♦ನೀತಾ ರಾವ್, ಬೆಳಗಾವಿ
ಕತೆಗಾರರು
newsics.com@gmail.com
ಸಂಕ್ರಾಂತಿ ಬಂತೆಂದರೆ ಬಾಲ್ಯದ ಅನೇಕ ನೆನಪುಗಳು ಬಂದು ಈ ಚಳಿಯಲ್ಲಿ ಸುಖದ ಅನುಭವ ನೀಡುತ್ತವೆ. ಆ ದಿನಗಳ ಸಂಕ್ರಾಂತಿ ಹಬ್ಬದ ಸಂಭ್ರಮದ ಮುಂದೆ ಈಗಿನ ಆಚರಣೆ ಸಪ್ಪೆ ಎನಿಸುತ್ತದೆ.
ನಾನು ಪ್ರಾಥಮಿಕ ಶಾಲೆಗೆ ಹೊರಟ ಕೂಡಲೇ ನನಗೆ ನಮ್ಮದೇ ಓಣಿಯಲ್ಲಿ ವಾಸಿಸುತ್ತಿದ್ದ ಮೂರ್ನಾಲ್ಕು ಹುಡುಗಿಯರು ಗೆಳತಿಯರಾದರು. ಗೆಳೆತನವೆಂದರೆ ಎಂಥದ್ದು ರಾತ್ರಿ ಮಲಗುವ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ನಾನು ಅವರ ಮನೆಯಲ್ಲೋ, ಅವರು ನಮ್ಮ ಮನೆಯಲ್ಲೋ ಸದಾ ಒಂದಿಲ್ಲೊಂದು ಆಟ, ಅಭ್ಯಾಸ, ಹಾಡು, ಡಾನ್ಸು ಎಂದು ನೂರೆಂಟು ಕಿತಾಪತಿ ಮಾಡುತ್ತಲೇ ಇರುವುದು. ನಾವು ಆರು ಅಥವಾ ಏಳನೇ ತರಗತಿಯಲ್ಲಿದ್ದಾಗ ಮನೆಯಲ್ಲಿಯೇ ಕುಸುರೆಳ್ಳು ಮಾಡುವ ನಮ್ಮ ಮೊದಲ ಕಸರತ್ತು ಶುರುವಾಯ್ತು. ಜೈನರಾದ ನನ್ನ ಗೆಳತಿಯರೆಲ್ಲರ ಮನೆಯಲ್ಲಿ ಮಕ್ಕಳಿಗೆ ಬಹುಬೇಗ ಮನೆ ಕೆಲಸಗಳನ್ನೆಲ್ಲ ಕಲಿಸಿಕೊಟ್ಟುಬಿಡುತ್ತಿದ್ದರು. ಅವರ ಜತೆಗೆ ನಾನೂ ಒಂದಿಷ್ಟು ಕೆಲಸಗಳನ್ನು ಕಲಿತಿದ್ದೆ. ಅದೇ ರೀತಿ ಅವರ ಮನೆಯಲ್ಲಿ ಸಂಕ್ರಾಂತಿಗೆ ಮನೆಯಲ್ಲೇ ಎಳ್ಳು ಮಾಡುತ್ತಿದ್ದರು ಮತ್ತು ಮಕ್ಕಳಿಗೂ ಹೇಗೆ ಮಾಡುವುದೆಂದು ಕಲಿಸಿಕೊಡುತ್ತಿದ್ದರು. ನಮ್ಮದೇನಿದ್ದರೂ ಸಾಂಘಿಕ ಚಟುವಟಿಕೆಯೇ ಆದ್ದರಿಂದ ಆ ಸಲ ನಮ್ಮ ಕುಸುರೆಳ್ಳಿನ ಕಾರ್ಯಕ್ರಮವೂ ಒಟ್ಟೊಟ್ಟಿಗೇ ಶುರುವಾಯ್ತು. ಮಕ್ಕಳು ಮಾಡುವುದೆಂದರೆ ದೊಡ್ಡವರೂ ನೂರಾಎಂಟು ಸಹಾಯ ಮಾಡಬೇಕಾಗುತ್ತದಲ್ಲ! ಹಾಗೆ ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ಎಳ್ಳು ಮಾಡಲು ನಿರ್ಧರಿಸಿದ ಮೇಲೆ ಅದಕ್ಕೆ ಬೇಕಾದ ವಸ್ತುಗಳನ್ನೆಲ್ಲ ಹೊಂದಿಸಿಕೊಂಡೆವು. ಅಂದರೆ ಇದ್ದಿಲೊಲೆ, ಅದಕ್ಕೆ ಹಾಕಲು ಇದ್ದಿಲು, ದಪ್ಪ ಚಚ್ಚೌಕದ ಸಕ್ಕರೆ, ಬಿಳಿ ಎಳ್ಳು, ಪಾಕ ಮಾಡಿಕೊಳ್ಳಲು ಸಕ್ಕರೆ, ಎಲ್ಲರ ಮನೆಯಿಂದಲೂ ರೊಟ್ಟಿ ಬಡಿಯುವ ಪರಾತು, ಎಲ್ಲ ಹೊಂದಿಸಿಕೊಂಡು ನಮ್ಮ ಚಟುವಟಿಕೆ ಶುರು ಹಚ್ಚಿಕೊಂಡೆವು. ಅಂದರೆ ಮೊದಲು ಪಾಕ ಮಾಡಿಕೊಳ್ಳುವುದು, ನಂತರ ಇದ್ದಿಲೊಲೆಗಳನ್ನು ಹೊತ್ತಿಸಿಕೊಂಡು, ಒಂದಿಷ್ಟು ದಪ್ಪ ಸಕ್ಕರೆಯ ಹರಳುಗಳನ್ನು ಪರಾತದಲ್ಲಿ ಹಾಕಿಕೊಂಡು ಒಲೆಯ ಮೇಲಿಟ್ಟು, ಒಂದೊಂದೇ ಚಮಚ ಸಕ್ಕರೆ ಪಾಕನ್ನು ಅದಕ್ಕೆ ಹಾಕುತ್ತ ಬೆರಳುಗಳಿಂದ ಆ ಕಡೆ ಈ ಕಡೆ ಹೊರಳಾಡಿಸುತ್ತ ಕೂಡುವುದು, ಮಧ್ಯೆ ಮಧ್ಯೆ ಶಾಖ ಹೆಚ್ಚಾಗಿ ಕೈಗೆ ಬಿಸಿ ಮುಟ್ಟಲಾರಂಭಿಸಿತೆಂದರೆ ಪರಾತವನ್ನು ಕೆಳಗಿಳಿಸಿಕೊಂಡು ಕೈಯಾಡಿಸುವುದು. ಹೀಗೆ ಒಂದು ತಾಸು ಮಾಡುವುದಕ್ಕೂ ಮೃದುವಾದ ಬೆರಳುಗಳಿಗೆಲ್ಲ ಸಕ್ಕರೆ ಪಾಕ ಹತ್ತಿಕೊಂಡು ಒಣಗಿ ಬೆಳ್ಳಗೆ ಕಾಣುತ್ತಿತ್ತು ಮತ್ತು ಬೆರಳುಗಳೂ ಆಡಿಸಿ ಆಡಿಸಿ ನೋವಾಗುತ್ತಿದ್ದವು. ಕೈ ನೋಯಲಾರಂಭಿಸುತ್ತಿತ್ತು. ಆಗ ಅವನ್ನೆಲ್ಲ ನಮ್ಮ ನಮ್ಮ ಡಬ್ಬಿಗಳಲ್ಲಿ ತುಂಬಿಟ್ಟುಬಿಡುತ್ತಿದ್ದೆವು. ಮತ್ತೆ ಮರುದಿನ ತಾಸುಗಟ್ಟಲೇ ಇದೇ ಕೆಲಸ. ಹೀಗೆ ನಾಲ್ಕೈದು ದಿನ ಮಾಡಿದ ಮೇಲೆ ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ ಬೇರೆಯವರಿಗೆ ಅವುಗಳನ್ನು ಕೊಡಬೇಕಾದರೂ ಒಂದಿಷ್ಟು ಜಿಕ್ಕೂತನ ಮಾಡುತ್ತಿದ್ದುದು ಸುಳ್ಳಲ್ಲ.
