Saturday, November 26, 2022

ಅಪ್ಪನ ನೆರಳಲ್ಲಿ…..ಬದುಕು ಸರಾಗ

Follow Us

 ಇಂದು ಅಪ್ಪಂದಿರ ದಿನ 

ಇಂದು (ಜೂನ್‌ ೨೦) ಅಪ್ಪಂದಿರ ದಿನ. ಬಾಲ್ಯದಲ್ಲಿ ನಮ್ಮ ಕೈಹಿಡಿದು ಸಾಗಿದ್ದ ಅಪ್ಪನಿಗೆ ಇಂದು ವಯಸ್ಸಾಗಿದೆ. ಅಂದು ನಮ್ಮೊಳಗಿನ ಭಯ ತೊಲಗಿಸಿ ಧೈರ್ಯ ತುಂಬಿದ್ದ ಅಪ್ಪನಿಗೆ ಈಗ ನಾವು ವಿಶ್ವಾಸ ಮೂಡಿಸಬೇಕಿದೆ. ಅತಂತ್ರ ಸ್ಥಿತಿ ಕಾಡದಂತೆ ನೋಡದಂತೆ ಭರವಸೆ ತುಂಬಬೇಕಿದೆ.

♦ ಸುಮನಾ
newsics.com@gmail.com

ನೆರಳೇ ಅಂಥದ್ದು….ಆತ್ಮವಿಶ್ವಾಸ ಮೂಡಿಸುತ್ತದೆ, ಎಂದಿಗೂ ಬತ್ತದ ಉತ್ಸಾಹವನ್ನು ತುಂಬುತ್ತದೆ. ಬದುಕಿನ ಸವಾಲುಗಳು ಪದೇ ಪದೆ ಕೆಣಕುವಾಗಲೂ ತಾಳ್ಮೆಯಿಂದಿರಲು ಕಲಿಸುತ್ತದೆ. ಮುಂದೆ ಏನೆಂಬ ಪ್ರಶ್ನೆ ಇಣುಕುವಾಗ ಧೈರ್ಯ ಕಳೆದುಕೊಳ್ಳದಿರಲು ಪ್ರೇರೇಪಿಸುತ್ತದೆ. ಅದು ಅಪ್ಪನ ನೆರಳೆಂಬ ಮಾಯೆ.
ಅಮ್ಮ ಪ್ರೀತಿಯ ದಾಹ ತಣಿಸಿ, ದೃಢವಾಗಿ ಮುನ್ನಡೆಯಲು ಕಲಿಸಿದರೆ, ಅಪ್ಪ ಅದಕ್ಕೆ ಸರಿಯಾದೊಂದು ದಿಕ್ಕು ತೋರುತ್ತಾನೆ. ಅದು ವಿಶ್ವಾಸದ ದಿಕ್ಕು. ಅದರಲ್ಲಿ ಸಾಗಿದರೆ ಬದುಕಿನ ಯಾವೊಂದು ಹಂತವೂ ಕಠಿಣವೆನಿಸಲು ಸಾಧ್ಯವಿಲ್ಲ. ಯಾವುದಾದರೂ ಬಿಂದುವಿನಲ್ಲಿ ಸುಸ್ತಾದರೆ ಅಪ್ಪನ ಛಲವೊಂದೇ ಕಣ್ಮುಂದೆ…
