Wednesday, November 30, 2022

ಆಕಾಶವಾಣಿ, ಈಗ ಚಿತ್ರಗೀತೆಗಳು

Follow Us

ರಾಗಗಳು ಹುಟ್ಟಿಸುವ ಭಾವ ಒಂದಾದರೆ, ಸಾಹಿತ್ಯ ಮತ್ತು ರಾಗ ಸೇರಿದಾಗ ಹುಟ್ಟುವ ಭಾವವೇ ಬೇರೆ. ಚಿತ್ರಗೀತೆಗಳ ಪ್ರಸಾರ ಎಂದರೆ ಅದು ಶೋತ್ರಗಳ ಮನದ ವಿಹಾರ. ಚಿತ್ರಗೀತೆಗಳ ವಿಶೇಷತೆಯೇ ಬೇರೆ. ಚಿತ್ರಗೀತೆಗಳು ಕೂಡ ರಾಗಗಳನ್ನು ಆಧರಿಸಿಯೇ ಮೂಡಿ ಬಂದಿರುತ್ತದೆ. ಆದರೆ ರಾಗ, ಸಾಹಿತ್ಯ, ಜತೆಗೆ ಒಂದು ಸಂದರ್ಭವನ್ನೂ ಕೂಡ ಚಿತ್ರಗೀತೆ ನಮಗೆ ಕಟ್ಟಿಕೊಡುತ್ತದೆ.

ಧ್ವನಿಬಿಂಬ 36

♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com

ಈಗ ಚಿತ್ರಗೀತೆಗಳು, ಮೊದಲಿಗೆ ಕೇಳಿ ……
ಎಂದು ಆಕಾಶವಾಣಿಯ ಧ್ವನಿಗಳು ಉಲಿಯುವುದನ್ನು ಕೇಳಿ, “ಈಗ ಯಾವ ಹಾಡು ಬರಬಹುದು” ಎಂದು ಒಬ್ಬ ಶ್ರೋತೃ ಆಲೋಚನೆಯಲ್ಲಿ ತೊಡಗಿ, ಗೀತೆಗಳನ್ನು ಕೇಳುವ ಮನಸ್ಥಿತಿಗೆ ಬರುತ್ತಾನೆ.
ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳು ವಿವಿಧ ಮನಸ್ಥಿತಿಗಳನ್ನು, ಭಾವವನ್ನು ಸೃಷ್ಟಿಸುತ್ತವೆ ಎಂಬುದು ತಿಳಿದಿರುವ ಸಂಗತಿ.
ರಾಗಗಳು ಹುಟ್ಟಿಸುವ ಭಾವ ಒಂದಾದರೆ, ಸಾಹಿತ್ಯ ಮತ್ತು ರಾಗ ಸೇರಿದಾಗ ಹುಟ್ಟುವ ಭಾವವೇ ಬೇರೆ.
ಶಾಸ್ತ್ರೀಯ ಸಂಗೀತದ ರಾಗಗಳು ಭಕ್ತಿ ಪರಂಪರೆಯ ದಾಸ ಸಾಹಿತ್ಯ ವಚನ ಸಾಹಿತ್ಯ ಇವುಗಳೊಂದಿಗೆ ಮೇಳೈಸಿದಾಗ ಸಹಜವಾಗಿಯೇ ಒಂದು ದಿವ್ಯ ಆಧ್ಯಾತ್ಮಿಕ ಅನುಭವದ ಕಡೆಗೆ ನಾವು ಪಯಣ ಬೆಳೆಸುತ್ತೇವೆ.
ಆದರೆ ಚಿತ್ರಗೀತೆಗಳು?
ಚಿತ್ರಗೀತೆಗಳ ವಿಶೇಷತೆಯೇ ಬೇರೆ.
