Wednesday, May 25, 2022

ನೂರಾರು ಆನೆಗಳ ಜೀವಕ್ಕೆ ಕಂಟಕವಾಯ್ತು ಪಾಚಿ ವಿಷ!

Follow Us

ಜಗತ್ತಿನ ಬಹುತೇಕ ದೇಶಗಳು ಕೊರೋನಾ ಕಾರಣಕ್ಕೋ, ಮನುಷ್ಯರ ಸಾವಿನಿಂದಾಗಿಯೋ ಸುದ್ದಿಯಲ್ಲಿವೆ. ಆದರೆ, ವಿಶ್ವದ ಅತಿ ವಿಶಿಷ್ಟ ಹುಲ್ಲುಗಾವಲು ಪ್ರದೇಶ ಹೊಂದಿರುವ ಬೋತ್ಸ್ವಾನಾ ಹಾಗೂ ಜಿಂಬಾಬ್ವೆ ನೂರಾರು ಆನೆಗಳ ಸಾವಿನಿಂದ ಕಂಗೆಟ್ಟಿವೆ.

     ಇಂದಿನಿಂದ ವನ್ಯಜೀವಿ ಸಪ್ತಾಹ     

newsics.com Features Desk

 ಕೊ ರೋನಾ ಮರಣಮೃದಂಗದ ನಡುವೆ ಕಳೆದ ಮೇ ತಿಂಗಳಿಂದೀಚೆಗೆ ವಿಶ್ವದ ಇನ್ನೊಂದು ಅತಿದೊಡ್ಡ ದುರಂತ ಘಟಿಸಿರುವುದು ಹೆಚ್ಚು ಸುದ್ದಿಯಾಗಲೇ ಇಲ್ಲ. ಅದು, ಪ್ರಪಂಚದಲ್ಲೇ ಅತಿ ವಿಶಿಷ್ಟವಾದ ಹುಲ್ಲುಗಾವಲು ಹಾಗೂ ಪ್ರಾಣಿಗಳ ವಾಸಸ್ಥಾನವಾಗಿರುವ ಬೋತ್ಸ್ವಾನಾದ್ದು. ಅಲ್ಲಿ ಮೇ ತಿಂಗಳಿಂದ ಜೂನ್’ವರೆಗಿನ ಅವಧಿಯಲ್ಲಿ 330 ಹೆಚ್ಚು ಆನೆಗಳು ಸಾವಿಗೀಡಾಗಿವೆ. ಇಷ್ಟು ದಿನಗಳವರೆಗೂ ಆನೆಗಳ ಸಾವಿಗೆ ಕಾರಣವೇನೆಂದು ತಿಳಿದುಬಂದಿರಲಿಲ್ಲ. ಇದೀಗ, ಕಾರಣ ಹೊರಬಿದ್ದಿದೆ.
ಪಾಚಿಯೊಂದರಿಂದ ಸೃಷ್ಟಿಯಾದ ವಿಷವೇ ಈ ಆನೆಗಳ ಸಾವಿಗೆ ಕಾರಣವೆಂಬುದು ದೃಢಪಟ್ಟಿದೆ. ವಿಶ್ವದ ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದ್ದ ಈ ದುರಂತದಲ್ಲಿ ಮಾನವನ ಹಸ್ತಕ್ಷೇಪವಿಲ್ಲವೆಂಬುದು ಸಾಬೀತಾಗಿದೆ.
ಆಫ್ರಿಕಾದ ಮೂರನೇ ಒಂದರಷ್ಟು ಆನೆಗಳ ತವರೂರು ಬೋತ್ಸ್ವಾನಾ. ಇಲ್ಲಿನ ಒಕಾವಾಂಗೋ ಡೆಲ್ಟಾ ಪ್ರದೇಶದಲ್ಲಿ ಮೇ ಮತ್ತು ಜೂನ್ ಅವಧಿಯಲ್ಲಿ ಬರೋಬ್ಬರಿ 330 ಆನೆಗಳು ಸಾವಿಗೀಡಾಗಿರುವುದು ಪತ್ತೆಯಾಗಿತ್ತು. ಆನೆಗಳು ಆ ಪ್ರದೇಶದಾದ್ಯಂತ ಅಲ್ಲಲ್ಲಿ ಸತ್ತು ಸತ್ತು ಬಿದ್ದಿರುವ ಚಿತ್ರಗಳು ದೊರಕಿದ್ದವು. ಮೊದಲು 350ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿರುವುದಾಗಿ ಹೇಳಲಾಗಿದ್ದರೂ ಇದೀಗ 330 ಆನೆಗಳ ಸಾವನ್ನು ಬೋತ್ಸ್ವಾನಾ ಸರ್ಕಾರ ದೃಢೀಕರಿಸಿದೆ.
