Wednesday, November 29, 2023

ಸಂಗೀತ ಸ್ವರ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ

Follow Us

 
ಸುಮಾರು ಎರಡು ದಶಕಗಳ ಕಾಲ ಸಂಗೀತ ಶಾರದೆಯ ಆರಾಧನೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿರಿಸಿದ ಕರ್ನಾಟಕ ಸಂಗೀತದ ಕಲಾನಿಧಿ ಸಂಗೀತ ವಿದುಷಿ ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ ತಮ್ಮ ಸ್ವರಮಾಧುರ್ಯದ ಮಾಂತ್ರಿಕ ಶಕ್ತಿಯಿಂದ ಅಸಂಖ್ಯಾತ ಸಂಗೀತ ಪ್ರೇಮಿಗಳ ಹೃದಯದಲ್ಲಿ ಚಿರಂತನ ಸ್ಥಾನ ಪಡೆದಿದ್ದಾರೆ.
 
 
♦ ಸುಮಾ ವೀಣಾ ಹಾಸನ
ಉಪನ್ಯಾಸಕರು
newsics.com@gmail.com

 

‘ಕ ಲಿತವರಿಗೂ ಕಲಿಯದವರಿಗೂ ಕಾಮಧೇನು ಕುಮಾರವ್ಯಾಸ’ ಎಂಬಂತೆ ಶಾಸ್ತ್ರೀಯ ಸಂಗೀತ ಅರಿತವರಿಗೂ ಅರಿಯದವರಿಗೂ ಎಂ.ಎಸ್.ಸುಬ್ಬುಲಕ್ಷ್ಮಿಯವರ ಗಾಯನ ಮರೆಯಲಾಗದ ಸ್ಮರಣೀಯ ಅನುಭವ ನೀಡುತ್ತದೆ. “ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ಥತೆ” ಎಂಬ ಸುಪ್ರಭಾತ ಮಾಂತ್ರಿಕ ಕಂಠದ ಈ ಗಾಯಕಿಯ ಧ್ವನಿಯನ್ನು ಅಮರಗೊಳಿಸಿದೆ.
ದೇವಾಲಯಗಳ ನಗರ ಮಧುರೈನಲ್ಲಿ 1916 ಸೆಪ್ಟೆಂಬರ್ 16ರಂದು ಎಂ.ಎಸ್. ಜನಿಸಿದರು. ತಾಯಿ ಷಣ್ಮುಖವಡಿವು ನುರಿತ ವೀಣಾವಾದಕಿ, ತಂದೆ ಸುಬ್ರಹ್ಮಣ್ಯ ಅಯ್ಯರ್ ವಕೀಲರು. ಎಂ.ಎಸ್. ಅವರ ಬಾಲ್ಯದ ಹೆಸರು ಕುಂಞಮ್ಮ. ಬಾಲ್ಯದಲ್ಲಿ ಕುಂಞಮ್ಮಳಿಗೆ ತಾಯಿಯೇ ಗುರು. ಮಧುರೈ ದೇವಾಲಯದ ದೇವರ ಉತ್ಸವದ ಮೆರವಣಿಗೆ ಅವರ ಮನೆಯ ಎದುರು ದಾರಿಯಲ್ಲಿಯೇ ಹಾದು ಹೋಗುವಾಗ ನಾದಸ್ವರ ವಾದಕರು ಸ್ವಲ್ಪ ಹೊತ್ತು ಈಕೆಯ ಇಚ್ಚೆಯನ್ನರಿತು ಇವರ ಮನೆಯ ಮುಂದೆ ನಿಂತು ನಾದಸ್ವರ ನುಡಿಸಿ ಹೋಗುತ್ತಿದ್ದರಂತೆ.