ಚಿತ್ರಗೀತೆಗಳು ಕೂಡ ರಾಗಗಳನ್ನು ಆಧರಿಸಿಯೇ ಮೂಡಿ ಬಂದಿರುತ್ತದೆ. ಆದರೆ ರಾಗ, ಸಾಹಿತ್ಯ, ಜತೆಗೆ ಒಂದು ಸಂದರ್ಭವನ್ನೂ ಕೂಡ ಚಿತ್ರಗೀತೆ ನಮಗೆ ಕಟ್ಟಿಕೊಡುತ್ತದೆ.
1930- 40ರ ದಶಕಗಳಲ್ಲಿ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು ತಯಾರಾಗುತ್ತಿದ್ದವು.
ಮೂಕಿ ಚಿತ್ರಗಳ ನಂತರ ಟಾಕೀ ಚಿತ್ರಗಳ ಯುಗ ಆರಂಭವಾಯಿತು.
ಅಲ್ಲಿಯವರೆಗೆ ರಂಗಭೂಮಿಯಲ್ಲಿ ಗಾಯನ ಮತ್ತು ಸಂಭಾಷಣೆಗಳನ್ನು ಹೇಳುತ್ತಾ ವಿವಿಧ ಕಥೆಗಳು, ಪೌರಾಣಿಕ ಸಂದರ್ಭಗಳು, ಘಟನೆಗಳು ನೇರವಾಗಿ ವೇದಿಕೆಗಳಲ್ಲಿ ತೆರೆದುಕೊಳ್ಳುತ್ತಿದ್ದವು.
ಜನ ಆಸ್ವಾದಿಸುತ್ತಿದ್ದರು. ಕಾವ್ಯಕ್ಕೆ ರಾಗ ಕಟ್ಟಿ ಹಾಡುವ ರೂಢಿ ಆಗಿನಿಂದಲೇ ಇತ್ತು.
ಲವಕುಶರು ರಾಮಾಯಣವನ್ನು ರಾಗ ಆಧರಿಸಿ ಹಾಡಿದರು ಎಂದು ಕೂಡ ನಾವು ಕೇಳುತ್ತೇವೆ.
ಇರಲಿ ಇದು ಬೇರೆ ಸಂಗತಿ.
ಸಾಹಿತ್ಯ ಮತ್ತು ರಾಗ ಇವೆರಡು ಸೇರಿದಾಗ ಬರುವ ರಸ ಹೃದಯಗಳನ್ನು ಮುಟ್ಟುತ್ತದೆ ಎಂಬುದು ವೇದ್ಯವಾಗಿರುವಂಥದ್ದು.
ಆದ್ದರಿಂದಲೇ ಮೂಕಿ ಚಿತ್ರಗಳಿಂದ ಟಾಕೀ ಚಿತ್ರಗಳಿಗೆ ಹೊರಳಿಕೊಳ್ಳುವ ಸಂದರ್ಭದಲ್ಲಿ ರಂಗಗೀತೆಗಳು, ಶಾಸ್ತ್ರೀಯ ಸಂಗೀತದ ಧಾಟಿಗಳು, ಜನಪದ ಗೀತೆಗಳು ಇವೆಲ್ಲವೂ ಚಲನ ಚಿತ್ರಗಳಲ್ಲೂ ಕಂಡುಬಂದವು.
ಸಂದರ್ಭ ಒಂದು ಹೆಚ್ಚು ಪರಿಣಾಮಕಾರಿಯಾಗಲು ಸಾಹಿತ್ಯ ಮತ್ತು ರಾಗ ಇವೆರಡೂ ಬೇಕೇ ಬೇಕು ಎಂಬುದನ್ನು ನಿರ್ದೇಶಕರು ಅರಿತಿದ್ದರು.
ಹಾಗಾಗಿಯೇ ಚಲನಚಿತ್ರ ರಂಗದಲ್ಲೂ ಕೂಡ ಹಾಡುಗಳನ್ನು ಅಳವಡಿಸಲಾಯಿತು.
ತಂತ್ರಜ್ಞಾನ, ಅಭಿರುಚಿ ಬದಲಾದ ಹಾಗೆ ಚಲನಚಿತ್ರ ಗೀತೆಗಳಲ್ಲೂ ಕೂಡ ಸಾಕಷ್ಟು ಮಾರ್ಪಾಡುಗಳು ಬಂದವು.
