ನರೇಶ್, ರಮ್ಯಾ, ಪವಿತ್ರಾ ಅವರ ಸಾಲು ಸಾಲು Flash Back ಮತ್ತು ಚಿತ್ರಗಳು!
ಒಬ್ಬರು ವರದಿಗಾರರು ಹೇಳುತ್ತಾರೆ “ಇವರ ಸಂಬಂಧ ಪವಿತ್ರವೋ ಅಪವಿತ್ರವೋ? ಕಾದು ನೋಡಬೇಕಿದೆ” ಎಂದು.
ನಮ್ಮ ವಾಹಿನಿಗಳು ಎಷ್ಟು ಪವಿತ್ರ?
ವರದಿಗಾರರ “ಭಾಷಾ ಪ್ರೌಢಿಮೆ'”, “ಪದಪುಂಜಗಳು” ಕೇಳಿಕೊಳ್ಳುವ ಪರಿ ಅಸಹ್ಯ ಹುಟ್ಟಿಸುತ್ತಿವೆ.
ಧ್ವನಿಬಿಂಬ 27
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com
ಬೆಂಗಳೂರಿನ ಡಿಆರ್ಡಿಒ ಅದ್ಭುತವಾದದ್ದನ್ನು ಸಾಧಿಸಿದೆ…
ಸ್ವದೇಶಿ ತಂತ್ರಜ್ಞಾನ ಬಳಸಿ ಪೈಲಟ್ರಹಿತ ಯುದ್ಧ ವಿಮಾನ ರೂಪಿಸಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪ್ರಯೋಗ ನಡೆಯಿತು. ನಿಗದಿತ ಪಥದಲ್ಲಿ ಸಂಚರಿಸಿ ನಿರ್ದಿಷ್ಟ ಜಾಗದಲ್ಲಿ ವಿಮಾನ ಇಳಿಯಿತು. ಇದು ಸಂಪೂರ್ಣ ಸ್ವದೇಶಿ. ಶತ್ರುವಿನ ಮೇಲೆ ನಿಖರ ದಾಳಿ ನಡೆಸಲು ಇದು ಪ್ರಯೋಜನಕಾರಿ.
ಎಂಥ ಹೆಮ್ಮೆಯ ವಿಷಯ ಇದು, ಅಲ್ಲವೇ?
ವರದಿ ನೋಡಿದ ನೆನಪು ಉಂಟೆ?
ನೆರೆಯ ರಾಷ್ಟ್ರಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಫೋನ್ ಮತ್ತು ಇಂಟರ್ನೆಟ್ ಸೇವೆಗಳು ಅಲ್ಲಿ ಸ್ಥಗಿತ ಮಾಡುವ ಸಂಭವ ಇದೆ . ಈ ಬಗ್ಗೆ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಆರ್ಥಿಕ ಸಚಿವರೇ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನದ ಸ್ಥಿತಿಗತಿಗಳ ಬಗ್ಗೆ ವರದಿ ನೋಡಿದಿರಾ?
ದೇಶದಲ್ಲಿ ಕೋವಿಡ್ ಪ್ರಕರಣಗಳು ತುಸು ಏರುವ ಸೂಚನೆ ಕಾಣಿಸುತ್ತಿದೆ ಎಚ್ಚರಿಕೆ ವಹಿಸಬೇಕು ಎಂಬ ವರದಿಗಳನ್ನು ಏನಾದರೂ ಕಂಡಿರಾ?