ಭಾರತರತ್ನ
ಕುಂಞಮ್ಮಳ ಬಾಲ್ಯದ ದಿನಗಳಲ್ಲಿ ಆಗಿನ ಕಾಲದ ಸಂಗೀತ ದಿಗ್ಗಜರೆನಿಸಿದ ತಿರುಕ್ಕೋಡಿಕಾವಲ್ ಕೃಷ್ಣಯ್ಯರ್, ಮೈಸೂರಿನ ವೀಣೆ ಶೇಷಣ್ಣನವರು ತಾಯಿ ಷಣ್ಮುಖವಡಿವು ಅವರ ವೀಣಾವಾದನ ಕೇಳಲು ಬರುತ್ತಿದ್ದರಂತೆ. ಹಾಗಾಗಿ ಇವರುಗಳು ಚಿಕ್ಕ ಹುಡುಗಿ ಕುಂಞಮ್ಮಳಿಗೆ ಹಾಡಲು ಪ್ರೋತ್ಸಾಹಿಸುವುದರ ಜತೆಗೆ ಶಾಸ್ತ್ರೀಯ ಧಾಟಿಯ ಹಾಡುಗಳನ್ನು ಹಾಡಲು ಕಲಿಸಿಕೊಡುತ್ತಿದ್ದರಂತೆ. ಮಹಾನ್ ಗಾಯಕರ ಒಡನಾಟ ಎಂ.ಎಸ್. ಅವರ ದೈವದತ್ತ ಪ್ರತಿಭೆ ಒಂದಕ್ಕೊಂದು ತಾಳಮೇಳವಾಯಿತು. ಹಾಗಾಗಿ ಕೀರ್ತಿಯ ಉನ್ನತ ಶೀಖರಕ್ಕೆ ತಲುಪಿದ ಇವರು ಸಂಗೀತದ ಕ್ಷೇತ್ರದಲ್ಲಿ ಮೊದಲ ‘ಭಾರತರತ್ನ’ವಾದರು.
“ನೀನು ಸುಸ್ವರ ಲಕ್ಷ್ಮಿ ಸುಬ್ಬುಲಕ್ಷ್ಮಿ” ಎಂದು ಖ್ಯಾತ ವೀಣಾವಾದಕ ಕಾರೈಕುಡಿ ಸಾಂಬಶಿವ ಅಯ್ಯರ್ ಅವರು ಎಂ.ಎಸ್. ಅವರನ್ನು ಮೆಚ್ಚಿಕೊಂಡಿದ್ದೇ ಕುಂಞಮ್ಮ ಸುಬ್ಬುಲಕ್ಷ್ಮಿಯಾಗಲು ಪ್ರೇರಣೆ ಎಂಬ ಮಾತುಗಳಿವೆ.
1937-40 ರ ಅವಧಿಯಲ್ಲಿ ಕಲ್ಕಿ ಕೃಷ್ಣಮೂರ್ತಿಗಳು ತಯಾರಿಸಿದ ‘ಮೀರಾ’ ಚಿತ್ರದಲ್ಲಿಯೂ ಎಂ.ಎಸ್. ಅಭಿನಯಿಸಿ ಚಿತ್ರರಂಗದಲ್ಲೂ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸುತ್ತಾರೆ. ಸಂಗೀತದಲ್ಲಿ ಸಾಹಿತ್ಯದ ಅಂಶವನ್ನು ಗುರುತಿಸುವುದು ಕರ್ನಾಟಕ ಸಂಗೀತದ ಅವಿಭಾಜ್ಯ ಅಂಗ ಎಂದು ಹೇಳುವುದಿದೆ.
ದಂತಕತೆ
ಸಂಸ್ಕೃತ ಶ್ಲೋಕಗಳ ಸ್ವರ ಉಚ್ಛಾರಣೆ, ಸ್ಪಷ್ಟತೆ ಹಾಗೂ ಧ್ವನಿಯ ಏರಿಳಿತಗಳು ಎಂ.ಎಸ್. ಅವರಿಗೆ ದೈವದತ್ತ ಪ್ರತಿಭೆಯಾಗಿತ್ತು. ಅವರ ಕಂಠ ಶ್ರೀಮಂತಿಕೆಯಿಂದ ಹೊರಹೊಮ್ಮಿದ ವಿಷ್ಣುಸಹಸ್ರನಾಮವಂತೂ ಆಲ್ ಟೈಮ್ ಹಿಟ್. ತಿರುಪತಿ ದೇವಸ್ಥಾನದ ಆಡಳಿತದ ಬೇಡಿಕೆಯ ಮೇರೆಗೆ ಎಂ.ಎಸ್. ಅವರು ಅಣ್ಣಮಾಚಾರ್ಯರ ಕೃತಿಗಳನ್ನು ಹಾಡಿ ಅಮರರಾಗಿ ಸಂಗೀತ ಕ್ಷೇತ್ರದ ದಂತಕತೆಯಾಗಿದ್ಧಾರೆ.
