ಉಡುಪಿ ಜಿಲ್ಲೆ ಕಾರ್ಕಳ ಮೂಲದವರಾದ ಮಹೇಶ್ ಕುಮಾರ್ ಸಾಣೂರು, ಹತ್ತು ವರ್ಷ ಮೇಳದ ತಿರುಗಾಟದಲ್ಲಿದ್ದು ಪುರುಷ ಹಾಗೂ ಸ್ತ್ರೀ ವೇಷಗಳೆರಡಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿರುವ ಈ ಕಲಾವಿದ ಸದ್ಯ
ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
13

♦ ದಿವ್ಯಾ ಶ್ರೀಧರ್ ರಾವ್
newsics.com@gmail.com
ಏ ಳನೇ ವಯಸ್ಸಿನಲ್ಲಿ ತನ್ನೂರಿನ ಯುವಕ ಮಂಡಲದ ವತಿಯಿಂದ ಪ್ರಾರಂಭವಾದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮಹಾವೀರ ಪಾಂಡಿ ಕಾಂತಾವರ ಅವರಿಂದ ತೆಂಕುತಿಟ್ಟಿನ ನೃತ್ಯ ಕಲಿತು, ನಾಲ್ಕನೇ ತರಗತಿಯಲ್ಲಿರುವಾಗ ವೇಷ ಕಟ್ಟಿ ತನ್ನೂರಿನವರಿಂದ ಸೈ ಎನ್ನಿಸಿಕೊಂಡ ಕಲಾವಿದ ‘ಯಕ್ಷರಾಣಿ’ ಮಹೇಶ ಕುಮಾರ್ ಸಾಣೂರು.
ಭರತನಾಟ್ಯ ಕಲಿಯುತ್ತಿದ್ದ ಮಗುವೊಂದು ಯಕ್ಷಗಾನದತ್ತ ಒಲವು ತೋರಿ ತೆಂಕುತಿಟ್ಟಿನಲ್ಲಿ ವೇಷ ಮಾಡುವುದರ ಜತೆಗೆ ಉಡುಪಿ ಕೇಂದ್ರದಲ್ಲಿ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಅವರ ಮಾರ್ಗದರ್ಶನದಲ್ಲಿ ಬಡಗಿನ ಹೆಜ್ಜೆ ಕಲಿತು, ವೈ.ಎಲ್. ವಿಶ್ವರೂಪ ಮಧ್ಯಸ್ಥ ಅವರಿಂದ ಮೊದಲ ಬಡಗಿನ ವೇಷ ಮಾಡಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ಹದಿನೆಂಟು ವರ್ಷದ ಹಾದಿ…
ಉಡುಪಿ ಜಿಲ್ಲೆ ಕಾರ್ಕಳ ಮೂಲದವರಾದ ಮಹೇಶ್ ಸಾಣೂರು ಅವರು, ಹತ್ತು ವರ್ಷಗಳ ಕಾಲ ಮೇಳದ ತಿರುಗಾಟದಲ್ಲಿದ್ದು ಪುರುಷ ಹಾಗೂ ಸ್ತ್ರೀ ವೇಷಗಳೆರಡಲ್ಲಿಯೂ ಸೈ ಎನ್ನಿಸಿಕೊಂಡು, ಸ್ನಾತಕೋತ್ತರ ಪದವಿ ಮುಗಿಸಿ, ಸದ್ಯದಲ್ಲಿ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವೃತ್ತಿ ಹಾಗೂ ಪ್ರವೃತ್ತಿಗಳೆರಡನ್ನು ಸಂಭಾಳಿಸುವ ಕಲಾವಿದರಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ತಮ್ಮ ಅಭಿಮಾನಿಗಳಿಗೆ ಉಣಬಡಿಸಲು ಪ್ರಾರಂಭಿಸಿ ಇಂದಿಗೆ ಹದಿನೆಂಟು ವರ್ಷಗಳಾಗಿವೆ ಎಂಬುದಕ್ಕೆ ಸಾಕ್ಷಿಯಾಗಿ ತಮ್ಮ ಸಾವಿರಾರು ಅಭಿಮಾನಿಗಳು ನಿಲ್ಲುತ್ತಾರೆ.
ರಂಗಭೂಮಿಯಲ್ಲೂ ಹೆಸರು…
ಶ್ರೀದೇವಿ, ಚಂದ್ರಮತಿ, ತಿಲೋತ್ತಮೆಯಂತಹ ಪಾತ್ರದಲ್ಲಿ ಮನ್ನಣೆ ಗಳಿಸಿದ ಇವರು ರಂಗಭೂಮಿ ಕಲಾವಿದರಾಗಿ ಸುಮಾರು ಐದು ವರ್ಷಗಳ ಕಾಲ ಬೇರೆ ಬೇರೆ ಕಡೆಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಯಕ್ಷರಂಗದಲ್ಲಿ ಅವರಿಗೆ ಅನುಮಾನವಿರುವ ವಿಷಯಗಳನ್ನು ಸುಣ್ಣಂಬಳ ವಿಶ್ವೇಶ್ವರ್ ಭಟ್, ಎಂ ಕೆ ರಮೇಶ್ ಆಚಾರ್, ರಮೇಶ್ ಭಟ್ ಬಾಯರ್, ಪಣೆಯಾಲ ರವಿರಾಜ್ ಭಟ್, ನಾರಾಯಣ ಕುಲಾಲ್, ಮಂಜುನಾಥ್ ಭಟ್ ಬೆಳ್ಳಾರೆಯವರಲ್ಲಿ ಕೇಳಿ ತಿಳಿದುಕೊಳ್ಳುವ ಮೂಲಕ ತಮ್ಮ ಜ್ಞಾನ ವೃದ್ಧಿ ಮಾಡಿಕೊಂಡಿರುವುದನ್ನು ಸ್ಮರಿಸುತ್ತಾರೆ.
ನೂರಾರು ಸನ್ಮಾನಗಳು ಹಾಗೂ ಹತ್ತಾರು ಪ್ರಶಸ್ತಿಗಳನ್ನು ಪಡೆದ ಮಹೇಶ್, ಪ್ರತಿ ವೇಷವೂ ಜನರಿಂದ ಪ್ರಶಂಸೆಗೆ ಒಳಗಾಗುವುದರ ಜತೆಗೆ ಬೆಳವಣಿಗೆಯ ದಾರಿಗೆ ಸಹಕಾರಿಯಾಗಿದೆ ಎನ್ನುತ್ತಾರೆ.