ಜುಲೈ 1ನೇ ತಾರೀಕು ವೈದ್ಯರ ದಿನ ಆಚರಿಸಲಾಯಿತು. ಸಮಾಜಕ್ಕೆ ಅಪರಿಮಿತ ಕೊಡುಗೆ ನೀಡುವ ವೈದ್ಯರ ಸೇವೆಯನ್ನು ಶ್ಲಾಘಿಸಿ ಎಲ್ಲೆಡೆ ಅಭಿನಂದನೆ ಸಲ್ಲಿಸಲಾಯಿತು. ತಮ್ಮ ಸಮಸ್ತ ಕಷ್ಟ ಸುಖಗಳನ್ನು, ವೈಯಕ್ತಿಕ ಬದುಕನ್ನು ಮರೆತು ಜನಸೇವೆಯೇ ಜನಾರ್ದನ ಸೇವೆ ಎಂದು ದುಡಿಯುವ ವೈದ್ಯರಿಗೆ ನಮನ ಸಲ್ಲಿಸಿದ ಹಲವಾರು ಸಮಾರಂಭಗಳು, ದೇಶದಾದ್ಯಂತ ನಡೆದವು. ಮನೆಗೆ ಒಬ್ಬ ವೈದ್ಯರನ್ನು ಇಟ್ಟುಕೊಳ್ಳಿ ನಿಮ್ಮ ಕುಟುಂಬದ ಸಮಸ್ತ ಆರೋಗ್ಯ ಮಾಹಿತಿ ಆ ವೈದ್ಯರ ಬಳಿ ಇರಲಿ. ಇದು ಈ ವರ್ಷದ ಘೋಷವಾಕ್ಯ ಕೂಡ. ವೈದ್ಯರ ಸೇವೆಗೆ ಚಪ್ಪಾಳೆ ತಟ್ಟಿ ಅವರಿಗೆ ನಮನ ಸಲ್ಲಿಸಿ. ಈ ಮಾತುಗಳನ್ನು ಎಲ್ಲೆಡೆ ಹೇಳಲಾಯಿತು.
ಈ ಕುರಿತು ಏನಾದರೂ ಸುದ್ದಿಗಳನ್ನು ಕಂಡಿರಾ?
ಇದೇನಿದು ಇಷ್ಟೊಂದು ಸುದ್ದಿಗಳು!
ಈಗೇಕೆ ಹೀಗೆ ಹೇಳುತ್ತಿದ್ದೀರಿ ?
ಇವೆಲ್ಲ ನಮಗೆ ಗೊತ್ತಾಗಲಿಲ್ಲ, ಅಷ್ಟಾಗಿ ವಾಹಿನಿಗಳಲ್ಲಿ ಇದನ್ನು ನಾವು ನೋಡಲಿಲ್ಲ ಎನ್ನುವಿರಾ ?
ನಿಜ.
ಗೊತ್ತಾಗಲು ಸಾಧ್ಯವೇ ಇಲ್ಲ.
ಹೇಳಿದರೆ ತಾನೆ ಗೊತ್ತಾಗುತ್ತದೆ ?
ಅಥವಾ ನಾವು ಹುಡುಕಿದರೆ ಗೊತ್ತಾಗುತ್ತದೆ.
ನಮಗೆ ಹುಡುಕುವಷ್ಟು ಸಮಯ ಇಲ್ಲ ಆದ್ದರಿಂದ ಹೇಳಿದಷ್ಟು ಕೇಳುತ್ತೇವೆ. ನಂಬುತ್ತೇವೆ.
ಹಾಗಾದ್ರೆ ತೇಲಿ ತೇಲಿ ಬಂದ ಬಹುಮುಖ್ಯ ಸುದ್ದಿ ಯಾವುದು?
ಮತ್ತೆ ಮತ್ತೆ ನಿಮ್ಮ ಕಣ್ಣು ಕಿವಿಗಳಿಗೆ ಅಪ್ಪಳಿಸಿದ ಸುದ್ದಿ ಯಾವುದು ?
ಟೇಲರ್ ಕನ್ನಯ್ಯನ ಬರ್ಬರ ಹತ್ಯೆ,
ಸುಪ್ರಿಂ ಕೋರ್ಟು ನೂಪುರ್ ಶರ್ಮ ಅವರಿಗೆ ಛೀಮಾರಿ ಹಾಕಿರುವುದು,
ಮಹಾರಾಷ್ಟ್ರ ಸರ್ಕಾರದ ಅಲ್ಲೋಲ ಕಲ್ಲೋಲ ಘಟನಾವಳಿಗಳು…
ಇವು ಪ್ರಚಲಿತ ಸುದ್ದಿ. ದೇಶದ ಉದ್ದಗಲಕ್ಕೂ.
ಆದರೆ…
– ಕನ್ನಡದ ಮುಖ್ಯ ವಾಹಿನಿಗಳು ಗಂಟೆಗಟ್ಟಲೆ ಮೀಸಲಿಟ್ಟಿದ್ದು ಈ ಸುದ್ದಿಗಳಿಗೆ ಅಲ್ಲವೇ ಅಲ್ಲ.
