Tuesday, January 31, 2023

ಕಾಂತಾರ ನೋಡಿದಾ ಮ್ಯಾಲೆ..

Follow Us

ಅಸಹಾಯಕತೆ ಮತ್ತು ದಬ್ಬಾಳಿಕೆ ಎರಡರ ನಡುವಿನ ಸಂಘರ್ಷವನ್ನು ‘ಕಾಂತಾರ’ ಸಿನಿಮಾದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ದಬ್ಬಾಳಿಕೆಗೆ ರಾಜಕೀಯಕ್ಕೆ ಸಾವಿರಾರು ಶಕ್ತಿಗಳ ಬೆಂಬಲ ಇದ್ದೇ ಇದೆ. ಸತ್ಯವನ್ನು ಕಾಯಲು ದೈವ ಬೇಕು ಎಂಬ ನಂಬಿಕೆಗೆ ಇಲ್ಲಿ ಜಯವಾಗಿದೆ. ಕಾಂತಾರ ಒಂದು ನಂಬಿಕೆಯ ಜಯ. ಅಸಹಾಯಕ ಮನಸ್ಥಿತಿಗಳಿಗೆ ಒಂದು ಭರವಸೆ. ರಿಷಭ್ ಶೆಟ್ಟಿ ಅವರ ಸಿನಿಮಾ ಹಂಬಲಕ್ಕೆ ಸಿಕ್ಕಿದ ಜಯ.

