Monday, October 3, 2022

ದೀಪ ಹಚ್ಚೋಣ….

Follow Us

ದೀಪಗಳ ಬೆಳಕು ಮನೆ, ಮನದ ಕತ್ತಲನ್ನು ಓಡಿಸಿ ಅರಿವನ್ನು ತುಂಬುವಂತಾಗಲಿ. ಸುಜ್ಞಾನದ ದೀವಿಗೆಯನ್ನು ಬೆಳಗುವಂತಾಗಲಿ. ಭಾರತೀಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸಂಕೇತಗಳನ್ನು ಹೊಂದಿರುವ ದೀಪಗಳ ಹಬ್ಬ ದೀಪಾವಳಿ ಎಲ್ಲರಿಗೂ ಶುಭ ತರಲಿ.

♦ ಸುಮನಸ
newsics.com@gmail.com


 ಅಂ ಧಕಾರವನ್ನು ನೂಕಿ, ಹೊಸ ಬೆಳಕನ್ನು ತುಂಬುವ ಸಂಕೇತದ ಹಬ್ಬ ದೀಪಾವಳಿ. ಮೂರು ದಿನಗಳ ದೊಡ್ಡ ಹಬ್ಬ. ಕೆಲವೆಡೆ ಐದು ದಿನಗಳ ಕಾಲವೂ ಆಚರಿಸಲಾಗುತ್ತದೆ. ಎಲ್ಲ ವರ್ಗದ, ಸಮುದಾಯದ ಜನರು ತಮ್ಮ ತಮ್ಮ ಸಂಪ್ರದಾಯ ಹಾಗೂ ಪ್ರಾದೇಶಿಕ ವಿಭಿನ್ನತೆಗೆ ಅನುಗುಣವಾಗಿ, ಈ ಹಬ್ಬವನ್ನು ಆಚರಿಸುತ್ತಾರೆ.
ನರಕ ಚತುರ್ದಶಿಯಂದು ಎಣ್ಣೆಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರ ಮಥನದ ಸಮಯದಲ್ಲಿ ಅಮೃತಕಲಶದೊಂದಿಗೆ ವಿಷ್ಣು ಧನ್ವಂತರಿಯಾಗಿ ಈ ದಿನ ಅವತಾರವೆತ್ತಿದ್ದ. ಹೀಗಾಗಿ, ಚತುರ್ದಶಿಯ ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ. ಹೀಗಾಗಿ, ಇಂದು ಮುಂಜಾನೆ ಎಣ್ಣೆಸ್ನಾನ ಮಾಡುವ ಪದ್ಧತಿ ಬಹುತೇಕ ಎಲ್ಲೆಡೆ ಆಚರಣೆಯಲ್ಲಿದೆ.
ಲೋಕಕಂಟಕನಾಗಿದ್ದ ನರಕಾಸುರನನ್ನು ಶ್ರೀಕೃಷ್ಣ ಚತುರ್ದಶಿಯಂದು ವಧೆ ಮಾಡಿ ಲೋಕಕಲ್ಯಾಣಕ್ಕೆ ಕಾರಣನಾಗಿದ್ದನು. ಅವನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣನೂ ಅಂದು ಎಣ್ಣೆಸ್ನಾನ ಮಾಡಿದ್ದ ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ, ನೀರು ತುಂಬುವ ಹಬ್ಬ ಎಂದೇ ನರಕ ಚತುರ್ದಶಿ ಖ್ಯಾತವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಎಲ್ಲರೂ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸುತ್ತಾರೆ. ಮನೆಯ ಹೆಣ್ಣು ಮಕ್ಕಳೆಲ್ಲ ಸೇರಿ, ಗಂಡಸರಿಗೆ ಆರತಿಯನ್ನು ಬೆಳಗುತ್ತಾರೆ.
ಲಕ್ಷ್ಮೀ ಉದಯಿಸಿದ ದಿನ
