Wednesday, July 6, 2022

ಅಂಧಕಾರವಿಲ್ಲದ ‘ಅಗ್ನಿಪಥ’ದಲ್ಲೇಕೆ ದಳ್ಳುರಿ?

Follow Us

ಅಗ್ನಿವೀರರಾಗಿ ಸೇವೆ ಸಲ್ಲಿಸುವ ನಾಲ್ಕು ವರ್ಷಗಳ ಅವಧಿಯಲ್ಲಿ ಏನಾದರೂ ಅವಘಡ ಸಂಭವಿಸಿದರೆ ಆಗ ಸುಮಾರು 48 ಲಕ್ಷ ರೂಪಾಯಿಗಳ ಇನ್ಶುರೆನ್ಸ್ (ವಿಮೆ) ಮಾಡಲಾಗಿರುತ್ತದೆ ಎಂದು ಸರ್ಕಾರ ಹೇಳುತ್ತಿದೆ. ನಾಲ್ಕು ವರ್ಷಗಳ ಸೇವಾವಧಿಯಲ್ಲಿ 23 ಲಕ್ಷದ 43 ಸಾವಿರದ 160 ರೂಪಾಯಿ ಗಳಿಸುವ ಅವಕಾಶವಿದೆ. ಯಾವುದೇ ಸಮಯದಲ್ಲಿ ದೇಶಕ್ಕೆ ಒದಗಬಹುದಾದ ಒಂದು ತರಬೇತಿ ಪಡೆದ ವರ್ಗಗಳನ್ನು ನಾಗರಿಕ ವಲಯದಲ್ಲಿ ಬೆಳೆಸುವುದು, ತನ್ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನು ಗಟ್ಟಿ ಮಾಡಲು ಅಗ್ನಿಪಥ ಚಿಂತನೆಯ ಸ್ವರೂಪ ತಾಳಿದೆ.

ಧ್ವನಿಬಿಂಬ 25


♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com
ದೇಶಕ್ಕಾಗಿ ದುಡಿಯಿರಿ ಎಂದರೆ ನಮ್ಮ ಯುವಕರು ಸೆಟೆದು ನಿಂತಿರೋದ್ಯಾಕೆ? ಕಲ್ಲು ಹೊಡೆಯೋದ್ಯಾಕೆ? ರೈಲಿಗೆ ಬೆಂಕಿ ಹಚ್ಚೋದ್ಯಾಕೆ? ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತಿರೋದೇಕೆ?
ನಮ್ಮ ಯುವಜನತೆಗೆ ಏನಾಗಿದೆ?
ಹೌದು.
ಅಗ್ನಿಪಥದ ಅಗ್ನಿವೀರರ ಬಗ್ಗೆ ಮಾತಾಡುತ್ತಿದ್ದೇವೆ.
ಇಷ್ಟಕ್ಕೂ ಇದು ಯೋಜನೆಯಲ್ಲ, ನೇಮಕಾತಿ.
ಅರ್ಜಿಗಳು ಬಂದರೆ ನೇಮಕಾತಿ ನಡೆಯುತ್ತದೆ, ಇಲ್ಲವಾದರೆ ಇಲ್ಲ.
ಇದನ್ನು ವಿರೋಧ ಪಕ್ಷಗಳು ಏಕೆ ವಿರೋಧಿಸುತ್ತಿವೆ?
ರಕ್ಷಣಾಪಡೆಗೆ ಯುವಕರು ಹೋದರೆ ನಾಲ್ಕು ವರ್ಷ ಕೆಲಸ ಮಾಡಿ ಬಂದರೆ ಯಾರಿಗೆ ಏನು ನಷ್ಟವಾಗುತ್ತದೆ?
ಇಷ್ಟಕ್ಕೂ ಯಾರಿಗೂ ಬಲವಂತ ಮಾಡುತ್ತಿಲ್ಲವಲ್ಲ.
