Tuesday, January 31, 2023

ಗಂಧದಗುಡಿ ಪ್ರಕೃತಿಯ ಸವಿನುಡಿ

Follow Us

ವಿಲನ್‌ಗಳ ಡಿಶುಂ, ಡಿಶುಂ ಇಲ್ಲದೇ, ಪ್ರೇಯಸಿ-ಪ್ರಿಯಕರನ ಮರ ಸುತ್ತಾಟದ ಲಾಲಿತ್ಯಗೀತ ಇಲ್ಲದೇ ಮೇಲಾಗಿ Heroismನ ಯಾವುದೇ ಸಿಡಿಲ್ಮಿಂಚುಗಳ buildup ಇಲ್ಲದೇ ಸರಾಗವಾಗಿ ನೋಡಿಸಿಕೊಂಡು ಹೋಗುವ ‘ಗಂಧದಗುಡಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಯುಗಪ್ರವರ್ತಕ trend ಅನ್ನು ಹುಟ್ಟುಹಾಕಿದೆ.

ನಾ ನೋಡಿದ ಸಿನಿಮಾ

• ಬಿ.ವಿ. ರವಿಕುಮಾರ್,
ಎಚ್ಎಎಲ್, ಬೆಂಗಳೂರು
newsics.com@gmail.com

ದು ಚಿತ್ರವಷ್ಟೇ ಅಲ್ಲ. ಕರ್ನಾಟಕದ ಸಿರಿನಿಸರ್ಗದಿ ಪುನೀತ್ ಜತೆಗೆ ನಿಮ್ಮ ಸುಂದರ ಪಯಣ!
ಬಾಲನಟನಾಗಿ ಬಂದು ಕನ್ನಡಿಗರ ಮನ-ಮನೆ ಗೆದ್ದ ಪುನೀತ್ ರಾಜಕುಮಾರ್ ನಾಡಿನ ಸಾಂಸ್ಕೃತಿಕ ರಾಯಭಾರಿಯ ‘ಯುವರತ್ನ’ನಾಗಿ ಕರ್ನಾಟಕದ ಉದ್ಧಗಲಕ್ಕೂ ಕೋಟ್ಯಂತರ ಜನರ ಹೃದಯ ಗೆ‌ದ್ದ ನಗೆಮೊಗದರಸ. ವಿನಯ ಭೂಷಿತ ಪುನೀತ್ ರ ಮಧುರ ಮಾತುಗಳನ್ನು ಕೊನೆಯ ಬಾರಿ ಭಾವುಕವಾಗಿ ಮಾತ್ರವಲ್ಲದೇ, ದಾರಿದೀಪದಂತೆಯೂ ಕಣ್ತುಂಬಿಕೊಳ್ಳುವ ಅವಕಾಶ ಕನ್ನಡಿಗರಿಗೆ ಅದ್ಭುತ ರೀತಿಯಲ್ಲಿ ದೊರೆತಿರುವುದು ನಿಜಕ್ಕೂ ಒಂದು ಸುಂದರ ಅನುಭೂತಿ.
ಕರ್ನಾಟಕದ ತನ್ಮೂಲಕ ಜಗತ್ತಿನ ಜೀವವೈವಿಧ್ಯ ಸಿರಿ ಕಾನನ-ನದಿ, ಪ್ರಾಣಿಪಶುಪಕ್ಷಿ ಪ್ರಬೇಧಗಳ ಕುರಿತು ಮಾಹಿತಿ ನೀಡುವ, ಅವುಗಳ ಸಂರಕ್ಷಣೆಗೆ ದಿವ್ಯ ಸಂದೇಶ ಸಾರುವ ಪುನೀತ್ ಈ ಚಿತ್ರದ ಮೂಲಕ ಓರ್ವ ಪ್ರವಾದಿಯಾಗಿ, ದೇವದೂತನಾಗಿ ಗೋಚರಿಸಿದರೆ ಅದು ಅತಿಶಯೋಕ್ತಿ ಸಂಗತಿಯೆನಿಸದೇ ವಾಸ್ತವ ಸತ್ಯದ ಕೈಗನ್ನಡಿಯಾಗಿ ಪ್ರಜ್ಞಾವಂತರ ಮನಮುಟ್ಟುವುದು ಈ ಚಿತ್ರದ ಮಹತ್ವ ಮತ್ತು ವೈಶಿಷ್ಟ್ಯ.
ಪ್ರಕೃತಿ ಮತ್ತು ಪ್ರಾಣಿ-ಪಕ್ಷಿಗಳೊಡನಿನ ಮನುಷ್ಯನ ಸಂಬಂಧವನ್ನು ಬಿಂಬಿಸುವ ‘ಗಂಧದಗುಡಿ’, ‘ಮೃಗಾಲಯ’, ‘ರಾಮ ಪರಶುರಾಮ’… ಇತ್ಯಾದಿ ಹಲವು ಮೌಲಿಕ ಚಿತ್ರಗಳನ್ನು ನಿರ್ಮಾಪಕ, ನಟ ಎಂ.ಪಿ.ಶಂಕರ್ ಅಂಥ ಪರಿಸರಪ್ರಿಯರು ನಿರ್ಮಿಸಿ ಪ್ರೇಕ್ಷಕನಿಗೆ ಪರಿಸರ ಜಾಗೃತಿಯ ಸಂದೇಶವನ್ನು 70-80ರ ದಶಕದಲ್ಲೇ ಕಟ್ಟಿಕೊಟ್ಟಿದ್ದಾರೆ. ಈ ಪರಂಪರೆಯ ಮುಂದುವರಿದ ಭಾಗವಾದ ಅನನ್ಯ ಚಿತ್ರವೇ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ‘ಗಂಧದಗುಡಿ’ ಎಂಬ ಶೃಂಗಾರ ದೃಶ್ಯಕಾವ್ಯ!
ವಿಲನ್‌ಗಳ ಡಿಶುಂ, ಡಿಶುಂ ಇಲ್ಲದೇ, ಪ್ರೇಯಸಿ-ಪ್ರಿಯಕರನ ಮರ ಸುತ್ತಾಟದ ಲಾಲಿತ್ಯಗೀತ ಇಲ್ಲದೇ ಮೇಲಾಗಿ Heroismನ ಯಾವುದೇ ಸಿಡಿಲ್ಮಿಂಚುಗಳ buildup ಇಲ್ಲದೇ ಸರಾಗವಾಗಿ ನೋಡಿಸಿಕೊಂಡು ಹೋಗುವ ‘ಗಂಧದಗುಡಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಯುಗಪ್ರವರ್ತಕ trend ಅನ್ನು ಹುಟ್ಟುಹಾಕಿದೆ.
ಚಿತ್ರದ ಆರಂಭದಲ್ಲಿ ಬೆಳ್ಳಿಪರದೆ ಮೇಲೆ ಮೂಡಿಬರುವ ವರನಟ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರ ಬದುಕಿನ ಕೆಲ ವಿಶಿಷ್ಟ ದೃಶ್ಯಗಳು ನಿಜಕ್ಕೂ ಅವರಿಬ್ಬರ ಆತ್ಮಕಥನದ ಕಾದಂಬರಿಯನ್ನು ಪ್ರೇಕ್ಷಕ ಓದುತ್ತಿರುವನೇನೋ ಎಂಬ ದಿವ್ಯಾನುಭವ ನೀಡುತ್ತವೆ. ಆನಂತರ ಶುರು ಕರ್ನಾಟಕದ ರಮ್ಯ ನಿಸರ್ಗದ ಮಡಿಲಲ್ಲಿ ‘ಗಂಧದಗುಡಿ’ ಚಿತ್ರದ ನಿರ್ದೇಶಕ ಅಮೋಘವರ್ಷರ ಜೊತೆಗೆ ಪುನೀತ್ ರ ಮೈಮನಗಳ ಮಧುರ ವಿಹಾರ!
ರುದ್ರರಮಣೀಯ ನಾಗರಹೊಳೆ ಅಭಯಾರಣ್ಯ, ಬಿಳಿಗಿರಿ ರಂಗನ ಕಾಡು, ಪಶ್ಚಿಮ ಘಟ್ಟಗಳ ವೈವಿಧ್ಯತೆ, ಮಲೆನಾಡ ಮಮತೆಯ ಮಡಿಲುಗಳನ್ನು ಹಿತಮಿತವಾಗಿ ಪರಿಚಯಿಸುತ್ತಾ ಸಾಗುವ ಈ ಮಿತ್ರರ ಪಯಣ ನಮ್ಮ ಕಾಡುಗಳ ಸಮೃದ್ಧಿಯನ್ನು, ಅರಣ್ಯ ರಕ್ಷಕ ಸಿಬ್ಬಂದಿಯ ಸೇವೆಯನ್ನು, ನಮ್ಮೊಡನಿರುವ ಸೃಷ್ಟಿಯ ಮೃಗಪಕ್ಷಿಕೀಟಗಳ ಜೈವಿಕ ಮಿಡಿತಗಳನ್ನು ಬಹು ಆಪ್ಯಾಯಮಾನವಾಗಿ ಪ್ರೇಕ್ಷಕರೆದೆಗಳಿಗೆ ನಾಟಿಸುತ್ತಾ ಸಾಗುತ್ತಾರೆ. ಕಾಳಿ ನದಿ ಮತ್ತು ತುಂಗಭದ್ರಾ ನದಿಯ ಐಸಿರಿಯನ್ನಂತೂ ಚಿತ್ರದಲ್ಲಿ ನೋಡುವುದೇ ಒಂದು ಚೆಂದ!
ಕರ್ನಾಟಕದ ಸೌಂದರ್ಯಖನಿಯನ್ನು ಬೊಗಸೆಯಲ್ಲಿ ಮೊಗೆದು ಚಿತ್ರರಸಿಕರ ಕಂಗಳಿಗೆ ಕಾಣಿಕೆ ನೀಡಿದ ಪ್ರತೀಕ್ ಶೆಟ್ಟಿರವರ ಛಾಯಾಗ್ರಹಣ, ನಿಸರ್ಗಮಯ ನೀನಾದ ಎನಿಸುವ ಅಜನೀಶರ ಸಂಗೀತ, ಘಟನಾವಳಿ ಮತ್ತು ಪ್ರವಾಸೀ ದೃಶ್ಯಗಳನ್ನು ಹದವಾಗಿ ಜೋಡಿಸಿರುವ ಸಂಕಲನಕಾರರ editing ಚಿತ್ರದ ಕಸುವಿಗೆ ಕಲಶಪ್ರಾಯದ ಶೋಭೆ ತಂದಿವೆ.
ಪ್ರಕೃತಿ-ಮನುಷ್ಯ-ಸಹಜೀವಿಗಳ ಸುಂದರ ಅನುಬಂಧವನ್ನು ಪುನೀತ್ ಎಂಬ ಮುತ್ತಿನೊಡನೆ ಪೋಣಿಸಿ ತಾನೂ ದಾರವಾಗಿ ಹಾರವಾಗಿ ಭುವನೇಶ್ವರಿಯ ಕೊರಳಿಗೆ ಮಾಲೆಯಾಗಿ ಸಮರ್ಪಿಸಿದ ನಿರ್ದೇಶಕ ಅಮೋಘವರ್ಷ ಅವರ ಕೌಶಲ್ಯತೆ ಶರಣು.. hatsoff.. ಹೇಳದೇ ಇರಲಾಗದು.
ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಅತ್ಯದ್ಭುತ ಚಿತ್ರ ‘ಗಂಧದಗುಡಿ’ ಪುನೀತ್ ರನ್ನು ಪ್ರೀತಿಸುವ ಪ್ರತಿಯೋರ್ವ ವ್ಯಕ್ತಿ ತನ್ನ ಸುಕುಟುಂಬದೊಂದಿಗೆ ನೋಡಲೇಬೇಕಾದ ಮಹೋನ್ನತ ಚಿತ್ರ.
ಚಿತ್ರ ನೋಡಿದ ಮೇಲೆ ನನ್ನಲ್ಲಿ ಮೂಡಿದ್ದು… ಕರ್ನಾಟಕದ ಮನೆ-ಮನೆ ಮಗ ವಿನೀತ ಪುನೀತ್ ಗೆ ಗೌರವ ಸಲ್ಲಿಸಿದೆನೆಂಬ ಸಂತೃಪ್ತ ಭಾವವಷ್ಟೇ ಅಲ್ಲ… ನಮ್ಮ ಪ್ರಕೃತಿಮಾತೆಯನ್ನು… ನಮ್ಮ ಉಸಿರನ್ನು ಗೌರವಿಸಿದ ಸಾರ್ಥಕ ಭಾವ.
ರಾಕಿಂಗ್ ಸ್ಟಾರ್ ಯಶ್ ಹೇಳಿದಂತೆ ”KGF ಚಿತ್ರದ ದಾಖಲೆಗಳನ್ನೇ ‘ಗಂಧದಗುಡಿ’ ಸಿನಿಮಾ ಪುಡಿಗಟ್ಟಬೇಕು.” ತುಂಬಿದ ಗೃಹಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿರುವ ‘ಗಂಧದಗುಡಿ’ಯನ್ನು ದಯಮಾಡಿ ಬಿಡುವು ಮಾಡಿಕೊಂಡು ವೀಕ್ಷಿಸಿ.

ಮತ್ತಷ್ಟು ಸುದ್ದಿಗಳು

vertical

Latest News

ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನ ಗುಜರಿಗೆ: ಗಡ್ಕರಿ

newsics.com ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ಇದೇ ಏ. 1ರಿಂದ ರಸ್ತೆಯಿಂದ ಗುಜರಿಗೆ ಹೋಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ...

ತುಳುವಿಗೆ ರಾಜ್ಯ ಭಾಷೆ ಸ್ಥಾನ: ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ

newsics.com ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...

ಕಾಡುಹಂದಿಯೆಂದು ನಾಯಿ ಮಾಂಸ ಮಾರಿದ ಯುವಕರು

newsics.com ಅಂಕೋಲಾ: ಕಾಡುಹಂದಿ ಮಾಂಸವೆಂದು ನಂಬಿಸಿ ಅಪರಿಚಿತ ಯುವಕರು ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನ್ನ ಮಾರಾಟ ಮಾಡಿರುವ ಘಟನೆ ಅಂಕೋಲಾದ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದೆ. ಅಂಕೋಲಾದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಯುವಕರ ತಂಡ,...
- Advertisement -
error: Content is protected !!