ಚತುರ್ದಶಿಯ ಮಾರನೆಯ ದಿನ ಅಮಾವಾಸ್ಯೆ. ಇದು ಲಕ್ಷ್ಮೀಪೂಜೆಯ ದಿನ. ಸಮುದ್ರಮಥನದಿಂದ ಲಕ್ಷ್ಮೀ ಉದಯಿಸಿದ ದಿನ. ಹೀಗಾಗಿ, ಅಂದು ಧನಲಕ್ಷ್ಮೀಯ ಆರಾಧನೆ ನಡೆಯುತ್ತದೆ. ವ್ಯಾಪಾರಿಗಳು ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುವುದನ್ನು ಕಾಣಬಹುದು. ದೀಪಾರಾಧನೆ ಈ ದಿನದ ವಿಶೇಷ.
ಬಲಿಪಾಡ್ಯಮಿ
ಮರುದಿನ ಬಲಿಪಾಡ್ಯಮಿ. ರೈತಾಪಿ ಬದುಕಿಗೆ ಪೂರಕವಾಗಿರುವ ಗೋವುಗಳನ್ನು ಪೂಜಿಸುವುದು ಈ ದಿನದ ವಿಶೇಷ. ಹೊಲ ಉಳುವ ಎತ್ತುಗಳು, ಹಾಲು ಕರೆಯುವ ಹಸುಗಳು, ಎಮ್ಮೆಗಳು ರೈತರ ಬದುಕು, ಆತ್ಮದೊಂದಿಗೆ ಬೆಸೆದುಕೊಂಡಿವೆ. ಅವುಗಳನ್ನು ಮಕ್ಕಳಂತೆಯೇ ಭಾವಿಸಲಾಗುತ್ತದೆ. ಗೋವುಗಳು, ಎತ್ತುಗಳಿಗೆ ಹೂವಿನ ಮಾಲೆ, ದಾರ, ಗೆಜ್ಜೆಸರ ಮುಂತಾದ ಅಲಂಕಾರ ಮಾಡಿ ಮೆರವಣಿಗೆ ಮಾಡಲಾಗುತ್ತದೆ. ಈ ಆಚರಣೆ ರಾಜ್ಯಾದ್ಯಂತ ವಿಭಿನ್ನ ರೂಪದಲ್ಲಿದೆ. ಹಲವೆಡೆ, ದನಗಳನ್ನೆಲ್ಲ ಒಂದೆಡೆ ಕರೆದೊಯ್ದು ಮೆರವಣಿಗೆ ಮಾಡಲಾಗುತ್ತದೆ. ಎತ್ತುಗಳ ಕಾದಾಟಕ್ಕೂ ಅಂದು ಅವಕಾಶವುಂಟು.
“ದೀಪಾವಳಿಯಂದು ಮಕ್ಕಳ ಕೈಲಿ ಹೋಳಿಗೆ’ ಎನ್ನುವ ಆಡುಮಾತು ಸಹ ಹಲವೆಡೆ ಚಾಲ್ತಿಯಲ್ಲಿದೆ. ಅಂದು ಹೋಳಿಗೆಯ ಊಟದ ವಿಶೇಷ ಕಾಣಬಹುದು.
ಹಿಂದೊಮ್ಮೆ ಭೂಲೋಕವನ್ನು ಆಳಿದ್ದ ಬಲಿ ಚಕ್ರವರ್ತಿ ದೀಪಾವಳಿಯ ಮೂರು ದಿನಗಳ ಕಾಲ ಮತ್ತೆ ಭೂಮಿಗೆ ಬಂದು ಪೂಜೆ ಸ್ವೀಕರಿಸುತ್ತಾನೆ ಎನ್ನುವ ನಂಬಿಕೆಯನ್ನು ಮಲೆನಾಡು ಭಾಗದಲ್ಲಿ ಕಾಣಬಹುದು. ಹೀಗಾಗಿ, ಅಲ್ಲಿ ಬಲಿ ಚಕ್ರವರ್ತಿಯ ಚಿತ್ರವನ್ನು ಬರೆದು ದೇವರ ಮುಂದಿಟ್ಟು ಪೂಜೆ ಮಾಡುತ್ತಾರೆ. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ವಿಷ್ಣು “ವರ್ಷದಲ್ಲಿ ಮೂರು ದಿನಗಳ ಕಾಲ ಭೂಮಿಯಲ್ಲಿ ಪೂಜೆ ಸ್ವೀಕರಿಸು’ ಎಂದು ಆಶೀರ್ವಾದ ಇತ್ತನಂತೆ.
ಇನ್ನು ದೀಪಾವಳಿಯ ಸಂಭ್ರಮದಲ್ಲಿ ತುಳಸಿ ಪೂಜೆಗೂ ಮಹತ್ವದ ಸ್ಥಾನವಿದೆ. ಮೂರೂ ದಿನಗಳ ಕಾಲ ತುಳಸಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಉತ್ತರ ಕರ್ನಾಟಕದ ಹಟ್ಟಿ ಹಬ್ಬ
ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನು ಹಟ್ಟಿ ಹಬ್ಬ ಎಂದೂ ಕರೆಯಲಾಗುತ್ತದೆ. ಪ್ರತಿಯೊಂದು ಮನೆಗಳೂ ಸುಣ್ಣಬಣ್ಣ ಬಳಿದುಕೊಂಡು ಸಿಂಗಾರವಾಗುವುದು ಹಟ್ಟಿ ಹಬ್ಬದ ಮೊದಲ ಸಂಭ್ರಮ. ಜಾನುವಾರುಗಳನ್ನು ಕಟ್ಟುವ ಹಟ್ಟಿ ಹಾಗೂ ಜಾನುವಾರುಗಳನ್ನು ಪೂಜೆ ಮಾಡುವುದೇ ಹಟ್ಟಿ ಹಬ್ಬದ ವಿಶೇಷತೆ. ಗೌಳಿ ಸಮುದಾಯದಲ್ಲಿ ಎಮ್ಮೆಗಳ ಓಟದ ಸ್ಪರ್ಧೆಯೂ ನಡೆಯುತ್ತದೆ. ವೈವಿಧ್ಯಮಯ ಆಕಾಶ ಬುಟ್ಟಿಗಳು, ಹಣತೆಗಳನ್ನು ಬೆಳಗಿಸಲಾಗುತ್ತದೆ.
ವಿಜೃಂಭಣೆಯ ದೀಪಾವಳಿ
ದೀಪಾವಳಿಯ ಅದ್ಭುತ ಆಚರಣೆಗಳು ನಮ್ಮ ದೇಶದ ಕೋಲ್ಕತ, ಅಮೃತಸರ, ವಾರಾಣಸಿಗಳಲ್ಲಿ ಭವ್ಯವಾಗಿರುತ್ತವೆ. ಕೋಲ್ಕತದಲ್ಲಿ ಕಾಳಿ ದೇವಿ ವಿಜೃಂಭಿಸಿದರೆ, ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಸಾವಿರಾರು ಸಾಲುಸಾಲು ದೀಪಗಳು ರಾತ್ರಿಯನ್ನು ಬೆಳಗುತ್ತವೆ. ನಗರದ ಪ್ರತಿ ಮೂಲೆಯನ್ನೂ ದೀಪದಿಂದ ಅಲಂಕರಿಸಲಾಗುತ್ತದೆ. ಇನ್ನು, ಗಂಗೆಯ ವಾರಾಣಸಿಯಲ್ಲಿ ದೀಪಾವಳಿಯೆಂದರೆ ಹದಿನೈದು ದಿನಗಳ ಸಂಭ್ರಮ. “ದೇವತೆಗಳ ದೀಪಾವಳಿ’ ಎಂದೇ ಇಲ್ಲಿ ಆಚರಿಸಲಾಗುತ್ತದೆ. ದೇವತೆಗಳು ಭೂಮಿಗೆ ಇಳಿಯುತ್ತಾರೆಂದು ನಂಬುವ ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಈ ಸಮಯದಲ್ಲಿ ಗಂಗಾ ಮಹೋತ್ಸವವೂ ವೈಭವದಿಂದ ನಡೆಯುತ್ತದೆ.
ಪಟಾಕಿ ಹಚ್ಚುವ ಸಮಯ ಹುಷಾರು
ಈ ಬಾರಿಯ ದೀಪಾವಳಿಯ ಸಂಭ್ರಮಕ್ಕೆ ಪಟಾಕಿ ಇಲ್ಲವೆನ್ನುವ ಬೇಸರ ಬೇಡ. ಹಸಿರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಪಟಾಕಿಯಿಲ್ಲದೆಯೂ ದೀಪಾವಳಿಯ ಸಂಭ್ರಮವನ್ನು ಅನುಭವಿಸಬಹುದು. ಪಟಾಕಿ ಹಚ್ಚುವ ಅದೇ ಸಮಯದಲ್ಲಿ ಮಕ್ಕಳೊಂದಿಗೆ ಸೇರಿ ದೀಪ ಹಚ್ಚಬಹುದು. ಹುಷಾರು, ಈ ಬಾರಿ ಎಲ್ಲೆಡೆ ಸ್ಯಾನಿಟೈಸರ್ ಗಳ ಬಳಕೆ ವ್ಯಾಪಕವಾಗಿರುವುದರಿಂದ ಹತ್ತಿರ ಸ್ಯಾನಿಟೈಸರ್ ಇಲ್ಲದಂತೆ ನೋಡಿಕೊಳ್ಳಿ. ಸ್ಯಾನಿಟೈಸರ್ ಅನ್ನು ಕೈಗೆ ಹಚ್ಚಿಕೊಂಡು ದೀಪ ಹಚ್ಚುವ ಸಾಹಸವೂ ಬೇಡ.

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!