Sunday, July 3, 2022

ಪ್ರಪಂಚದಲ್ಲಿ ಚಿತ್ರವಿಚಿತ್ರ ಅಂತ್ಯಸಂಸ್ಕಾರ

Follow Us

ಮೃತದೇಹವನ್ನು ಗೌರವಯುತವಾಗಿ ಸಂಸ್ಕಾರ ಮಾಡುವ ಸಂಸ್ಕೃತಿ ನಮ್ಮದು. ಇತ್ತೀಚೆಗೆ ಕೊರೋನಾ ಸೋಂಕಿನಿಂದ ಮೃತರಾದವರ ದೇಹವನ್ನು ಹೇಗೆಂದರೆ ಹಾಗೆ ಸಂಸ್ಕಾರ ಮಾಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದೇವೆ. ಆದರೆ, ಜಗತ್ತಿನಲ್ಲಿ ಚಿತ್ರ ವಿಚಿತ್ರ ಅಂತ್ಯಸಂಸ್ಕಾರಗಳಿವೆ.
 
newsics.com ಫೀಚರ್ ಡೆಸ್ಕ್

ಅಂತ್ಯಸಂಸ್ಕಾರ, ಅದು ಕೊನೆಯ ಘಟ್ಟ. ಅದೇ ಅಂತಿಮ. ಮೃತದೇಹಕ್ಕೆ ಸಲ್ಲಿಸುವ ಗೌರವ. ದೇಹದಿಂದಾಚೆಗೆ ಸಾಗುವ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸಿ ಆಯಾ ಧರ್ಮ, ಮತಕ್ಕೆ ಅನುಗುಣವಾಗಿ ಸಂಸ್ಕಾರ ಮಾಡಲಾಗುತ್ತದೆ. ಅಂತ್ಯಸಂಸ್ಕಾರ ಮಾಡುವ ಪದ್ಧತಿ ಜಗತ್ತಿನೆಲ್ಲೆಡೆ ಇದೆ. ಆದರೆ, ಈ ಅಂತ್ಯಸಂಸ್ಕಾರ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ.

• ಸತ್ತವರ ಹರಳು ಮಾಡುವ ಕೊರಿಯಾ
ದಕ್ಷಿಣ ಕೊರಿಯಾದಲ್ಲಿ ಮೃತದೇಹಗಳಿಂದ ವಿವಿಧ ಬಣ್ಣಗಳ ಮಣಿ ಮಾಡಿ ಧರಿಸುವುದು ಅಥವಾ ಮನೆಯಲ್ಲಿ ಇಟ್ಟುಕೊಳ್ಳುವ ಫ್ಯಾಷನ್ ಟ್ರೆಂಡ್ ಇತ್ತೀಚೆಗೆ ಅಂದರೆ, 2000ರ ಬಳಿಕ ಆರಂಭವಾಗಿದೆ. ಮೃತದೇಹದ ಬೂದಿ ಅಥವಾ ಮೂಳೆಗಳಿಂದ ಅವರು ನೀಲಿ, ಹಸಿರು, ಗುಲಾಬಿ, ಕಪ್ಪು ಬಣ್ಣದ ಹರಳುಗಳನ್ನು ಮಾಡಿ ಸಂಗ್ರಹಿಸುತ್ತಾರೆ.

• ವಿಚಿತ್ರ ಅಂತ್ಯಸಂಸ್ಕಾರಗಳ ತವರೂರು ಫಿಲಿಪ್ಪೀನ್ಸ್
ಫಿಲಿಪ್ಪೀನ್ಸ್’ನಲ್ಲಿ ಅನೇಕ ಬುಡಕಟ್ಟು ಸಮುದಾಯಗಳಿವೆ. ಅವುಗಳಲ್ಲಿ ಅಪಾಯೊ, ಬೆಂಗ್ಯುಯೆಸ್ಟ್, ಟಿಂಗಿಯಾನ್ ಮೊದಲಾದವು. ಅಪಾಯೊ ಜನಾಂಗದವರು ತಮ್ಮ ಮನೆಯ ಅಡುಗೆಮನೆ ಪ್ರದೇಶದಲ್ಲೇ ಸತ್ತವರನ್ನು ಹೂಳುತ್ತಾರೆ! ಬೆಂಗ್ಯುಯೆಸ್ಟ್ ಬುಡಕಟ್ಟು ಜನ ಸತ್ತವರನ್ನು ಮನೆಯ ಮುಂಬಾಗಿಲ ಎದುರು ಖುರ್ಚಿಯಲ್ಲಿ ಕೂರಿಸಿ ಗೌರವ ತೋರುತ್ತಾರೆ. ಟಿಂಗಿಯಾನ್ ಜನರು ಸಹ ಮೃತದೇಹವನ್ನು ಮಡಿಸಿ ಕೂಡ್ರಿಸಿ ತುಟಿಗಳ ಮಧ್ಯೆ ಸಿಗರೇಟು ಹೊತ್ತಿಸಿ ಇಡುತ್ತಾರೆ!

