Thursday, August 18, 2022

‘ಬಾನುಲಿ’ಯೇ ಪ್ರಸಾರ ಸಾಮ್ರಾಜ್ಯದ ಸಾಮ್ರಾಟ

Follow Us

ಶಾಸ್ತ್ರೀಯ ಸಂಗೀತ ಇರಲಿ ಭಾವಗೀತೆಗಳು ಇರಲಿ ನಾಟಕ ರೂಪಕ ಇಂತಹ ಪ್ರಕಾರಗಳನ್ನು ವ್ಯವಸ್ಥಿತ ಕಲೆಯಾಗಿ ಸಾರ್ವಜನಿಕರಲ್ಲಿ ಮನೆ ಮಾತು ಮಾಡಿ ಅರಳಿಸಿದ್ದು ಆಕಾಶವಾಣಿ. ಪ್ರಸಾರ ಮಾಧ್ಯಮ ಸಾಮ್ರಾಜ್ಯದಲ್ಲಿ ಆಕಾಶವಾಣಿಯೇ ಜನಕ, ಮತ್ತು ಜನನಿ. ಅಭಿರುಚಿ, ಘನತೆ ವಿಚಾರಕ್ಕೆ ಬಂದರೆ ಸಾಮ್ರಾಟ.

ಧ್ವನಿಬಿಂಬ 30


♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com
ಜುಲೈ 23, ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ದಿನವನ್ನು ಆಚರಿಸುತ್ತೇವೆ. ಭಾರತದಲ್ಲಿ ರೇಡಿಯೋ ಸೇವೆ ಸಾಕಾರಗೊಂಡ ದಿನ.
ಇಸವಿ 1900 ರ ಆರಂಭ.
ರೇಡಿಯೋ ಆವಿಷ್ಕಾರವಾಗಿ ಕೆಲವೇ ವರ್ಷಗಳಾಗಿದ್ದವು.
ವಿಶ್ವದ ಐದಾರು ದೇಶಗಳಲ್ಲಿ ಪ್ರಯೋಗಾತ್ಮಕವಾಗಿ ರೇಡಿಯೋ ಪ್ರಸಾರಗಳು ನಡೆಯುತ್ತಿದ್ದವು.
ನಿಧಾನವಾಗಿ ಜಗತ್ತು ರೇಡಿಯೋ ಎಂಬ ವಿಸ್ಮಯಕ್ಕೆ ತೆರೆದುಕೊಂಡು ಸಾಗಿತು.
ಎಲ್ಲೋ ಮಾತನಾಡಿದ್ದು ಮತ್ತೆಲ್ಲೋ ಕೇಳಿಸುತ್ತದೆ!
ಎಲ್ಲೋ ಯಾರೋ ಹಾಡಿದ ಹಾಡು ನಿಮ್ಮ ಮನೆಯಲ್ಲಿ ಕೇಳಿಸುತ್ತದೆ!
ಎಂಥಾ ಅದ್ಭುತ!
ಎಂಥಾ ಮಾಯೆ!

ರೇಡಿಯೋ ಮಾಯೆಗೆ ಒಳಗಾಗದವರೇ ಇಲ್ಲ ಎನ್ನಬಹುದು. ರೇಡಿಯೋ ಒಂದು ಕಲ್ಪನೆಯ ಲೋಕಕ್ಕೆ ಸೆಳೆದುಕೊಂಡು ಹೋಗುತ್ತದೆ.ಅದೇ ರೇಡಿಯೋದ ಚುಂಬಕ ಶಕ್ತಿ.
1923ರ ಸುಮಾರಿಗೆ ಭಾರತದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಕ್ಲಬ್‌ಗಳು ಸಣ್ಣ ಪ್ರಮಾಣದ ಟ್ರಾನ್ಸ್ಮಿಟರ್‌ಗಳ ಸಹಾಯದಿಂದ ಪ್ರಸಾರ ಕಾರ್ಯವನ್ನು ನಡೆಸುತ್ತಿದ್ದವು. ಇವುಗಳನ್ನು ಪುನರ್ ರೂಪಿಸಿ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿ ಎಂಬ ನಾಮಧೇಯದಲ್ಲಿ ಹೊಸ ರೂಪ ಬಂದದ್ದು 1927ರಲ್ಲಿ .
ಮುಂದೆ ಇದೇ IBC ಬ್ರಿಟಿಷ್ ಸರ್ಕಾರದ ಅಡಿ ಆಲ್ ಇಂಡಿಯಾ ರೇಡಿಯೋ ಆಗಿದ್ದು 1936ರಲ್ಲಿ.
ತನ್ನದೇ ಭಾರತೀಯ ಹೆಸರಿನ ಜತೆ ಪ್ರಸಾರ ಪ್ರಚಾರವಾಗಬೇಕು ಎಂದು ಚರ್ಚೆಯಾದಾಗ, 1956 ರಲ್ಲಿ “ಆಕಾಶವಾಣಿ” ಎಂಬ ನೂತನ ನಾಮಕರಣದೊಂದಿಗೆ ಮನೆ ಮನೆಗೆ ಪ್ರವೇಶಿಸಿತು ಭಾರತೀಯ ಬಾನುಲಿ.