ಧ್ವನಿಬಿಂಬ 35


♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com

(ಲೇಖಕರು ಕೇದಾರ, ಬದರಿ, ಹಿಮಾಲಯದತ್ತ ತೆರಳಿದ್ದರಿಂದ ಕಳೆದ ಕೆಲ ವಾರ ಕಾಣದ ಧ್ವನಿಬಿಂಬ ಈಗ ನಿಮ್ಮೆದುರು.)
ಕಾಂತಾರ ಬಿಡುಗಡೆ ಆಗಿದ್ದು 30 09 2022.
ಇವತ್ತಿಗೆ ಸರಿಯಾಗಿ 22 ದಿನ ತುಂಬಿತು. 230 ಕೋಟಿ ಗಳಿಕೆಯತ್ತ ಸಾಗಿದೆ. ಎನ್ನುವುದು ಒಂದು ಸಂಗತಿ. ಹಾಗೆಯೇ ಕೋಟಿ ಕೋಟಿ ಕಂಠಗಳು “ವಾ ….ವಾ…” ಎಂದು ಕುಣಿಯುತ್ತಿವೆ.
ಕೋಟಿ ಕೋಟಿ ಗಳಿಸಿದರೆ ಮಾತ್ರ ಒಂದು ಚಿತ್ರ ಯಶಸ್ವಿ ಆಯಿತು, ಇಲ್ಲವಾದರೆ ಚಿತ್ರ ವಿಫಲ ಎಂದು ಅರ್ಥವೇ?
ಬಹಳ ಹಿಂದೆ ಒಮ್ಮೆ ನಟ ರಮೇಶ ಅರವಿಂದ್ ಅವರ ಬಳಿ ಮಾತಾಡುತ್ತ ” ಸರ್, ನಿಮ್ಮ ಆರ್ಯಭಟ ಸಿನಿಮಾ ತುಂಬಾ ಚೆನ್ನಾಗಿದೆ” ಎಂದು ಹೇಳಿದೆ. ಅವರು ಕಣ್ಣರಳಿಸಿ ನೋಡಿದ್ದೀರಾ? ಎಂದರು.
ಹೌದು. ಬಿಡುಗಡೆ ಆದಾಗಲೇ ಎಂದೆ.
ಯಾರೂ ನನ್ನ ಬಳಿ ಈ ಚಿತ್ರದ ಬಗ್ಗೆ ಆಗ ಮಾತೇ ಆಡಲಿಲ್ಲ, ಎಂಥಾ ಒಳ್ಳೆ ಚಿತ್ರ , ನನಗೂ ಖುಷಿ ಆಗಿತ್ತು.
ಆದರೆ ಚಿತ್ರ ಓಡಲಿಲ್ಲ ಎಂದರು. ಒಂದು ಕ್ಷಣ ಮೌನವಾಗಿ ಆಮೇಲೆ,
“ಚಿತ್ರ ತಲುಪಲಿಲ್ಲ” ಎಂದರು.
“ತಲುಪಲಿಲ್ಲ ”
ಮತ್ತೆ ಮತ್ತೆ ಹೇಳಿಕೊಳ್ಳಬೇಕಾದದ್ದು .
ತುಂಬಾ ಚೆನ್ನಾಗಿ ಅತ್ಯುತ್ತಮವಾಗಿ ನಿರ್ಮಾಣ ಆದ ಚಿತ್ರಗಳು ಸೋತಿವೆ. ಸಾಮಾನ್ಯ ಅಥವಾ ok ಅನ್ನಬಹುದಾದ ಚಿತ್ರಗಳು ಗೆದ್ದಿವೆ.
ಇಷ್ಟಕ್ಕೂ ಇದು ok.
ಇದು ಸಾಮಾನ್ಯ,
ಇದು super ಎಂದು Certificate ಕೊಡಲು ನಾವು ಯಾರು?
ಕಾದಂಬರಿ ಹೇಗೆ ಬರಹಗಾರನ ಕೂಸೋ
ಹಾಗೇ ಚಿತ್ರಗಳು ನಿರ್ದೇಶಕರ ಕಥೆಗಾರರ ಕೂಸು.
ನಾವು ಇಷ್ಟ ಆಯಿತೋ ಇಲ್ಲವೋ ಹೇಳಬಹುದು , ಅದು ಅಭಿಪ್ರಾಯ.
ಸರಿ ಅಥವಾ ತಪ್ಪು ಎಂದು ಹೇಳಲು ಆಗದು.
ಹಿಂದೆ ಚಿತ್ರಗಳು ಪತ್ರಿಕಾ ವಿಮರ್ಶೆಗಳ ಮೇಲೆ ಓಡುತ್ತವೆ. ಎಂಬ ನಂಬಿಕೆ ಇತ್ತು.
ಕಳಪೆ ವಿಮರ್ಶೆಗಳು, “ವಸೂಲಿ ” ಮತ್ತು “ಪ್ರಭಾವಿ ” ವಿಮರ್ಶೆಗಳು ಬರತೊಡಗಿದಾಗ, ನಂಬಿಕೆ ಕುಸಿಯಿತು.
ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಹೆದರಿದ.
ಸಾಮಾಜಿಕ ಜಾಲತಾಣ, teaser, trailor, publicity ಪರಿಕಲ್ಪನೆಗಳು ವಿಮರ್ಶೆಯನ್ನು ತಿಂದು ಹಾಕಿದವು.
ಆರೋಗ್ಯಕರ ವಿಮರ್ಶೆ ಅಪರೂಪವಾಯಿತು.
ಪ್ರಾಯೋಜಕತ್ವ, ಸೆಳೆಯುವ ತಂತ್ರಗಾರಿಕೆ, ಇವು ಕೂಡಾ ಪ್ರೇಕ್ಷಕನಿಗೆ ಅರ್ಥವಾಗುತ್ತಿರುವ ಹೊತ್ತು ಇದು.
ಇಂಥಾ ಹೊತ್ತಿನಲ್ಲಿ ಸದ್ದು ಮಾಡದೆ ಬಾಗಿಲು ತಟ್ಟಿದ್ದು ಕಾಂತಾರ.
ಯಾವ rating grading collection ಬಗ್ಗೆ ತಲೆಕೆಡಿಸಿಕೊಳ್ಳದೆ “ಪಕ್ಕದ ಮನೆಯವ ಚೆಂದ ಇದೆ ಅಂದ, ನಡಿ ಹೋಗೋಣ “ಅಂತ ಟಿಕೆಟ್ ಬುಕ್ ಮಾಡಿದರು ಜನ.
ಕನ್ನಡದ ಕುಳ್ಳ ದ್ವಾರಕೀಶ್ ಇತ್ತೀಚಿನ ಒಂದು ಸಂದರ್ಶನದಲ್ಲಿ “Best films are not made. It happens” ಅಂದಿದ್ದಾರೆ.
ಅವು ಸಂಭವಿಸುತ್ತವೆ.
ತಲುಪುವುದು ಹೇಗೆ?
ಗಳಿಸುವುದು ಹೇಗೆ?
ಇದು ತರ್ಕಕ್ಕೆ ನಿಲುಕದ್ದು.
ಊಹೆ, ಲೆಕ್ಕಾಚಾರ ಮಾಡಲು ಸಾಧ್ಯವೇ ಇಲ್ಲ.
ಕಾಂತಾರ ಗೆದ್ದಿದೆ. ಜಯಭೇರಿ ಬಾರಿಸಿದೆ.
ವಿಜಯದುಂದುಭಿ ಮೊಳಗಿಸಿದೆ.
ಈಗ ಏಕೆ? ಹೇಗೆ?
ಎಂದು ಕಾರಣ ಹುಡುಕುವುದು ಕುರುಡ ಆನೆಯನ್ನು ಬಣ್ಣಿಸಿದ ಹಾಗೆ.