ನಮ್ಮ ಪರಾಕ್ರಮವನ್ನೂ, ನಾವು ಪಟ್ಟ ಕಷ್ಟವನ್ನೂ ಸಾರುವ ಈ ಕುಸುರು ಕುಸುರಿನ ಎಳ್ಳುಗಳನ್ನು ಕೊಟ್ಟು ಬೆಲ್ಲದಂಗಿರಲು ಹೇಳಲು ನಾವೇನೂ ಸಮೀಪದ ಮನೆಗಳಿಗಷ್ಟೇ ಹೋಗಿ ತೃಪ್ತರಾಗುತ್ತಿರಲಿಲ್ಲ. ಸಾಕಷ್ಟು ದೂರವೇ ಇದ್ದ ನಮ್ಮ ಕ್ಲಾಸ್ ಟೀಚರ್ ಮನೆಗೆ ಕಾಲ್ನಡಿಗೆಯ ದಂಡಯಾತ್ರೆ ಕೈಗೊಂಡು ಅವರಿಗೆ ಎಳ್ಳು ಕೊಟ್ಟು ನಮಸ್ಕಾರ ಮಾಡಿದರೇನೇ ನಮ್ಮ ಜೀವಕ್ಕೆ ಸಮಾಧಾನ.
ಈ ಓಡಾಟದ ಜತೆಜತೆಗೇ ನಾವು ನಮ್ಮ ಓಣಿಯಲ್ಲಿಯೇ ಇದ್ದ ಇನ್ನೊಂದು ಮನೆಗೆ ವಿಶೇಷವಾಗಿ ಹೋಗುತ್ತಿದ್ದೆವು. ಮೂಲತಃ ಉತ್ತರ ಭಾರತದ, ತಮ್ಮ ಉಡುಗೆ ತೊಡುಗೆಯಿಂದ ನೆಹರೂ ಅವರನ್ನು ನೆನಪಿಸುತ್ತಿದ್ದ ಮತ್ತು ನಮ್ಮ ಕನ್ನಡ ಶಾಲೆಯ ಬೆಟರ್ ಮೆಂಟ್ ಕಮೀಟಿಯ ಚೇರಮನ್ನರಾಗಿದ್ದ ಗೋರ್ಡಿಯಾ ಅವರು ನಗುಮುಖದ ಹಿರಿಯ ಜೀವ. ಮಕ್ಕಳನ್ನು ಯಾವಾಗಲೂ ನಗುಮುಖದಿಂದಲೇ ಮಾತನಾಡಿಸುತ್ತಿದ್ದ ಅವರ ಮನೆ ನಮ್ಮ ಮನೆಯಿದ್ದ ಅನಂತಶಯನ ಗಲ್ಲಿಯಲ್ಲೇ (ಬೆಳಗಾವಿಯಲ್ಲಿ) ಇತ್ತು. ಉದ್ದದ ಅಂಗಳವನ್ನು ಒಂಥರಾ ಅಳಕುತ್ತ ನಿಧಾನ ಹೆಜ್ಜೆಗಳನ್ನಿಡುತ್ತ ದಾಟಿ ಅವರ ಮನೆಯ ಜಗಲಿಗೆ ಕಾಲಿಡುತ್ತಿದ್ದೆವು. ಆ ಕಾಲಕ್ಕೆ ನಮ್ಮ ಮನಸ್ಸಿನ ತುಂಬ ಅಚ್ಚರಿಯ, ಮೆಚ್ಚುಗೆಯ ಭಾವಗಳನ್ನು ಸ್ಫುರಿಸುತ್ತಿದ್ದ ಅವರ ಮನೆಯ ಸುಂದರವಾದ ಸೋಫಾ ಸೆಟ್ಟು, ಮಧ್ಯದಲ್ಲೊಂದು ಟಿಪಾಯ್ ಎಲ್ಲವನ್ನೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವಾಗಲೇ ಅವರು ಪ್ರೀತಿಯಿಂದ ಮಕ್ಕಳನ್ನೆಲ್ಲ ಹತ್ತಿರ ಕರೆದು ಎಳ್ಳು ಇಸಿದುಕೊಳ್ಳುತ್ತಿದ್ದರು. ಪ್ರತಿಯಾಗಿ ದೊಡ್ಡ ಬೆಳ್ಳಿಯ ಬಟ್ಟಲಿನಲ್ಲಿ ತಾವು ಇಟ್ಟುಕೊಂಡಿರುತ್ತಿದ್ದ ಗೋಡಂಬಿ, ಬದಾಮು, ಒಣದ್ರಾಕ್ಷಿ ಮುಂತಾದ ಡ್ರೈಫ್ರೂಟ್ಸಗಳನ್ನು ನಮ್ಮ ಪುಟ್ಟ ಕೈಗಳಲ್ಲಿಡುತ್ತಿದ್ದರು. ಆ ಕಾಲದಲ್ಲಿ ನಮ್ಮ ಮಟ್ಟಿಗೆ ಅತ್ಯಂತ ದುಬಾರಿಯಾಗಿದ್ದ ಈ ಗೋಡಂಬಿ, ಬದಾಮುಗಳಿಗಾಗಿಯೇ ನಾವು ಅವರ ಮನೆಗೆ ತಪ್ಪದೇ ಸಂಕ್ರಾಂತಿಗೆ ಭೇಟಿ ಕೊಡುತ್ತಿದ್ದೆವು. ಮಕ್ಕಳ ಮೇಲೆ ಎಷ್ಟು ವಿಧವಿಧ ರೀತಿಯಲ್ಲಿ ಪ್ರೀತಿಯನ್ನು ಪ್ರಕಟಿಸಬಹುದು ಎಂಬುದನ್ನು ಇಂಥವರಿಂದ ಕಲಿತುಕೊಳ್ಳಬೇಕು ಎಂದು ಇದನ್ನು ಬರೆಯುವ ಸಮಯದಲ್ಲಿ ಅನಿಸುತ್ತಿದೆ.