ಆಗಿನಿಂದ ಇವತ್ತಿನವರೆಗೆ ಹತ್ತಿರ ಹತ್ತಿರ 95 ವರ್ಷಗಳು!
ಸ್ವಾತಂತ್ರ್ಯಾ ನಂತರ ಕಾಲ ಕಾಲಕ್ಕೆ ಎಲ್ಲ ರೀತಿಯ ಏರುಪೇರುಗಳು, ಬದಲಾವಣೆಗಳು ಎಲ್ಲವನ್ನೂ ಮೈಗೂಡಿಸಿಕೊಳ್ಳುತ್ತಾ ಇಂದಿಗೂ ಅತ್ಯಂತ ವಿಶ್ವಾಸಾರ್ಹ ಮಾಧ್ಯಮವಾಗಿ ಭಾರತದ ಆಕಾಶವಾಣಿ ಎಲ್ಲರ ಕಿವಿ ತುಂಬುತ್ತಿದೆ.

“ಇದು ಆಕಾಶವಾಣಿ”
ಎಂದ ಕೂಡಲೇ ಜನ ಅಭಿಮಾನದಿಂದ ಕಿವಿ ಅರಳಿಸಿ ತನ್ಮಯತೆಯಿಂದ ಕಣ್ಣುಮುಚ್ಚಿಕೊಳ್ಳುತ್ತಾರೆ.
ಶಾಸ್ತ್ರೀಯ ಸಂಗೀತ ಇರಲಿ ಭಾವಗೀತೆಗಳು ಇರಲಿ ನಾಟಕ ರೂಪಕ ಇಂತಹ ಪ್ರಕಾರಗಳನ್ನು ವ್ಯವಸ್ಥಿತ ಕಲೆಯಾಗಿ ಸಾರ್ವಜನಿಕರಲ್ಲಿ ಮನೆ ಮಾತು ಮಾಡಿ ಅರಳಿಸಿದ್ದು ಆಕಾಶವಾಣಿ.
ದೇಶದ ಮೂಲೆ ಮೂಲೆಗೆ ತಲುಪುತ್ತ ಮನೋರಂಜನೆ ಮಾಹಿತಿ ಶಿಕ್ಷಣವನ್ನು ಅತ್ಯಂತ ಘನತೆಯಿಂದ ಜನರಿಗೆ ತಲುಪಿಸುತ್ತಿರುವುದು ಆಕಾಶವಾಣಿ,
ಸಾಹಿತ್ಯವನ್ನು ಕೂಡ ಆಕಾಶವಾಣಿ ಪ್ರಚುರಪಡಿಸಿದೆ. ಆಕಾಶವಾಣಿಯಲ್ಲಿ ಮೂಡಿಬಂದ ಸಾಹಿತ್ಯ ಬಾನುಲಿ ಸಾಹಿತ್ಯ ಎಂದೇ ಪರಿಗಣಿಸಲ್ಪಟ್ಟಿದೆ. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ ಪ್ರಸಾರಕರು ಲೇಖಕರಿಗೆ, ಕವಿಗಳಿಗೆ, ನಿರ್ದಿಷ್ಟ ವಿಷಯಗಳನ್ನು ನೀಡುತ್ತಾ ಇಷ್ಟು ಸಮಯಕ್ಕೆ ಇಷ್ಟು ಬರೆಯಬೇಕು ಎಂಬ ಸಮಯ ಮಿತಿಯಲ್ಲಿ ಬರೆಸುತ್ತ ಲೇಖಕರನ್ನು, ಶ್ರೋತೃಗಳನ್ನು, ಕಲಾವಿದರನ್ನು ಬೆಳೆಸಿದರು.