ಕನ್ನಡ ವಾಹಿನಿಗಳ “ಪವಿತ್ರ” ಸುದ್ದಿ ಜಗತ್ತು
ಬೇರೆಯೇ ಇತ್ತು.
“ಅಲ್ಲಾರೀ.. ನಾನು ಮೋಸ ಮಾಡಿದೀನಾ?
ಕೊಲೆ ಮಾಡಿದೀನಾ? ನನ್ನ ವೈಯಕ್ತಿಕ ಬದುಕಿನ ವಿವರ ನಿಮಗೇಕೆ?” ಎಂದು ಪವಿತ್ರ ಅವರು ಏರುದನಿಯಲ್ಲಿ ಕೇಳಿದರೂ…
ಅವರ ಮುಂದೆ “ಪ್ಲೀಸ್” ಎಂದು ಗೋಗರೆಯುತ್ತಾ ಹೇಳಿಕೆಗಾಗಿ ಸರದಿಯಲ್ಲಿ ನಿಂತಿರುವ ಚಾನೆಲ್ಗಳು!
ಚಿತ್ರನಟಿ ಪವಿತ್ರ ಮತ್ತು ತೆಲುಗು ಚಿತ್ರರಂಗದ ನಟ ನರೇಶ್ ಅವರ ನಡುವಣ ಸ್ನೇಹ ಸಂಬಂಧದ ಶೋಧ ಕಾರ್ಯದಲ್ಲಿ ನಿರತವಾಗಿವೆ, ನಮ್ಮ ವಾಹಿನಿಗಳು.
ಪವಿತ್ರ ಅವರ ಪತಿ, ಕನ್ನಡದ ಪ್ರಬುದ್ಧ ಕಲಾವಿದ ಸುಚೇಂದ್ರಪ್ರಸಾದ್ ಅವರು,
“ಅವರವರ ಜೀವನ ಅವರ ಅವರದು,
ಹುಡುಕಾಟ ನಡೆಯಲಿ” ಎಂದು ಹೇಳಿದರೂ ಬಿಡದೆ ಅವರನ್ನು ಹಿಂಸೆ ಮಾಡಿ ಪ್ರಶ್ನೆ ಕೇಳುತ್ತಿವೆ. ವಾಹಿನಿಗಳು!
ನರೇಶ್ ಅವರ ಸಂದರ್ಶನಕ್ಕೆ ವಾಹಿನಿ ಒಂದರ ಕಚೇರಿ ಬಳಿ ನಡೆದ ಗಲಾಟೆಗಳು!
ನರೇಶ್ ಅವರ ಪತ್ನಿಯ ಹುಡುಕಾಟ,
ಅವರ ಹೇಳಿಕೆಗಳಿಗೆ ಬಲವಂತ!
ಎರಡು ನಿಮಿಷಗಳಲ್ಲಿ ಮುಗಿದು ಹೋಗಬೇಕಾಗಿದ್ದ ಸುದ್ದಿ.
ಅಥವಾ ಇದು ಸುದ್ದಿಯೇ ಅಲ್ಲ,
ಆದರೂ ಇದು ಬಿತ್ತರವಾಗುತ್ತಿರುವ ರೀತಿ ಎಷ್ಟು ಅಸಂಸ್ಕಾರಯುತ.
ಪ್ರಶ್ನೆಗಳನ್ನು ಕೇಳುವ ಪರಿ !
ಸಂಶೋಧನಾ ವೈಖರಿ !!
ಅಬ್ಬಾ!
ಡಿ ಆರ್ ಡಿ ಒ ವಿಜ್ಞಾನಿಗಳು ಕೂಡ ನಾಚಿಕೊಂಡಾರು!
– ಮೂರು ವರ್ಷಗಳ ಹಿಂದೆ ಸುಚೇಂದ್ರಪ್ರಸಾದ್ ಅವರನ್ನು ಹೊಗಳಿದ್ದ ಪವಿತ್ರಾ, ಆರು ವರ್ಷದಿಂದ ಒಟ್ಟಾಗಿ ಜೀವಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.
– ಇದು ಹೇಗೆ ಸಾಧ್ಯ?
