Monday, October 3, 2022

ಈಗ ಬಂತು ಶ್ರದ್ಧಾಂಜಲಿಗೇ ಸಾವು!

Follow Us

ಕಾಳಿದಾಸನ ಬಾಯಲ್ಲಿ ತನ್ನ ಶ್ರದ್ಧಾಂಜಲಿಯನ್ನು ಕೇಳಬೇಕು ಎಂದು ಭೋಜರಾಜ ಬಯಸಿದ್ದ ಎಂಬ ಕಥೆ ಇದೆ.
ತಮ್ಮ ಶ್ರದ್ಧಾಂಜಲಿಗಳನ್ನು ತಾವೇ ಬರೆದಿಟ್ಟಿರುವ ಕವಿಗಳು ಇದ್ದಾರೆ.
ಶ್ರದ್ಧಾಂಜಲಿಗಳು ಕೇವಲ ಭಾವಪೂರ್ಣ ಬರಹಗಳು ಆದರೆ ಸಾಲದು. ಅವುಗಳಲ್ಲಿ ಬರೆಯುವವನ ಮತ್ತು ಗತಿಸಿ ಹೋದವನ ನಿಜ ಸಂಬಂಧದ ಅನುಭವಗಳು ಇರಬೇಕು ಎಂಬ ಮಾತುಗಳಿವೆ.
ಒಂದು ಶ್ರದ್ಧಾಂಜಲಿ, ಗತಿಸಿ ಹೋದ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಮಾತ್ರ ತಿಳಿಸಬೇಕು, ಅವನ ಸಾಧನೆಗಳನ್ನು ಮಾತ್ರ ಗುರುತಿಸಬೇಕು, ಸತ್ತು ಹೋದ ವ್ಯಕ್ತಿಯ ಅವಗುಣಗಳನ್ನು ಲಂಬಿಸಬಾರದು ಎಂಬ ಮಾತುಗಳೂ ಇವೆ.

ಧ್ವನಿಬಿಂಬ 34

♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com

ಮೈಸೂರಿನಲ್ಲಿ ಇತ್ತೀಚೆಗೆ ಒಂದು ಭಾವಪೂರ್ಣ ಬೀಳ್ಕೊಡುಗೆ. ಅಂತಿಮ ವಿಧಿ ವಿಧಾನ ನಡೆಸಿ, ಪೂಜೆ ಪುನಸ್ಕಾರ ಮಾಡಿ, ಸಕಲ ಮರ್ಯಾದೆಗಳ ಜೊತೆ ಜೀವವನ್ನು ಕಳುಹಿಸಿಕೊಟ್ಟು ಒಂದು ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.
ಯಾರದು?
ಸೂಫಿ ಎಂಬ ನಾಯಿಯದು.
ಇತ್ತೀಚೆಗೆ ಪಾಟ್ನಾದಲ್ಲಿ ಹಿಂದೂ ವ್ಯಕ್ತಿಯ ಅಂತಿಮ ಸಂಸ್ಕಾರ, ವಿಧಿ ವಿಧಾನ ನಡೆಸಿದ ಮುಸ್ಲಿಂ ಕುಟುಂಬ, ಕೋಮು ಸೌಹಾರ್ದ ಮೆರೆಯಿತು. ಮೊಹಮ್ಮದ್ ರಿಜ್ವಾನ್ ಖಾನ್, ರಾಮ್ ದೇವ್ ಸಹಾ ಅವರ ದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದು ವೈರಲ್ ಆಯಿತು. ಅವರದು ಇಪ್ಪತ್ತೈದು ವರ್ಷಗಳ ಗೆಳೆತನ! ಎರಡು ಕುಟುಂಬದವರೂ ನಂತರ ಒಟ್ಟಿಗೆ ಸೇರಿ ಶ್ರದ್ಧಾಂಜಲಿ ನಡೆಸಿದರು.