ಪೌರಾಣಿಕ ಚಿತ್ರಗಳು, ಭಕ್ತಿ ಪ್ರಧಾನ ಚಿತ್ರಗಳು ಇವೆಲ್ಲ ಒಂದು ಹಂತದಲ್ಲಿ ಬಂದವು.
ಸಾಮಾಜಿಕ ಚಿತ್ರಗಳ ಕಡೆಗೆ ಚಿತ್ರರಂಗ ಸಾಗಿದಾಗ “ಹಾಡುಗಳು” ಬಹಳ ಪ್ರಮುಖ ಸ್ಥಾನವನ್ನು ಪಡೆದವು.
ಈ ಸಂದರ್ಭದಲ್ಲಿ ಒಂದು ಗೀತೆ ಬಂದರೆ ಚಂದ ಎಂದು ನಿರ್ದೇಶಕರು ಆಲೋಚಿಸುತ್ತಿದ್ದರು.
ಅವರ ಮನಸ್ಸಿನ ಭಾವವನ್ನು ಹೇಳುವಂತಹ ಯಾವುದೇ ಸಾಹಿತ್ಯ ಅವರಿಗೆ ದಕ್ಕದಾದಾಗ ಅದಕ್ಕೆಂದೇ ಸಾಹಿತ್ಯ ರಚನೆಯನ್ನು ಮಾಡಿಸಲು ಆರಂಭಿಸಿದರು. ಆ ರಚನೆಗೆ ತಕ್ಕ ರಾಗವನ್ನು ಸಂಗೀತ ಸಂಯೋಜಕರು ಸಂಯೋಜಿಸುತ್ತಿದ್ದರು.
ಹಾಗೆ ಆ ಗೀತೆಗೆ ತಕ್ಕಂತೆ ಚಿತ್ರೀಕರಣವನ್ನು ನಡೆಸಲಾಗುತ್ತಿತ್ತು.
40, 50 ರ ದಶಕದಲ್ಲಿ ಚಿತ್ರಗೀತೆಗಳು ಇಷ್ಟ ಅಂದರೆ ವ್ಯಕ್ತಿತ್ವವನ್ನು ಸ್ವಲ್ಪ ತಗ್ಗಿಸಿ ಕುಗ್ಗಿಸಿ ನೋಡುವ ಜನರು ಇದ್ದರು.
1952 ರಲ್ಲಿ ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಬಿ ವಿ ಕೇಸ್ಕರ್ ಅವರು
“ಚಲನಚಿತ್ರ ಗೀತೆಗಳು ಸಂಸ್ಕೃತಿಗೆ ಅಪಚಾರ ಎಸಗುತ್ತವೆ. ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡಿದರೆ ಜನತೆಯ ಅಭಿರುಚಿ ಉತ್ತಮ ಮಟ್ಟದ್ದಾಗಿರುವುದಿಲ್ಲ, ಭಾರತ ಇನ್ನೂ ಈಗಷ್ಟೇ ಉದಯಿಸಿರುವ ರಾಷ್ಟ್ರ, ಹಾಗಾಗಿ ಪ್ರಸಾರ ಮಾಧ್ಯಮವಾದ ಆಕಾಶವಾಣಿಯಲ್ಲಿ ಚಿತ್ರಗೀತೆಗಳನ್ನು ಪ್ರಸಾರ ಮಾಡುವುದು ಬೇಡ” ಎಂದು ಹೇಳಿದ್ದರು.
ಭಾರತೀಯ ಚಿತ್ರರಂಗದ ಘನತೆಯನ್ನು ಈ ಮಾತುಗಳು ಕುಗ್ಗಿಸುತ್ತವೆ ಎಂದು ಆಗಿನ ಚಿತ್ರರಂಗದ ಹಿರಿಯರು ಅಭಿಪ್ರಾಯ ಪಟ್ಟಿದ್ದರು. ಈ ನಿರ್ಧಾರದ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದಿದ್ದವು. ಆಕಾಶವಾಣಿಯಲ್ಲಿ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಸಂಗೀತವನ್ನು ಮಾತ್ರ ಪ್ರಸಾರ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು.