• ಎತ್ತರದ ಸ್ಥಳದಲ್ಲಿ ಮೃತದೇಹ
ಆಸ್ಟ್ರೇಲಿಯಾದ ಅಬಾರಿಜಿನಲ್ ಎನ್ನುವ ಸಮುದಾಯದ ಜನರು ಮೃತದೇಹವನ್ನು ಎಲೆ ಮತ್ತು ಸಸ್ಯಗಳಿಂದ ಸುತ್ತಿ ಅಟ್ಟದಂಥ ರಚನೆ ಮಾಡಿ ಅದರ ಮೇಲೆ ಇಡುತ್ತಾರೆ. ದೇಹ ಸಂಪೂರ್ಣವಾಗಿ ಕೊಳೆಯುವವರೆಗೂ ಹಾಗೆಯೇ ಇಡಲಾಗುತ್ತದೆ. ಮೃತದೇಹದಿಂದ ಬಂದ ದ್ರವವನ್ನು ಸಣ್ಣ ಮಕ್ಕಳ ಮೇಲೆ ಚಿಮುಕಿಸಲಾಗುತ್ತದೆ. ಸತ್ತವರ ಒಳ್ಳೆಯ ಗುಣಗಳು ಮಕ್ಕಳಿಗೆ ಬರುತ್ತವೆ ಎನ್ನುವುದು ಅವರ ನಂಬಿಕೆ. ಬಳಿಕ, ಮೂಳೆಗಳನ್ನು ಸಂಗ್ರಹಿಸಿ, ಅವುಗಳಿಗೆ ಕೆಂಪು ಬಣ್ಣ ಬಳಿದು ಗುಹೆಗಳಲ್ಲಿ ಇಡುತ್ತಾರೆ. ಆಸ್ಟ್ರೇಲಿಯಾದ ಕೆಲವು ಸಮುದಾಯಗಳಲ್ಲಿ ಮೃತ ವ್ಯಕ್ತಿಯ ಚರಾಸ್ತಿಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಪದ್ಧತಿ ಕಂಡುಬರುತ್ತದೆ. ಸತ್ತವರ ಪ್ರೇತಾತ್ಮ ಮತ್ತೆ ಬಂದು ಬದುಕಿರುವವರಿಗೆ ತೊಂದರೆ ನೀಡಬಾರದು ಎನ್ನುವ ನಿಟ್ಟಿನಲ್ಲಿ ಹೀಗೆ ಮಾಡಲಾಗುತ್ತದೆ.

• ಮೃತದೇಹವನ್ನು ತಿನ್ನುವ ಬುಡಕಟ್ಟು ಜನ!
ಅಮೆಜಾನ್ ಮಳೆ ಕಾಡುಗಳಲ್ಲಿ ವಾಸಿಸುವ ಯನೊಮಾಮಿ ಎನ್ನುವ ಬುಡಕಟ್ಟು ಜನರು ತಮ್ಮ ಕುಟುಂಬದ ಪ್ರೀತಿಪಾತ್ರರು ಮೃತರಾದರೆ ಅವರ ದೇಹದ ಭಾಗಗಳನ್ನು ತಿನ್ನುತ್ತಾರೆ! ಅದು ಸತ್ತವರ ಬಗ್ಗೆ ಅವರು ತೋರುವ ಪ್ರೀತಿ. ಇದನ್ನು ಎಂಡೊಕ್ಯಾನಿಬ್ಯಾಲಿಸಂ ಎಂದು ಕರೆಯಲಾಗುತ್ತದೆ. ಬ್ರೆಜಿಲ್’ ನಲ್ಲಿರುವ ವಾರಿ ಜನಾಂಗದವರೂ ಇಂಥದ್ದೇ ಪದ್ಧತಿ ಅನುಸರಿಸುತ್ತಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರಪಂಚದ ವಿವಿಧ ಕಡೆಗಳಲ್ಲಿ ಇಂಥ ಸಮುದಾಯಗಳಿವೆ.