ಇದೇ ರೀತಿ ವಿದೇಶದಲ್ಲಿ ನೆಲೆಸಿದ್ದ ಮಗ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗದಿದ್ದಾಗ ಅಲ್ಲಿಂದ online ನಲ್ಲಿ ಕಲಾಪ ವೀಕ್ಷಿಸಿ, ಗೂಗಲ್‌ನಲ್ಲೇ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದರು.
ಇವೆಲ್ಲ ಭಾವದ ಸ್ವಪ್ರೇರಣೆ ಶ್ರದ್ಧಾಂಜಲಿಗಳು,
ವೇದಿಕೆಗಳ ಮೇಲೆ ನಗು ನಗುತ್ತಾ, ಕಾಫಿ ಕುಡಿಯುತ್ತಾ, ಸಿಹಿ ತಿನ್ನುತ್ತಾ, ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿರುತ್ತವೆ.
“ನಿಮ್ಮ ಅಗಲುವಿಕೆ ನಮ್ಮನ್ನು ತೀವ್ರ ಶೋಕಕ್ಕೆ ದೂಡಿದೆ, ತುಂಬಾ ನೋವಾಗಿದೆ ಎಂದು ಹೇಳಿಕೆ ಕೊಟ್ಟು ಮರುಕ್ಷಣವೇ ಪಬ್‌ವೊಂದರ ಉದ್ಘಾಟನೆಗೆ ಹೋದ ಗಣ್ಯರಿದ್ದಾರೆ.
“ನಿಮ್ಮ ದೇಹ ಅಳಿದರೂ ಚೇತನ ನಮ್ಮ ಜೊತೆಗೆ ಇದೆ”
“ನಿಮ್ಮ ಕೆಲಸಗಳಿಂದ ಸದಾ ನೀವು ನಮ್ಮ ನೆನಪಿನಲ್ಲಿ ಉಳಿದಿದ್ದೀರಿ”
“ನಿಮ್ಮ ನಷ್ಟ ಭರಿಸಲಾಗದೆ ಇರುವಂಥದ್ದು ”
“ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ”
ಇಂತಹ ವಾಕ್ಯಗಳು ಕ್ಲೀಷೆಗಳಾಗುತ್ತಿವೆ.
whats app ಗುಂಪುಗಳಲ್ಲಿ RIP ಎಂದು ಹಾಕಿ ಸಂತಾಪ ವ್ಯಕ್ತಪಡಿಸಿದ ಮರುಕ್ಷಣ ಮತ್ತೊಬ್ಬರು ಯಾವುದೋ ಪ್ರವಾಸದ ಸಂತಸದ ಕ್ಷಣಗಳನ್ನು ಹಿಡಿದಿಟ್ಟ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ತಕ್ಷಣವೇ “ವಾವ್” “ಆಹಾ” ಎಂಬ ಪ್ರತಿಕ್ರಿಯೆಗಳು ಕೂಡಾ ಬರುತ್ತವೆ.
ಶ್ರದ್ಧಾಂಜಲಿ ಹೇಗಿರಬೇಕು?
ಇದೆಂಥ ವಿಚಾರ, ಹುಚ್ಚು ಪ್ರಶ್ನೆ ಅನ್ನಿಸಬಹುದು.
ಆದರೆ ಇದು ಸತ್ಯವಾಗಿ ಕಾಡುವ ಪ್ರಶ್ನೆಯೂ ಹೌದು.
ಕಾಳಿದಾಸನ ಬಾಯಲ್ಲಿ ತನ್ನ ಶ್ರದ್ಧಾಂಜಲಿಯನ್ನು ಕೇಳಬೇಕು ಎಂದು ಭೋಜರಾಜ ಬಯಸಿದ್ದ ಎಂಬ ಕಥೆ ಇದೆ.