ಧ್ವನಿ ಪರೀಕ್ಷೆ, ಸಂಗೀತದಲ್ಲಿ ಶ್ರೇಣಿ, ಅಂದರೆ “ಗ್ರೇಡಿಂಗ್” ನೀಡುವಿಕೆ, ನಾಟಕ ಕಲಾವಿದರ ಧ್ವನಿ ಪರೀಕ್ಷೆ, ಶ್ರೇಣಿ ನೀಡುವಿಕೆ ಇವೆಲ್ಲವನ್ನೂ ಹುಟ್ಟು ಹಾಕಿದ್ದು ಆಕಾಶವಾಣಿ.
ಕವಿಗಳಿಗೆ ಪರಿಕಲ್ಪನೆಗಳನ್ನು ನೀಡಿ
ಬರೆಸಿದವರು ಆಕಾಶವಾಣಿ ಪ್ರಸಾರಕರು.
ಯುವಕರು, ಮಕ್ಕಳು, ಮಹಿಳೆಯರು, ಕೃಷಿಕರು, ಕಾರ್ಮಿಕರು, ಹಿರಿಯ ನಾಗರೀಕರು ಹೀಗೆ ನಿರ್ದಿಷ್ಟ ವಯೋಮಾನಕ್ಕೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ನೀಡಿ ತನ್ನ ಶ್ರೋತೃ ಯಾರು ಎಂಬುದನ್ನು ಸ್ಪಷ್ಟವಾಗಿ ಗುರುತಿಸಿತು.
ತಲುಪಬೇಕಾದವರನ್ನು ಸರಿಯಾಗಿ ತಲುಪಿತು.
ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಆಕಾಶವಾಣಿಯದ್ದೇ ಸದಾ ಮೇಲುಗೈ.
ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ ಯಾರೇ ಆದರೂ ತಕ್ಕ ಸಂಭಾವನೆಯನ್ನು ಪಡೆಯುತ್ತಾರೆ. ಇಂದಿಗೂ ಈ ಪರಿಪಾಠ ಮುಂದುವರೆದಿದೆ. ಬೇರೆ ಯಾವುದೇ ಮಾಧ್ಯಮದಲ್ಲೂ ಇದನ್ನು ಕಾಣಲು ಸಾಧ್ಯವಾಗದು.

