ಮಾನವರೇ ಪುಸ್ತಕಗಳಾಗಿ ನಮಗೆ ಕತೆ ಹೇಳಲು ಆರಂಭಿಸಿದರೆ ಎಷ್ಟು ಚೆನ್ನ! ಡೆನ್ಮಾರ್ಕಿನಲ್ಲಿರುವ ಈ ಗ್ರಂಥಾಲಯ ನಮಗೆ ಇದೇ ಅನುಭವ ನೀಡುತ್ತದೆ. ‘ಮಾನವ ಪುಸ್ತಕ’ಗಳು ಇಲ್ಲಿ ಓದುಗರಿಗಾಗಿ ತಮ್ಮ ಬದುಕಿನ ಅನುಭವ ಕಥಾನಕಗಳನ್ನು ಬಿಚ್ಚಿಡುತ್ತವೆ. ಆ ಮೂಲಕ, ನಮ್ಮಲ್ಲಿ ಕೋಶ ಓದಿದ ಸಂಪೂರ್ಣತೆಯನ್ನು ತುಂಬುತ್ತವೆ.
newsics.com Features Desk
ದೇ ಶ ಸುತ್ತು, ಕೋಶ ಓದು ಎನ್ನುವುದು ಹಳೆಯ ಗಾದೆ. ಹಳೆಯದಾರೇನು, ಇದು ಇಂದಿಗೂ ಎಂದೆಂದಿಗೂ ಸಲ್ಲುವ ಮಾತು. ದೇಶ ಸುತ್ತುವ, ಕೋಶ ಓದುವ ಅನುಭವಗಳೇ ವಿಭಿನ್ನ. ಮನುಷ್ಯ ತನ್ನ ಮಿತಿಗಳನ್ನು ಅರ್ಥ ಮಾಡಿಕೊಳ್ಳುತ್ತ, ಸ್ವಾರ್ಥದಿಂದ ದೂರವಾಗಿ, ಪೂರ್ವಗ್ರಹಗಳಿಂದ ಮುಕ್ತಿ ಪಡೆಯುತ್ತ ಸಾಗುವ ಪ್ರಕ್ರಿಯೆ ಅದು. ಸಣ್ಣತನಗಳನ್ನು ಬಿಟ್ಟು ಔನ್ನತ್ಯಕ್ಕೇರುವ ಸಾಧ್ಯತೆಯಿರುವುದು ಬಹುಶಃ ಈ ಎರಡು ಕ್ರಿಯೆಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಇಂಥದ್ದೇ ಸಂಚಲನ ಇನ್ನೊಬ್ಬರ ಬದುಕಿನ ಕತೆಗಳನ್ನು ಕೇಳಿದಾಗಲೂ ಆಗಬಹುದು. ಅದು ಸಹ ಇನ್ನೊಂದು ರೀತಿಯಲ್ಲಿ ಅರಿತುಕೊಳ್ಳುವ, ಓದುವ ಕ್ರಿಯೆಯೇ. ಇಂಥ ಅನುಭವ ನೀಡುವ ಗ್ರಂಥಾಲಯವೊಂದು ಡೆನ್ಮಾರ್ಕಿನಲ್ಲಿದೆ ಎಂದು ಕೇಳಿದರೆ ಅಚ್ಚರಿಯಾಗಬಹುದು!
ಮಾತಾಡಿ, ಪ್ರಶ್ನೆ ಕೇಳಿ…
ಅರ್ಥವಾಗಲಿಲ್ಲವೇ? ನಾವು ಯಾವುದಾದರೂ ಗ್ರಂಥಾಲಯಕ್ಕೆ ಹೋದಾಗ ಏನು ಮಾಡುತ್ತೇವೆ? ನಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಬರುತ್ತೇವೆ ಅಥವಾ ಅಲ್ಲಿಯೇ ಕುಳಿತು ಓದುತ್ತೇವೆ. ಇದೂ ಸಹ ಹೆಚ್ಚು-ಕಡಿಮೆ ಅಂಥದ್ದೇ. ಆದರೆ, ಇಲ್ಲಿ ವ್ಯಕ್ತಿಗಳೇ ನೇರವಾಗಿ ತಮ್ಮ ಬದುಕಿನ ಕತೆಗಳನ್ನು ಹೇಳುತ್ತಾರೆ. ಯಾವ ಮಾದರಿಯ ಅನುಭವ ಕಥಾನಕಗಳು ನಿಮಗೆ ಬೇಕಾಗಿದೆಯೋ ಅಂಥವರನ್ನು ಆಯ್ಕೆ ಮಾಡಿಕೊಂಡರೆ ಆಯ್ತು. ಅರ್ಧ ಗಂಟೆಯಲ್ಲಿ ತಮ್ಮ ಬದುಕಿನಲ್ಲಿ ಅನುಭವಿಸಿದ ಸಮಸ್ಯೆ, ಅವಮಾನ, ಏಕಾಂಗಿತನ, ಎಲ್ಲವನ್ನೂ ಎದುರಿಸಿ ಮನುಷ್ಯನಾದ ಎಲ್ಲ ಘಟನಾವಳಿಯನ್ನೂ ತೆರೆದಿಡುತ್ತಾರೆ. ಎಲ್ಲೋ ಅನಾಥನಾಗಿ ಹುಟ್ಟಿ ಇಂದು ನಾಲ್ಕಾರು ಜನರಿಗೆ ಬೇಕಾದವರಾಗಿರಬಹುದು, ದೇಶ ಬಿಟ್ಟು ಬಂದವರಿರಬಹುದು, ಚಿಕ್ಕಂದಿನಲ್ಲೇ ಪಾಲಕರನ್ನು ಕಳೆದುಕೊಂಡು ಅನುಭವಿಸಿದ ಪರಿಪಾಟಲುಗಳಿರಬಹುದು ಹೀಗೆ ಇಂಥವೆಲ್ಲ ಅನುಭವಗಳನ್ನು ಹೊಂದಿರುವ ವಾಲಂಟಿಯರುಗಳು ಅಲ್ಲಿ ನಮಗಾಗಿಯೇ ಇರುತ್ತಾರೆ. ನಮ್ಮಂಥ ಓದುಗರು ಮೊದಲೇ ನಿಗದಿಪಡಿಸಿದ “ಮಾನವ ಪುಸ್ತಕ’ಗಳೊಂದಿಗೆ ಅಲ್ಲಿ ಕುಳಿತು ಮಾತುಕತೆ ನಡೆಸಬಹುದು, ಪ್ರಶ್ನೆ ಕೇಳಬಹುದು, ಅವರ ಅನುಭವದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬಹುದು.
ಭಾರತದಲ್ಲೂ ಇಂಥ ಪ್ರಯತ್ನ ಹೆಚ್ಚಲಿ…
ಹೌದು, “ಮಾನವ ಪುಸ್ತಕ’ದಿಂದ ನನ್ನನ್ನು ನಾನು ಗುರುತಿಸಿಕೊಳ್ಳಲು ಸಾಧ್ಯವಾಯ್ತು ಎನ್ನುವುದು ಅಲ್ಲಿಗೆ ಭೇಟಿ ನೀಡಿದ ಬಹುತೇಕರ ಮಾತು. ಜೀವನದಲ್ಲಿ ಎಲ್ಲವನ್ನೂ ನಾವೇ ಅನುಭವಿಸಲು ಆಗುವುದಿಲ್ಲವಲ್ಲ, ಅನುಭವಿಸಿದವರ ಕಥಾನಕಗಳಿಂದ ನಮಗೆ ಎಷ್ಟೋ ಬಗೆಯ ಪಾಠಗಳು ಸಿಗಬಹುದು, ಹೊಳಹುಗಳು ದಕ್ಕಬಹುದು, ಪರಿಹಾರಗಳೂ ಸಿಗಬಹುದು. ಎಲ್ಲರ ಜೀವನವೂ ಒಂದಿಷ್ಟು ಸಂದೇಶಗಳನ್ನು ನೀಡಬಲ್ಲವು, ಅಲ್ಲವೇ? ಅಂದ ಹಾಗೆ, ಇದು ಹೊಸ ಪ್ರಯತ್ನವೇನೂ ಅಲ್ಲ. 2000ರಿಂದಲೇ ಶುರುವಾದ ಪ್ರಯತ್ನವಿದು. ರೋನಿ ಅಬೆರ್ಗೆಲ್ ಮತ್ತು ಡ್ಯಾನಿ, ಆಸ್ಮಾ ಮೌನಾ, ಕ್ರಿಸ್ಟೋಫರ್ ಎರಿಕ್ಸನ್ ಎಂಬುವವರು ಆರಂಭಿಸಿದ ಈ ಮಾನವ ಗ್ರಂಥಾಲಯಕ್ಕೆ ಈಗ ಸಾಕಷ್ಟು ಬೇಡಿಕೆ ಕುದುರಿದೆ. (ಮಾಹಿತಿಗೆ ನೋಡಿ: https://humanlibrary.org)
ಭಾರತದಲ್ಲೂ ಇಂಥ ಪ್ರಯತ್ನ ಸಣ್ಣದಾಗಿ ಆರಂಭವಾಗಿದೆ. ಇಲ್ಲಂತೂ ಅನುಭವ ಕಥಾನಕಗಳು ಸಮೃದ್ಧವಾಗಿ ಸಿಗುತ್ತವೆ. “ಮಾನವ ಪುಸ್ತಕ’ಗಳಾಗಬಲ್ಲ ವಾಲಂಟಿಯರ್’ಗಳಿಗೂ ಖಂಡಿತವಾಗಿ ಕೊರತೆಯಾಗದು.