Wednesday, September 27, 2023

ಕಾಫಿ ಆಯ್ತಾ…?

Follow Us

ಬೆಳಗ್ಗೆ, ಸಂಜೆಯ ಸಮಯದಲ್ಲಿ ಯಾರಾದರೂ ಪರಿಚಯಸ್ಥರು ಎದುರಾದಾಗ ಕಾಫಿ ಕುಡಿಯದವರೂ, ಕುಡಿಯುವವರೂ ಕೇಳುವ ಪ್ರಶ್ನೆ “ಕಾಫಿ ಆಯ್ತಾ?’ ಎಂದೇ. ದೈನಂದಿನ ಬದುಕಿನಲ್ಲಿ ಕಾಫಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತೇವೆ. ಭಾರತದಲ್ಲಿ ಸೆಪ್ಟೆಂಬರ್ 28ನ್ನು ಕಾಫಿ ದಿನವನ್ನಾಗಿ ಆಚರಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು (ಅಕ್ಟೋಬರ್ 1) ಕಾಫಿ ದಿನ. ‘ಕಾಫಿ ದಿನ’ ಇರಲಿ, ಇಲ್ಲದಿರಲಿ, ನಮಗಂತೂ ದಿನವೂ ಕಾಫಿ ಬೇಕು ಎನ್ನುವವರು ನೀವಾಗಿದ್ದರೆ ಜಸ್ಟ್ ಎಂಜಾಯ್ ದ ಕಾಫಿ…

      ಇಂದು ಅಂತಾರಾಷ್ಟ್ರೀಯ ಕಾಫಿ ದಿನ      

♦ ಕಾಫಿ ಕುಡಿಯೋದು ಬಿಡಬೇಡಿ…



♦ ಸುಮಾವೀಣಾ ಹಾಸನ

newsics.com@gmail.com


 ಸುಂ
ದರ ಮುಂಜಾನೆಯ ಉಲ್ಲಾಸವನ್ನು ಇಮ್ಮಡಿಗೊಳಿಸುವುದು ಕಾಫಿ. ಸಂಜೆಯ ರಂಗಿನಲ್ಲಿ ಮನಸ್ಸನ್ನು ಆಹ್ಲಾದಗೊಳಿಸುವುದು ಕಾಫಿ. ಮಳೆ ಹೊಯ್ದರೆ ಕಾಫಿ, ಚಳಿಗಾದರೂ ಕಾಫಿ. ಬೇಸಿಗೆಯ ಸಂಜೆಯ ಬಿಸಿಯಲ್ಲೂ ಕಾಫಿ ಇಲ್ಲವಾದರೆ ಅದೇನೋ ಕಳಕೊಂಡ ಭಾವ. ಒಟ್ಟಿನಲ್ಲಿ ಸರ್ವಕಾಲಗಳಲ್ಲೂ ನಮ್ಮ ಜತೆಗಿರುವ ಪೇಯ ಕಾಫಿ.
ನಮ್ಮ ರಕ್ತದಲ್ಲೇ ಬೆರೆತು ಹೋಗಿದೆಯೇನೋ ಎಂಬಷ್ಟು ನಮ್ಮದಾಗಿರುವ ಕಾಫಿ ದೇಸಿ ಮೂಲದ್ದಲ್ಲ ಎಂದರೆ ಅಚ್ಚರಿಯಾಗಬಹುದು. ಡಚ್ ಭಾಷೆಯ Koffie, ಅರೆಬಿಕ್ ನ Qahwa, ಟರ್ಕಿಶ್ ನ kahveh, ಭಾರತದಲ್ಲಿ ಕಾಫಿಯಾಗಿದೆ.
