ಚಡ್ಡಿ ಅಂದರೆ RSS,
ಕೇಸರಿ ಅಂದರೆ BJP’
ಹುಲ್ಲು ಅಂದರೆ ಒಂದು ಅರ್ಥ
ಕೆಂಪು ಅಂದರೆ ಕಮ್ಯುನಿಸಂ
ರಾಮ, ಕೃಷ್ಣ , ಅಂಬೇಡ್ಕರ್,
ಎಲ್ಲರಿಗೂ ಈಗ ಲೇಬಲ್ ಹಾಕಲಾಗುತ್ತಿದೆ. ಬೇಲಿ ಕಟ್ಟಲಾಗುತ್ತಿದೆ. ಇದು ಯಾವ ಅರ್ಥವನ್ನು ನೀಡುತ್ತಿದೆ?
ಧ್ವನಿಬಿಂಬ 24
♦ ಬಿ.ಕೆ. ಸುಮತಿ
newsics.com@gmail.com
“ಲೇಬಲ್ ಅಂದರೆ ಗುರುತು.
ಮಾರುಕಟ್ಟೆಯಲ್ಲಿ ಒಂದು ಗುರುತು ಹಾಕುವುದು.
ಇದು ನನ್ನದು ಎಂದು ತಿಳಿಸುವ ಮೊಹರು ಹಾಕುವ ಕ್ರಿಯೆ.
ಬ್ರಾಂಡ್ಗಳಿಗೆ ಸಂಬಂಧಪಟ್ಟ ಲೇಬಲ್, ಗುಣಮಟ್ಟದ ಲೇಬಲ್, ಮಾಹಿತಿ ತಿಳಿಸುವ ಲೇಬಲ್, ಹೀಗೆ ಅನೇಕ ರೀತಿಯ ಲೇಬಲ್ ಗಳನ್ನು ವಸ್ತುಗಳಿಗೆ ಹಾಕುವುದನ್ನು ನಾವು ಇಂದು ನೋಡಬಹುದು.
ಆದರೆ ಮನುಷ್ಯರಿಗೆ ಲೇಬಲ್ ಹಾಕುವುದು ಸಾಧ್ಯವೇ?
ಇದು ಸರಿಯೇ?
ಮನುಷ್ಯ ಹುಟ್ಟುವಾಗ ನಿಜವಾಗಿ ವಿಶ್ವಮಾನವನೇ ಆಗಿರುತ್ತಾನೆ. ಯಾವುದೇ ಗುರುತು, ಲೇಬಲ್ ಅವನಿಗೆ ಇರುವುದಿಲ್ಲ. ಆದರೆ ಬೆಳೆಯುತ್ತ ಬೆಳೆಯುತ್ತ ಲೇಬಲ್ ಗಳನ್ನು ಕಿತ್ತು ಹಾಕಿಕೊಂಡು ಎಲ್ಲರಿಗೂ ಬೇಕಾದವನಾಗಿ ಪುನಹ ಪ್ರಕೃತಿಯ ಕಡೆಗೆ ನಡೆಯುತ್ತಾ ವಿಶ್ವಮಾನವ
ಆಗಬೇಕು ಎನ್ನುತ್ತಾರೆ ಕುವೆಂಪು.
ಮನುಷ್ಯನಿಗೆ ಲೇಬಲ್ ಹಾಕುವುದು ತಪ್ಪು ಎನ್ನುತ್ತದೆ ವಿಜ್ಞಾನ.
ಮಕ್ಕಳಿಗೆ ಲೇಬಲ್ ಹಾಕಿದರೆ ಅಂತಹ ಮಕ್ಕಳು ಹಾಗೆಯೇ ಆಗುತ್ತಾರೆ ಎನ್ನುತ್ತದೆ ಮನೋವಿಜ್ಞಾನ.