ಬಾಲ್ಯದ ಎಳೆಯ ಹಸ್ತಗಳಿಗೆ ಅಪ್ಪನ ಕೈ ಹಿಡಿತವೊಂದಿದ್ದರೆ ಜೈಂಟ್‌ ವೀಲ್‌ ನಲ್ಲಿ ಕುಳಿತರೂ ಭಯವಿಲ್ಲ. ಜಾತ್ರೆ ಪೇಟೆಯ ಸಂಭ್ರಮ ಕಣ್ಣಿನಲ್ಲಿ, ಮನಸ್ಸಿನಲ್ಲಿ ತುಂಬಿಕೊಳ್ಳುವಂತೆ ಮಾಡುವ ವಾತ್ಸಲ್ಯಮೂರ್ತಿ ಅಪ್ಪ, ಮನೆಯಲ್ಲಿ ಗಣಿತ ಬಿಡಿಸುವಾಗ ಸಾಕ್ಷಾತ್‌ ಶಿಕ್ಷಕನಾಗುತ್ತಾನೆ. ಕೈಯಲ್ಲಿ ಬೆತ್ತ, ಕಣ್ಣುಗಳಲ್ಲಿ ಬಿಗಿತ. ಒಮ್ಮೊಮ್ಮೆ ಪರೀಕ್ಷೆಯ ಸಂಭ್ರಮ ಮುಗಿಲುಮುಟ್ಟಿದಾಗ ಶಾಲೆಗೆ ಮಧ್ಯಾಹ್ನದ ಊಟ ಕೊಡಲು ಶರ್ಟಿಲ್ಲದೆ ಬರೀ ಚಡ್ಡಿಯಲ್ಲಿ ಬಂದರೂ ಬಂದನೇ. ಕಿಲೋಮೀಟರುಗಟ್ಟಲೆ ಸೈಕಲ್‌ ತುಳಿಯುತ್ತಿದ್ದ ಅಪ್ಪನ ಮುಖದಲ್ಲಿ ಸ್ವಲ್ಪವೂ ಸುಸ್ತೆನ್ನುವುದು ಕಾಣುತ್ತಿರಲಿಲ್ಲ. “ಬೇಗ ಊಟ ಮಾಡುʼ ಎಂದು ಊಟದ ಡಬ್ಬಿ ನೀಡಿ ಮತ್ತೆ ಸೈಕಲ್‌ ವಾಪಸ್.‌
ತನ್ನದೆಷ್ಟೇ ಸಮಸ್ಯೆಯಿದ್ದರೂ ಮಕ್ಕಳೊಂದಿಗೆ ಸಮಾಧಾನದೊಂದಿಗೆ ವರ್ತಿಸುವ ಅಪ್ಪನ ಮನಸ್ಸು ಎಂದಿಗೂ ಅರ್ಥವಾಗುವುದೇ ಇಲ್ಲ. ತಾನು ಕುಟುಂಬದಿಂದ ದೂರ ಕಾಯ್ದುಕೊಂಡಂತೆ ಕೆಲವೊಮ್ಮೆ ಮಾತ್ರ ಹಗುರವಾಗಿದ್ದರೆ, ಇನ್ನೆಲ್ಲ ಸಮಯ ಕಠಿಣವಾಗಿ ವರ್ತಿಸುವುದೇ ಹೆಚ್ಚು.