ಭಾರತೀಯರ ಅದರಲ್ಲೂ ದಕ್ಷಿಣ ಭಾರತೀಯರ ಪೇಯ ಎಂದೇ ಕರೆಸಿಕೊಂಡಿರುವ ಈ ಕಾಫಿ GI ಟ್ಯಾಗ್ ಅನ್ನೂ ಹೊಂದಿದೆ. ಭಾರತ ಕಾಫಿ ಬೆಳೆಯುವ ಪ್ರಮುಖ ರಾಷ್ಟ್ರ ಅದರಲ್ಲೂ ಕರ್ನಾಟಕ ನಂಬರ್ ಒನ್. ಈ ಕಾಫಿ ಅರಬ್ ಮೂಲದಿಂದ ಭಾರತಕ್ಕೆ ಬಂದ ಕತೆಯೇ ಕುತೂಹಲಕಾರಿ.
ಬಾಬಾಬುಡನ್ ಬಿತ್ತಿದ ಬೀಜ
1670ರಲ್ಲಿ ಅರೇಬಿಯನ್ ಫಕೀರ ಬಾಬಾಬುಡನ್ ರವರು ಭಾರತಕ್ಕೆ ತಂದರು ಎಂಬ ಐತಿಹ್ಯವಿದೆ. ಮೆಕ್ಕಾದ ಹಜ್ ಯಾತ್ರೆಯಿಂದ ಸಂತರು ಭಾರತಕ್ಕೆ ಮರಳಿ ಬರಬೇಕಿದ್ದರೆ ಯೆಮೆನ್ ಮೂಲಕವೇ ಬರಬೇಕಿತ್ತು. ಹಾಗೆ ಭಾರತಕ್ಕೆ ಬರುವ ಮಾರ್ಗಮಧ್ಯದಲ್ಲಿ ಅರಬರು ಯಾವುದೋ ಬೀಜವನ್ನು ಹುರಿದು ಪುಡಿ ಮಾಡಿದ ಬೀಜದಿಂದ ತಯಾರಿಸಿ ಕುಡಿಯುತ್ತಿದ್ದದ್ದನ್ನು ಅವರು ಗಮನಿಸುತ್ತಾರೆ. ಉಲ್ಲಾಸ ತರುತ್ತಿದ್ದ ಆ ಪಾನೀಯಯವನ್ನು ಕಂಡ ಸಂತರಿಗೆ ಸಹಜ ಕುತೂಹಲವಾಗುತ್ತದೆ. ಆ ಪಾನೀಯಯವನ್ನು ಗುಡ್ಡಗಾಡಿನಲ್ಲಿ ಬೆಳೆಯುವ ಯಾವುದೋ ಬೀಜದಿಂದ ಮಾಡುತ್ತಾರೆ ಎಂಬ ಮಾಹಿತಿ ತಿಳಿಯುತ್ತದೆ. ಆಗಿನ ಕಾಲಕ್ಕೆ ಆ ಬೀಜವನ್ನು ಅರಬ್ ರಾಷ್ಟ್ರದಿಂದ ಹೊರಗೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೆ ಹುರಿದ ಬೀಜವನ್ನು ಒಯ್ಯಲು ಅವಕಾಶವಿತ್ತು. ಬಾಬಾಬುಡನ್ ರವರು ಯಾರಿಗೂ ಕಾಣದಂತೆ ಏಳು ಬೀಜಗಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಮೊಕಾ ಬಂದರಿನ ಮೂಲಕ ಯೆಮೆನ್ ನಿಂದ ಹೊರಟು ಭಾರತಕ್ಕೆ ಬಂದು ಚಂದ್ರಗಿರಿ ಬೆಟ್ಟದ ಮೇಲೆ ಬಿತ್ತಿದರು. ಅಲ್ಲಿ ಹುಟ್ಟಿದ ಕಾಫಿ ನಂತರ ಕೇರಳ ವೈನಾಡ್, ತಮಿಳುನಾಡಿಗೂ ಹರಡಿತು ಎನ್ನಲಾಗುತ್ತದೆ. 150 ವರ್ಷಗಳ ಹಿಂದೆ ಬ್ರಿಟಿಷರು ಕಾಫಿಯನ್ನು ಅಧಿಕೃತ ಬೆಳೆಯನ್ನಾಗಿ ಬೆಳೆಯಲಾರಂಭಿಸಿದರು.