ಸಂಪೂರ್ಣ ಸ್ವಾತಂತ್ರ್ಯ ಆಯ್ಕೆ, ಆಯಾ ವ್ಯಕ್ತಿಯದು.
ಹಾಗಾದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇದನ್ನು ವಿರೋಧಿಸುತ್ತಿರುವುದೇಕೆ?
ಏನಾಗುತ್ತಿದೆ ನಮಗೆ?

ಏನಿದು ಅಗ್ನಿಪಥ?:
ಅಗ್ನಿಪಥ ಚಿಂತನೆಯ ಅಡಿಯಲ್ಲಿ ಸೇನೆ ನೌಕಾನೆಲೆ ಹಾಗೂ ವಾಯು ಪಡೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.
10, 12ನೇ ತರಗತಿ ಮುಗಿಸಿದವರಿಗೆ ಮೊದಲ ವರ್ಷ 4. 76 ಲಕ್ಷ,
4ನೇ ವರ್ಷಕ್ಕೆ 6.92 ಲಕ್ಷ ವಾರ್ಷಿಕ ಪ್ಯಾಕೇಜ್. ಜೊತೆಗೆ ನಾಲ್ಕು ವರ್ಷ ಸೇವೆ ಮುಗಿಸಿದ ನಂತರ ಸೇವಾ ನಿಧಿ ಇಡುಗಂಟು ಸುಮಾರು 12ಲಕ್ಷ (ತೆರಿಗೆ ರಹಿತ) ನೀಡಲಾಗುತ್ತದೆ.
ಅಗ್ನಿಪಥ ನೇಮಕಾತಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 10 ಲಕ್ಷ ಮಂದಿಗೆ ಅಗ್ನಿವೀರ್ ಆಗುವ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಉಳಿತಾಯ ಮಾಡಿ ಸಂಬಳವನ್ನು ಉಳಿಸಿಕೊಂಡು ಇಡುಗಂಟನ್ನು ಸರಿಯಾಗಿ ಬಳಸಿದ್ದೇ ಆದರೆ “ಆತ್ಮ ನಿರ್ಭರ್ ” ಯೋಜನೆ ಗರಿಗೆದರಿ ದೇಶ ಸದೃಢವಾಗುತ್ತದೆ. ಅನುಶಾಸನ ,ಶಿಸ್ತು ಕಲಿತ ನಮ್ಮ ಯುವಕರು, ದೇಶ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ಸೇನೆಯಲ್ಲಿ ಕೆಲಸ ಮಾಡಿದೆ ಎಂಬ ಹೆಮ್ಮೆ ನಮ್ಮ ಯುವಕರಿಗೆ ಇರುತ್ತದೆ.
ಅಗ್ನಿ ವೀರರಾಗಲು ಯುವತಿಯರೂ ಅರ್ಜಿ ಸಲ್ಲಿಸಬಹುದು. ಹದಿನೇಳೂವರೆ ವರ್ಷಕ್ಕೆ ಸೇರಿಕೊಂಡು ನಾಲ್ಕು ವರ್ಷ ದುಡಿದರೆ 22 ವರ್ಷದ ಒಳಗಾಗಿ ಒಂದು ಇಡುಗಂಟು ಇರುತ್ತದೆ.
ನಂತರ ಶಿಕ್ಷಣವನ್ನು ಮುಂದುವರೆಸಬಹುದು. ಸ್ವಂತ ಉದ್ಯೋಗ ಮಾಡಬಹುದು, ಪ್ರಮಾಣಪತ್ರವನ್ನು ತೆಗೆದುಕೊಂಡು ಬೇರೆ ಕಡೆ ಕೆಲಸಕ್ಕೆ ಸೇರಿಕೊಳ್ಳುವ ಅವಕಾಶ ಇದ್ದೇ ಇರುತ್ತದೆ.
21 ವರ್ಷಕ್ಕೆ ಪದವಿ ಮುಗಿಸುವ ನಮ್ಮ ಯುವಜನತೆಗೆ ನಿಜವಾಗಿ ಯೋಗ್ಯತೆಗೆ ತಕ್ಕ ಕೆಲಸ ಸಿಗುತ್ತಿದೆಯೇ ?