ಇದಾದ ನಂತರ ರೇಡಿಯೋ ಸಿಲೋನ್ ಚಿತ್ರಗೀತೆಗಳನ್ನು ಪ್ರಸಾರ ಮಾಡುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿತು.
ಆಗ ಆಕಾಶವಾಣಿಯಲ್ಲಿ ಚಿತ್ರಗೀತೆಗಳನ್ನು ಪ್ರಸಾರ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಆದರೂ ಚಿತ್ರದ ಹೆಸರು ಮತ್ತು ಸಂಗೀತ ಸಂಯೋಜಕರ ಹೆಸರು ಇವುಗಳನ್ನು ಹೇಳಿದರೆ, ಚಿತ್ರಕ್ಕೆ ಪ್ರಚಾರ ಕೊಟ್ಟಂತೆ ಆಗುತ್ತದೆ ಎಂಬ ಅಭಿಪ್ರಾಯ ಸರ್ಕಾರಕ್ಕೆ ಇತ್ತು. ಆದ್ದರಿಂದ ಹಾಡಿದವರ ಹೆಸರುಗಳನ್ನು ಮಾತ್ರ ಹೇಳಬೇಕು ಎಂಬ ನಿಯಮ ಕೂಡ ಇತ್ತು.
ಆಗ ಚಲನಚಿತ್ರ ನಿರ್ಮಾಪಕರು “ಹಾಡನ್ನು ಬರೆಸುವುದು ನಾವು ,ಸಂಗೀತ ಸಂಯೋಜನೆ ಮಾಡಿಸುವುದು ನಾವು , ಹಕ್ಕುಗಳು ನಮ್ಮವು, ಗಾಯಕರ ಹೆಸರನ್ನು ಮಾತ್ರ ಹೇಳುವುದು ಸಮಂಜಸವಾಗಲಾರದು ಎಂದು ಪ್ರತಿಭಟಿಸಿದರು.
ಗೀತೆಗಳು ಪ್ರಸಾರದ ಒಪ್ಪಂದಕ್ಕೆ ಸಹಿ ಹಾಕಲು ನಿರ್ಮಾಪಕರು ಮುಂದೆ ಬರಲಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡ ರೇಡಿಯೋ ಸಿಲೋನ್ ಚಲನಚಿತ್ರ ನಿರ್ಮಾಪಕರ ಜತೆ ಒಪ್ಪಂದ ಮಾಡಿಕೊಂಡು ಹಿಂದಿ ಮತ್ತು ದಕ್ಷಿಣ ಭಾಷೆಯ ಚಿತ್ರಗೀತೆಗಳನ್ನು ಕೂಡ ಪ್ರಸಾರ ಮಾಡಲು ಆರಂಭಿಸಿತು.
ಈ ಸಂದರ್ಭದಲ್ಲಿ “ಬಿನಾಕಾ ಗೀತ ಮಾಲಾ ” ಕಾರ್ಯಕ್ರಮ ಕೂಡ ರೂಪುಗೊಂಡಿದ್ದು.
ಈ ಕಾರ್ಯಕ್ರಮ ಮತ್ತು ಚಿತ್ರಗೀತೆಗಳ ಪ್ರಸಾರ ಎಷ್ಟು ಜನಪ್ರಿಯವಾಯಿತು ಎಂದರೆ
ಚಿತ್ರಗೀತೆಗಳನ್ನು ಪ್ರಸಾರ ಮಾಡದೆ ಇರುವುದು ಆಕಾಶವಾಣಿಗೆ ಸಾಧ್ಯವಾಗಲಿಲ್ಲ.
