Saturday, April 17, 2021

ಹೋಳಿ ಬದುಕಲ್ಲೂ ರಂಗು ತರಲಿ

ಇಂದು ರಂಗುರಂಗಿನ ಹೋಳಿ ಹಬ್ಬ. ಇಂದು, ನಾಳೆ ಎರಡೂ ದಿನ ಬಣ್ಣವೆರಚಿಕೊಂಡು ಸಂಭ್ರಮಿಸಲಾಗುತ್ತದೆ. ಬಣ್ಣಗಳ ಓಕುಳಿ ನಮ್ಮೆಲ್ಲ ಬದುಕಿನಲ್ಲೂ ರಂಗನ್ನು ತರಲಿ. ಬಣ್ಣಗಳನ್ನು ಬಯಕೆಗಳಿಗೆ ಹೋಲಿಸಲಾಗುತ್ತದೆ. ಬಣ್ಣಗಳ ಮೂಲಕ ಬಯಕೆಗಳನ್ನು ನಿಯಂತ್ರಿಸುವ ಮನೋಸ್ಥೈರ್ಯ ನಮ್ಮೆಲ್ಲರಲ್ಲೂ ಮೂಡಲಿ.

ಸುಮನಾ ಲಕ್ಷ್ಮೀಶ
newsics.com@gmail.com
ಸಂಭ್ರಮದ ಅಲೆ ಎಬ್ಬಿಸುವ ರಂಗುರಂಗಿನ ಬಣ್ಣಗಳು… ಬಣ್ಣಗಳ ರೂಪದಲ್ಲಿ ಹಾರಿ ಖುಷಿ ಮೂಡಿಸುವ ಬಯಕೆಗಳ ಪಿಚಕಾರಿ…ಪರಸ್ಪರ ಬಣ್ಣ ಎರಚಿ ಬದುಕೂ ಬಣ್ಣದಂತೆ ರಂಗಾಗಿರಲಿ ಎನ್ನುವ ಆಶಯ…ಎಲ್ಲಕ್ಕಿಂತ ಮಿಗಿಲಾಗಿ, ಬಣ್ಣಗಳಂಥ ಬಯಕೆಗಳನ್ನು ದಹಿಸುವ ಮೂಲಕ ಅವುಗಳನ್ನು ನಿಯಂತ್ರಿಸುವ ಸಂದೇಶ ನೀಡುವ ಬಣ್ಣಗಳ ಹಬ್ಬ ಹೋಳಿ.
ದೇಶಾದ್ಯಂತ ಇಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಹೋಳಿಯೆಂದರೆ ಮಕ್ಕಳಿಂದ ಹಿಡಿದು ಎಲ್ಲರಲ್ಲೂ ಸಂಭ್ರಮ. ಕೊರೋನಾ ಸೋಂಕಿನ ನಡುವೆ ಹೋಳಿ ಆಚರಣೆಗೆ ಸ್ವಲ್ಪ ನಿರ್ಬಂಧವಿದೆಯಾದರೂ ಖಾಸಗಿಯಾಗಿ ಆಚರಿಸಿಕೊಳ್ಳಲಡ್ಡಿಯಿಲ್ಲ. ಕೆಲವೆಡೆ ವಸಂತೋತ್ಸವವನ್ನಾಗಿಯೂ ಹೋಳಿಯನ್ನು ಆಚರಿಸಲಾಗುತ್ತದೆ. ನಾಳೆಯಿಂದ ವಸಂತ ಮಾಸದ ಆರಂಭ. ಪ್ರಕೃತಿ ಚಳಿಗಾಲದ ಆಲಸ್ಯ ಕಳೆದುಕೊಂಡು ಹಸಿರನ್ನು ಮೈದುಂಬಿಸಿಕೊಳ್ಳುತ್ತಿದ್ದಾಳೆ. ಇನ್ನೇನು, ಹೊಸತನ್ನು ಹೊತ್ತ ಹೊಸ ವರ್ಷವೂ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ.