ಇತ್ತೀಚಿಗಂತೂ ಯಾವ ಸರ್ಕಾರಿ ಇಲಾಖೆಗಳೂ “ಖಾಯಂ” ಉದ್ಯೋಗಿಗಳ ನೇಮಕಾತಿಯನ್ನು ಮಾಡುತ್ತಿಲ್ಲ ಎಂಬುದನ್ನು ನಾವು ಈ ಸಂದರ್ಭದಲ್ಲಿ ಗಮನಿಸಲೇಬೇಕು.
ಮತ್ತೊಂದು ಸಂಗತಿ.
ಇತ್ತೀಚೆಗೆ artificial intelligence ಮೇಲೆ ಎಲ್ಲವೂ ನಡೆಯುತ್ತಿದೆ. ಗುಣಮಟ್ಟ ಮತ್ತು ನಿಖರತೆ ಬೇಕು.
ಕಂಪ್ಯೂಟರ್‌ನಿಂದಲೇ ಎಷ್ಟೋ ಉದ್ಯೋಗಗಳು ಕಳೆದುಹೋಗಿವೆ.
ಮೊಬೈಲ್‌ನಿಂದಾಗಿ ಎಷ್ಟೊಂದು ವ್ಯವಸ್ಥೆಗಳು ಉರುಳಿಬಿದ್ದಿವೆ..
ಸಂಪರ್ಕ ಕ್ರಾಂತಿಯಿಂದ ಅನೇಕ ಇಲಾಖೆಗಳು ತಮ್ಮ ತಮ್ಮ ವ್ಯವಸ್ಥೆಗಳನ್ನು ಪುನರ್ ಜೋಡಣೆ ಮಾಡುತ್ತಿವೆ.
ಹೀಗಿರುವಾಗ ಅಗ್ನಿಪಥ ಚಿಂತನೆಯ ಅಡಿಯಲ್ಲಿ ಯುವಜನತೆ ಒಂದು ದಾರಿ ಕಂಡುಕೊಳ್ಳಲು ಸಹಾಯ ವಾಗಲಾರದೇ?
ಪದವಿ, ಇಂಜಿನಿಯರಿಂಗ್, ಪಡೆದ ಯುವಕರು ಸರಿಯಾದ ಕೆಲಸ ಇಲ್ಲದೆ, ತಮ್ಮ ಶಕ್ತಿಗೆ ಅನುಗುಣವಾದ ವೃತ್ತಿಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೆ ದ್ವಂದ್ವಗಳಲ್ಲಿ ಸಿಲುಕಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ.
ಆಟೋ, ಓಲಾ, ಉಬರ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇನ್ನು ಕೆಲವರು ಸ್ವಯಂ ಉದ್ಯೋಗ ಮಾಡಲು ಬಯಸುತ್ತಾರೆ. ಆದರೆ ಮೂಲಧನ ಇಲ್ಲದೆ ಒದ್ದಾಡುತ್ತಿರುತ್ತಾರೆ.
ಶೇಕಡಾ ತೊಂಬತ್ತರ ಮೇಲೆ ಅಂಕ ಪಡೆದವರು ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಅಲ್ಲೇ ನೆಲೆಸುತ್ತಿದ್ದಾರೆ.
ಶೇಕಡಾ 60, 50 ,70, ಅಂಕಗಳನ್ನು ಪಡೆದ ನಮ್ಮ ಯುವಜನತೆ 10000, 12000 ತಿಂಗಳ ಪಗಾರಕ್ಕೆ ಶೋಷಣೆಗೆ ಒಳಗಾಗುತ್ತಿದ್ದಾರೆ.
ಮಹತ್ವಾಕಾಂಕ್ಷೆ, ಅಪಾರ ಬುದ್ಧಿಮತ್ತೆ, ಇದ್ದರೂ ಅವಕಾಶ ಸಿಗದೇ ಇರುವ ಯುವಕರಿದ್ದಾರೆ.