ಹಾಗಾಗಿ 1957ರಲ್ಲಿ ಜನಪ್ರಿಯತೆ ಮತ್ತು ಮನರಂಜನೆ ಅಂಶಗಳನ್ನು ಇಟ್ಟುಕೊಂಡು ಚಲನಚಿತ್ರ ನಿರ್ಮಾಪಕರ ಜತೆ ಒಪ್ಪಂದಗಳನ್ನು ಮಾಡಿಕೊಂಡು ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡಬೇಕು ಎಂಬ ಉದ್ದೇಶದಿಂದ “ವಿವಿಧ ಭಾರತಿ” ಉದಯವಾಯಿತು.
ಮುಖ್ಯ ವಾಹಿನಿಗಳಲ್ಲಿ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಸಂಗೀತಗಳನ್ನು ಪ್ರಸಾರ ಮಾಡುವುದು, ಚಿತ್ರಗೀತೆಗಳ ಅವಧಿ ಬಹಳ ಕಡಿಮೆ ಇಡುವುದು. ವಿವಿಧ ಭಾರತಿಯಲ್ಲಿ ಚಿತ್ರಗೀತೆ, ಮನೋರಂಜನೆ ಪ್ರಧಾನ ಮಾಡಿಕೊಂಡು ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಅದರಿಂದ ಕೇಳುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಉದ್ದೇಶವಾಗಿತ್ತು.
ಹೀಗೆ ಚಿತ್ರಗೀತೆಗಳು ಆಕಾಶವಾಣಿಯಲ್ಲಿ ಪ್ರವೇಶ ಪಡೆದವು.
ಆದರೆ ಪ್ರತಿ ಗೀತೆಯನ್ನೂ “screening ” ಅಂದರೆ ಒಂದು ಮೌಲ್ಯಮಾಪನಕ್ಕೆ ಒಳಪಡಿಸಿ
ಸಂಸ್ಕೃತಿಗೆ ನಾಡು-ನುಡಿಗೆ ಅಭಿರುಚಿಗೆ ಧಕ್ಕೆ ತರುವ ಅಂಶಗಳು ಆ ಗೀತೆಯಲ್ಲಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವಷ್ಟೇ ಪ್ರಸಾರ ಮಾಡಬೇಕು ಎಂಬ ನಿಯಮಾವಳಿಯನ್ನು ರೂಪಿಸಲಾಯಿತು.
ಇಂದಿಗೂ ಆಕಾಶವಾಣಿ ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುವ ಮುನ್ನ ಮೌಲ್ಯಮಾಪನ ಮಾಡುತ್ತದೆ.
ಅಭಿರುಚಿಗೆ ಧಕ್ಕೆ ತರುವ ಗೀತೆಗಳನ್ನು ಆಕಾಶವಾಣಿ ಇಂದಿಗೂ ಪ್ರಸಾರ ಮಾಡುವುದಿಲ್ಲ.
ಚಿತ್ರಗೀತೆಗಳು ಆಕಾಶವಾಣಿಯಲ್ಲಿ ಪ್ರಸಾರವಾದಾಗ ವಿಶೇಷ ಗಮ್ಮತ್ತು ಇರುತ್ತಿತ್ತು.
ತುಂಬಾ ಕಡಿಮೆ ಅವಧಿಯಲ್ಲಿ ಪ್ರಸಾರವಾಗುತ್ತಿತ್ತು. ಆದಕಾರಣ ಜನ ಚಿತ್ರಗೀತೆಗಳಿಗಾಗಿ ಕಾದು ಆ ಸಮಯದಲ್ಲಿ ಮಾತ್ರ ಕೇಳಬೇಕಾಗುತ್ತಿತ್ತು.
ಮುಖ್ಯ ವಾಹಿನಿಗಳಲ್ಲಿ ದಿನವೊಂದಕ್ಕೆ ಹದಿನೈದು ನಿಮಿಷ ಅಥವಾ ಅರ್ಧ ಗಂಟೆ ಅಷ್ಟೇ ಚಿತ್ರಗೀತೆ ಪ್ರಸಾರ ಆಗುತ್ತಿತ್ತು.
