Tuesday, October 4, 2022

ಶಾಂಭವಿಗೆ ಮಂಗಳಾರತಿ ಎತ್ತೀರೆ…

Follow Us

ಮಳೆಗಾಲ ಮುಗಿದು ಚಳಿಗಾಲ ಆರಂಭಿಸುವ ಸಮಯದಲ್ಲಿ ಬರುವ ಸಂಭ್ರಮದ ದಿನಗಳು ನವರಾತ್ರಿ. ಒಂಬತ್ತು ಅಥವಾ ಮೂರು ದಿನಗಳ ಕಾಲ ದೇವಿಯನ್ನು ಆರಾಧಿಸುವ, ರಾತ್ರಿ ಸಮಯದಲ್ಲೇ ದೇವಿಗೆ ವೈಭವದ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯವನ್ನು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಣಬಹುದು.

    ನಮ್ಮೂರ ನವರಾತ್ರಿ   


♦ ಸುಮನಾ ಲಕ್ಮೀಶ

newsics.com@gmail.com


 ರಾ ತ್ರಿ ಮೊಳಗುವ ಮಂತ್ರಘೋಷ, ಪುರೋಹಿತರ ಕಂಚಿನ ಕಂಠದಲ್ಲಿ ಇಡೀ ಮನೆಯನ್ನು ತುಂಬಿಕೊಳ್ಳುವ ದೇವಿ ಪಾರಾಯಣ, ಸಂಜೆಯಾಗುವ ಮುನ್ನವೇ ಆಗಮಿಸುವ ಅತಿಥಿಗಳು… ವಿಶೇಷವಾಗಿ ಮುತ್ತೈದೆಯರು. ಅವರು ಹಾಡುವ ದೇವಿ ಸ್ತುತಿಯ ಹಾಡುಗಳು. ನಾಲ್ಕಾರು ಆರತಿ ತಟ್ಟೆಗಳನ್ನು ದೇವಿಗೆ ಎತ್ತಿ ಧನ್ಯನಾಗುವ ಮನೆಯ ಯಜಮಾನ. ಹೂವಿನ ದಂಡೆ, ಮಾಲೆಗಳ ನಡುವೆ ವೈಭವದಲ್ಲಿ ಬೆಳಗುವ ದೀಪಗಳು. ದೇವರ ಕೋಣೆಯಲ್ಲಿ ಕವಿಯುವ ಧೂಪ-ದೀಪ-ಆರತಿಯ ಧೂಮ, ಇಡೀ ಊರಿಗೆ “ಓಹೊ, ಮಂಗಳಾರತಿ ಆಯಿತುʼ ಎನ್ನುವ ಸೂಚನೆ ನೀಡುವ ಜಾಗಟೆಗಳ ಸದ್ದು. ಒಂದಲ್ಲ-ಎರಡಲ್ಲ ನಾಲ್ಕಾರು ಜಾಗಟೆಗಳು ಏಕಕಾಲದಲ್ಲಿ ಮೊಳಗಿ ಆ ರಾತ್ರಿಯ ಮೌನವನ್ನೇ ಸೀಳುತ್ತವೆ.
 ವಿಶಿಷ್ಟ ಸಂಪ್ರದಾಯ…
ಮಲೆನಾಡಿನ ನವರಾತ್ರಿಯೆಂದರೆ ರಾತ್ರಿಯಲ್ಲೇ ಪೂಜೆ ಮಾಡುವ ವಿಶಿಷ್ಟ ಸಂಪ್ರದಾಯ. ಮಲೆನಾಡಿನ ನವರಾತ್ರಿಯ ಸಂಭ್ರಮ ಮುಗಿಲು ಮುಟ್ಟುವುದೇ ರಾತ್ರಿ ಆಚರಣೆಯಲ್ಲಿ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ನವರಾತ್ರಿ ಎಂದರೆ ದೇವಿಯ ವಿಶೇಷ ಆರಾಧನೆ. ರಾತ್ರಿಯೇ ಪೂಜೆ ಸಲ್ಲಬೇಕು. ರಾತ್ರಿ 8-9 ಗಂಟೆಗೆ ಮಹಾದೇವಿಗೆ ಮಹಾಮಂಗಳಾರತಿ ಸಲ್ಲುತ್ತದೆ. ಹಾಡುಗಳಿಂದ ದೇವಿಯನ್ನು ಸ್ತುತಿಸುತ್ತ ಸಾರ್ಥಕತೆ ಕಾಣುವ ಮಹಿಳೆಯರು, ಈ ದಿನಗಳಲ್ಲಿ ಪರಸ್ಪರ ಮನೆಗಳಿಗೆ ಭೇಟಿ ನೀಡುತ್ತ ಅರಿಶಿಣ-ಕುಂಕುಮ ನೀಡಿ ಸತ್ಕರಿಸುವ ಕಾರ್ಯದಲ್ಲಿ ತಲ್ಲೀನರಾಗುತ್ತಾರೆ. “ಮುತ್ತೈದೆಯರ ಊಟʼದ ಕಾರ್ಯದಲ್ಲಿ ನಾಲ್ಕಾರು ಮನೆಯ, ಕುಟುಂಬದ ಹೆಣ್ಣುಮಕ್ಕಳಿಗೆ, ವಿಶೇಷವಾಗಿ ದುರ್ಗಿ ಬಾಗಿನ, ದಂಪತಿಗೆ ವಿಶೇಷ ಬಾಗಿನ ನೀಡಿ ಸತ್ಕರಿಸುತ್ತಾರೆ. ಎಲ್ಲೂ ಕಂಡುಬರದ ಸಂಪ್ರದಾಯವೆಂದರೆ, ಮನೆಯ ಯಜಮಾನ ಹಾಗೂ ಆತನ ಪತ್ನಿ ಇಬ್ಬರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ಹೂವುಗಳ ಮೆರವಣಿಗೆ…