ಇವರೆಲ್ಲರಿಗೂ ಅಗ್ನಿಪಥ ಒಂದು ಒಳ್ಳೆಯ ದಿಕ್ಕಾಗಲಾರದೇ ?
ಒಂದು ರಾಜ್ಯಕ್ಕೆ 2.5 ಲಕ್ಷ ಪೊಲೀಸರು ಬೇಕಾಗುತ್ತಾರೆ ಎಂಬ ಅಂದಾಜಿದೆ. ಆದರೆ ಬಹಳಷ್ಟು ರಾಜ್ಯಗಳಲ್ಲಿ ಒಂದು ಲಕ್ಷ ಅಥವಾ 1.5 ಲಕ್ಷ ಪೊಲೀಸರು ಇರುತ್ತಾರೆ.
ಸೇನೆಯ ತರಬೇತಿ ಪಡೆದು ಬಂದ ಯುವಜನತೆ ಪೊಲೀಸ್ ಇಲಾಖೆಯಲ್ಲಿ ರಾಜ್ಯಗಳ ಸರ್ಕಾರಗಳ ಆಂತರಿಕ ಭದ್ರತೆ
ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಆದ್ಯತೆ ನೀಡಲಾಗುವುದು ಎಂಬ ಮಾತನ್ನೂ ಹೇಳಲಾಗುತ್ತಿದೆ.
ಅಗ್ನಿ ವೀರರಾಗಿ ಸೇವೆ ಸಲ್ಲಿಸುವ ನಾಲ್ಕು ವರ್ಷಗಳ ಅವಧಿಯಲ್ಲಿ ಏನಾದರೂ ಅವಘಡ ಸಂಭವಿಸಿದರೆ ಆಗ ಸುಮಾರು 48 ಲಕ್ಷ ರೂಪಾಯಿಗಳ ಇನ್ಶುರೆನ್ಸ್ (ವಿಮೆ) ಮಾಡಲಾಗಿರುತ್ತದೆ ಎಂದು ಸರ್ಕಾರ ಹೇಳುತ್ತಿದೆ. ನಾಲ್ಕು ವರ್ಷಗಳ ಸೇವಾವಧಿಯಲ್ಲಿ 23 ಲಕ್ಷದ 43 ಸಾವಿರದ 160 ರೂಪಾಯಿ ಗಳಿಸುವ ಅವಕಾಶವಿದೆ.
1ನೇ ವರ್ಷ: 21,000×12 = 2,52,000
ಎರಡನೇ ವರ್ಷ: 23,100×12 = 2,77,200
3ನೇ ವರ್ಷ; 25,580×12 = 3,06,960
ನಾಲ್ಕನೇ ವರ್ಷ: 28,000×12 = 3,36,000
4 ವರ್ಷಗಳ ವೇತನ = 11,72,160 ರೂ.
ಸೇವಾವಧಿ ಮುಗಿದ ಮೇಲೆ = 11,71,000 ರೂ.
ಒಟ್ಟು = 23,43,160 ರೂ.
ಹಣದ ಜತೆಗೆ ನಾಲ್ಕು ವರ್ಷದಲ್ಲಿ ಸೇನಾ ತರಬೇತಿ ಕೊಡಲಾಗುತ್ತದೆ.
24ನೇ ವಯಸ್ಸಿನಲ್ಲಿ ಸೊನ್ನೆಯಿಂದ 11 ಲಕ್ಷದವರೆಗೆ ಸೇನಾ ತರಬೇತಿ ಪಡೆದು, ಸಂಬಳದ ಹಣವನ್ನೆಲ್ಲ ತೊಡಗಿಸಿದರೆ, ನಿವೃತ್ತಿಯ ಸಮಯದಲ್ಲಿ ಪಡೆದ 11 ಲಕ್ಷದ 71 ಸಾವಿರ ರೂ. ಸಿಗುತ್ತದೆ. ಇದು ಕಡಿಮೆ ಮೊತ್ತವೇನಲ್ಲ.
