Friday, January 27, 2023

ಜೀವಜಾಲದ ಸಂರಕ್ಷಣೆ: ಮುಖ್ಯ ವಿಚಾರಗಳು

Follow Us

ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ.
ಪಕ್ಷಿ ಸಂರಕ್ಷಣೆ 65

ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
ಚಿತ್ರ: ಕ್ಲೆಮೆಂಟ್ ಎಂ. ಫ್ರಾನ್ಸಿಸ್
ksn.bird@gmail.com
newsics.com@gmail.com

ಹೊಸ ವರ್ಷದ ಸಂಕಲ್ಪದಲ್ಲಿ ಪರಿಸರಕ್ಕೆ ಪಾಲಿರಲಿ ಎಂದದ್ದಾಯಿತು. ಪರಿಸರ ಹಾಳಾಗದಿರಲು ಜನಸಾಮಾನ್ಯರಾಗಿ ಏನು ಮಾಡಬೇಕು? ಏನು ತಿಳಿದಿರಬೇಕು ಎಂಬುದು ಮುಖ್ಯ. ಈ ಬಾರಿ ಸ್ಥೂಲವಾಗಿ ಅವನ್ನು ತಿಳಿಯೋಣ.

ಮುಖ್ಯವಾಗಿ ನಾವೆಲ್ಲರೂ ಅರಿಯಬೇಕಾಗಿರುವುದು, ಸಂರಕ್ಷಣೆ ಆಗಬೇಕಾಗಿರುವುದು ನಮ್ಮ ಕಾಡುಗಳು. ಅದರಲ್ಲಿಯೂ ಪಶ‍್ಚಿಮಘಟ್ಟಗಳು. ಇದರೊಟ್ಟಿಗೆ ನಮ್ಮ ನಗರ ಪ್ರದೇಶಗಳ ಪರಿಸರ ಸಮಸ್ಯೆಗಳಿಗೆ ಒಂದು ಉತ್ತರ. ಇಷ್ಟಾದರೆ, ಮಹತ್ತರವಾದ ಸಾಧನೆ ಆದಂತೆಯೇ.