• ಆಕಾಶದಲ್ಲಿ ಟಿಬೆಟಿಯನ್ನರ ಅಂತ್ಯಸಂಸ್ಕಾರ
ಟಿಬೆಟ್’ನಲ್ಲಿರುವ ಬೌದ್ಧ ಜನಾಂಗದವರು ಮೃತದೇಹಗಳನ್ನು ಪರ್ವತದ ತುದಿಯಲ್ಲಿ ಬಿಟ್ಟುಬರುತ್ತಾರೆ. ಶವವನ್ನು ಕತ್ತರಿಸಲಾಗುತ್ತದೆ. ಅವುಗಳನ್ನು ಹದ್ದುಗಳು ತಿನ್ನುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಧುಗಳು ಮಾತ್ರವೇ ಮೃತದೇಹವನ್ನು ಸ್ಪರ್ಶಿಸಲು ಅವಕಾಶವಿರುತ್ತದೆ. ಸತ್ತವರಿಗೆ ಮುಕ್ತಿ ನೀಡಲು ಅಥವಾ ಪುನರ್ಜನ್ಮವಾಗದೆ ಇರಲು ಇಂಥ ಪದ್ಧತಿಯನ್ನು ಅಲ್ಲಿ ಅನುಸರಿಸಲಾಗುತ್ತದೆ.

• ವಿವಿಧ ವೇಷಗಳಲ್ಲಿ ಮೆರವಣಿಗೆ
ಬಾಲಿ ದ್ವೀಪದಲ್ಲಿ ಮೃತದೇಹವನ್ನು ವಿವಿಧ ರೂಪಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಹೀಗಾಗಿ, ಅಲ್ಲಿ ಬಡವರು ಸತ್ತರೆ ಕುಟುಂಬದವರಿಗೆ ಕಷ್ಟ! ಏಕೆಂದರೆ, ಅಲ್ಲಿ ದೊಡ್ಡ ಮೆರವಣಿಗೆ ಕಡ್ಡಾಯ. ಅದು ವೆಚ್ಚದ ಬಾಬ್ತು. ಶವವನ್ನು ಪೆಟ್ಟಿಗೆಯಲ್ಲಿರಿಸಿ, ಎಮ್ಮೆ ಅಥವಾ ಡ್ರ್ಯಾಗನ್ ವೇಷದ ಬೃಹತ್ ಆಕಾರವನ್ನಿಟ್ಟು ಅಂತ್ಯಸಂಸ್ಕಾರದ ಸ್ಥಳದವರೆಗೂ ಮೆರವಣಿಗೆ ನಡೆಸುತ್ತಾರೆ. ಇಲ್ಲಿ ಸಾಗುವ ಜನರ ಗುಂಪು ನೇರವಾಗಿ ಹೋಗುವುದಿಲ್ಲ, ಅಡ್ಡಾದಿಡ್ಡಿ ಸಂಚರಿಸುತ್ತಾರೆ. ಏಕೆಂದರೆ, ಕೆಟ್ಟ ಶಕ್ತಿಗಳಿಗೆ ಗೊಂದಲವುಂಟು ಮಾಡುವುದು ಅವರ ಉದ್ದೇಶವಾಗಿರುತ್ತದೆ! ಕೊನೆಗೆ ಶವಪೆಟ್ಟಿಗೆಗೆ ಬೆಂಕಿ ಹಚ್ಚಲಾಗುತ್ತದೆ.

• ಟವರ್ ಆಫ್ ಸೈಲೆನ್ಸ್
ಇರಾನ್’ನಲ್ಲಿ ನೆಲೆಸಿರುವ ಅತ್ಯಂತ ಹಳೆಯ ಸಮುದಾಯ ಝೊರೋಸ್ಟ್ರಿಯಾನ್. ಈ ಪಂಥದವರು ಮೃತದೇಹವನ್ನು ಗೂಳಿಯ ಮೂತ್ರದಿಂದ ಶುದ್ಧೀಕರಿಸುತ್ತಾರೆ. ಬಳಿಕ ಲಿನೆನ್ ಬಟ್ಟೆಯಲ್ಲಿ ಸುತ್ತಿ ಟವರ್ ಆಫ್ ಸೈಲೆನ್ಸ್ ಅಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಸೆದು ಬರುತ್ತಾರೆ. ಈ ಸಂಸ್ಕಾರವನ್ನು ಪಳಗಿದವರು ಮಾತ್ರವೇ ಮಾಡುತ್ತಾರೆ. ಮೃತದೇಹ ಹದ್ದುಗಳಿಗೆ ಆಹಾರವಾಗುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!