ಪ್ರತಿ ದೇಶವೂ ತನ್ನ ರಕ್ಷಣಾ ವ್ಯವಸ್ಥೆಗೆ ಅಪಾರವಾಗಿ ಖರ್ಚು ಮಾಡುತ್ತದೆ.
ತನ್ನ ಬಜೆಟ್‌ನ ಒಂದು ಮುಖ್ಯ ಅಂಶವನ್ನು ದೇಶದ ಆಂತರಿಕ ಭದ್ರತೆಗಾಗಿ ಮೀಸಲಿಡುತ್ತದೆ.
ಭಾರತ ಅತಿ ದೊಡ್ಡ ರಕ್ಷಣಾ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಒಂದು.
ಸೇನೆ ವಾಯುನೆಲೆ ನೌಕಾನೆಲೆ‌ಗಳಲ್ಲಿ ಲಕ್ಷಾಂತರ ಮಂದಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾರೆ.
ಅಗ್ನಿ ವೀರರ ನೇಮಕಾತಿಯಿಂದ ರಕ್ಷಣಾ ವ್ಯವಸ್ಥೆಯ ಸಂಬಳ ಸಾರಿಗೆ ಮುಂತಾದ ಖರ್ಚು ವೆಚ್ಚ ಕಡಿಮೆ ಮಾಡುವುದು ಕೂಡ ಒಂದು ಮಹತ್ತರ ಚಿಂತನೆಯಾಗಿದೆ.
ಯಾವುದೇ ಸಮಯದಲ್ಲಿ ದೇಶಕ್ಕೆ ಒದಗಬಹುದಾದ ಒಂದು ತರಬೇತಿ ಪಡೆದ ವರ್ಗಗಳನ್ನು ನಾಗರಿಕ ವಲಯದಲ್ಲಿ ಬೆಳೆಸುವುದು, ತನ್ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನು ಗಟ್ಟಿ ಮಾಡಲು ಅಗ್ನಿಪಥ ಚಿಂತನೆಯ ಸ್ವರೂಪ ತಾಳಿದೆ.
ವಿದೇಶಗಳಲ್ಲಿ ಕೂಡ ಯುವಕರನ್ನು ಅಲ್ಪಕಾಲ ಸೇನೆಯ ಸೇವೆಗೆ ನಿಯೋಜಿಸುವುದನ್ನು ನಾವು ಕಾಣಬಹುದು.
ಇದು ಯಶಸ್ವಿಯೂ ಆಗಿದೆ ಎಂಬುದು ಗಮನಾರ್ಹ.

ಉಕ್ರೈನ್ ವಿರುದ್ಧ ರಷ್ಯಾ ಸಮರ ಸಾರಿ, ಹೆಚ್ಚು ಕಡಿಮೆ ಮೂರುವರೆ ತಿಂಗಳುಗಳಾದವು.
ಇನ್ನೂ ಉಕ್ರೇನ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ರಷ್ಯಾಗೆ ಆಗಿಲ್ಲ.
ಉಕ್ರೇನ್ ಚಿಕ್ಕ ರಾಷ್ಟ್ರ, ರಷ್ಯಾದಂತಹ ಬಲಿಷ್ಠ ದೇಶವನ್ನು ಎದುರು ಹಾಕಿಕೊಳ್ಳಬಾರದಾಗಿತ್ತು ಎಂದೇ ವ್ಯಾಖ್ಯಾನಕಾರರು ಹೇಳುತ್ತಿದ್ದರು. ಕೇವಲ ನಾಲ್ಕು ದಿನದಲ್ಲಿ ಯುದ್ಧ ಮುಗಿದು ಹೋಗುತ್ತದೆ, ಶರಣಾಗುತ್ತದೆ ಎಂದೇ ಭಾವಿಸಲಾಗಿತ್ತು.
ಆದರೆ ಏನಾಯಿತು?