ಉದಾಹರಣೆಗೆ ಒಬ್ಬ ಸ್ವಲ್ಪ ಕೋಪದ ಮನುಷ್ಯ ಇದ್ದಾನೆ ಎಂದಿಟ್ಟುಕೊಳ್ಳಿ ಸದಾ ಅವನನ್ನು ನೀನು ಕೋಪಿಷ್ಟ ನೀನು ಕೋಪಿಷ್ಟ ಎಂದು ಹೇಳುತ್ತಾ ಲೇಬಲ್ ಹಾಕಿದರೆ ಅವನನ್ನು ಕೋಪದಲ್ಲಿ ಗಟ್ಟಿಮಾಡಿದ ಹಾಗೆ ಆಗುತ್ತದೆ.
ಅವನನ್ನು ಬದಲಾಗಲು ಬಿಡುವುದೇ ಇಲ್ಲ ಲೇಬಲಿಂಗ್.
ಒಬ್ಬ ವ್ಯಕ್ತಿ ತಪ್ಪು ತಿದ್ದಿ ಕೊಳ್ಳುವುದು ಮತ್ತು ಬದಲಾಗುವುದು ಸಾಧ್ಯವಾಗಬೇಕು ಎನ್ನುವುದಾದರೆ, ಲೇಬಲಿಂಗ್ ಮಾಡಬಾರದು ಎನ್ನುತ್ತಾರೆ ಮನೋವಿಜ್ಞಾನಿಗಳು.
ಬಾಲ್ಯದಲ್ಲಿ ಒಂದು ಮಗು ಅಕಸ್ಮಾತ್ ಪಕ್ಕದ ಸ್ನೇಹಿತನ ಚೀಲದಿಂದ ಪೆನ್ಸಿಲ್ ತೆಗೆದುಕೊಂಡಂಥ ಸಂದರ್ಭದಲ್ಲಿ ಅದಕ್ಕೆ
” ಕಳ್ಳ ” ಎಂದು ಲೇಬಲ್ ಹಚ್ಚಿದರೆ ಆ ಮಗು ಮುಂದೆ ಕಳ್ಳನೇ ಆಗುವ ಸಾಧ್ಯತೆ ಇರುತ್ತದೆ.
ಬದಲಾಗಿ ಪೆನ್ಸಿಲ್ ತೆಗೆದುಕೊಳ್ಳುವುದು ತಪ್ಪು ಎಂದು ತಿಳಿಸಿ ಹೇಳಿದರೆ ಮಗು ಸತ್ಪ್ರಜೆಯಾಗಿ ಬೆಳೆದು ಮುಂದೆ ಬರಲು ಸಾಧ್ಯ ಇದೆ.
ಒಳ್ಳೆಯ ವಿಚಾರಗಳಿಗೆ ಲೇಬಲ್ ಮಾಡುವುದು ತುಂಬಾ ಉತ್ತಮ .
ಲೇಬಲ್ ಮಾಡಿದರೆ ನೀನು ಹೇಗೆ ಎಂದು ಒಬ್ಬ ವ್ಯಕ್ತಿಗೆ ಸ್ಪಷ್ಟವಾಗಿ ತಿಳಿಸಿದ ಹಾಗೆ.
ಮತ್ತೆ ಮತ್ತೆ ನೀನು ಒಳ್ಳೆಯವನು ಎಂದು ಹೇಳುತ್ತಾ ಸಾಗಿದರೆ ಕೆಟ್ಟವನೂ ಕೂಡ ಒಂದೆರಡಾದರೂ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸುತ್ತಾನೆ.
ಹಾವರ್ಡ್ ಸಾಲ್ ಬೆಕರ್ ಎಂಬ ಸಮಾಜಶಾಸ್ತ್ರಜ್ಞ ವಿವಿಧ ರೀತಿಯ ಲೇಬಲ್ ಗಳನ್ನು ಚರ್ಚೆ ಮಾಡಿದ್ದಾನೆ .