– ನರೇಶ್ ಅವರು “ಲವ್ ಯು” ಎಂದು ಪವಿತ್ರಾಗೆ ಹೇಳಿದ ಸಂದರ್ಭವನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಾ , “ಮನಸ್ಸಿನಲ್ಲಿ ಇರುವ ಮಾತೇ ಅಲ್ಲವೇ ಹೊರಗೆ ಬರುವುದು? ನರೇಶ್ ಸತ್ಯ ಹೇಳಿದ್ದಾರಾ?”
– ಒಂದೇ ರೂಮಿನಿಂದ ಹೊರಬಂದ ಪವಿತ್ರ ಕಣ್ಣೀರಿಟ್ಟ ರಮ್ಯಾ.
– ವಜ್ರದ ನೆಕ್ಲೆಸ್ ಯಾರದು?
ಇಂತಹ ಸಂಶೋಧನೆಯಲ್ಲಿ ಮುಳುಗಿವೆ ನಮ್ಮ ಕನ್ನಡ ವಾಹಿನಿಗಳು.
ನರೇಶ್, ರಮ್ಯಾ, ಪವಿತ್ರಾ ಅವರ ಸಾಲು ಸಾಲು Flash Back ಮತ್ತು ಚಿತ್ರಗಳು!
ಒಬ್ಬರು ವರದಿಗಾರರು ಹೇಳುತ್ತಾರೆ “ಇವರ ಸಂಬಂಧ ಪವಿತ್ರವೋ ಅಪವಿತ್ರವೋ? ಕಾದು ನೋಡಬೇಕಿದೆ “ಎಂದು.
ನಮ್ಮ ವಾಹಿನಿಗಳು ಎಷ್ಟು ಪವಿತ್ರ ?
ವರದಿಗಾರರ “ಭಾಷಾ ಪ್ರೌಢಿಮೆ’ ” ಪದಪುಂಜಗಳು” ಕೇಳಿಕೊಳ್ಳುವ ಪರಿ ಅಸಹ್ಯ ಹುಟ್ಟಿಸುತ್ತಿವೆ.
ವೀಕ್ಷಕರು ಇಂಥದನ್ನು ಬಯಸುತ್ತಾರೆ. ಇದನ್ನು ನೋಡುತ್ತಾರೆ ಟಿಆರ್ಪಿ ಹೆಚ್ಚುತ್ತದೆ ಎನ್ನುತ್ತಿವೆ ವಾಹಿನಿಗಳು.
ಕನ್ನಡ ವೀಕ್ಷಕರಿಗೆ ಈ ರೀತಿಯ ವರದಿಗಳು ಬೇಕೇ?
ಇದು ವೀಕ್ಷಕರಿಗೆ ಮಾಡುವ ಅವಮಾನವಲ್ಲವೇ?
ನಿಜವಾಗಿಯೂ ಇದಕ್ಕೆ ವೀಕ್ಷಣೆ ಇರುತ್ತದೆಯೇ?
ವಾಹಿನಿಗಳಂತೂ ಬೋಧಪ್ರಧವಾಗಿ ವರ್ತಿಸುವುದಿಲ್ಲ ಎಂಬುದು ತಿಳಿದಿರುವ ಸಂಗತಿಯೇ. ಆದರೆ,
ವೀಕ್ಷಕ ಬಂಧುಗಳು ಇಂತಹ ಸುದ್ದಿಗಳನ್ನು ಬಹಿಷ್ಕರಿಸಿ ಒಂದು ಪೋಸ್ಟ್ ಕಾರ್ಡ್ ಅಭಿಯಾನ ಮಾಡಬಾರದೇಕೆ ?
ಈ ಸುದ್ದಿ ನಮಗೆ ಬೇಡ ಎಂದು ಒಂದು ಸಂದೇಶ ಅಭಿಯಾನ ಮಾಡಲು ಸಾಧ್ಯವಿದೆಯೇ?
ಈ ಸುದ್ದಿ ಬೇಡ ಎಂದು ಸಾವಿರ ಸಾವಿರ ಸಂದೇಶ ಕಳಿಸಿ viral ಮಾಡಿ,
ವಾಹಿನಿಗಳಿಗೆ ಛೀಮಾರಿ ಹಾಕಿ ,
ತಮ್ಮ ಘನತೆ ಉಳಿಸಿಕೊಳ್ಳಲು ಆಗುವುದೇ?