ಕುಣಿದಾಡುತ್ತಿದ್ದ ಕುರಿಗಳು
ಇದು ಕಾಫಿ ಕರ್ನಾಟಕಕ್ಕೆ ಹೇಗೆ ಬಂತು ಎಂಬುದರ ಕುರಿತಾಯಿತು. ಆದರೆ ಕಾಫಿಯ ಪರಿಚಯ ಜಗತ್ತಿಗೆ ಹೇಗಾಯಿತು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಐತಿಹ್ಯವೊಂದರ ಪ್ರಕಾರ, ಕ್ರಿ.ಶ. 9ನೆಯ ಶತಮಾನದಲ್ಲಿ ಮೇಯಲು ಬಿಟ್ಟ ಕುರಿಗಳು ಈ ಹಣ್ಣನ್ನು ತಿಂದು ನೃತ್ಯ ಮಾಡಲು ಪ್ರಾರಂಭಿಸಿದುವಂತೆ. ಅದನ್ನು ತಿನ್ನುತ್ತ ಕುರಿಗಳು ದಷ್ಟಪುಷ್ಟವಾಗಿ, ಚುರುಕಾಗಿ ಬೆಳೆಯುತ್ತಿದ್ದವಂತೆ. ಅದನ್ನು ನೋಡಿದ ಕುರಿಗಾಹಿಗಳು ಕೂಡ ಉಪಯೋಗಿಸಲು ಪ್ರಾರಂಭ ಮಾಡಿದರಂತೆ. ನಂತರ ಜಗತ್ತಿನಾದ್ಯಂತ ಇದರ ಪರಿಚಯವಾಯಿತು ಎನ್ನಲಾಗುತ್ತದೆ. ಕ್ರಿ.ಶ.1511ರಲ್ಲಿ ಮುಸಲ್ಮಾನ ದೊರೆಗಳು ಈ ಪಾನೀಯವನ್ನು ನಿಷೇಧ ಮಾಡಿದ ಉಲ್ಲೇಖವೂ ಇದೆ.
ಸಂಶೋಧನಾಲಯಗಳು
1925ರಲ್ಲಿ ಡಾ. ಲೆಸ್ಲಿ ಸಿ. ಕೊಲ್ಮನ್ ಅವರ ಮಾರ್ಗದರ್ಶನದಲ್ಲಿ ಎಕ್ಸ್ಪೆರಿಮೆಂಟಲ್ಸ ಸ್ಟೇಶನ್ ಎಂಬ ಹೆಸರಿನಲ್ಲಿ ಕಾಫಿಯನ್ನು ಅಭಿವೃದ್ಧಿ ಪಡಿಸಿದರು. ಇಲ್ಲಿ ಕಾಫಿ ಗಿಡಗಳಿಗೆ ಬರುತ್ತಿದ್ದ ರೋಗಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿತ್ತು. ಆನಂತರದಲ್ಲಿ ಸರ್ಕಾರ ಕಾಫೀಬೊರ್ಡ್ ಕೂಡ ಸ್ಥಾಪಿಸಿ ಸಂಶೋಧನೆ ನಡೆಸುತ್ತಿದೆ. ಈ ಸಂಶೋಧನಾಲಯಗಳನ್ನು ಸಿ.ಸಿ.ಆರ್.ಐ-ಕೇಂದ್ರೀಯ ಕಾಫಿ ಸಂಶೋಧನಾಲಯ ಬಾಳೆಹೊನ್ನೂರು, ಕೊಡಗಿನ ಚೆಟ್ಟಳ್ಳಿ ಮುಂತಾದ ಕಡೆ ನೋಡಬಹುದು. ಖಾಸಗಿ ಒಡೆತನದ ಟಾಟಾ ಕಾಫಿಯ ಹೆಸರೂ ಕೂಡ ಇಲ್ಲಿ ಉಲ್ಲೇಖನಿಯ. ಇದು ಭಾರತದ ಕಾಫಿ ಉತ್ಪಾದನೆ ಹಾಗೂ ರಫ್ತಿನಲ್ಲಿ ತೊಡಗಿಸಿಕೊಂಡಿರುವ ಬೃಹತ್ ಕಂಪೆನಿಯಾಗಿದೆ. ಅಲ್ಲದೆ ಹಸಿರು ಕಾಫಿಯ (Green coffee) ಹರಿಕಾರನೂ ಹೌದು.