ಉಕ್ರೇನ್ ದಿಟ್ಟವಾಗಿ ರಷ್ಯಾವನ್ನು ಎದುರಿಸಿದ ಪರಿಗೆ ರಷ್ಯಾ ಸೇನೆಯೇ ಆಶ್ಚರ್ಯಪಟ್ಟಿತು.
ಉಕ್ರೇನ್ ಶಕ್ತಿಮೀರಿ ಹೋರಾಟ ನಡೆಸುತ್ತಲೇ ಇದೆ.
ಉಕ್ರೇನ್ ಜನ, ಉಕ್ರೇನ್ ಯುವಕರು, ನಾಗರಿಕರು, ಬಂಡಾಯ ಎದ್ದಿರುವ ಪರಿ ಬಹು ವಿಶೇಷವಾದದ್ದು. ಸಾಮಾನ್ಯರಿಗೂ ಯುದ್ಧದ ಕರೆನೀಡಿ, ಧೈರ್ಯದಿಂದ ಹೋರಾಡೋಣ ಎಂದರು ಉಕ್ರೇನ್ ಅಧ್ಯಕ್ಷರು.
ಸಾಮಾನ್ಯರು, ಯುವಕರು, ಧೈರ್ಯದಿಂದ ಈ ಪರಿ ದೇಶದ ಪರ ನಿಲ್ಲಬೇಕಾದರೆ, ಯುದ್ಧದಲ್ಲಿ ಭಾಗವಹಿಸಬೇಕಾದರೆ ಒಂದು ಮನಸ್ಥಿತಿ ಬೇಕು.
ಉಕ್ರೇನ್ ಯುವಜನತೆ ಸಣ್ಣ ಪ್ರಮಾಣದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಆದ್ದರಿಂದಲೇ ಸೆಟೆದು ನಿಲ್ಲಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಒಂದು ವಾರದಲ್ಲಿ ಮುಗಿದು ಹೋಗುತ್ತದೆ ಎಂದು ಭಾವಿಸಿದ್ದ ಯುದ್ಧ ಸುಮಾರು ನಾಲ್ಕು ತಿಂಗಳಾದರೂ ನಡೆಯುತ್ತಲೇ ಇದೆ.
ಬೃಹತ್ ದೇಶ ರಷ್ಯಾ ತಿಣುಕಾಡುತ್ತಿದೆ.
ಒಂದು ದೇಶದ ಶಕ್ತಿ ಯುವಜನತೆ.
ಅವರಿಗೆ ತರಬೇತಿ ಮಾರ್ಗದರ್ಶನ ನೀಡಿ,
ಮುಂದಿನ ಭವಿಷ್ಯಕ್ಕೆ ಅಣಿ ಮಾಡುವುದು, ಅಗತ್ಯ ಬಿದ್ದಾಗ ಅವರನ್ನು ದೇಶದ ರಕ್ಷಣೆಗೆ ಬಳಸಿಕೊಳ್ಳುವುದು ಅಗ್ನಿಪಥದ ಚಿಂತನೆ ಎಂದಿದೆ ಸರ್ಕಾರ.
ಇದರಲ್ಲಿ ಇರುವ ಲೋಪ ದೋಷ ತೋರಿಸುವ ಕಾರ್ಯವನ್ನು ವಿರೋಧ ಪಕ್ಷಗಳು ಮಾಡಬೇಕು.
ಯಾಕೆ ಬೇಡ ಎಂಬುದನ್ನು ವಿವರಿಸಬೇಕು.
ಹಿಂಸಾಚಾರ ಪ್ರತಿಭಟನೆ ನಿತ್ಯಕಾಯಕವೇ ?
ನಮ್ಮ ಮಕ್ಕಳ ಭವಿಷ್ಯ ಏನು?
ಪ್ರತಿಯೊಬ್ಬರೂ ಸ್ವತಂತ್ರವಾಗಿ ಯೋಚಿಸಬೇಕು.
ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತನೆ ನಡೆಸಬೇಕಲ್ಲವೇ?

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!