ಕಂಚಿಯ ಹಿಂದಿನ ಪರಮಾಚಾರ್ಯ ಶತಾಯುಷಿ ಸ್ವಾಮೀಜಿಯವರ ಬಗ್ಗೆ ಎಂ.ಎಸ್.ಗೆ ಅಪಾರ ಭಕ್ತಿ. 1966ರಲ್ಲಿ ಅವರು ರಚಿಸಿದ “ಮೈತ್ರೀಂ ಭಜತಾ” ಭಕ್ತಿಗೀತೆಯನ್ನು ಎಂ.ಎ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನಡೆದ ವಿಶೇಷ ಸಂಗೀತಗೋಷ್ಠಿಯಲ್ಲಿ ಹಾಡಿ ಪಾಶ್ಚಾತ್ಯ ಸಂಗೀತ ಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. “ವೈಷ್ಣವ ಜನತೋ” “ರಘುಪತಿ ರಾಘವ ರಾಜಾರಾಂ” ಗೀತೆಗಳು ಎಂ.ಎಸ್. ಅವರೇ ಹಾಡಿರುವಂತಹವು. ಪಾಶ್ಚಾತ್ಯ ದೇಶಗಳಲ್ಲಿ ಈಕೆ ಹಾಡಿ ಗಳಿಸಿದ ಸಾವಿರಾರು ಡಾಲರ್’ಗಳನ್ನು ಸಮಾಜಮುಖಿ ಕೆಲಸಗಳಿಗೆ ದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. 1955ರಲ್ಲಿ ಕಮಲ ನೆಹರು ಆಸ್ಪತ್ರೆಗೋಸ್ಕರ ನಿಧಿ ಸಂಗ್ರಹಿಸಲು ಉಚಿತ ಸಂಗೀತ ಗೋಷ್ಠಿ ನಡೆಸಿದ್ದಾರೆ. ಕಸ್ತೂರಬಾಗಾಂಧಿಯವರ ಹೆಸರಿನಲ್ಲಿ ಸಂಗೀತಗೋಷ್ಠಿ ನಡೆಸಿದ್ದಾರೆ.
ಸಂಗೀತ ರಾಣಿ
ಉದಯಪುರದಲ್ಲಿ ‘ಮೀರಾ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು “ಸಂಗೀತ ರಾಣಿಯ ಮುಂದೆ ನಾನು ಯಾರು? ನಾನು ಕೇವಲ ಪ್ರಧಾನಮಂತ್ರಿ ಎಂದು ಉದ್ಗಾರ ಎಳೆದದ್ದು ಅವರ ಜನ್ಮದತ್ತ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿದೆ.
‘ಹರಿ ತುಂ ಹರೋ’ ಎಂಬ ಮೀರಾ ಭಜನೆ ಗಾಂಧೀಜಿಯವರಿಗೆ ಬಲು ಇಷ್ಟವಾಗಿತ್ತಂತೆ ಹಾಗಾಗಿ ಬಾಪುಜಿ 1947ರಲ್ಲಿ ಎಂ.ಎಸ್.ಅವರನ್ನು ಆಹ್ವಾನಿಸಿ “ಸುಬ್ಬುಲಕ್ಷ್ಮಿ, ರಾಮಧುನ್ ತುಮ್ ಗಾವೊ” ಎಂದು ಹೇಳಿ ಅವರ ಕಂಠಸಿರಿಯನ್ನು ಆಸ್ವಾದಿಸಿದ್ದರೆಂದು ಇತಿಹಾಸ ಹೇಳುತ್ತದೆ. ಮದರಾಸು ವಿಶ್ವವಿದ್ಯಾಲಯ ತಮಗೆ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ಖ್ಯಾತ ನಿರ್ದೇಶಕರು ಸತ್ಯಜಿತ್ ರೇ ಒಪ್ಪಿದಾಗ ಅವರು ತಮ್ಮಂತೆಯೇ ಗೌರವ ಡಾಕ್ಟರೇಟ್ ಪದವಿ ಪಡೆದ ಸುಬ್ಬುಲಕ್ಷ್ಮಿಯವರು ಕಾರ್ಯಕ್ರಮದ ಕೊನೆಯಲ್ಲಿ ಹಾಡಿದರೆ ಮಾತ್ರ ತಾವು ಗೌರವ ಡಾಕ್ಟರೇಟ್ ಸ್ವೀಕರಿಸಲು ಬರುವುದಾಗಿ ಹೇಳಿದ್ದರಂತೆ.