ಸಾಕಮ್ಮಾ’ಸ್ ಕಾಫಿ
ಕಾಫಿ ವಾಣಿಜ್ಯ ಬೆಳೆ. ಕರ್ನಾಟಕ ಮೊದಲ್ಗೊಂಡು ವಿದೇಶಗಳಲ್ಲಿಯೂ ಇದನ್ನು ವ್ಯಾಪಕವಾಗಿ ಪರಿಚಯ ಮಾಡಿದ ಕೀರ್ತಿ ಓರ್ವ ಮಹಿಳೆಗೆ ಸೇರುತ್ತದೆ. ಇವರು ಕಾಫಿಯೊಂದಿಗೆ ತಮ್ಮ ಹೆಸರನ್ನು ಅನ್ವರ್ಥವಾಗಿಸಿಕೊಂಡವರು. ಇವರೇ ಕೊಡಗಿನ ಸೋಮವಾರಪೇಟೆಯ ಸಾಕಮ್ಮ.”ಕಾಫಿಪುಡಿ ಸಾಕಮ್ಮ” ಅಲ್ಲದೆ ಇವರ ಶಾಪ್ “ಸಾಕಮ್ಮಾಸ್ ಕಾಫಿ” ಎಂದೆ ಹೆಸರು ಮಾಡಿದೆ. ಇವರು 1880ರಲ್ಲಿ ತುಮಕೂರು ಜಿಲ್ಲೆ ಬಿದಿರೆ ಎಂಬ ಗ್ರಾಮದಲ್ಲಿ ಜನಿಸಿದರು. ಸಾಕಷ್ಟು ಆರ್ಥಿಕ ಮುಗ್ಗಟ್ಟಿನಿಂದ ಬಸವಳಿದಿದ್ದ ಸಾಕಮ್ಮ ತನಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರಾದ ಸೋಮವಾರಪೇಟೆಯ ಸಾಹುಕಾರ ದೊಡ್ಡಮನೆ ಬಸಪ್ಪನವರನ್ನು ಮೂರನೆಯ ಮದುವೆಯಾದರು. ಸಾಕಮ್ಮರಿಗೆ ಮದುವೆಯಾಗಿ ಎರಡೇ ವರ್ಷಗಳಲ್ಲಿ ವೈಧವ್ಯ ಪ್ರಾಪ್ತಿಯಾಯಿತು. ಬಸಪ್ಪನವರ ಮೊದಲ ಪತ್ನಿಯರಿಬ್ಬರು ಅನಕ್ಷರಸ್ಥರಾಗಿದ್ದರಿಂದ ಕುಟುಂಬ, ಕೃಷಿ, ಆರ್ಥಿಕ ವಹಿವಾಟಿನ ಜವಾಬ್ದಾರಿ ಸಾಕಮ್ಮನವರ ಮೇಲೆ ಬೀಳುತ್ತದೆ. ತೀಕ್ಷ್ಣಬುದ್ಧಿಯುಳ್ಳ ಸಾಕಮ್ಮ ಜಾಣ್ಮೆಯಿಂದ ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿ ವಹಿಸಿಕೊಂಡು ಕಾಫಿ ಇಳುವರಿ ಹೆಚ್ಚಾಗಲು ಕಾರಣರಾಗುತ್ತಾರೆ. ನಂತರ ಉತ್ಪನ್ನದ ವಿಲೇವಾರಿಗೆ ಯೊಜನೆಗಳನ್ನು ಹಾಕಿಕೊಳ್ಳುತ್ತಾರೆ.