ಮೊದಲಿಗೆ ಅರಣ್ಯಗಳು ಹಾಗೂ ಪಶ್ಚಿಮಘಟ್ಟಗಳಿಗಿರುವಂತಹ ಆತಂಕಗಳು ಯಾವವು ಎಂಬುದನ್ನು ನೋಡೋಣ. ವಿಸ್ತಾರವಾದ ಅರಣ್ಯಪ್ರದೇಶ ಅನೇಕ ಪ್ರಾಣಿಗಳಿಗೆ ಬಹಳ ಮುಖ್ಯ. ಅರಣ್ಯದ ನಿರಂತತೆಯೂ ಕೂಡ ಬಹಳ, ಬಹಳ ಮುಖ್ಯ. ನಾವೆಲ್ಲಿ ಎಡವುತ್ತೇವೆಂದರೆ ಅಷ್ಟು ದೊಡ್ಡ ಅರಣ್ಯಭಾಗವಿದೆ, ಮಧ್ಯದಲ್ಲಿ ಒಂದು ರಸ್ತೆ ಹಾದು ಹೋದರೆ ಏನಾದೀತು, ಇಲ್ಲವೆ ಒಂದು ಅಣೆಕಟ್ಟೆ ಬಂದರೆ ಆಗುವ ತೊಂದರೆಯೇನು? ಎಷ್ಟೋ ಅಭಿವೃದ್ಧಿ ಆಗುವುದಲ್ಲವೇ? ಎಂದು ಯೋಚಿಸುವಲ್ಲಿ! ಮೇಲ್ನೋಟಕ್ಕೆ ಇದು ಸರಿ ಎನಿಸಿಬಿಡುತ್ತದೆ. ಇದರಲ್ಲಿನ ತಪ್ಪನ್ನು ತಿಳಿಯಬೇಕೆಂದರೆ ಜೀವಜಾಲವನ್ನು ಅರಿಯಬೇಕು. ಅರಣ್ಯ ಮತ್ತು ಮಳೆಯ ಸಂಬಂಧ ನಮಗೆ ತಿಳಿದಿದ್ದೆ. ಆದರೆ ಅರಣ್ಯ ಅರಣ್ಯವಾಗಿ ಉಳಿಯುವುದು ಅಲ್ಲಿನ ಜೀವಿಗಳಿಂದ. ಆ ಜೀವಜಾಲವನ್ನು ಹಿರಿಯ ವನ್ಯಜೀವಿ ವಿಜ್ಞಾನಿಗಳಾದ ಡಾ ಉಲ್ಲಾಸ ಕಾರಂತರು ಹೀಗೆ ಹೇಳುತ್ತಾರೆ “…ಜೀವಜಾಲದಲ್ಲಿ “ಅ” ಎಂಬ ಸಸ್ಯ ಹುಟ್ಟಬೇಕಾದರೆ “ಆ” ಎಂಬ ಕೀಟದಿಂದ ಪರಾಗಸ್ಪರ್ಶವಾಗಬೇಕು. “ಆ” ಕೀಟವನ್ನು ನಿಯಂತ್ರಿಸುವ “ಇ” ಎಂಬ ಹಕ್ಕಿಯು “ಈ” ಎಂಬ ಮರದಲ್ಲಿ ಗೂಡುಕಟ್ಟಬಹುದು. “ಈ”ಯ ಹಣ್ಣನ್ನು ಆಹಾರವಾಗಿಟ್ಟುಕೊಂಡ “ಉ” ಎಂಬ ಸಸ್ಯಾಹಾರಿ ಪ್ರಾಣಿಯೂ ಇದನ್ನು ಬೇಟೆಯಾಡುವ “ಊ” ಎಂಬ ಬೇಟೆಗಾರ ಪ್ರಾಣಿಯೂ ಇದೆ. ಇವೆಲ್ಲ ಮಣ್ಣಾದಾಗ “ಎ” ಎಂಬ ಬ್ಯಾಕ್ಟೀರಿಯಾವಿಲ್ಲದೆ ಸಸ್ಯಗಳಿಗೆ ಮಣ್ಣಿನ ಸಾರ ದೊರೆಯಲಾರದು” ಇದು ಪರಿಸರದ ವಿಶ್ವರೂಪ. ನಾವು ಇದರ ಒಂದು ಭಾಗ. ಅರಣ್ಯ ಈ ಹಿನ್ನೆಲೆಯಲ್ಲಿಯೇ ಬೆಳೆದಿರುತ್ತದೆ. ಹೀಗೆ ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಒಂದೆಡೆ, ಮರಗಿಡಗಳು, ಒಟ್ಟಾರೆ ಸಸ್ಯರಾಶಿ ಹೋಗುವುದರಿಂದ ಆಗುವತೊಂದರೆ, ಮೊತ್ತೊಂದೆಡೆ ಅರಣ್ಯ ಛಿದ್ರೀಕರಣದಿಂದ ಆಗುವ ತೊಂದರೆ. ಇದು ಒಟ್ಟಾರೆ ಪರಿಸರ ವ್ಯವಸ್ಥೆಯ ಮೇಲೆ ಬಹುದೊಡ್ಡ ದುಷ್ಪರಿಣಾಮವನ್ನು ಬೀರುತ್ತದೆ. ಕಾಡು-ಕಾಡುಪ್ರಾಣಿಗಳು-ಮಳೆ-ಕೃಷಿ-ಉದ್ದಿಮೆ ಈ ಎಲ್ಲವೂ ಒಂದೇ ಸರಪಳಿಯ ಕೊಂಡಿಗಳು. ಎಷ್ಟು ಹೋಗುತ್ತದೆಯೋ, ಎಷ್ಟು ಶಿಥಿಲವಾಗುತ್ತದೆಯೋ ಅಷ್ಟೂ ತೊಂದರೆಯೇ. ಇಲ್ಲಿ ಎರಡು ತಕ್ಷಣದ ಹಾಗೂ ದೂರಗಾಮಿ ಎರಡೂ ಬಗೆಯ ದುಷ್ಪರಿಣಾಮಗಳು ಉಂಟಾಗುತ್ತವೆ. ಮರಗಿಡಗಳ ಹನನ ತಕ್ಷಣದ ತೊಂದರೆಯಾದರೆ ಅರಣ್ಯ ಛಿದ್ರೀಕರಣದಿಂದ ಉಂಟಾಗುವುದು ದೀರ್ಘಕಾಲೀನ ಹಾಗೂ ಶಾಶ್ವತ ದುಷ್ಪರಿಣಾಮಗಳು. ಉದಾಹರಣೆಗೆ ಮಳೆಯ ಕೊರತೆ, ನದಿಯಲ್ಲಿನ ನೀರಿನ ಹರಿವು ಏರುಪೇರಾಗಿ ಕ್ರಮೇಣ ಇಡೀ ಸ್ಥಳ ಬಂಜರಾಗುವುದು, ಮಣ್ಣಿನ ಸವಕಳಿ, ಭೂಕುಸಿತ ಹಾಗೂ ಇತ್ತೀಚೆಗೆ ನಮ್ಮ ಮನೆಯ ಬಾಗಿಲ ಮುಂದೆ ನಿಂತಿರುವ ಹವಾಮಾನ ಬದಲಾವಣೆಯ ಭೂತ. ಇವೆಲ್ಲ ಸಾಮಾನ್ಯವಾದ ತೊಂದರೆಗಳಲ್ಲವಲ್ಲ! ಆದ್ದರಿಂದ ಅದು ಕೇವಲ ಒಂದು ರಸ್ತೆ ಮಾಡುವುದೋ, ಅಣೆಕಟ್ಟೆ ಬರುವುದೋ ಅಲ್ಲ, ಇಷ್ಟು ಸಮಸ್ಯೆಗಳನ್ನು ಆಹ್ವಾನಿಸುವುದೂ ಆಗಿರುತ್ತದೆ. ಆದ್ದರಿಂದ ಜನಸಾಮಾನ್ಯರೂ ಕೂಡ ಈ ಸಮಸ್ಯೆಗಳತ್ತ ಜಾಗೃತರಾಗಿರಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಯಾವುದೇ ಯೋಜನೆ ಕುರಿತಾಗಿ ಸಾರ್ವಜನಿಕ ಒಪ್ಪಿಗೆ ಕೇಳಿದಾಗ (ಇದು ದೊಡ್ಡ ಯೋಜನೆಗಳಿಗೆ ಕಡ್ಡಾಯ) ಜನರು ಎಚ್ಚರಿಕೆಯಿಂದ ವರ್ತಿಸಬೇಕು. ಇದು ನಮ್ಮದೇ ಉಳಿವಿಗೆ ಮಾಡಬೇಕಾದ ಕರ್ತವ್ಯ. ಪ್ರತಿಯೊಂದು ಮರಕ್ಕೂ ಕಾಡಿಗೂ ಅದರದ್ದೇ ಆದ ಬೆಲೆ ಇರುತ್ತದೆ. ಬೆಲೆ ಎಂದರೆ ಕೇವಲ ಕಾಡಾಗಿ ಅಂದರೆ ಪಕ್ಷಿಪ್ರಾಣಿಗಳಿಗೆ ಆಸರೆಯಾಗಿ ಇಲ್ಲವೆ ಮಳೆತರಿಸುವ ಸಾಧನವಾಗಿ ಮಾತ್ರವಲ್ಲ (ಅದು ಇದ್ದೇ ಇದೆ) ಜೊತೆಗೆ ಅವುಗಳ ಆರ್ಥಿಕ ಬೆಲೆ. ಅಷ್ಟು ಮರಗಳು ಇಲ್ಲವೆ ಅರಣ್ಯ ಹೋದರೆ ವಾರ್ಷಿಕವಾಗಿ ಎಷ್ಟು ಆರ್ಥಿಕ ನಷ್ಟ ಸಂಭವಿಸುತ್ತದೆ ಹಾಗೂ ಹೊಸ ಯೋಜನೆ ಆ ಆರ್ಥಿಕ ನಷ್ಟವನ್ನು ತುಂಬಿಕೊಡುವಷ್ಟಾದರೂ ಶಕ್ತವಾಗಿದೆಯೇ? ಎಂಬುದನ್ನು ಯಾವ ಪೂರ್ವಗ್ರಹವಿಲ್ಲದೆ ಪರಿಶೀಲಿಸಿ ಅಭಿಪ್ರಾಯ ಕೊಡಬೇಕು.