ಇಂದು ಮಾಧ್ಯಮ ಸ್ಫೋಟವಾಗಿದೆ.
ಆಕಾಶವಾಣಿ ಕೇಳುವವರಿದ್ದಾರೆಯೇ ಎಂಬ ಪ್ರಶ್ನೆ ಹಲವರಿಗೆ ಮೂಡಬಹುದು.
ಖಂಡಿತ ಕೇಳುಗರಿದ್ದಾರೆ.
ಮನೋಧರ್ಮ ವಯೋಧರ್ಮ ಸಾಂಸ್ಕೃತಿಕ ಲೋಕದ ತಂತ್ರಜ್ಞಾನ ಬದಲಾಗಿದೆ.
ಪ್ರಸಾರ ಭಾರತೀಯ ಮಹಾನಿರ್ದೇಶಕರಾದ ವೇಣುಧರ ರೆಡ್ಡಿ ಅವರು ಹೇಳುತ್ತಾರೆ:
“ನಾವು ಇಂದಿಗೂ ವಿಶ್ವಾಸಾರ್ಹ ಮಾಧ್ಯಮವಾಗಿ ಶ್ರೋತೃಗಳ ಮಧ್ಯೆ ಇದ್ದೇವೆ.
ಬದಲಾದ ತಂತ್ರಜ್ಞಾನದಲ್ಲಿ ನಾವು ಬದಲಾಗಿದ್ದೇವೆ. ಹೊಸ ಕಾರ್ಯಕ್ರಮಗಳನ್ನು ನಾವು ನೀಡುತ್ತಿದ್ದೇವೆ. ವಿಷಯಗಳನ್ನು ಸೂಕ್ತವಾಗಿ ವರ್ಗೀಕರಣ ಮಾಡಿ ಜನರಿಗೆ ಬೇಕಾದದ್ದನ್ನು ನೀಡುತ್ತಾ ಉತ್ತಮ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಸಾಗಿದ್ದೇವೆ. ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಈಗ ಆಕಾಶವಾಣಿಯನ್ನು ಆಲಿಸಬಹುದು. News on air ಆ್ಯಪ್ ತುಂಬಾ ಜನಪ್ರಿಯವಾಗಿದೆ” ಎಂದು.
“ಅಷ್ಟೇ ಅಲ್ಲ, ಭಾರತದ ಎಲ್ಲಾ ಆಕಾಶವಾಣಿಗಳ ಮಹಾ ಸಾಂಸ್ಕೃತಿಕ ಆಸ್ತಿಯನ್ನು ಸಂರಕ್ಷಿಸಿ ಇಡಲು ಬೃಹತ್ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮಗಳನ್ನು ಅಪ್ಲೋಡ್ ಮಾಡಿ ಇಂದಿನ ಕೇಳುಗರಿಗೆ ಅಂದಿನ ದಿನಗಳ ವಿಚಾರಗಳನ್ನು ತಿಳಿಸಲಾಗುತ್ತಿದೆ” ಎನ್ನುತ್ತಾರೆ.
ರವೀಂದ್ರನಾಥ ಟ್ಯಾಗೋರ್ ಅವರ ಧ್ವನಿ ಆಕಾಶವಾಣಿಯಲ್ಲಿ ಅಲ್ಲದೆ ಇನ್ನೆಲ್ಲಿ ಕೇಳಲು ಸಾಧ್ಯ?
ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ಜವಾಹರ್ ಲಾಲ್ ನೆಹರು, ವಲ್ಲಭಾಯಿ ಪಟೇಲ್, ಬಿಆರ್ ಅಂಬೇಡ್ಕರ್, ಮುಂತಾದ ಮಹನೀಯರ ಧ್ವನಿಗಳು ಆಕಾಶವಾಣಿಯ ಧ್ವನಿ ಭಂಡಾರದಲ್ಲಿ ಸಂರಕ್ಷಿಸಲ್ಪಟ್ಟಿವೆ.
ಕೆಲವರಿಗೆ ಆಕಾಶವಾಣಿ ಎಂದಾಗ ಅದು ಬರೀ ಪುಳಕ ಅಥವಾ ಭಾವನಾತ್ಮಕ ಸಂಬಂಧ.
“ನಾನು ಅಂದು ಕೇಳುತ್ತಿದ್ದೆ”
“ನಾನು ಮಕ್ಕಳ ಕಾರ್ಯಕ್ರಮಕ್ಕೆ ಹೋದಾಗ ….”
“ನಾನು ಯುವವಾಣಿಯಲ್ಲಿ ಮೊದಲ ಸಂಭಾವನೆ ಪಡೆದಾಗ….”
ಹೀಗೆ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಸಾಗುತ್ತಾರೆ.
ಆದರೆ ಈಗ ನೀವು ಆಕಾಶವಾಣಿ ಕೇಳುತ್ತೀರಾ?
ಈಗ ಯಾವ ಕಾರ್ಯಕ್ರಮ ಪ್ರಸಾರ ಆಗುತ್ತಿದೆ ಎಂದು ಗೊತ್ತೇ ?
ಈಗ ಆಕಾಶವಾಣಿಯ ಎಷ್ಟು ಕೇಂದ್ರಗಳು ಮಾಹಿತಿ ಮನರಂಜನೆ ನೀಡುತ್ತಾ ನಿಮಗಾಗಿ ಮಿಡಿಯುತ್ತಿವೆ ಎಂದು ತಿಳಿದಿದ್ದೀರಾ?
ಉತ್ತಮ ಅಭಿರುಚಿಯನ್ನು ಬೆಳೆಸುವಲ್ಲಿ ಆಕಾಶವಾಣಿ ಇಂದಿಗೂ ನೀಡುತ್ತಿರುವ ಕಾರ್ಯಕ್ರಮಗಳ ಸಂಖ್ಯೆ ನಿಮಗೆ ತಿಳಿದಿದೆಯೇ?
