Tuesday, October 4, 2022

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

Follow Us

ಮಾತು ಕೇವಲ ಮಾತಾಗದೇ, ಅರ್ಥಪೂರ್ಣ ಮಾತಾದರೆ ಚೆಂದವೆನಿಸುತ್ತದೆ.
ಅದಕ್ಕೊಂದು ವ್ಯಾಕರಣದ ಬಂಧ ಬಂದರೆ, ಮಾತು ಜ್ಞಾನದ ಹರಿವಿನ ಭಾಷೆಯಾಗುತ್ತದೆ.
ಸಂವಹನ, ಸಾಹಿತ್ಯವಾಗುತ್ತದೆ.
ಸಾಹಿತ್ಯ ಕಲೆಯಾಗಿ, ಅಭಿನಯವಾಗಿ, ಕಥೆಯಾಗಿ, ಚಿಂತನೆಯಾಗಿ, ಅಭಿವ್ಯಕ್ತಿಯಾಗಿ ಅರಳುತ್ತದೆ.
ಅರಳಿ, ಅರಳಿಸಿ ಅದು ಮರಳಿ ಮಾತಾಗುತ್ತದೆ.
ಹಾಗೆಂದೇ ಮಾತು ಸಂವಹನ, ಭಾಷೆ, ಅಕ್ಷರ, ಪದಗಳು, ವಿಶೇಷವಾದ ಆಯಾ ಹೃದಯ ಆಯ್ಕೆ ಮಾಡುವ ಹಾಡಾಗುತ್ತದೆ.
ಹಾಡು….., ಮೌನದ ತೀವ್ರ ಭಾವವಾಗಿ, ಮತ್ತೆ ಮಾತಾಗುತ್ತದೆ..

ಧ್ವನಿಬಿಂಬ 2


♦ ಬಿ ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು

“ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಜೋಶಿ ಅವರು ‘ಅ’ ಕಾರ ‘ಹ’ ಕಾರದ ಬಗ್ಗೆ, ಭಾಷೆ ಬಗ್ಗೆ ಮಾತಾಡಿದ್ದು ಅನೇಕ ಚರ್ಚೆಗಳನ್ನು ಹುಟ್ಟು ಹಾಕಿತು. “ಹೌದು, ನಾನು ಹೋಗುತ್ತೇನೆ” ಎನ್ನಲು,
“ಔದು, ನಾನು ಓಗುತ್ತೇನೆ, ಅಥವಾ ಔದು, ನಾನು ಒಯ್ತೀನಿ ” ಅಂದರೆ ತಪ್ಪೇ ?
ಅವರವರ ಮಾತು ಅವರವರಿಗೆ, ಎಲ್ಲರೂ ಶುದ್ಧವಾಗಿಯೇ ಮಾತಾಡಬೇಕೆ ?
ಹೀಗೆ ಆರಂಭವಾದ ಚಿಂತನೆಗಳು, ಜಾತಿ ಧರ್ಮದವರೆಗೂ ಸೋರಿ ಹೋಯಿತು.

ಮಾತುಗಳು ಸೋತು ಹೋದರೆ ಮೌನವಾಗುತ್ತದೆ.
ಮಾತುಗಳು ಸೋರಿದರೆ ಪರಿಸ್ಥಿತಿ ಕಲಕುತ್ತದೆ.
ಮಾತುಗಳು ಸೇರಿದರೆ ಮಾತ್ರ ಅರ್ಥವತ್ತಾದ ಚರ್ಚೆಗಳಾಗುತ್ತವೆ.

ಮಾತು ಭಾಷೆ ಬೇರೆಯೇ? ಅಥವಾ ಒಂದೇ ಹೌದೇ? ಇದೆಂಥಾ ಪ್ರಶ್ನೆ ಎಂದು ನಗು ಬರುತ್ತದೆ. ಆದರೆ, ಕೆಲವೊಮ್ಮೆ ಹಾಗನ್ನಿಸುವುದುಂಟು. ಮಾತು ಕೇವಲ ಸಂವಹನಕ್ಕಾಗಿ ಮಾತ್ರ, ಹೇಳಿದ್ದು ಎದುರಿನ ವ್ಯಕ್ತಿಗೆ ಅರ್ಥ ಆದರೆ ಸಾಕು, ಹೇಗೆ ಹೇಳಿದರೆ ಏನು ?
ನಾವು ಹೇಗೆ ಮಾತಾಡುತ್ತೇವೆ ಎಂಬ ಬಗ್ಗೆ ಬರಹಗಾರ, ಮಾತುಗಾರ ಪ್ರೊ. ಕೃಷ್ಣೇಗೌಡರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿನೋದವಾಗಿ ಪ್ರಸ್ತುತಪಡಿಸಿದ್ದು ನೆನಪಾಗುತ್ತಿದೆ.
“ರೀ ಇಲ್ ನೋಡಿ, ಅವತ್ತು ಏನಾಯ್ತು ಅಂದರೆ…”
ಹೀಗೆ ನಾವು ಶುರು ಮಾಡುತ್ತೇವೆ ಮಾತನ್ನು..
ಅವತ್ತು ಏನಾಯ್ತು ಹೇಳಲು ಇಲ್ಲಿ ನೋಡಿ ಯಾಕೆ.. ಏನು ನೋಡೋದು.. ಅಂತ ಕೇಳುತ್ತಾರೆ ಪ್ರೊ. ಕೃಷ್ಣೇಗೌಡರು.
ಮುಂದುವರೆದು ಆಡು ಮಾತು ಹೇಗೆಲ್ಲ ಇರುತ್ತದೆ ಎಂದು ವಿವರಿಸುತ್ತಾರೆ.