ತಮ್ಮ ಶ್ರದ್ಧಾಂಜಲಿಗಳನ್ನು ತಾವೇ ಬರೆದಿಟ್ಟಿರುವ ಕವಿಗಳು ಇದ್ದಾರೆ.
ಶ್ರದ್ಧಾಂಜಲಿಗಳು ಕೇವಲ ಭಾವಪೂರ್ಣ ಬರಹಗಳು ಆದರೆ ಸಾಲದು. ಅವುಗಳಲ್ಲಿ ಬರೆಯುವವನ ಮತ್ತು ಗತಿಸಿ ಹೋದವನ ನಿಜ ಸಂಬಂಧದ ಅನುಭವಗಳು ಇರಬೇಕು ಎಂಬ ಮಾತುಗಳಿವೆ.
ಒಂದು ಶ್ರದ್ಧಾಂಜಲಿ, ಗತಿಸಿ ಹೋದ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಮಾತ್ರ ತಿಳಿಸಬೇಕು, ಅವನ ಸಾಧನೆಗಳನ್ನು ಮಾತ್ರ ಗುರುತಿಸಬೇಕು, ಸತ್ತು ಹೋದ ವ್ಯಕ್ತಿಯ ಅವಗುಣಗಳನ್ನು ಲಂಬಿಸಬಾರದು ಎಂಬ ಮಾತುಗಳೂ ಇವೆ.
ಹಾಗೆ ವ್ಯಕ್ತಿಯನ್ನು ಹೊಗಳಿ ಬರೆದಾಗ, ಇದ್ದಾಗ ಆತನನ್ನು ಹೇಗೆ ಕಾಡಿದರೂ ಈಗ ಹೊಗಳುತ್ತಿದ್ದಾರೆ ಎಂದು ಸುತ್ತಮುತ್ತಲಿನವರು ಆಡಿಕೊಳ್ಳುತ್ತಾರೆ.
ವಸ್ತುನಿಷ್ಠವಾಗಿ ಅನಿಸಿದ್ದನ್ನು ಬರೆದರೆ ವ್ಯಕ್ತಿ ಹೋದ ನಂತರವೂ ಇವರು ಯಾವ ರೀತಿ ಮಾತನಾಡುತ್ತಿದ್ದಾರೆ ಎಂದು ಜನ ಆಡಿಕೊಳ್ಳುತ್ತಾರೆ.
ಶ್ರದ್ಧಾಂಜಲಿಗಳು ಓದುಗರ ಜನಸಾಮಾನ್ಯರ ಭಾವನೆಗಳನ್ನು ತಟ್ಟಬೇಕು ಎಂಬ ಕಾರಣಕ್ಕೆ ವರ್ಣರಂಜಿತ, ಮಾಹಿತಿ ಭರಿತ, ಶ್ರದ್ಧಾಂಜಲಿಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ.
ಸ್ವೀಡನ್ನಿನ ರಸಾಯನಶಾಸ್ತ್ರ ವಿಜ್ಞಾನಿ ಆಲ್ ಫ್ರೆಡ್ ನೊಬೆಲ್. ಆತ ಡೈನಮೈಟ್ ಕಂಡುಹಿಡಿದವ. ಆತನ ಸಹೋದರ Ludwig ತೀರಿಕೊಂಡರು. ಫ್ರೆಂಚ್ ಪತ್ರಿಕೆ ಒಂದು ಆಲ್ ಫ್ರೆಡ್ ನೊಬೆಲ್ ನಿಧನರಾದರು ಎಂದು ಭಾವಿಸಿ,
“the merchant of death is dead”
ಎಂದು ಪ್ರಕಟಿಸಿತು.
ಇದು ಆಲ್ ಫ್ರೆಡ್‌ನನ್ನು ಕಂಗೆಡಿಸಿತು. ಜನ ನನ್ನನ್ನು ಹೀಗೆ ನೆನಪಿಸಿಕೊಳ್ಳುತ್ತಾರೆಯೇ?