ವಿವಿಧ ಭಾರತಿಯಲ್ಲಿ ಅವಧಿ ಸ್ವಲ್ಪ ಹೆಚ್ಚಾಗಿರುತ್ತಿತ್ತು.
ಪ್ರಾದೇಶಿಕ ಚಿತ್ರ ಸಂಗೀತ, ಹಿಂದಿ ಚಿತ್ರಗೀತೆಗಳನ್ನೂ ಕೂಡ ಮುಂಬೈ ವಿವಿಧ ಭಾರತಿ ಪ್ರಸಾರ ಮಾಡುತ್ತಿತ್ತು.
70 ರ ದಶಕದಲ್ಲಿ ಪ್ರಾದೇಶಿಕ ವಿವಿಧ ಭಾರತಿ ಕೇಂದ್ರಗಳು ಅಸ್ತಿತ್ವಕ್ಕೆ ಬಂದಾಗ ಆಯಾ ಪ್ರಾಂತೀಯ ಭಾಷೆಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಲಾಯಿತು.
ವಿವಿಧ ಭಾರತಿ ಎಂದರೆ ಚಿತ್ರಗಳಿಗಾಗಿಯೇ ಚಿತ್ರಗೀತೆಗಳಿಗಾಗಿಯೇ ಮುಡಿಪಾಗಿರುವ ವಾಹಿನಿ ಎಂದು ಜನಪ್ರಿಯವಾಯಿತು.
ಚಿತ್ರಗೀತೆಗಳು ಮನೆ ಮನೆಗಳನ್ನು ಮುಟ್ಟಿದ್ದು ಆಕಾಶವಾಣಿಯಿಂದ.
ಚಿತ್ರಗೀತೆಗಳು ಇಡೀ ಭಾರತವನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಎಲ್ಲರ ಭಾವಗಳು ಒಂದಾಗಿ ಒಗ್ಗಟ್ಟಾಗುತ್ತವೆ ಎಂದರೆ ಅದು ಚಿತ್ರಗೀತೆಗಳಿಂದ ಮಾತ್ರ ಎಂದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಆಗಾಗ ಹೇಳುವುದನ್ನು ಕೇಳಿದ್ದೇನೆ.
ಚಲನಚಿತ್ರಗಳನ್ನು ನೋಡದೆ ಇರಬಹುದು, ಆದರೆ ಚಿತ್ರಗೀತೆಗಳನ್ನು ಗುನುಗದ ವ್ಯಕ್ತಿಯೇ ಇಲ್ಲ ಎಂದು ಧಾರಾಳವಾಗಿ ಹೇಳಬಹುದು.
ಗೀತೆಗಳನ್ನು ಕೇಳಿದ ಮೇಲೆ ಚಲನಚಿತ್ರಗಳನ್ನು ನೋಡಿರುವವರು ಇದ್ದಾರೆ.
ಹಾಡಿನಿಂದಲೇ ಜನಪ್ರಿಯವಾದ ಚಲನಚಿತ್ರಗಳು ಇವೆ. ಕೆಲವೊಮ್ಮೆ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋತು ಹೋದರೂ ಆ ಚಿತ್ರದ ಗೀತೆಗಳು ಜನಜನಿತವಾಗಿವೆ.
ಚಿತ್ರಗೀತೆಗಳನ್ನು ಇಷ್ಟಪಡುವ ಮಂದಿ ವಿವಿಧ ವರ್ಗದವರು.
ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರಾದಿಯಾಗಿ ಚಲನಚಿತ್ರ ಗೀತೆಗಳು ಹಾಡುತ್ತಾರೆ.
ಇನ್ನು ಯುವಕ ಯುವತಿಯರಂತೂ ಚಲನಚಿತ್ರಗಳ ಗೀತೆಗಳನ್ನು ಹಾಡುತ್ತಲೇ ಹಾಡುಗಳಿಂದಲೇ ಪ್ರೀತಿ ಮಾಡಿದವರಿದ್ದಾರೆ.