ಏನಿದು ವಿಷಕಾರಿ ಬ್ಯಾಕ್ಟೀರಿಯಾ…?
ಸಯಾನೊ ಬ್ಯಾಕ್ಟೀರಿಯಾ ಎನ್ನುವುದು ಪಾಚಿಯೊಂದರಲ್ಲಿ ಸೃಷ್ಟಿಯಾಗುವ ಬ್ಯಾಕ್ಟೀರಿಯಾ. ದೊಡ್ಡದಾಗಿ ಹಿಂಡುಹಿಂಡಾಗಿ ಅರಳುವ ಇವುಗಳನ್ನು ನೀಲಿ-ಹಸಿರು ಪಾಚಿ ಎಂತಲೂ ಕರೆಯಲಾಗುತ್ತದೆ. ಸಯಾನೋ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಎಲ್ಲೆಡೆ ಬೆಳೆಯುವ ಪಾಚಿ. ಪೋಷಕಾಂಶಭರಿತ ನೀರಿನಲ್ಲಿ ಬೆಳೆಯುತ್ತದೆ. ಈ ಕುಲಕ್ಕೆ ಸೇರಿದ ಕೆಲವು ಜಾತಿಯ ಪಾಚಿಗಳು ವಿಷಕಾರಿ ಅಂಶವನ್ನು ಉತ್ಪತ್ತಿ ಮಾಡುತ್ತವೆ. ಅದು ಮನುಷ್ಯ ಹಾಗೂ ಪ್ರಾಣಿಗಳಿಗೆ ಮಾರಣಾಂತಿಕವಾಗುತ್ತವೆ. ಸಯಾನೋ ಬ್ಯಾಕ್ಟೀರಿಯಾದ ಸಾಮೀಪ್ಯದಿಂದ ಮನುಷ್ಯರಲ್ಲಿ ಚರ್ಮದ ಉರಿ, ಹೊಟ್ಟೆನೋವು, ಅಲ್ಸರ್, ವಾಂತಿ, ಭೇದಿ, ತಲೆಸುತ್ತುವುದು, ಜ್ವರ, ತಲೆನೋವು ಕಂಡುಬರುತ್ತವೆ.
ಹವಾಮಾನ ಬದಲಾವಣೆ ಕಾರಣವೇ?
ಪಾಚಿಯಲ್ಲಿ ವಿಷಕಾರಿ ಬ್ಯಾಕ್ಟೀರಿಯಾ ಸೃಷ್ಟಿಯಾಗಲು ಬದಲಾಗುತ್ತಿರುವ ಹವಾಮಾನ ಕಾರಣವೆಂದು ವಿಜ್ಞಾನಿಗಳ ಎಚ್ಚರಿಕೆ. ವಿಷಕಾರಿ ಪಾಚಿಗಳು ಬೆಚ್ಚಗಿನ ನೀರಿನಲ್ಲಿ ಸುಲಭವಾಗಿ ಬೆಳೆಯುತ್ತವೆ ಎಂದವರು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ, ಕೆನಡಾ ಹಾಗೂ ಜಿಂಬಾಬ್ವೆ, ಅಮೆರಿಕಗಳಲ್ಲಿ ತಿಂಗಳಾನುಗಟ್ಟಲೆ ಈ ಕುರಿತು ಅಧ್ಯಯನ ನಡೆಸಲಾಗಿತ್ತು. ಅದರ ಆಧಾರದ ಮೇಲೆ ವಿಜ್ಞಾನಿಗಳು ಇತ್ತೀಚೆಗೆ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ನೀರಿನ ಮೂಲಗಳ ಬಳಿಯೇ ಅನೇಕ ಆನೆಗಳು ಸತ್ತು ಬಿದ್ದಿರುವುದು ಸ್ಯಾಟಲೈಟ್ ಚಿತ್ರಗಳ ಮೂಲಕ ಕಂಡುಬಂದಿತ್ತು. ಹೀಗಾಗಿ, ನೀರಿನಲ್ಲಿರುವ ಯಾವುದೋ ವಿಷದಿಂದಲೇ ಆನೆಗಳು ಸತ್ತಿವೆ ಎಂದು ಅಂದಾಜಿಸಲಾಗಿದ್ದರೂ ದೃಢಪಟ್ಟಿರಲಿಲ್ಲ. ಅಲ್ಲದೆ, ಪಾಚಿಗಳು ಕೆರೆ ಅಥವಾ ಹೊಂಡದ ಸುತ್ತಲೂ ಇರುತ್ತವೆ. ನೀರಿನ ಮಧ್ಯದಲ್ಲಲ್ಲ. ಆದರೆ, ಆನೆಗಳು ನೀರಿನ ಮಧ್ಯಭಾಗಕ್ಕೆ ಹೋಗಿ ನೀರು ಕುಡಿಯುತ್ತವೆ, ಹೀಗಾಗಿ ನೀರಿನ ಬಗ್ಗೆ ಅನುಮಾನಪಡುವಂತಿಲ್ಲ ಎನ್ನಲಾಗಿತ್ತು. ಬಳಿಕ ಈಗ ನೀರಿನಲ್ಲಿರುವ ಸಯಾನೊ ಬ್ಯಾಕ್ಟೀರಿಯಾವೇ ಕಾರಣ ಎನ್ನುವುದು ವೈದ್ಯ ತಪಾಸಣೆಗಳಿಂದ ಸಾಬೀತಾಗಿದೆ. ಜೂನ್ ಅಂತ್ಯದ ವೇಳೆಗೆ ಆನೆಗಳು ಸಾಯುವ ಪ್ರಮಾಣ ಕಡಿಮೆಯಾಗಿತ್ತು. ಇದಕ್ಕೆ ಕಾರಣ ಕೆರೆಯಲ್ಲಿನ ನೀರು ಬತ್ತಿ ಹೋಗಿದ್ದು!
ಅನುಮಾನಗಳ ಹುತ್ತ
ಆನೆಗಳ ದಂತದ ಕಳ್ಳಸಾಗಣೆ ಜಾಲದ ಕೈವಾಡದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ದಂತಗಳು ಕಳ್ಳತನವಾಗಿರಲಿಲ್ಲ. ಆಂಥ್ರಾಕ್ಸ್ ವಿಷದ ಪರಿಣಾಮದ ಬಗ್ಗೆಯೂ ಊಹಿಸಲಾಗಿತ್ತು. ಇದೀಗ, ಸಾವಿಗೆ ಕಾರಣ ತಿಳಿದುಬಂದಿದ್ದರೂ ಅನುಮಾನಗಳು ಪೂರ್ತಿಯಾಗಿ ಕೊನೆಗೊಂಡಿಲ್ಲ. ಈ ವಿಷ ಆನೆಗಳಿಗೆ ಮಾತ್ರ ಮಾರಣಾಂತಿಕವಾಗಿದ್ದು ಏಕೆ? ಅದೊಂದೇ ಪ್ರಾಂತ್ಯದಲ್ಲಿ ವಿಷ ಉತ್ಪತ್ತಿಯಾಗಿದ್ದು ಹೇಗೆ? ಎಂಬಿತ್ಯಾದಿ ಗೊಂದಲಗಳು ಮುಂದುವರಿದಿವೆ. ಈ ಕುರಿತು ತನಿಖೆ ನಡೆಯುತ್ತಿದೆ.
ಜಿಂಬಾಬ್ವೆಯಲ್ಲೂ ಆನೆಗಳ ಸಾವು…
ಬೋತ್ಸ್ವಾನಾದಲ್ಲಿ ಆನೆಗಳ ಮಾರಣಹೋಮ ಮುಗಿಯುತ್ತಿದ್ದಂತೆ ಪಕ್ಕದ ಜಿಂಬಾಬ್ವೆಯಲ್ಲೂ ಇಂಥದ್ದೇ ಘಟನೆ ನಡೆದು ಆತಂಕ ಮೂಡಿಸಿದೆ. ಜಿಂಬಾಬ್ವೆಯಲ್ಲಿ 34 ಆನೆಗಳು ಮೃತಪಟ್ಟಿದ್ದು, ಇದಕ್ಕೆ ಹೆಮೋರೇಜಿಕ್ ಸೆಪ್ಟಿಸೀಮಿಯಾ ಎನ್ನುವ ಬ್ಯಾಕ್ಟೀರಿಯಾ ಕಾರಣವೆಂದು ಹೇಳಲಾಗಿದೆ. ಘಟನೆಯ ಕುರಿತು ಜಿಂಬಾಬ್ವೆ ಸರ್ಕಾರ ಹೆಚ್ಚಿನ ತನಿಖೆ ನಡೆಸುತ್ತಿದೆ.
ಏನಿದು ಹೆಮೋರೇಜಿಕ್ ಸೆಪ್ಟಿಸೀಮಿಯಾ…?