ಎಂದು ಚಿಂತನೆಗೆ ತೊಡಗಿದ ಆತ
ತನ್ನ ವಿಲ್ ಬದಲಿಸಿದ.
ಐದು ವಿಷಯಗಳಲ್ಲಿ ಜಗತ್ತಿನ ಅತಿ ಶ್ರೇಷ್ಠ ವ್ಯಕ್ತಿಗಳು, ವಿಜ್ಞಾನಿಗಳನ್ನು ಗುರುತಿಸಿ ನೀಡಬೇಕು ಎಂದು ಬರೆದು ತನ್ನ ಹೆಸರಿನಲ್ಲಿ ಪ್ರಶಸ್ತಿ ಒಂದನ್ನು ಸ್ಥಾಪಿಸಿಬಿಟ್ಟ.
Nobel ಪ್ರಶಸ್ತಿ ಅತಿ ಉನ್ನತ ಎಂದು ನಾವು ಹೇಳುತ್ತೇವಲ್ಲ, ಅದರ ಹಿನ್ನೆಲೆ ಒಂದು ಶ್ರದ್ಧಾಂಜಲಿ.
ಪತ್ರಿಕೆಗಳು ಎಷ್ಟೋ ಸಲ ತಪ್ಪು ಶ್ರದ್ಧಾಂಜಲಿಗಳನ್ನು ಪ್ರಕಟಿಸಿರುವುದು ಉಂಟು.
ಹಾಗೆಯೇ ಪತ್ರಿಕೆಗಳು ವ್ಯಕ್ತಿ ಸಾಯುವುದಕ್ಕಿಂತ ಮುಂಚೆಯೇ ಸಂಶೋಧನಾತ್ಮಕ, ಅನುಭವ ಪೂರ್ಣ ಶ್ರದ್ಧಾಂಜಲಿಗಳನ್ನು ಬರೆಸಿ ಇಟ್ಟಿರುತ್ತವೆ
ಎಂಬುದು ಸತ್ಯ.
2020ರಲ್ಲಿ ರೇಡಿಯೋ ಫ್ರಾನ್ಸ್ ಇಂಟರ್ನ್ಯಾಷನಲ್ ತಪ್ಪು ತಪ್ಪಾಗಿ ಶ್ರದ್ಧಾಂಜಲಿ ಸುದ್ದಿ ಪ್ರಕಟಿಸಿತು. ರಾಣಿ ಎಲಿಜಬೆತ್ 2 ಮೃತರಾಗಿದ್ದಾರೆ ಎಂದು ತಪ್ಪು ಸುದ್ದಿ ನೀಡಲಾಯಿತು.
ಶ್ರದ್ಧಾಂಜಲಿ ಸುದ್ದಿಗಳನ್ನು ಅಪಾರವಾಗಿ ಸಂಗ್ರಹ ಮಾಡಿ ಒಂದು ಕಡೆ ಇಡಲಾಗಿತ್ತು, ಈ ಸುದ್ದಿ ಕಣ್ ತಪ್ಪಿ ಪ್ರಕಟವಾಗಿದೆ, ಅದಕ್ಕೆ ವಿಷಾದಿಸುತ್ತೇವೆ ಎಂದು ಸಮಜಾಯಿಷಿ ನೀಡಲಾಯಿತು.
Los angeles Times
1999 ರಲ್ಲಿ ಎಲಿಜಬೆತ್ ಟೇಲರ್ ಅವರ ಶ್ರದ್ಧಾಂಜಲಿಯನ್ನು ಮೂರು ತಿಂಗಳು ಸಂಶೋಧನೆ ಮಾಡಿಸಿ ಬರೆಸಿ ಇಟ್ಟಿತ್ತು.
ಆಕೆ ತೀರಿಕೊಂಡಿದ್ದು 2011ರಲ್ಲಿ.