70 80 90 ರ ದಶಕಗಳಲ್ಲಿ ಚಿತ್ರಗೀತೆಗಳು ಮತ್ತು ಆಕಾಶವಾಣಿಗೆ ವಿಶೇಷ ಬಾಂಧವ್ಯವೇ ಮೂಡಿತು.
ಚಿತ್ರಗೀತೆಗಳ ಪ್ರಸಾರದ ಅವಧಿಯೂ ಕೂಡ ಹೆಚ್ಚಿತು.
ಚಲನಚಿತ್ರ ರಂಗವೂ ಬೆಳೆಯುತ್ತಿದ್ದ ಕಾಲ.
ಹಾಗಾಗಿ ಚಲನಚಿತ್ರ ಗೀತೆಗಳನ್ನು ಕೇಳಲು ಜನ ಹಾತೊರೆಯುತ್ತಿದ್ದರು.
ಆಕಾಶವಾಣಿ ಆಗ ಆರಂಭಿಸಿದ ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮಕ್ಕೆ ದಿನವೊಂದಕ್ಕೆ ಸಾವಿರಗಟ್ಟಲೆ ಪತ್ರಗಳು ಬರುತ್ತಿದ್ದವು.
ಅವುಗಳನ್ನು ವಿಂಗಡಿಸಿ ಪ್ರಸಾರಕ್ಕೆ ಅಳವಡಿಸುವಷ್ಟರಲ್ಲಿ ಉದ್ಭೋಷಕರಿಗೆ ಮೈ ಬೆವರಿಳಿಯುತ್ತಿತ್ತು.
ಒಂದು ಗೀತೆಗೆ ಎಷ್ಟು ಪತ್ರಗಳು ಬಂದಿವೆ ಎಂಬುದನ್ನು ನೋಡಿಕೊಂಡು, ಎಣಿಸಿ, ಆ ಪತ್ರಗಳನ್ನು ಒಂದು ರಬ್ಬರ್ ಬ್ಯಾಂಡ್ ಹಾಕಿ ಕಟ್ಟಿ ಇಡಲಾಗುತ್ತಿತ್ತು.
ಒಂದೇ ಗೀತೆಗೆ ನೂರು, ಇನ್ನೂರು ಪತ್ರಗಳು ಕೂಡ ಬಂದಿರುತ್ತಿದ್ದವು.
ಹೆಸರುಗಳನ್ನು ಓದುವಾಗ ಉದ್ಘೋಷಕರು ತಮ್ಮದೇ ವಿಶಿಷ್ಟ ಶೈಲಿಗಳನ್ನು ಇಟ್ಟುಕೊಂಡಿರುತ್ತಿದ್ದರು.
ಚಿತ್ರಗೀತೆಗಳ ಪ್ರಸಾರ ಎಂದರೆ ಅದು ಶೋತ್ರಗಳ ಮನದ ವಿಹಾರ.
ವಿವಿಧ ರೀತಿಯ ಶ್ರೋತೃಗಳು, ಅವರ ಅಪೇಕ್ಷೆಗಳು, ಚಿತ್ರಗೀತೆಗಳ ಪ್ರಸಾರದಲ್ಲಿ ಅಳವಡಿಸಿಕೊಳ್ಳುವ ತಂತ್ರಗಾರಿಕೆಗಳು,
ಚಿತ್ರಗೀತೆಗಳನ್ನೇ ಆಧರಿಸಿ ಮೂಡಿ ಬರುವ ವಿಶೇಷ ಕಾರ್ಯಕ್ರಮಗಳು,
ಚಿತ್ರಗೀತೆಗಳ ಪ್ರಸಾರದ ಆಸಕ್ತಿದಾಯಕ ಅಂಶಗಳನ್ನು ಮುಂದಿನ ಧ್ವನಿ ಬಿಂಬದಲ್ಲಿ ನೋಡೋಣ.
ಆಗಲಿ ಅಂತೀರಾ?

ಮತ್ತಷ್ಟು ಸುದ್ದಿಗಳು

vertical

Latest News

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...
- Advertisement -
error: Content is protected !!