“ಅಯ್ಯೋ, ನಮ್ಮೆಜಮಾನ್ರು, ಬೆಳಿಗ್ಗೆ ಬೆಳಗ್ಗೆ ಎಣ್ಣೆ ಹಚ್ಚಿ ಬಿಸಿ ಬಿಸಿ ಸ್ನಾನ ಮಾಡ್ತಾರೆ, ನೀವು ನೋಡ್ಬೇಕು..”
ಹೀಗೆ ಮಾತಾಡುತ್ತೇವೆ, ಅವರ ಸ್ನಾನ ನಾವು ನೋಡೋದು ಯಾಕೆ..
ಅಂತ ತಮಾಷೆ ಮಾಡುತ್ತಾರೆ.
ಇದನ್ನು ಕೇಳುತ್ತಾ ಹೋದಾಗ..
ಅನ್ನಿಸುತ್ತದೆ, ಮಾತು ಮಾತಲ್ಲ. ಮಾತು ಏನೋ ಹೇಳುತ್ತದೆ, ಅರ್ಥ ಬೇರೆ ಏನೋ ಇರುತ್ತದೆ, ಆದರೂ ಸಂವಹನ ಸರಿಯಾಗಿಯೇ ಇರುತ್ತದೆ.
ಆದರೆ ಕೃಷ್ಣೇಗೌಡರು ಹೇಳಿದ್ದೆಲ್ಲ ಬರೆಯಲು ಕುಳಿತರೆ, ಬರಹಕ್ಕೆ ಅರ್ಥ ಬರುವುದಿಲ್ಲ.
ಯಾಕೆಂದರೆ ಅದು “ಮಾತುಗಾರಿಕೆ.”
ಇಲ್ಲೇ ಮಾತು ಮತ್ತು ಬರಹದ, ಅಂದರೆ, ಮಾತು ಮತ್ತು ಭಾಷೆಯ ಸಿರಿತನ ಅರಿವಾಗುತ್ತದೆ.
ಭಾಷೆ ಸಂವಹನಕ್ಕಾಗಿ ಮಾತ್ರ ಎನ್ನುವುದಾದರೆ, ಸಂವಹನದ ನಾನಾ ರೂಪಗಳು, ಭಾಷಾ ಗೋಚರ ಅಲ್ಲ ಎಂಬುದನ್ನು ಮನಗಾಣುತ್ತೇವೆ.
ಶಿಳ್ಳೆ ಮೂಲಕ ಸಂಭಾಷಣೆ ಮಾಡುವ ಸಮುದಾಯ ಇದೆ.
ಚಿತ್ರ ಸಂಭಾಷಣೆ ಇದೆ.
ಸಂಕೇತ ಸಂಭಾಷಣೆ, ಅಂಗಾಂಗ ಚಲನೆ ಮೂಲಕ ಸಂಭಾಷಣೆ ಸಾಧ್ಯವಿದೆ ಅಲ್ಲವೇ.?