ನಿರಂತರ ಲೇಬಲ್ ಮಾಡುವವರು ಮತ್ತು ಲೇಬಲಿಂಗ್ಗೆ ಒಳಗಾಗುವವರು ಇಬ್ಬರೂ ಮನಶಾಸ್ತ್ರದ ಪ್ರಕಾರ ತಪ್ಪು ಮಾಡುವವರೇ ಆಗಿದ್ದಾರೆ ಎ೦ದು ಆತ ಹೇಳುತ್ತಾನೆ.
ರಾಜಕೀಯದಲ್ಲಿ ಲೇಬಲಿಂಗ್ ಒಂದು ಅಸ್ತ್ರವಾಗಿದೆ. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಿ ಹೇಳಿ ಲೇಬಲ್ ಹಾಕಿ ಬೇಳೆ ಬೇಯಿಸಿಕೊಳ್ಳುವ ಒಂದು ಕುತಂತ್ರ ಎಂದೇ ಇದನ್ನು ವಿಶ್ಲೇಷಿಸಲಾಗಿದೆ.
ಅನೇಕ ಸಲ ಲೇಬಲಿಂಗ್ ಎನ್ನುವುದು ಒಂದು ಸಾಮಾಜಿಕ ಪಿಡುಗು ಆಗಿದೆ. ಮತ್ತು ಒಂದು ಉದ್ದೇಶಿತ ಪ್ರಕ್ರಿಯೆ.
ಮನಸ್ಸು, ಆತ್ಮ ,ಸಮಾಜದ ಜೊತೆ, ತನಗಿರುವ ಐಡೆಂಟಿಟಿಯನ್ನು ದೃಢ ಪಡಿಸುವುದು ಈ ಲೇಬಲ್ ಪ್ರಕ್ರಿಯೆ.
ಫ್ರಾಂಕ್ ತಾನೆನ್ ಬಾನ್ ಎಂಬ ತಜ್ಞ ಲೇಬಲಿಂಗ್ ಬಗ್ಗೆ ಒಂದು ಅಧ್ಯಯನ ಮಾಡಿದ್ದಾನೆ .ರಾಜಕೀಯದಲ್ಲಿ ಇದು ಒಂದು ತಂತ್ರ ಮತ್ತು ಆಟ ಎಂದು ಅವನು ಸ್ಪಷ್ಟಪಡಿಸುತ್ತಾನೆ .
ಆದರೆ ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಚಡ್ಡಿ ಅಂದರೆ RSS,
ಕೇಸರಿ ಅಂದರೆ BJP’
ಹುಲ್ಲು ಅಂದರೆ ಒಂದು ಅರ್ಥ
ಕೆಂಪು ಅಂದರೆ ಕಮ್ಯುನಿಸಂ
ರಾಮ, ಕೃಷ್ಣ , ಅಂಬೇಡ್ಕರ್,
ಎಲ್ಲರಿಗೂ ಈಗ ಲೇಬಲ್ ಹಾಕಲಾಗುತ್ತಿದೆ. ಬೇಲಿ ಕಟ್ಟಲಾಗುತ್ತಿದೆ.
ಇದು ಯಾವ ಅರ್ಥವನ್ನು ನೀಡುತ್ತಿದೆ?
ೞಫ ಜಾತಿ ಮತ ಧರ್ಮ ಇವುಗಳಿಂದ ಮುಕ್ತರಾಗಿ ಎಂಬ ಸಂದೇಶ ಕೊಟ್ಟ ಕುವೆಂಪು ಅಂತಹ ಮಹನೀಯರು ಒಂದು ಕಡೆ.
ಚಡ್ಡಿಗೂ, ರಾಮನಿಗೂ, ಕೆಂಪು, ಕೇಸರಿಗೂ ಮುದ್ರೆ ಒತ್ತುತ್ತಾ ಇರುವ ಮಹನೀಯರು ಇನ್ನೊಂದು ಕಡೆ.
ಹೇಳಿ ನಿಮ್ಮದು ಯಾವ ಲೇಬಲ್?