ಕೋಟಿ ಕೋಟಿ ಮನಸ್ಸುಗಳು ಧ್ಯಾನಿಸುತ್ತಿರುವ ಚಿತ್ರ ಕಾಂತಾರ.
ಕಾಂತಾರ ಹೀರೋ negative ಎಂದು ಒಬ್ಬರು ಹೇಳಿದರೆ, ಇದು ಪಕ್ಕಾ ವ್ಯಾಪಾರಿ ಚಿತ್ರ ಎಂದಿದ್ದಾರೆ ಮತ್ತೊಬ್ಬರು .
ಸಂದೇಶ ಇಲ್ಲ ಅಂತ ಒಬ್ಬರ ತರ್ಕ ಇಲ್ಲ ಅಂತ ಇನ್ನೊಬ್ಬರು. ಹಿಂದೂ ಅಂತ ಒಬ್ಬರು, ಬ್ರಾಹ್ಮಣ್ಯ ಅಂತ ಇನ್ನೊಬ್ಬರು.

ಇದು ವಿಮರ್ಶೆ ಬುದ್ಧಿ. ಚಿಕಿತ್ಸಕ ಬುದ್ಧಿ, ಅಷ್ಟೇ ‘
ಕಾಂತಾರ ಜನಸಮೂಹವನ್ನು ತಲುಪಿದೆ.
ದೌರ್ಜನ್ಯ, ತುಳಿತಕ್ಕೆ ಒಳಗಾಗಿರುವ ಸಮಾಜ.
ಎಲ್ಲದರಲ್ಲೂ ರಾಜಕೀಯ ತಾಂಡವ ಆಡುತ್ತಿರುವ ಸಮಯ.
ನಂಬಿಕೆಗಳು ಸತ್ತು ಹೋಗುತ್ತಿರುವಾಗ , “ದೈವ” ನಮ್ಮನ್ನು ಕಾಪಾಡುತ್ತೆ.
ನಮ್ಮ ನಂಬಿಕೆ ಉಳಿಯುತ್ತೆ ಎಂಬ ಭರವಸೆ ನೀಡಿದ ಚಿತ್ರ ಕಾಂತಾರ.
ಹುದುಗಿರುವ ಆ ಸಾಂಸ್ಕೃತಿಕ ಸತ್ಯಕ್ಕೆ ಸಾಂಸ್ಥಿಕ ರೂಪ ನೀಡಿದ ಚಿತ್ರ.
ರಿಷಭ್ ಹೇಳಿದ ಹಾಗೆ ಪ್ರಕೃತಿ ಮತ್ತು ಮಾನವನ ಸಂಘರ್ಷ ಕಥೆ.
ಕಾಡಿನಲ್ಲಿ ಒಂದು ಪ್ರಾಣಿಯನ್ನು ಆಹಾರಕ್ಕಾಗಿ ತಿನ್ನುತ್ತಾ, ಔಷಧಕ್ಕಾಗಿ ಸೊಪ್ಪುಗಳನ್ನು ಬಳಸುತ್ತಾ, ಮಂಚ ಕುರ್ಚಿಗಾಗಿ ಒಂದೋ ಎರಡೋ ಮರಗಳನ್ನು ಕಡಿಯುತ್ತಾ,
ಅಡುಗೆಗೆ ಕಟ್ಟಿಗೆ ತರಗೆಲೆಗಳನ್ನು ಸಂಗ್ರಹಿಸುತ್ತಾ ಬದುಕುವ ಕಾಡಿನ ಪುಟ್ಟ ಸಮುದಾಯ ಕಾಡಿಗೆ ಎಂದೂ ಧಕ್ಕೆ ತರುವುದಿಲ್ಲ. ಅವರು ಕಾಡಿನ ಭಾಗವಾಗಿಯೇ ಇರುತ್ತಾರೆ.
ಪರಿಸರದ ಸರಪಳಿಯಲ್ಲಿ ಅವರೂ ಒಬ್ಬರಾಗಿರುತ್ತಾರೆ.
ತಮ್ಮ ದೈವವನ್ನು ಪೂಜಿಸುತ್ತಾರೆ.
ಮನಸು ಬಂದಾಗ ಸಂಭ್ರಮಿಸಲು ತಿನ್ನುತ್ತಾರೆ.
ಕುಡಿಯುತ್ತಾರೆ. ಕುಣಿಯುತ್ತಾರೆ.
ತಪ್ಪು ಮಾಡಿದರೆ ಮಣಿಯುತ್ತಾರೆ.
ಇವೆಲ್ಲವೂ ಗಾಳಿ ನೀರು ಬೆಳಕು ಭೂಮಿಯಷ್ಟೇ ಸತ್ಯ ಮತ್ತು ಸಹಜ.
ಆದರೆ , ಚರ್ಮಕ್ಕಾಗಿ ಪ್ರಾಣಿಗಳನ್ನು ಕೊಂದರೆ ,
ಬೇರೆ ದೇಶಗಳಿಗೆ ಸಾಗಿಸಲು ಮರಗಳನ್ನು ಕಡಿದರೆ, ಔಷಧೀಯ ಸಸ್ಯಗಳನ್ನು ಫಾರ್ಮಾ ಕಂಪನಿಗಳು ಬರಿದು ಮಾಡಿದರೆ, ಅದು ನಿಸರ್ಗದ ಸಮತೋಲನವನ್ನು ತಪ್ಪಿಸುವ ವ್ಯಾಪಾರ, ರಾಜಕೀಯ ಮತ್ತು ಅಸಹಜ.
ಸತ್ಯ ಮತ್ತು ರಾಜಕೀಯ
ಸತ್ಯ ಮತ್ತು ಸ್ವಾರ್ಥ.