ರಾತ್ರಿ ಪೂಜೆಯೆಂದರೆ, ಸರಿಯೇ ಸರಿ. ಬೆಳಗ್ಗಿನಿಂದ ಉಪವಾಸ, ಒಪ್ಪತ್ತು ಮಾಡಲಾಗುತ್ತದೆ. ಸಂಜೆ ಆಗಮಿಸುವ ಅತಿಥಿಗಳಿಗೆ ಹೊಸದಾಗಿ ಅಡುಗೆಯಾಗಬೇಕು, ನೈವೇದ್ಯಕ್ಕೆ ಕರಿದ, ಸಿಹಿ ತಿನಿಸುಗಳಾಗಬೇಕು. ಎಲ್ಲಕ್ಕಿಂತ ಸೊಬಗೆಂದರೆ, ಹೂವಿನ ಸಾಮ್ರಾಜ್ಯದ್ದು. ನವರಾತ್ರಿಗೆಂದೇ ದಂಡಿಯಾಗಿ ಅರಳುವ ಕೇತಕಿ, ಬಾಲ ದಾಸವಾಳ, ಕೋಟೆ (ಗಂಟೆ), ಶಂಖಪುಷ್ಪ, ಗೆಂಟಿಗೆ ಹೂವುಗಳನ್ನು ಕೊಯ್ಯುವುದೊಂದು ಸಂಭ್ರಮ. ಮನೆಯ ಹಿತ್ತಿಲು, ತೋಟ, ಗದ್ದೆಯಂಚಿನಲ್ಲಿ ಅರಳುವ ಹೂವುಗಳನ್ನು ಕಿತ್ತು ತಂದು, ದೇವಿಗೆಂದು ಮಾಲೆ, ದಂಡೆ ಕಟ್ಟುವುದೊಂದು ತಪಸ್ಸಿನ ಕಾರ್ಯ.
ಕೆಲವೆಡೆ 9 ದಿನ, ಹಲವೆಡೆ 3 ದಿನ
ಕೆಲವು ಮನೆಗಳಲ್ಲಿ ಒಂಬತ್ತು ದಿನವೂ ಪಾರಾಯಣ, ಕೆಲವು ಮನೆಗಳಲ್ಲಿ ಮೂರು ದಿನಗಳ ಪೂಜೆ. ಇಲ್ಲಿ ಶಕ್ತಿಯ ಅವತಾರವಾಗಿರುವ ದೇವಿಯನ್ನು ಪೂಜಿಸಲಾಗುತ್ತದೆಯಾದರೂ ಶಾರದೆಯ ಆರಾಧನೆಯೇ ಹೆಚ್ಚು. ಪುಸ್ತಕಗಳು, ಮಕ್ಕಳ ಶಾಲಾ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ. ದೇವಿಗೆಂದೇ ಮೀಸಲಾದ ಬಂಗಾರದ ಆಭರಣಗಳು ಈ ಸಮಯದಲ್ಲಿ ಮಾತ್ರ ಹೊರಬಂದು ಝಗಮಗಗೊಳ್ಳುತ್ತವೆ. ಮೂರು ಅಥವಾ ಒಂಬತ್ತು ದಿನಗಳ ಕಾಲ ವೈಭವದಿಂದ ಪೂಜೆಗೊಳ್ಳುವ ದೇವಿ ಇಡೀ ವರ್ಷದ ಸಂಭ್ರಮವನ್ನು ಮರಳಿ ತರುತ್ತಾಳೆ.
ನವರಾತ್ರಿ ಭಜನೆ…
ನಾಲ್ಕನೆಯ ದಿನ ವಿಜಯದಶಮಿಯ ಆಚರಣೆ. ಪೂಜೆಗಿಟ್ಟ ಪುಸ್ತಕಗಳನ್ನು ಓದುವುದು, ಬರೆಯುವುದು, ಭಜನೆ ಮಾಡುವುದು ಅಂದಿನ ವಿಶೇಷ. ಮನೆಮಂದಿಯೆಲ್ಲ ಕುಳಿತು ಭಜನೆ ಮಾಡುವುದೊಂದು ವಿಶಿಷ್ಟ ಅಭ್ಯಾಸ. ವಿಜಯದಶಮಿಯಂದು ಈ ಆಚರಣೆ ಇಂದೂ ನಡೆದುಕೊಂಡು ಬರುತ್ತಿದೆ.
ಆಧುನಿಕ ಜೀವನದ ಭರಾಟೆಯಲ್ಲಿಯೂ ಮನುಷ್ಯ ತನ್ನ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಕಾಣುತ್ತದೆ ನವರಾತ್ರಿಯ ಆಚರಣೆ. ರಾತ್ರಿ ಸಮಯದಲ್ಲಿ ಸಲ್ಲುವ ಪೂಜೆ, ಪುನಸ್ಕಾರಗಳು, ಆಚರಣೆ-ಆರಾಧನೆಗಳು ಭಕ್ತಿಭಾವವನ್ನು ಉದ್ದೀಪಿಸುವಲ್ಲಿ ಸಫಲವಾಗುತ್ತವೆ.

ಮತ್ತಷ್ಟು ಸುದ್ದಿಗಳು

vertical

Latest News

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ...

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...

ಜಮ್ಮು, ರಜೌರಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

newsics.com ಶ್ರೀನಗರ: ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಜೌರಿಯಲ್ಲಿ ಇಂಟರ್ ನೆಟ್ ಸೇವೆಯನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಮಿತ್ ಈಗಾಗಲೇ ಜಮ್ಮು...
- Advertisement -
error: Content is protected !!