Monday, October 3, 2022

ತಮಸೋಮಾ ಜ್ಯೋತಿರ್ಗಮಯ…

Follow Us

ಅಂಧಕಾರ ದೂರ ಮಾಡುವ ದೀಪಗಳ ಹಬ್ಬ ದೀಪಾವಳಿ. ಧಾರ್ಮಿಕ, ಸಾಮಾಜಿಕ ಹಾಗೂ ಜನಪದೀಯ ಹಿನ್ನೆಲೆಯ ದೀವಳಿಗೆ ಕೊರೋನಾ ಸಮಯದಲ್ಲಿ ತುಸು ಮಂಕಾದಂತೆನಿಸಿದರೂ ಸಂಭ್ರಮ, ಸಡಗರಕ್ಕೆ ಕೊರತೆಯಿಲ್ಲ. ಹಬ್ಬ ಸಂಭ್ರಮಿಸಲಿ, ದೀಪ ಜಗಮಗಿಸಲಿ.

♦ ವಿದುಷಿ ಮಿತ್ರಾ ನವೀನ್, ಮೈಸೂರು

ಭರತನಾಟ್ಯ ಕಲಾವಿದರು
newsics.com@gmail.com


ದೀಪಾವಳಿ… ದೀಪಗಳ ಸಾಲು. ದೀಪದಿಂದ ದೀಪ ಹಚ್ಚುವ ಹಬ್ಬ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದೂ,
ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನವೆಂದೂ ಹಾಗೂ ಬಲಿ-ವಾಮನರ ಸಂಭ್ರಮ ಎಂದು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೆಟ್ಟದ್ದರ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ. ಸೀತಾ, ರಾಮ, ವಿಷ್ಣು, ಕೃಷ್ಣ, ಯಮ, ಯಾಮಿ, ದುರ್ಗಾ, ಕಾಳಿ, ಹನುಮ, ಗಣೇಶ, ಕುಬೇರ, ಧನ್ವಂತರಿ, ವಿಶ್ವಕರ್ಮ ದೇವತೆಗಳ ಸಂಬಂಧವು ದೀಪಾವಳಿಯಲ್ಲಿ ಅನಾವರಣಗೊಳ್ಳುತ್ತದೆ.
ಮದುವೆಯಾದ ಮೊದಲನೇ ದೀಪಾವಳಿಗೆ ಮಗಳು ಅಳಿಯನನ್ನು ಕರೆಯುವ ಪದ್ಧತಿ, ಬಂಧುಮಿತ್ರರೊಡನೆ ಕೂಡಿ ಹರುಷದಿಂದ ಹಬ್ಬವನ್ನು ಆಚರಿಸುವ ಪದ್ಧತಿ, ಮನಸ್ಸುಗಳು, ಕುಟುಂಬಗಳು ಹರುಷದಿಂದ ಹಬ್ಬದ ಶುಚಿ ರುಚಿಯಾದ ವಿಶೇಷ ಅಡುಗೆ ಸಿಹಿತಿನಿಸುಗಳನ್ನೂ, ಬಟ್ಟೆ ಉಡುಗೊರೆಗಳನ್ನು ಕೊಟ್ಟು ತೆಗೆದುಕೊಳ್ಳುವ ಪದ್ಧತಿ, ದೀಪಗಳಿಂದ ಮನೆ ಮನಗಳನ್ನು ಬೆಳಗುವ ಪದ್ಧತಿ, ಮಕ್ಕಳು ಹಿರಿಯರು ಎಂಬ ಭೇದಭಾವವಿಲ್ಲದೆ ಪಟಾಕಿ ಹೊಡೆದು ಹಿಗ್ಗುವ ಪದ್ಧತಿ…
ಮೊದಲ ದಿನ…
“ನೀರು ತುಂಬುವ ಹಬ್ಬ/ ಜಲಪೂರಣ ತ್ರಯೋದಶಿ… ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ. ಅಂದು, ಬಚ್ಚಲುಮನೆಯನ್ನೆಲ್ಲಾ ಶುದ್ಧವಾಗಿ ತೊಳೆದು, ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಿತ್ತಾಳೆ, ಸ್ಟೀಲ್, ತಾಮ್ರದ ದೊಡ್ಡ ಪಾತ್ರೆಗಳನ್ನು ಹೊಳೆಯುವಂತೆ ತೊಳೆದು ಸುಣ್ಣ ಕೆಮ್ಮಣ್ಣು ಪಟ್ಟಿಗಳನ್ನು ಹಚ್ಚಿ ಹೊಲದ ಬೇಲಿಯಲ್ಲಿ ಹರಡಿದ ಮಾಲಿಂಗಬಳ್ಳಿಯಿಂದ ಸುತ್ತಿಡುತ್ತಾರೆ. ಹಂಡೆಗಳನ್ನು ಅಲಂಕರಿಸುತ್ತಾರೆ. ನೀರು ತುಂಬಿಸಿ ಪೂಜಿಸುತ್ತಾರೆ.
ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡುತ್ತಾರೆ. ದೇವರ ಮುಂದೆ ನೀರಿನಲ್ಲಿ ಮಂಡಲವನ್ನು ಹಾಕಿ, ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ, ಗಂಗೆಯನ್ನು ಒಂದು ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು. ದೇವರ ಮುಂದೆ ಮತ್ತು ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯ ಮಾಡಿ, ಪೂಜಿಸಬೇಕು, ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |
ಮಳೆಗಾಲದ ಬಳಿಕ ಸಮೃದ್ಧಿಯಾಗಿ ಹರಿದು ತುಂಬಿ ತುಳುಕುತ್ತಿರುವ ಜಲದೇವತೆಯನ್ನು ಪೂಜಿಸುವ ಹಾಗೂ ವರ್ಷಪೂರ್ತಿ ನೆಲೆಸಿರುವುದಾಗಿ ಪ್ರಾರ್ಥಿಸುವ ರೀತಿಯು ಇದಾಗಿದೆ.
ಅಂದು, ಯಮದೀಪದಾನ ಮಾಡುವ ಕ್ರಮವೂ ಇದೆ.
ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಸಾಧ್ಯವಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿ ಇಡುತ್ತಾರೆ. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡತಕ್ಕದ್ದು. ನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಿ,
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |
ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾರೆ. ದೀಪಾವಳಿಯಲ್ಲಿ ದೀಪವೇ ಪ್ರಧಾನವಾದರೂ ವೈವಿಧ್ಯಮಯ ಆಚರಣೆಗಳು ಕಂಡುಬರುತ್ತವೆ.

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!