“ಕಣ್ಣಿನ ಕಾಗುಣಿತ” ಎಂಬ ಚಿತ್ರಗೀತೆಯಲ್ಲಿ, ಪ್ರೇಮ ಸಂವಹನ ಮಾಡಿಸುತ್ತಾರೆ ಚಿ. ಉದಯಶಂಕರ್.
“ಮೌನವೇ ಮಾತಾಯಿತು” ಎಂಬ ಸಾಲು ಹೊತ್ತ ಅನೇಕ ಕವನ, ಹಾಡುಗಳು, ಇವೆ.
ಹಾಗಾದರೆ, ಭಾಷೆ ಏಕೆ? ಎಂದು ಕೇಳಲು ಸಾಧ್ಯವೇ?
ಭಾಷೆ, ಸಂವಹನಕ್ಕಾಗಿ ಮಾತ್ರ ಅಲ್ಲ.
ಭಾಷೆಯ ಬೆಳವಣಿಗೆ, ಮೌನ, ಸಂಕೇತ, ಚಲನೆ, ಚಿತ್ರ, ಶಬ್ದ, ಇವುಗಳ ಜತೆ ಇದ್ದು, ಇವುಗಳನ್ನು ಮೀರಿ, ಬೆಳವಣಿಗೆ ಹೊಂದಿದೆ.
ಭಾಷೆಗೆ ಒಂದು ಪರಂಪರೆ, ಘನತೆ ಇದೆ. ಅಕ್ಷರ ರೂಪ ಪಡೆದು, ಪದಗಳ ವಾಕ್ಯಗಳ ರೂಪ ತಳೆದು, ನಡೆದು ಬಂದು ಪರಿಷ್ಕೃತವಾಗುತ್ತ ಸಾಗಿ ಬಂದಿದೆ.
ಸಂವಹನದ ಕೆಲಸ ಅಷ್ಟೇ ಮಾಡದೆ, ಭಾಷೆ ಜ್ಞಾನವಾಗಿ, ಅರಿವಾಗಿ, ತೆರೆದುಕೊಳ್ಳುತ್ತದೆ.
ಈ ಅರಿವು, ಜ್ಞಾನ, ಹೆಚ್ಚು ಹೆಚ್ಚು ಪ್ರಸಾರ ಅಗಬೇಕೆಂದರೆ, ಮಾತು ಕೇವಲ ಮಾತಾಗದೇ, ಅರ್ಥಪೂರ್ಣ ಮಾತಾದರೆ ಚೆಂದವೆನಿಸುತ್ತದೆ.
ಅದಕ್ಕೊಂದು ವ್ಯಾಕರಣದ ಬಂಧ ಬಂದರೆ, ಮಾತು ಜ್ಞಾನದ ಹರಿವಿನ ಭಾಷೆಯಾಗುತ್ತದೆ.
ಸಂವಹನ, ಸಾಹಿತ್ಯವಾಗುತ್ತದೆ.
ಸಾಹಿತ್ಯ ಕಲೆಯಾಗಿ, ಅಭಿನಯವಾಗಿ, ಕಥೆಯಾಗಿ, ಚಿಂತನೆಯಾಗಿ, ಅಭಿವ್ಯಕ್ತಿಯಾಗಿ ಅರಳುತ್ತದೆ.
ಅರಳಿ, ಅರಳಿಸಿ ಅದು ಮರಳಿ ಮಾತಾಗುತ್ತದೆ.
ಹಾಗೆಂದೇ ಮಾತು ಸಂವಹನ, ಭಾಷೆ, ಅಕ್ಷರ, ಪದಗಳು, ವಿಶೇಷವಾದ ಆಯಾ ಹೃದಯ ಆಯ್ಕೆ ಮಾಡುವ ಹಾಡಾಗುತ್ತದೆ.
ಹಾಡು….., ಮೌನದ ತೀವ್ರ ಭಾವವಾಗಿ, ಮತ್ತೆ ಮಾತಾಗುತ್ತದೆ.
“ನುಡಿದರೆ ಮುತ್ತಿನ ಹಾರದಂತಿರಬೇಕು,
ಮಾತು ಜ್ಯೋತಿರ್ಲಿಂಗ ” ಅಂದರು ಬಸವೇಶ್ವರರು.
“ಮನುಜ ಹೃದಯಾಂಗಣದಿ ದನಿಗಳು ಎನಿತೋ, ಅವು ತರ್ಕವನ್ನೇ ಅಣಕಿಸುತ್ತವೆ” ಅಂದರು ಡಿ ವಿ ಜಿ.
ಮಾತು, ಭಾಷೆ, ಸರಿ, ತಪ್ಪು, ಅಕ್ಷರ ಉಚ್ಚಾರ,
ಕುರಿತ ಚರ್ಚೆಗಿಂತ ಜಾನಪದ, ಜ್ಞಾನಪದ ಮತ್ತು ಹೃದಯಪಥದ ಅವಲೋಕನ ಮಾಡುತ್ತಾ ಸಾಗಿದರೆ ನಮ್ಮದೇ ಭಾಷೆ ನಮಗೆ ಕೇಳಿಸೀತು.
ಅದು ಎಲ್ಲವನ್ನೂ ಮೀರೀತು..ಹಾರೀತು.. ಮೈ ಮರೆಸೀತು…

ಹಕ್ಕಿಯು ಹಾರುತಿದೇ…

ಮತ್ತಷ್ಟು ಸುದ್ದಿಗಳು

vertical

Latest News

ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ!

newsics.com ತೆಲಂಗಾಣ: ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್‌ ರಾವ್‌ ವಿಜಯದಶಮಿಯ ನಿಮಿತ್ತ ಹೊಸ ರಾಷ್ಟ್ರೀಯ ಪಕ್ಷವನ್ನು ಬುಧವಾರ ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಆರ್‌ಎಸ್‌ ನಾಯಕನೊಬ್ಬ ಸಾರ್ವಜನಿಕವಾಗಿ ಸ್ಥಳೀಯ ಜನರಿಗೆ...

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ ಮೇಲೆ ಎಚ್ಚರಿಕೆಯ ಬರಹ ಬರೆಯಲಾಗಿದೆ....

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...
- Advertisement -
error: Content is protected !!