ಗೊತ್ತಿದ್ದವರು, ಇಲ್ಲದವರು, ಎಲ್ಲರ ಮನೆಗಳಿಗೂ ಹೋಗಿ, ಪುಟ್ಟ ಮೈಗೆ ಭಾರವಾಗುತ್ತಿದ್ದ ದೊಡ್ಡ ಸೀರೆಗಳನ್ನುಟ್ಟು ಅವುಗಳನ್ನು ನಿಭಾಯಿಸುತ್ತಲೇ ಎಲ್ಲರಿಗೂ “ಎಳ್ಳ ತೊಗೊಂಡು ನಾವೂ ನೀವೂ ಎಳ್ಳೂಬೆಲ್ಲದಂಗ ಇರೋಣು” ಎಂದು ಹೇಳಿ ಎಳ್ಳು ಕೊಟ್ಟು ಮತ್ತೆ ಗಬಕ್ಕನೇ ಅವರ ಕಡೆಯಿಂದಲೂ ಎಳ್ಳು ಮರಳಿ ಪಡೆದುಕೊಂಡು, ಅದರಲ್ಲೇನಾದರೂ ಶೇಂಗಾಕ್ಕೆ ಹಚ್ಚಿದ ದೊಡ್ಡ ಎಳ್ಳು ಬಂದಿದ್ದರೆ ಅಲ್ಲೇ ಗಬಕ್ಕನೇ ಬಾಯಿಗೆಸೆದುಕೊಂಡೇ ಇನ್ನೊಂದು ಮನೆಯ ಹೊಸಿಲು ತುಳಿಯುತ್ತಿದ್ದ ಪಕ್ಕಾ ಹೆಣ್ಮಕ್ಕಳು ನಾವು. ಇಡೀ ಮನೆ ಎಳ್ಳು ಚೆಲ್ಲಾಡಿ ಹೋಗುವಷ್ಟು ಮಕ್ಕಳು ಎಲ್ಲರ ಮನೆಗೂ ಎಳ್ಳು ಕೊಡುತ್ತಿದ್ದ ಕಾಲವದು. ಇಂದು ಎಣಿಸಿದರೆ ಐದು ಜನರಿಗೂ ಕೊಡಲಾಗಿರುವುದಿಲ್ಲ. ಒಂದೇ ಕಡೆ ಬಂಧುಬಾಂಧವರೆಲ್ಲ ಸೇರಿ ಸಂಕ್ರಾಂತಿ ಆಚರಣೆ ಮಾಡುವುದರಿಂದ ಒಂದಿಷ್ಟು ಜನ ಅನಾಯಾಸವಾಗಿ ಸಿಗುತ್ತಾರೆನ್ನುವ ಕಾರಣಕ್ಕೆ ಹತ್ತಾರು ಜನರಿಗೆ ಎಳ್ಳು ವಿನಿಮಯ ಮಾಡಲು ಸಾಧ್ಯವಾಗುತ್ತಿದೆ ನನಗೀಗ. ಅದೂ ಕೂಡ ಒಮ್ಮೊಮ್ಮೆ ಬೇಸರವಾದಾಗ ಮೊದಲೆಲ್ಲ ಅಷ್ಟೊಂದು ಮೆರೆದವರು, ಈಗ ಇಷ್ಟೂ ಬೇಡವಾಗುವುದೇ ಎಂದೆನಿಸಿ ಸೋಜಿಗವಾಗುತ್ತದೆ. ಕಾಲಾಯ ತಸ್ಮೈನ್ನಮಃ! ವಯಸ್ಸೂ ಆಯ್ತಲ್ಲ!?