ಪಾಶ್ಚುರೆಲ್ಲ ಮುಲ್ಟೊಸಿಡಾ ಎನ್ನುವ ಬ್ಯಾಕ್ಟೀರಿಯಾ ಸೃಷ್ಟಿಸುವ ರೋಗ ಹೆಮೋರೇಜಿಕ್ ಸೆಪ್ಟಿಸೀಮಿಯಾ. ಇದು ಹಸು, ಎಮ್ಮೆ ಹಾಗೂ ಇತರ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಪ್ರಾಣಿಗಳು ಏಕಾಏಕಿ ಸಾವನ್ನಪ್ಪುತ್ತವೆ. ಏಷ್ಯಾ ಹಾಗೂ ಆಫ್ರಿಕಾಗಳಲ್ಲಿ ಕಂಡುಬರುವ ಈ ರೋಗವು ಸೋಂಕಿತ ಆಹಾರ, ನೀರು ಹಾಗೂ ಉಸಿರಾಟದ ಸ್ರವಿಸುವಿಕೆಯಿಂದ ಹರಡುತ್ತದೆ. ಜಿಂಬಾಬ್ವೆಯಲ್ಲಿ ಸಾವಿಗೀಡಾದ ಆನೆಗಳಲ್ಲಿ ಈ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.
ಆನೆಗಳ ಆವಾಸ…
ಬೋತ್ಸ್ವಾನಾ ಹಾಗೂ ಜಿಂಬಾಬ್ವೆಯಲ್ಲಿ 2 ಲಕ್ಷಕ್ಕೂ ಅಧಿಕ ಆನೆಗಳಿವೆ. ಆಫ್ರಿಕಾದ ಅರ್ಧದಷ್ಟು ಆನೆಗಳು ಇವೆರಡು ದೇಶಗಳಲ್ಲಿಯೇ ಇವೆ. ಇಲ್ಲಿನ ಆನೆ ವಾಸಸ್ಥಾನಗಳಿಗೆ ಐತಿಹಾಸಿಕ ಮಹತ್ವವಿದೆ. ಈ ನೆಲೆಗಳಿಗೆ ಅಪಾಯ ಬಂದೊದಗಿರುವುದು ಅಪಾಯಕಾರಿ ಬೆಳವಣಿಗೆ ಎನ್ನಲಾಗಿದೆ.
ಸಾಲುಸಾಲು ಕಾಡುಪ್ರಾಣಿಗಳು ಅದರಲ್ಲೂ ಆನೆಗಳಂಥ ಪ್ರಾಣಿಗಳು ಸಾವಿಗೀಡಾಗುತ್ತಿರುವುದು ಆತಂಕದ ಸಂಗತಿ. ಇಂದು ಅಲ್ಲೆಲ್ಲೋ ಸಂಭವಿಸಿರುವುದು ನಾಳೆ ನಮ್ಮಲ್ಲಿಯೂ ಸಂಭವಿಸಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಮತ್ತಷ್ಟು ಸುದ್ದಿಗಳು

Latest News

ರಾಜಸ್ಥಾನ ತಂಡವನ್ನು ಮಣಿಸಿ ಫೈನಲ್ಸ್ ಗೆ ಎಂಟ್ರಿಕೊಟ್ಟ ಗುಜರಾತ್

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2022ರ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ಸ್...

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ. ಇದೀಗ ಆ ಮಗು ಆತನದ್ದೇ ಎಂದು...

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...
- Advertisement -
error: Content is protected !!