ಅಪ್ಪನ ವರ್ತನೆ, ವಯಸ್ಸು ಅರ್ಥವಾಗುವುದೇ ನಲವತ್ತು ದಾಟಿದ ಬಳಿಕ. ಮಧ್ಯವಯಸ್ಸಿನ ತಲ್ಲಣಗಳು, ಸವಾಲುಗಳು ಎದುರಾಗುವಾಗ ಅಪ್ಪ ದಿನೇ ದಿನೆ ನೆನಪಾಗುತ್ತಾನೆ. ಮೂರ್ನಾಲ್ಕು ಮಕ್ಕಳನ್ನು ಅತಿ ಕಡಿಮೆ ದುಡಿತದಲ್ಲಿ ಅದು ಹೇಗೆ ಏನೂ ಕುಂದಿಲ್ಲದಂತೆ ಸಾಕಿದ್ದನೋ ಎಂದೆನಿಸಿ, ಒಂದು ಮಗನಿಗೇ ಇಷ್ಟು ಸೋಲುತ್ತೇವಲ್ಲ ಎಂಬ ನಾಚಿಕೆ.
ವೈದ್ಯರ ಬಳಿ ಅಪ್ಪನನ್ನು ಚೆಕಪ್ಪಿಗೆಂದು ಕರೆದೊಯ್ದರೆ ಅವರು “ವಿಲ್‌ ಪವರ್ರೇ ನಿಮ್ಮ ಶಕ್ತಿ. ಅದರಿಂದಲೇ ಗಟ್ಟಿಯಾಗಿದ್ದೀರಿʼ ಎಂದು ಶ್ಲಾಘನೆ ಮಾಡಿದರೆ ಅಪ್ಪ ಅಚ್ಚರಿಯ ಮೂಟೆ ಎನಿಸುತ್ತಾನೆ. ಮಕ್ಕಳ್ಯಾರೂ ಜತೆಗಿಲ್ಲದಿದ್ದರೂ ನಿರ್ಲಿಪ್ತಿಯಿಂದ ಬದುಕುವ ಅಪ್ಪನ ಮುಂದೆ ಕುಬ್ಜರೆಂದೆನಿಸುತ್ತದೆ.ಯಾರ ಮುಂದೆಯೂ ಬಾಗದ, ಯಾರನ್ನೂ ಬೇಡದ ಅಪ್ಪ ಕ್ಷಣಕ್ಷಣಕ್ಕೂ ಆತ್ಮದ ಭಾಗವಾಗಿ ನಡೆಸುತ್ತಾನೆ ಎನ್ನುವ ಭಾವ ಬೆಚ್ಚಗಿರುತ್ತದೆ.
ಎಲ್ಲ ಅಪ್ಪಂದಿರಿಗೂ ಒಂದೇ ರೀತಿಯ ಸಾಮರ್ಥ್ಯ, ಶಕ್ತಿ, ತಿಳಿವಳಿಕೆ ಇರಲಿಕ್ಕಿಲ್ಲ. ಮಕ್ಕಳಿಗೆ ಯಾವುದೇ ಮೌಲ್ಯ ನೀಡದ, ಮೌಢ್ಯ ತುಂಬುವ ಅಪ್ಪನೂ ಇರಬಹುದು. ಆದರೂ ಅಪ್ಪ ಅಪ್ಪನೇ. ಮಕ್ಕಳು ಸುಖವಾಗಿ ಬದುಕಬೇಕೆನ್ನುವುದೇ ಅವನ ಯಾವತ್ತಿನ ಇಚ್ಛೆ. ಆತನ ಇಚ್ಛೆಯಂತೆ ನೆಮ್ಮದಿಯಿಂದ ಬದುಕುವತ್ತ ನಮ್ಮ ನಡೆಯಿರಲಿ. ಕಿರಿಕಿರಿಗಳನ್ನು ಕಡಿಮೆ ಮಾಡಿಕೊಂಡು, ಬದುಕನ್ನು ಸಾಧ್ಯವಾದಷ್ಟೂ ಸರಳವನ್ನಾಗಿಸಿಕೊಂಡು, ಅಪ್ಪನಿಗೆ ಖುಷಿಯಾಗುವಂತೆ ಜೀವಿಸೋಣ.
ಅಪ್ಪನಿಗೆ ಇಂದು ವಯಸ್ಸಾಗಿದೆ. ಅಥವಾ ಎಲ್ಲ ಅಪ್ಪಂದಿರಿಗೂ ವಯಸ್ಸಾಗುತ್ತದೆ. ಅವರಿಗೆ ಬೇಕಾದುದು ಇನ್ನೇನೂ ಅಲ್ಲ. ಮಕ್ಕಳ ಒಡನಾಟ, ಅವರ ಅಲ್ಪವಾದರೂ ಆರೈಕೆ. ಅನಿವಾರ್ಯವಾಗಿ ದೂರವಿರಬೇಕಾದರೂ ಅವರ ಕಾಳಜಿ ಮನದಲ್ಲಿರಲಿ. ಅವರೊಂದಿಗೆ ಸಾಧ್ಯವಾದಷ್ಟು ಜತೆಗಿದ್ದು ಧೈರ್ಯ ತುಂಬಬೇಕಾದುದು ಈಗ ನಮ್ಮ ಕರ್ತವ್ಯ.

 

 

ಮತ್ತಷ್ಟು ಸುದ್ದಿಗಳು

vertical

Latest News

ಕಣ್ಣು ತೆರೆದ ಶಿವಲಿಂಗ- ವಿಸ್ಮಯ ನೋಡಲು ಮುಗಿಬಿದ್ದ ಜನ

newsics.com ರಾಮನಗರ: ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದೆ. ಈ ವದಂತಿ ಹಿನ್ನೆಲೆ ಮಾಗಡಿ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ...

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಈ ಫೋಟೋ ಶೂಟ್...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....
- Advertisement -
error: Content is protected !!