶಸ್ಸು ಎಂಬ ಅಲಿಖಿತ ವ್ಯಾಖ್ಯಾನಕ್ಕೊಳಗಾದಾಗ ಸಾಮಾಜಿಕ, ಸಾಂಸ್ಕೃತಿಕ ಬದುಕು ಎಷ್ಟೆಲ್ಲ ಅಧೋಗತಿಗೆ ಇಳಿಯಬಹುದೆಂಬುದಕ್ಕೆ ನಮ್ಮ ಕಣ್ಣೆದುರಿನ ಬದುಕೆ ಅಂಗೈ ಹುಣ್ಣಾಗಿದೆ! ಅದಕ್ಕೆ ಕನ್ನಡಿ ಏತಕ್ಕೆ ಬೇಕು?
ನನ್ನ ಕೃಷಿ ಅಂದರೆ ಕಮ್ತ `ಸರ್ವಜನಾ ಹಿತಾಯ ಸರ್ವಜನಾ ಸುಖಾಯ’ ಎಂಬ ಮಾತಿಗೆ ಕಟ್ಟುಬಿದ್ದಿರುವಂಥದು. ಲೋಕ ಕಲ್ಯಾಣವೇ ಅದರ ಧ್ಯೇಯ ಮತ್ತು ಆದರ್ಶ. ಸಮಕಾಲೀನ ಜಗತ್ತಿನ ಕಣ್ಣಿನಲ್ಲಿ ನಾನೊಬ್ಬ ವಿಫಲ ಕೃಷಿಕ. ನನ್ನ ಪಾಲಿಗೆ ಯಶಸ್ಸು ಸರಿಯಾದ ಹಾದಿಯಲ್ಲಿನ ನಡಿಗೆ ಅಷ್ಟೆ. ಆ ಹಾದಿಯಲ್ಲಿನ ನೋವು ನಲಿವು, ಕಷ್ಟ ನಷ್ಟ ಸೋಲು ಗೆಲುವು ಏನೇ ಇರಲಿ. ಅದು ನನಗೆ ಸಂತೋಷದ ಸಂಗತಿಯೆ. ಈ ಹಾದಿಯಲ್ಲಿ ನನ್ನೊಂದಿಗೆ ನಡೆಯಬಯಸುವವರಿಗೆ ನನ್ನ ಯಶಸ್ಸಿನ ವ್ಯಾಖ್ಯಾನ ಅರ್ಥವಾಗಲಿ ಎಂಬ ಉದ್ದೇಶದಿಂದ ಈ ಕೆಲ ಮಾತುಗಳನ್ನಿಲ್ಲಿ ವಿನಯಪೂರ್ವಕವಾಗಿ ಹೇಳಿಕೊಂಡಿರುವೆ.