ಆಡಿಸಿದಳೆಶೋದಾ…
ವೆಂಕಟೇಶ್ವರ ಸುಪ್ರಭಾತ, ವಿಶ್ವನಾಥ ಹಾಗೂ ಮೀನಾಕ್ಷಿ ಸುಪ್ರಭಾತಗಳು ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತಲ್ಲೂ ಪ್ರಸಿದ್ಧಿಯಾಗಿವೆ. “ತ್ಯಾಗರಾಜರ ಪಂಚರತ್ನಕೃತಿಗಳು”, “ನಾಮರಾಮಾಯಣ”, “ಭಾವಯಾಮಿ ರಘುರಾಮಂ” ತೆಲುಗಿನ ಕೀರ್ತನೆ ‘ಬ್ರೋಚೆವಾರೆವರುವಾ’, ‘ಸೀತಮ್ಮ ಮಾಯಮ್ಮ’, ”ಭಜಗೋವಿದಂ” “ಶ್ರೀಮನ್ನಾರಾಯಣ”, “ಗೋವಿಂದಾಷ್ಟಕ”, “ರಘುವಂಶಸುಧಾ”, ‘ಕನಕಧಾರ ಸ್ತೋತ್ರ”, ಅವರ ಪ್ರಖ್ಯಾತ ಕೃತಿಗಳು ಪುರಂದರದಾಸರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಕೀರ್ತನೆಯಂತೂ ಎಲ್ಲಾ ಕನ್ನಡಿಗರಿಗೂ ತಿಳಿದಿರುವಂಥದ್ದೇ. “ಆಡಿಸಿದಳೆಶೋದಾ”,”“ಕೃಷ್ಣಾ ನೀ ಬೇಗನೆ ಬಾರೊ” ಹೀಗೆ ಕೇಳಿದ ಕೀರ್ತನೆಗಳ ಪಟ್ಟಿ ಬೆಳೆಯುತ್ತದೆ.
ಎಲ್ಲಾ ಕಛೇರಿಯ ಕಡೆಯಲ್ಲಿ ಇವರು ರಾಜಾಜಿಯವರ “ಕುರೈಒನ್ರಂ ಇಲ್ಲೆö” (ನನಗೆ ವಿಷಾದವಿಲ್ಲ) ಎಂಬ ರಚನೆಯನ್ನು ನೋಡುವಾಗಲೂ ಈ ಕೀರ್ತನೆಯ ಉದ್ದಕ್ಕೂ ಕಣ್ಮುಚ್ಚಿ ಭಗವಂತನಲ್ಲಿ ಲೀನವಾಗುವ ಭಾವವನ್ನು ಕಾಣಬಹುದು. ಡಿಸೆಂಬರ್ 11, 2004ರಲ್ಲಿ ಇವರು ತಮ್ಮ 88ನೇ ವಯಸ್ಸಿನಲ್ಲಿ ಸಂಗೀತಯಾತ್ರೆ ಮುಗಿಸಿದರು.
ಯುನೈಟೆಡ್ ನೇಷನ್ಸ್ ಆಗಸ್ಟ್ 12, 2016ರಲ್ಲಿ ಇವರ ಜನ್ಮ ಶತಮಾನೋತ್ಸವ, 1966ರಲ್ಲಿ ಯುಎನ್ಓದಲ್ಲಿ ಇವರು ನೀಡಿದ ಸಂಗೀತಗೋಷ್ಠಿಯ 50ನೇ ವರ್ಷದ ಸವಿನೆನಪಿಗೆ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಭಾರತ ಸರ್ಕಾರವೂ ಇವರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಆರ್ ಬಿ ಐ ಸುಬ್ಬುಲಕ್ಷ್ಮಿ ಅವರ ಶತಮಾನೋತ್ಸವ ಆಚರಣೆಗೆ ನೂರು ರೂ.ಗಳ ನಾಣ್ಯವನ್ನು ಬಿಡುಗಡೆ ಮಾಡಿ ಗೌರವ ಸಮರ್ಪಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!