ಅರಣ್ಯ ಒತ್ತುವರಿ ಇನ್ನೊಂದು ದೊಡ್ಡ ಸಮಸ್ಯೆ. ಇದು ಸಾಮಾನ್ಯವಾಗಿ ರಕ್ಷಿತಾರಣ್ಯಗಳ ಸಮೀಪ ಅಥವಾ ಅದರಿಂದ ದೂರ ನಡೆಯುತ್ತದೆ. ರಕ್ಷಿತಾರಣ‍್ಯಗಳಿಗೆ ಕಾನೂನಿನ ರಕ್ಷಣೆಯಿದ್ದು, ಒತ್ತುವರಿಯಾದರೆ ಕಾನೂನು ಕ್ರಮ ಕೈಗೊಳ್ಳಬಹುದು. ರಕ್ಷಿತಾರಣ್ಯಗಳನ್ನು ಹಾಗೂ ಇತರ ಅರಣ್ಯಭಾಗವನ್ನು ಒತ್ತುವರಿಯಿಂದ ಕಾಪಾಡಬೇಕು. ಕಾಪಾಡುವುದು ಅರಣ‍್ಯ ಇಲಾಖೆಯದ್ದು ಮಾತ್ರವಲ್ಲದೆ ಜನಸಾಮಾನ್ಯರ ಹೊಣೆಯೂ ಸಹ. ಜನ ಇಲಾಖೆಯೊಂದಿಗೆ ಕೈಗೂಡಿಸಬೇಕಾದ್ದು ಅವಶ್ಯ.