ನ್ಯೂಯಾರ್ಕ್ ಟೈಮ್ಸ್ ಕೂಡ ಎಲಿಜಬೆತ್ ಟೈಲರ್ ಅವರ ಶ್ರದ್ಧಾಂಜಲಿಯನ್ನು ಬರೆಸಿ ಇಟ್ಟಿತ್ತು. ಎಲಿಜಿಬತ್ ಸಾಯುವ ಮುನ್ನವೇ ಅದನ್ನು ಬರೆದವರು ತೀರಿಕೊಂಡದ್ದು ವಿಪರ್ಯಾಸ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆ 900ಕ್ಕೂ ಹೆಚ್ಚು ಶ್ರದ್ಧಾಂಜಲಿಗಳನ್ನು ಬರೆಸಿ ಇಟ್ಟಿದೆ ಎಂದು ಹೇಳಲಾಗುತ್ತದೆ.
2021ರ ದಾಖಲಾತಿ ಪ್ರಕಾರ ನ್ಯೂಯಾರ್ಕ್ ಟೈಮ್ಸ್, 1850 ಶ್ರದ್ಧಾಂಜಲಿಗಳನ್ನು ಬರೆಸಿ ಇಟ್ಟಿದೆಯಂತೆ.
ಬ್ರಿಟಿಷ್ ಮೆಡಿಕಲ್ ಜರ್ನಲ್ ಜನಪ್ರಿಯ ವೈದ್ಯರುಗಳಿಗೆ ತಮ್ಮ ಶ್ರದ್ಧಾಂಜಲಿಗಳನ್ನು ತಾವೇ ಬರೆದಿಟ್ಟಿರಬೇಕು ಎಂದು ಪ್ರೋತ್ಸಾಹ ನೀಡುತ್ತದೆಯಂತೆ.
ಸಣ್ಣ ಸಣ್ಣ ಊರುಗಳಲ್ಲಿ ಹಳ್ಳಿಗಳಲ್ಲಿ ಪಂಚಾಯಿತಿಗಳಲ್ಲಿ ಪ್ರಮುಖರು ತೀರಿಕೊಂಡಾಗ ಸಮೀಪದವರು ಮತ್ತು ದುಃಖಿತರು ಕಡತಗಳಲ್ಲಿ ಆ ವ್ಯಕ್ತಿಯ ವಿಶೇಷತೆಯನ್ನು ಬರೆಯುತ್ತಾರೆ.
ಈ ಸಂಗ್ರಹಗಳು ಮತ್ತು ಬರಹಕ್ಕೆ necrology ಎನ್ನುತ್ತಾರೆ.
ಅಕಸ್ಮಾತ್ ನಾನು ಸತ್ತರೆ, ಎಂಬ ವಿಷಯ, ಮಾತೇ ಅಮಂಗಳ ಎನ್ನುವವರಿದ್ದಾರೆ.
ತಮ್ಮ ಸಾವನ್ನು ಕಲ್ಪಿಸಿಕೊಂಡು ಯೋಚಿಸುವವರು ಚಿಂತನೆ ಮಾಡುವವರು,
ಧೈರ್ಯಶಾಲಿಗಳು ಎಂದು ಮೇಲ್ನೋಟಕ್ಕೆ ಕಂಡುಬಂದರೂ ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎನ್ನುತ್ತದೆ ಮನೋವಿಜ್ಞಾನ.
ವ್ಯಕ್ತಿ ಬದುಕಿರುವಾಗ ನೇರವಾಗಿ ಹೇಳಬೇಕಾದ್ದು ಹೇಳುತ್ತಾ ಬದುಕಿದರೆ ಯಾವುದೇ ಪಶ್ಚಾತ್ತಾಪಗಳ ಅಥವಾ ನಾಟಕಗಳ ಅಗತ್ಯ ಬೀಳುವುದಿಲ್ಲ.
