‘ಓದು, ಬರಹದ ಶತ್ರು’ ಎಂದು ತೀನಂಶ್ರೀ ಹೇಳುತ್ತಿದುದು ಯಾಕಿರಬಹುದು ಎಂದು ಹಾಗೇ ಯೋಚಿಸುತ್ತಾ ಹೋದಾಗ ಮೂಡಿಬಂದ ಧ್ವನಿಬಿಂಬ ಇದು. ಓದು, ಒಂದು ಸಂಸ್ಕಾರ. ಓದು ಎನ್ನುವುದು ಜ್ಞಾನ ಎಂದು ನಾವು ತಿಳಿಯುತ್ತೇವೆ.
ಓದುವವನು ಓದುತ್ತಾನೆ.
ಅವನಿಗೆ ಬರಹದ ಚಿಂತೆ ಬೇಕೇ?
ಅಥವಾ ಯಾಕೆ?
ಧ್ವನಿಬಿಂಬ 3
♦ ಬಿ ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
“ಓದು, ಬರಹಕ್ಕೆ ಶತ್ರು…’
– ಇದು ತೀನಂಶ್ರೀ ಅವರು ಹೇಳುತ್ತಿದ್ದ ಮಾತು ಅಂದ ಕೂಡಲೇ ಆಶ್ಚರ್ಯವಾಯಿತು.
ಓದು ಬರಹಕ್ಕೆ ಶತ್ರುವೋ, ಇದನ್ನು ಎಷ್ಟು ತರಹ ಅರ್ಥೈಸಬಹುದು, ಹೇಗೆಲ್ಲ ಓದಿಕೊಳ್ಳಬಹುದು ಯೋಚಿಸಿ ನೋಡಿ.
ಓದುತ್ತಲೇ ಇದ್ದರೆ ಬರೆಯಲು ಆಗುವುದಿಲ್ಲ,
ಎಂದು.
ಓದು ಬರಹಕ್ಕೆ ಶತ್ರು ಯಾರೋ ಇದ್ದಾರೆ ಎಂದೂ ನೋಡಬಹುದು.
ಆದರೆ ತೀನಂಶ್ರೀ ಹೇಳಿದ್ದು, ಎರಡೂ ಅಲ್ಲ.
ಓದು ಮತ್ತು ಓದಿನ ವಿಸ್ತಾರ ಹೆಚ್ಚಿದ ಹಾಗೆ, ಬರೆಯುವ ಮನಃಸ್ಥಿತಿಗಿಂತ ತಿಳಿದುಕೊಳ್ಳುವ ಹಂಬಲ ಹೆಚ್ಚುತ್ತಾ ಹೋಗುತ್ತದೆ. ಓದುತ್ತಾ ಓದುತ್ತಾ ನಾವು ಏನೂ ಹೇಳಲು ಇಲ್ಲ ಎಂದೆನಿಸಲು ಶುರುವಾಗುತ್ತದೆ, ಎಂದು. ಹಾಗಾಗಿಯೇ ತೀನಂಶ್ರೀ ಬಹಳ ಕಡಿಮೆ ಬರೆದರು. ಅವರ ಅಪಾರ ಪಾಂಡಿತ್ಯ, ಪ್ರತಿಭೆ ಅವರ ಮಾತು, ಬರಹಗಳಲ್ಲಿ ಇನ್ನೂ ಹೆಚ್ಚು ಅಭಿವ್ಯಕ್ತಿ ರೂಪ ಪಡೆಯಬೇಕಿತ್ತು ಎಂದು ಅವರ ಶಿಷ್ಯರು ಹೇಳುತ್ತಾರೆ.
‘ಓದು ನಮ್ಮನ್ನು ಚಿಂತನೆಗೆ ಹಚ್ಚಬೇಕು. ಪ್ರಭಾವಕ್ಕೆ ಬೀಳಿಸಬಾರದು. ನೀವು ಉದ್ಧಟತನ ಅಂದರೂ ಪರವಾಗಿಲ್ಲ, ನಾನು ಹೆಚ್ಚು ಓದಲು ಇಷ್ಟಪಡುವುದಿಲ್ಲ’ ಎಂದು ಹೇಳುತ್ತಾರೆ ಶಿವರಾಮ ಕಾರಂತರು.
ಓದು, ಒಂದು ಸಂಸ್ಕಾರ. ಓದು ಎನ್ನುವುದು ಜ್ಞಾನ ಎಂದು ನಾವು ತಿಳಿಯುತ್ತೇವೆ.
ಓದುವವನು ಓದುತ್ತಾನೆ.
ಅವನಿಗೆ ಬರಹದ ಚಿಂತೆ ಬೇಕೇ?
ಅಥವಾ ಯಾಕೆ?
ಶತಮಾನಗಳಿಗೆ ಆಗುವಷ್ಟು ವಿಪುಲ ಸಾಹಿತ್ಯ, ಚಿಂತನೆ ಬರಹ, ವಿಚಾರಗಳು ವಿಶ್ವದ ಎಲ್ಲಾ ಭಾಷೆಗಳಲ್ಲೂ ಇವೆ.
ಹಾಗಿದ್ದರೆ ನಾನೇಕೆ ಬರೆಯಬೇಕು?
ನಾನೇಕೆ ಓದಬೇಕು?
* * *
ಒಂದು ದೊಡ್ಡ ವೇದಿಕೆ ಕಾರ್ಯಕ್ರಮ.
ಸಾಹಿತಿ ಜತೆ ಸಂವಾದ. ಇನ್ನೇನು, ಮುಗಿಯುತ್ತ ಬಂದಾಗ, ಕೊನೆ ಸಾಲಿನಲ್ಲಿ ಒಬ್ಬರು ಹಿರಿಯರು ಎದ್ದು ನಿಂತರು.
” ನೀವು ಇಷ್ಟೂ ಹೊತ್ತು ಓದು ಯಾಕೆ ಬೇಕು ಎಂದು ಹೇಳಿದಿರಿ, ಸಾಹಿತ್ಯ ಓದುವುದು ಬದುಕು ಹಸನಾಗಲು, ನಾವು ಮನುಷ್ಯರಾಗಲು ಎಂದೆಲ್ಲಾ ಹೇಳಿದಿರಿ,
ಸಂತೋಷವಾಗಿರಲು ಎಂದಿರಿ.
ನಾನು ಹೆಚ್ಚು ಓದಿಲ್ಲ, ಆದರೆ ನಾನು ಮನುಷ್ಯನಾಗಿ ಬದುಕಿ ತೋರಿಸಿದ್ದೇನೆ’ ಎಂದರು.
ಸಾಹಿತಿ ಮತ್ತು ವೇದಿಕೆಯಲ್ಲಿ ಆಸೀನರಾಗಿದ್ದ ಅತಿಥಿಗಳು ಅವರ ದೃಢ ವಾದ ಮಾತುಗಳನ್ನು ಕೇಳುತ್ತಿದ್ದರು.
ಅವರು ಮುಂದುವರೆದು,
ನನ್ನ ಅಜ್ಜಿ , ಮುತ್ತಜ್ಜಿ, ಓದಲಿಲ್ಲ, ಸೊಗಸಾಗಿ ಹಾಡುತ್ತಿದ್ದರು, ಕೈಯೆತ್ತಿ ನೀಡುತ್ತಿದ್ದರು, ಮನ ತುಂಬಿ ಮಾತಾಡುತ್ತಿದ್ದರು, ಸಂತೋಷವಾಗಿದ್ದರು.
ಸಾಹಿತ್ಯ ಓದಿದರೆ ಮಾತ್ರ ಬದುಕೇ?
ಅವರ ಬದುಕು ಏನೂ ಅಲ್ಲವೇ? ಎಂದು ಪ್ರಶ್ನಿಸಿದರು. “ನಾನು ಅನೇಕ ಸಮಾರಂಭಗಳಿಗೆ ಹೋಗುತ್ತೇನೆ. ಪುಸ್ತಕಗಳನ್ನು ಬರೆಯುವ ಅನೇಕರು, ಇತ್ತೀಚೆಗೆ, ಬರೆಯಲಿಕ್ಕಾಗಿ ಓದುತ್ತಾರೆ, ಓದಲಿಕ್ಕಾಗಿ ಓದುವುದಿಲ್ಲ” ಎಂದರು.
ಅವರ ಮಾತಿನ ಗಟ್ಟಿತನ, ಬದುಕಿಗೆ ಬೇಕಾದ ಏನನ್ನೋ ಸೂಚಿಸುತ್ತಿತ್ತು.
ಅಂದರೆ….?
ತೀನಂಶ್ರೀ ಅವರು ಪಡೆಯುತ್ತಿದ್ದ ಓದಿನ ಮೈಮರೆಯುವಿಕೆಯ ಆನಂದ, ಶಿವರಾಮ ಕಾರಂತರು ಹೇಳಿದ ಚಿಂತನೆಯ ಓದು, ಮತ್ತು ಈ ಹಿರಿಯರು ಹೇಳಿದ ಓದದೆಯೇ ಮೂಡಿದ ಚಿಂತನೆ, ಅನುಭವಿಸಿದ ಬದುಕು, ಎಲ್ಲದರಲ್ಲೂ ಅರ್ಥವಿದೆ ಎನಿಸಿತು.
ಬರೆಯುವುದು ನನ್ನ ಜಾಯಮಾನ ಅಲ್ಲ, ಎಂದು ಸುಮ್ಮನಿರುತ್ತಾರೆ ಕೆಲವರು.