ಹೋರಾಟ ನಡೆದರೆ ಸತ್ಯಕ್ಕೆ ಸೋಲಾಗುತ್ತಿರುವುದನ್ನು ಇಂದು ಇಡೀ ವಿಶ್ವದಲ್ಲಿ ಗಮನಿಸಬಹುದು. ಅಸಹಾಯಕತೆಯಿಂದ ಕೋಟಿ ಕೋಟಿ ಮನಸುಗಳು ಕುದಿಯುತ್ತಿವೆ. ಬೇಯುತ್ತಿವೆ.
ಅಸಹಾಯಕತೆ ವಿಶ್ವ ವ್ಯಾಪಿ. ದಬ್ಬಾಳಿಕೆಯು ಕೂಡ.
ಅಸಹಾಯಕತೆ ಮತ್ತು ದಬ್ಬಾಳಿಕೆ ಎರಡರ ನಡುವಿನ ಸಂಘರ್ಷವನ್ನು ಇಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ದಬ್ಬಾಳಿಕೆಗೆ ರಾಜಕೀಯಕ್ಕೆ ಸಾವಿರಾರು ಶಕ್ತಿಗಳ ಬೆಂಬಲ ಇದ್ದೇ ಇದೆ.
ಸತ್ಯವನ್ನು ಕಾಯಲು ದೈವ ಬೇಕು ಎಂಬ ನಂಬಿಕೆಗೆ ಇಲ್ಲಿ ಜಯವಾಗಿದೆ.
ಕಾಂತಾರ ಒಂದು ನಂಬಿಕೆಯ ಜಯ .
ಅಸಹಾಯಕ ಮನಸ್ಥಿತಿಗಳಿಗೆ ಒಂದು ಭರವಸೆ.
ರಿಷಭ್ ಶೆಟ್ಟಿ ಅವರ ಸಿನಿಮಾ ಹಂಬಲಕ್ಕೆ ಸಿಕ್ಕಿದ ಜಯ.
ಒಂದು ವರ್ಷದ ಪ್ರಾಮಾಣಿಕ ದುಡಿಮೆಗೆ ಸಂದ ಪ್ರತಿಫಲ.
ಕಾಂತಾರ happened.. It is not made.
ಕನ್ನಡ ಚಿತ್ರರಂಗದ ಹೆಮ್ಮೆ ಕಾಂತಾರ

ಮತ್ತಷ್ಟು ಸುದ್ದಿಗಳು

vertical

Latest News

ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನ ಗುಜರಿಗೆ: ಗಡ್ಕರಿ

newsics.com ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ಇದೇ ಏ. 1ರಿಂದ ರಸ್ತೆಯಿಂದ ಗುಜರಿಗೆ ಹೋಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ...

ತುಳುವಿಗೆ ರಾಜ್ಯ ಭಾಷೆ ಸ್ಥಾನ: ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ

newsics.com ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...

ಕಾಡುಹಂದಿಯೆಂದು ನಾಯಿ ಮಾಂಸ ಮಾರಿದ ಯುವಕರು

newsics.com ಅಂಕೋಲಾ: ಕಾಡುಹಂದಿ ಮಾಂಸವೆಂದು ನಂಬಿಸಿ ಅಪರಿಚಿತ ಯುವಕರು ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನ್ನ ಮಾರಾಟ ಮಾಡಿರುವ ಘಟನೆ ಅಂಕೋಲಾದ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದೆ. ಅಂಕೋಲಾದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಯುವಕರ ತಂಡ,...
- Advertisement -
error: Content is protected !!