ಸಂತಾಪ ಸೂಚಕ ಸಭೆಗಳು, ಶ್ರದ್ಧಾಂಜಲಿಗಳು ವಿಚಿತ್ರ ಆಯಾಮವನ್ನು ಪಡೆದುಕೊಳ್ಳುತ್ತಿವೆ.
ಉಪಕೃತರು ಮಾತ್ರ ಮಾಡುವ ಕ್ರಿಯೆಯ ರೀತಿ ಕಂಡುಬರುತ್ತದೆ.
ಸಾವನ್ನು ಮತ್ತು ಶ್ರದ್ಧಾಂಜಲಿಗಳನ್ನು sponsor ಮಾಡುವವರಿದ್ದಾರೆ.
ಗುಂಪು ಗಲಭೆಗಳಲ್ಲಿ ಸಾವಲ್ಲದ ಸಾವಾಗಿ ಸತ್ತವರಿಗೆ ನಡೆಯುವ ಶ್ರದ್ಧಾಂಜಲಿಗಳು;
ಕಚೇರಿಗಳಲ್ಲಿ ತಮ್ಮ ಜೊತೆ ದುಡಿದವರು ಕಳೆದುಕೊಂಡಾಗ ನಡೆಸುವ ಶ್ರದ್ಧಾಂಜಲಿಗಳು;
ಜನಪ್ರಿಯ ವ್ಯಕ್ತಿಗಳು ತೀರಿಕೊಂಡಾಗ ಎಲ್ಲೆಡೆ ನಡೆಯುವ;
ಲೋಕಸಭೆ ವಿಧಾನಸಭೆ ಕಲಾಪಗಳು ಆರಂಭವಾಗುವ ಮುನ್ನ ಮಾಡುವ ಒಟ್ಟಾರೆಯಾದ ಒಂದು ಸಾಮೂಹಿಕ ಶ್ರದ್ಧಾಂಜಲಿಗಳು;
ವೈಯಕ್ತಿಕವಾಗಿ ಸಮಾಧಿಯ ಮುಂದೆ ನಿಂತು ಅರ್ಪಿಸುವ ಶ್ರದ್ಧಾಂಜಲಿಗಳು;
ಎಷ್ಟೆಲ್ಲ ರೀತಿಯ ಭಾವಗಳು!
ಒಂದು ಶ್ರದ್ಧಾಂಜಲಿ ಸತ್ತ ವ್ಯಕ್ತಿಯ ಚಿತ್ರವನ್ನು ಕಟ್ಟಿಕೊಡಬೇಕೇ ಹೊರತು, ಬೇರೇನೂ ಅಲ್ಲ.
ಸಾವುಗಳಿಗೆ ಜಾಹೀರಾತು ತನ್ನಿ ಎಂದು ಹೇಳಲಾಗುತ್ತಿರುವ ಕಾಲ ಇದು.
ಅಂತ್ಯಕ್ರಿಯೆ ಸೇವೆಗಳು ಪತ್ರಿಕೆಯಲ್ಲಿ ಪ್ರಕಟ ಮಾಡುವ ಸುದ್ದಿವರೆಗೂ ಲಭ್ಯ.
ವ್ಯಕ್ತಿಯನ್ನು ನೋಡದೆ ಬರೆದು ಕೊಡುವ ಲೇಖಕರಿದ್ದಾರೆ.
ಇಂದಿನ ಸಮಯದಲ್ಲಿ
“ಶ್ರದ್ಧಾಂಜಲಿ ಒಂದು ವಾಣಿಜ್ಯ
ವ್ಯವಹಾರವೇ” ಆಗಿದೆ.
ತಪ್ಪೋ ಸರಿಯೋ ತಿಳಿಯದು.
“ಶ್ರದ್ಧಾಂಜಲಿ” ಎಂಬ ಭಾವಕ್ಕೆ ಸಾವು!
ಇದೋ… ಮೌನ … ಮೌನ… ಸಮರ್ಪಣೆ.

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!