1920ರಲ್ಲಿ ಬಸವನ ಗುಡಿಯ ಬುಲ್ ಟಂಪಲ್ ರೋಡಿನಲ್ಲಿ ಮೊದಲ ಕಾಫಿಕ್ಯೂರಿಂಗ್ ಘಟಕವನ್ನು ಸ್ಥಾಪಿಸುತ್ತಾರೆ. ಹಾಗೆ ಕಾಫಿಯನ್ನು ಬೆಂಗಳೂರಿಗೆ ತಂದ ಕೀರ್ತಿ ಇವರದ್ದು. ಕಾಫಿ ಸಂಸ್ಕರಣೆಗೆ ಅಗತ್ಯವಾದ ಯಂತ್ರಗಳನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡು ಕಾಫಿ ಉದ್ಯಮವನ್ನು ಜನಪ್ರಿಯಗೊಳಿಸುತ್ತಾರೆ. ಆಗಿನ ಕಾಲಕ್ಕೇ ಬ್ರಿಟಿಷರೊಡಗೂಡಿ ಕಾಫಿಯನ್ನು ಹಡಗಿನಲ್ಲಿ ರಪ್ತು ಮಾಡುತ್ತಾರೆ. ಸಾಕಮ್ಮ ಯಶಸ್ವಿ ಉದ್ಯಮಿ ಮಾತ್ರವಲ್ಲ ಸಮಾಜಸೇವೆಯಲ್ಲೂ ನಿರತರಾಗಿದ್ದರು. ವಿಶ್ವೇಶ್ವರಪುರಂನಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದಾರೆ. ಅನೇಕ ಸಂಸ್ಥೆಗಳಿಗೆ ದತ್ತಿಯನ್ನೂ ನೀಡುತ್ತಿದ್ದರು. ಅಂದಿಗೆ ಸಾಕಮ್ಮ ಇದ್ದ ಪ್ರದೇಶ ‘ಸಾಕಮ್ಮ ಗಾರ್ಡನ್’ ಎಂದೇ ಪ್ರಸಿದ್ಧಿಯಾಗಿದೆ.
ಇವರ ಉದ್ಯಮಶೀಲತೆಯನ್ನು ಗಮನಿಸಿ ಅಂದಿನ ಮೈಸೂರು ಸರ್ಕಾರ ಕೈಗಾರಿಕ ಅಭಿವೃದ್ಧಿ ಸಮಿತಿ ಮಾಡಿ ಅದಕ್ಕೆ ಸಾಕಮ್ಮನವರನ್ನು ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿತ್ತು. ಶ್ರೀ ಕೃಷ್ಣ ಒಡೆಯರ್ ‘ಲೋಕಸೇವಾ ಪಾರಾಯಣೆ’ ಎಂಬ ಬಿರುದನ್ನು ಸಾಕಮ್ಮನವರಿಗೆ ನೀಡಿ ಗೌರವಿಸಿದ್ದಾರೆ. ಸೀಮಿತ ಅವಕಾಶದಲ್ಲಿ ಗಣನೀಯ ಸೇವೆ ಮಾಡಿದ ಸಾಕಮ್ಮನವರಿಗೆ ಬ್ರಿಟಿಷ್ ಸರ್ಕಾರ “ಕೈಸರ-ಇ-.ಹಿಂದ್(JEWEL OF INDIA) ಪ್ರಶಸ್ತಿಯನ್ನು ಕೊಡಮಾಡಿದೆ. ಓರ್ವ ಮಹಿಳಾ ಉದ್ಯಮಿಯಾಗಿ ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮೌಲ್ಯ ತಂದುಕೊಟ್ಟವರು ಸಾಕಮ್ಮ. 1928ರಲ್ಲಿ ಮೈಸೂರು ಪ್ರತಿನಿಧಿ ಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ. 1950ರಲ್ಲಿ ಸಾಕಮ್ಮ ನಿಧನರಾದರು.