ಬಹುಜನ ಹಿತಾಯ ಬಹುಜನ ಸುಖಾಯ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಇಂದಿಗೂ ಆಕಾಶವಾಣಿ ಯುವಕರಿಗೆ ಮಕ್ಕಳಿಗೆ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಭಾರತದ ಅತ್ಯಂತ ಯುವಕರಿಗೆ AIRNEXT ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ.
ಶಾಲಾ ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳಲ್ಲಿ ಆಸಕ್ತಿ ಮೂಡಿಸಲು ಸುದ್ದಿ ಲೋಕ ಕಾರ್ಯಕ್ರಮವನ್ನು ಎಲ್ಲ ಕೇಂದ್ರಗಳಲ್ಲೂ ಪ್ರಸ್ತುತಪಡಿಸಲಾಗುತ್ತಿದೆ.
ಚಿತ್ರಗೀತೆಗಳನ್ನು ಜನ ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಚಿತ್ರಗೀತೆಗಳ ಸಮಯವನ್ನು ವಿಸ್ತರಿಸಲಾಗಿದೆ. ಜೊತೆಗೆ ಮಾಹಿತಿ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಲಾಗುತ್ತಿದೆ.
ಗಂಟೆಗೆ ಒಮ್ಮೆ ಸುದ್ದಿ ಬಿತ್ತರವಾಗುತ್ತಿದೆ.
ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಸುದ್ದಿಯ ಸಮಯವನ್ನು ಕೂಡ ಹೆಚ್ಚಿಸಲಾಗಿದೆ.
ದಿನದ 24 ಗಂಟೆ ಶಾಸ್ತ್ರೀಯ ಸಂಗೀತವನ್ನು ಜನರಿಗೆ ಉಣಬಡಿಸುವ ರಾಗಂ ವಾಹಿನಿಯನ್ನು ಜನಪ್ರಿಯಗೊಳಿಸಲು ಕಲಾವಿದರನ್ನು ಹುರಿದುಂಬಿಸಲಾಗುತ್ತಿದೆ.
ಯೂಟ್ಯೂಬ್ ವಾಹಿನಿಗಳಲ್ಲಿ ಆಕಾಶವಾಣಿಯ ನೇರ ಪ್ರಸಾರಗಳನ್ನು ಕೇಳಲು ಅನುವು ಮಾಡಿಕೊಡಲಾಗಿದೆ.
ನೂತನ ಪ್ರಸಾರ ಶೈಲಿಯನ್ನು ಅಳವಡಿಸಿಕೊಳ್ಳುವ ವಿಶೇಷ ಚಿಂತನೆಗಳ
ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
ಅಭಿರುಚಿ ಭಾಷೆಯ ವಿಚಾರದಲ್ಲಿ ಸದಾ ಕಾಲ ಆಕಾಶವಾಣಿಯೇ ಮುಂದು.
ಬರೀ ಭಾವನಾತ್ಮಕ ನಂಟು ಹೇಳದೆ ಸಾರ್ವಜನಿಕರು ಆಕಾಶವಾಣಿ ಕೇಂದ್ರಗಳ ಜೊತೆ ಸಂಪರ್ಕ ಸಾಧಿಸಿದಾಗ, ಪತ್ರಗಳನ್ನು ಬರೆದಾಗ, email ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ, ಕಾರ್ಯಕ್ರಮಗಳಿಗೆ ಅನಿಸಿಕೆಗಳನ್ನು ಸೂಕ್ತವಾಗಿ ವ್ಯಕ್ತಪಡಿಸಿದಾಗ, ಪ್ರತಿಕ್ರಯಿಸಿದಾಗ ಮಾತ್ರ ನಮ್ಮ ಶ್ರಮ ಸಾರ್ಥಕ ಎನ್ನುತ್ತಾರೆ ಪ್ರಸಾರಕರು,
ಶ್ರೋತೃ ಮಾತನಾಡಿದರೆ ಪ್ರಸಾರ ದಿನ ಸಾರ್ಥಕತೆ ಪಡೆಯುತ್ತದೆ.
ಪ್ರಸಾರ ಮಾಧ್ಯಮ ಸಾಮ್ರಾಜ್ಯದಲ್ಲಿ
ಆಕಾಶವಾಣಿಯೇ ಜನಕ, ಮತ್ತು ಜನನಿ. ಅಭಿರುಚಿ, ಘನತೆ ವಿಚಾರಕ್ಕೆ ಬಂದರೆ ಸಾಮ್ರಾಟ.
ಪ್ರಸಾರ ದಿನದ ಸಂದರ್ಭದಲ್ಲಿ ಆಕಾಶವಾಣಿಗೆ ಜೈ ಅನ್ನುವಿರಿ. ಅಲ್ಲವೇ?

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...
- Advertisement -
error: Content is protected !!