ಹೋಳಿ ಇತಿಹಾಸ
ವಿಷ್ಣುಭಕ್ತನಾದ ತನ್ನ ಮಗ ಪ್ರಹ್ಲಾದನನ್ನು ಸಾಯಿಸಲು ತಂದೆ ಹಿರಣ್ಯಕಶಿಪು ಪ್ರಯತ್ನಿಸುತ್ತಿರುತ್ತಾನೆ. ಹೋಳಿಕಾ ಎಂಬ ಸಹೋದರಿಯನ್ನು ಪ್ರಹ್ಲಾದನ ಜತೆಗೆ ಅಗ್ನಿಪ್ರವೇಶ ಮಾಡುವಂತೆ ಹೇಳುತ್ತಾನೆ. ಆಕೆ ಅಗ್ನಿಯಿಂದ ಸುಡದೆ ಇರುವಂಥ ವರ ಪಡೆದುಕೊಂಡಿರುತ್ತಾಳೆ. ಆದರೆ, ಆಕೆ ತನ್ನ ಮಡಿಲಲ್ಲಿ ಪ್ರಹ್ಲಾದನನ್ನು ಕೂರಿಸಿಕೊಂಡು ಸುತ್ತ ಅಗ್ನಿ ಜ್ವಾಲೆ ಏಳುವಂತೆ ಮಾಡಿಕೊಂಡಾಗ ವಿಷ್ಣು ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಹೋಳಿಕಾ ಅಗ್ನಿಗೆ ಆಹುತಿಯಾಗುತ್ತಾಳೆ. ಈ ದಿನವೇ ಹೋಳಿ ಎನ್ನಲಾಗುತ್ತದೆ. ಅಂದರೆ, ದುಷ್ಟಶಕ್ತಿಯ ನಾಶ, ಶಿಷ್ಟತನದ ರಕ್ಷಣೆ. ಯಾವುದೇ ವಿಶೇಷ ಶಕ್ತಿಯನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಸಲ್ಲ ಎನ್ನುವ ಸಂದೇಶ.
ಅನಂಗನಾದ ಕಾಮ
ಶಿವ ಕಾಮನನ್ನು ದಹಿಸಿದ ದಿನವೂ ಇದೇ. ತಪಸ್ಸನ್ನಾಚರಿಸುತ್ತಿರುವ ಶಿವನನ್ನು ಸಲ್ಲದ ಹೊತ್ತಿನಲ್ಲಿ ಬಂದು ಅಡ್ಡಪಡಿಸಿದ ಕಾಮದೇವ ಸುಟ್ಟುಭಸ್ಮವಾಗುತ್ತಾನೆ. ಬಳಿಕ, ರತಿದೇವಿಯ ಕೋರಿಕೆಯಂತೆ ಆಕೆಗೆ ಮಾತ್ರ ಸಶರೀರಿಯಾಗಿ ಕಾಣಿಸಿಕೊಳ್ಳುವ ವರ ಪಡೆದುಕೊಳ್ಳುತ್ತಾನೆ ಕಾಮದೇವ. ಕಾಮದೇವ ಎಂದರೆ ಮನುಷ್ಯನಲ್ಲಿರುವ ಕಾಮ. ಕಾಮ ಮನುಷ್ಯನ ಎಲ್ಲ ಬಯಕೆಗಳನ್ನು ಪ್ರತಿನಿಧಿಸುತ್ತಾನೆ. ತಪಸ್ಸನ್ನು ಆಚರಿಸುತ್ತಿರುವ ಸಮಯದಲ್ಲಿ ಅಂದರೆ, ಹೊತ್ತಲ್ಲದ ಹೊತ್ತಿನಲ್ಲಿ ಬಯಕೆಗಳ ಅಡಚಣೆ ಸಲ್ಲದು. ಆಗ ಅವುಗಳನ್ನು ದಹಿಸಲೇಬೇಕು ಎನ್ನುವುದೂ ಒಂದು ಸಂದೇಶ.