ಇನ್ನು ನಗರ ಪ್ರದೇಶಗಳಿಗೆ ಅದರದ್ದೇ ಆದಂತಹ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅವನ್ನು ಮುಂದಿನ ಬಾರಿ ನೋಡೋಣ.

ಮತ್ತಷ್ಟು ಸುದ್ದಿಗಳು

vertical

Latest News

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ...

ನಟಿ ಅದಿತಿಯ ಮಾಜಿ ಪತಿ‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್

newsics.com ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕುರಿತು ನವಜೋಡಿ...

ಖಗೋಳದ ಅಪರೂಪದ ಅತಿಥಿ ಧೂಮಕೇತು ವಿದಾಯಕ್ಕೆ ಸಿದ್ಧ!

newsics.com ನವದೆಹಲಿ: ಖಗೋಳದ ಅಪರೂಪದ ಅತಿಥಿಯೊಂದು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಖಗೋಳದ ಅಪರೂಪದ ಅತಿಥಿ ಹಸಿರು ಬಣ್ಣದ ಸಿ/2022 ಇ3 ದೀರ್ಘಾವಧಿಯ ಧೂಮಕೇತು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಮತ್ತೆ ಇದರ ಭೇಟಿ ಬರೋಬ್ಬರಿ 50,000...
- Advertisement -
error: Content is protected !!