ಹತ್ತಾರು ಬ್ರ್ಯಾಂಡ್
ಚಿಕ್ಕಮಂಗಳೂರಿನ ಮೂಲಕ ಕೊಡಗಿಗೆ, ಹಾಸನಕ್ಕೆ ಹಬ್ಬಿದ ಈ ಕಾಫಿ ಬೆಳೆ ಪ್ರಮುಖ ವಾಣಿಜ್ಯರಫ್ತು ಉದ್ಯಮವಾಗಿದೆ. ಈಗ ಅನೇಕ ಬ್ರಾಂಡಿನ ಕಾಫಿ ಅಂದರೆ ಟಾಟಾ, ದರ್ಶಿನಿ, ಕೊಥಾಸ್, ನೆಸ್ ಕೆಫೆ ಸನ್ರೈಸ್, ಲಿಯೊ ಕಾಫಿ, ಬ್ರೂ, ಲಿವಿಸ್ತ ಮುಂತಾದ ಪುಡಿಗಳಿವೆ. ಅಲ್ಲದೆ ರಾಘವೇಂದ್ರ, ಚಿಕ್ಕಮಗಳೂರು, ಶರ್ಮ ಕಾಫಿ, ಬೆನಕ ಕಾಫಿ, ಶಾಂತಿ ಕಾಫಿ, ಹಾಸನ್ ಕಾಫಿ, ಶ್ರೀನಿವಾಸ ಕಾಫಿ ಮುಂತಾದ ಸ್ಥಳೀಯ ಬ್ರಾಂಡ್ ಗಳಿವೆ.
ಸಮಸ್ಯೆಗಳು ಹಲವು
ಕಾಫಿ ಬೆಳೆಗೆ ಬೆಲೆ ಬೇಕು. ವಿಪರ್ಯಾಸವೆಂಬಂತೆ ಬೆಲೆಯಿದ್ದಾಗ ಕಾಫಿ ಇಳುವರಿಯೇ ಕೆಲವೊಮ್ಮೆ ಇರುವುದಿಲ್ಲ . ವರ್ಷವಿಡಿ ಕಳೆ, ಗೊಬ್ಬರ, ಕೀಟನಾಶಕ ಸಿಂಪಡನೆ, ಕೊಯ್ಲು, ಸಂಸ್ಕರಣೆ ಮುಂತಾಗಿ ಉದ್ಯೋಗ ನೀಡುವ ಬೆಳೆ ಕಾಫಿ. ಆದರೆ ಮಳೆಯ ಅನಿಶ್ಚಿತತೆ, ಪ್ರಾಕೃತಿಕ ವಿಕೋಪ, ಸೂಕ್ತ ಬೆಲೆ ಇಲ್ಲದೆ ಇರುವುದು, ಕಾರ್ಮಿಕರ ಸಮಸ್ಯೆ, ಕಾಡಾನೆ ಹಾವಳಿ ಮುಂತಾದ ಸಮಸ್ಯೆಗಳನ್ನು ಈ ಕ್ಷೇತ್ರ ಎದುರಿಸುತ್ತಿದೆ.
ಅಂದ ಹಾಗೆ, ಸೆಪ್ಟೆಂಬರ್ 28 ರಂದು ಭಾರತದಲ್ಲಿ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಟೋಬರ್ 1ನ್ನು ಕಾಫಿ ದಿನವೆಂದು ಆಚರಿಸಲಾಗುತ್ತದೆ. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ದಿನಗಳಂದು ಕಾಫಿ ದಿನದ ಆಚರಣೆ ನಡೆಯುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!