ಉತ್ತರ ಭಾರತದಲ್ಲಿ ಹತ್ತು ತಲೆಯ ರಾವಣನನ್ನು ದಹನ ಮಾಡುವ ಆಚರಣೆಯೂ ಚಾಲ್ತಿಯಲ್ಲಿದೆ. ಇದೂ ಸಹ ದುಷ್ಟಶಕ್ತಿಯನ್ನು ನಿಗ್ರಹಿಸಬೇಕೆನ್ನುವ ಆಶಯ ಹೊತ್ತಿರುವಂಥದ್ದು.
ಬದುಕಿಗೆ ಬೇಕು ಸಂಯಮ
ಹೀಗೆ, ಹೋಳಿ ಹಬ್ಬ ರಂಗುರಂಗಿನ ಬಣ್ಣಗಳೊಂದಿಗೆ ಸಂತಸ ನೀಡುತ್ತಲೇ ಬದುಕಿಗೆ ಇರಬೇಕಾದ ಸಂಯಮದ ಕುರಿತೂ ತಿಳಿಸಿಕೊಡುತ್ತದೆ. ಕಾಮದಹನದ ಸಂದೇಶವೇ ಸಂಯಮ. ಬಯಕೆಗಳ ನಿಯಂತ್ರಣ. ಮಾನವನ ಬದುಕು ಬಯಕೆಗಳಿಂದ ನಿಯಂತ್ರಿಸಲ್ಪಡುತ್ತದೆ. ಇಂದ್ರಿಯಗಳು ಬಯಕೆಗಳನ್ನು ಪೂರೈಸುವ ಮಾರ್ಗಗಳು. ಆದರೆ, ಅವುಗಳನ್ನು ಅವುಗಳ ಇಷ್ಟಕ್ಕೇ ಬಿಟ್ಟುಬಿಟ್ಟರೆ ಮನುಷ್ಯನ ಬದುಕಿಗೆ ಅರ್ಥವೇ ಇಲ್ಲದಂತೆ ಮಾಡಿಬಿಡುವ ಶಕ್ತಿ ಹೊಂದಿವೆ. ಕೇವಲ ಬಯಕೆಗಳನ್ನು ಪೂರೈಸುತ್ತ ಮನುಷ್ಯ ಹೈರಾಣಾಗಿಬಿಡುತ್ತಾನೆ. ಅದರ ಬದಲು, ತನ್ನನ್ನು ನಿಯಂತ್ರಿಸುವ ಆ ಬಯಕೆಗಳನ್ನು ಮನುಷ್ಯ ಕಟ್ಟಿಹಾಕಬೇಕು. ಅವುಗಳನ್ನು ನಿಯಂತ್ರಿಸಬೇಕು. ಇದಕ್ಕೆ ಧೃಢವಾದ ಚಿತ್ತ ಬೇಕು. ಇಂಥದ್ದೊಂದು ಸಂದೇಶ ಹೊತ್ತಿದೆ ಕಾಮದಹನದ ಪರಿಕಲ್ಪನೆ. ಈ ನಿಟ್ಟಿನಲ್ಲಿ ಹೋಳಿ ಎನ್ನುವುದು ಮಹತ್ವದ ಸಂದೇಶ ನೀಡುವ ಹಬ್ಬವಾಗಿದೆ.
ಎಚ್ಚರಿಕೆ ಅಗತ್ಯ
ಹೋಳಿಯಾಡುವಾಗ ಆರೋಗ್ಯದ ಕುರಿತು ಎಚ್ಚರಿಕೆ ಅಗತ್ಯ. ಅರಿಶಿಣ-ಅಕ್ಕಿಹಿಟ್ಟು ಸೇರಿಸಿದ ಸಹಜ ಬಣ್ಣದ ಬಳಕೆಗೆ ಆದ್ಯತೆ ನೀಡಬೇಕು. ಕೃತಕ ಬಣ್ಣಗಳು, ಕಣ್ಣು, ಚರ್ಮಕ್ಕೆ ಹಾನಿಯುಂಟುಮಾಡುತ್ತವೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!