ಎಲ್ಲವನ್ನೂ ಬರೆಯುತ್ತಲೇ ಇರುತ್ತಾರೆ ಕೆಲವರು. ಓದಿನ ವಿಮರ್ಶೆ ಪರಾಮರ್ಶೆ ಮಾಡುತ್ತಾರೆ ಕೆಲವರು.
ಇತ್ತೀಚೆಗೆ ಜಾಲತಾಣ ಜಾದೂಗಾರರು ಹೆಚ್ಚು. ಮಾಡಿದ ಅಡುಗೆ, ಮನೆವಾರ್ತೆ, ಅಂದಂದು ಮಾಡಿದ ಕೆಲಸ ಕಾರ್ಯಗಳ ಅವಲೋಕನ, ನಿತ್ಯ ಓದಿದ್ದು, ಅನಿಸಿದ್ದು ಎಲ್ಲವನ್ನೂ ಖುಲ್ಲಂ ಖುಲ್ಲಾ ಹೇಳುತ್ತಾರೆ, ಬರೆಯುತ್ತಾರೆ. ಇದೂ ಬರಹವೇ.
ಇದು ಒಂದು ಡೈರಿ (ತನ್ನತನದ ಬರಹಗಳು).
ಓದಿಗಾದರೆ, ಅದಮ್ಯ ಹಂಬಲ ಸಾಕು.
ಆದರೆ ಬರೆಯಬೇಕು ಎಂದು ಅನ್ನಿಸಿದಾಗ ಬರೆದರೆ, ಅದು ಒಂದು ಬಿಡುಗಡೆ ಬರಹಗಾರನಿಗೆ. ಆ ಒತ್ತಡ ಓದುಗನಿಗಿಲ್ಲ.
ನಾನೇಕೆ ಬರೆಯುತ್ತೇನೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
“ಮಾಡಿದ್ದು ಬರೆಯಬೇಕು, ಇರುತ್ತ ಬರೆಯಬೇಕು, ಬರೆಯುವುದಕ್ಕಾಗಿ ಬರೆಯಬಾರದು ಎನ್ನುತ್ತಾರೆ ಶಂಬಾ ಜೋಷಿ.
ಬಾಯಿಗೆ ಬಂದದ್ದೆಲ್ಲ ಗೀಚುವುದು ಕೃತಿಯಾಗಲಾರದು ಎನ್ನುತ್ತಾರೆ ಅವರು.
ಕವಿ ಪುತಿನ ಅವರು, “ಬರಹ ನನ್ನ ಇಷ್ಟ. ಈ ಲೋಕದ ಚಿತ್ತಾನುಭೂತಿಗಳ ಹೊರೆ ಕಳೆದುಕೊಳ್ಳಲು ಬರೆಯುತ್ತೇನೆ, ಅದೊಂದು ಸಂವೇದನೆ” ಎನ್ನುತ್ತಾರೆ.
“ನಾನು ಬರೆಯುವುದು, ನಾನು ನಾನಾಗಲು, ಪ್ರೀತಿಸುವುದನ್ನು ಕಲಿಯಲು, ಉಳಿದವರನ್ನು ತಿದ್ದಲು ಅಥವಾ ಬದುಕಿನ ಪಾಠ ಹೇಳಲು ಅಲ್ಲ” ಎನ್ನುತ್ತಾರೆ, ಲೇಖಕ ಯಶವಂತ ಚಿತ್ತಾಲರು.
ಬರಹಗಾರ, ಜಾಗೃತ ಚಿತ್ತದ ಬೌದ್ಧಿಕ ವಿವೇಚನೆ ಹಂತದಲ್ಲಿ, ಯಾಕೆ ಬರೆಯುತ್ತೇನೆ ಎಂದು ವಿವರಿಸಲು ಸಾಧ್ಯ ಆಗದು ಎನ್ನುವ ಕವಿ ನಿಸಾರ್ ಅಹಮದ್, ಓದುಗ ದೊಡ್ಡವನು ಎನ್ನುತ್ತಾರೆ.
“ಓದು, ಬರಹದ ಶತ್ರು” ಎಂದು ತೀನಂಶ್ರೀ ಹೇಳುತ್ತಿದುದು ಯಾಕಿರಬಹುದು ಎಂದು ಹಾಗೇ ಯೋಚಿಸುತ್ತಾ ಹೋದಾಗ ಬಂದ ಧ್ವನಿಬಿಂಬ ಇದು.
ಓದಿದಷ್ಟೂ ನಾವು ಸ್ವತಂತ್ರರಾಗುತ್ತಾ ಸಾಗುತ್ತೇವೆ.
ಓದುಗ ಸ್ವತಂತ್ರ ಪಡೆವ ಮೌನಿ
ಲೇಖಕ ಬಿಡುಗಡೆಗೆ ತುಡಿವ ಜ್ಞಾನಿ.