Thursday, August 18, 2022

ಹುಲಿಯನ್ನಷ್ಟೇ ಉಳಿಸಿದರೆ ಸಾಲದು; ಜಿಂಕೆಯೂ, ಅರಣ್ಯವೂ ಸಂರಕ್ಷಣೆಯಾಗಲಿ

Follow Us

ಹುಲಿಯನ್ನು ಸಂರಕ್ಷಿಸಬೇಕು ಎಂದರೆ ಅದರ ಆಹಾರವಾದ ಜಿಂಕೆ ಜಾತಿಯ ಪ್ರಾಣಿಗಳನ್ನು ರಕ್ಷಿಸಬೇಕು. ಅವುಗಳ ರಕ್ಷಣೆ ಎಂದರೆ ಅವುಗಳ ಆಹಾರವಾದ ಸಸ್ಯರಾಶಿಯನ್ನು ರಕ್ಷಿಸಬೇಕು. ಅವುಗಳ ಬೇಟೆಯನ್ನು ತಪ್ಪಿಸಬೇಕು.

ಪಕ್ಷಿ ಸಂರಕ್ಷಣೆ-13


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com

ಚಿತ್ರ ಕೃಪೆ: ಕ್ಲೆಮೆಂಟ್ ಎಂ. ಪ್ರಾನ್ಸಿಸ್‍

ಮೊನ್ನೆಯ ದಿನವನ್ನು (29-07-2022) ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಯಿತು. ಹುಲಿ ಸಂಖ್ಯೆ ಕುರಿತ ವರದಿಯೂ ನಿನ್ನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ್ದರಿಂದ ಒಂದು ಕುತೂಹಲವೂ ಇತ್ತು. ಕರ್ನಾಟಕದಲ್ಲಿನ ಹುಲಿಗಳ ಸಂಖ್ಯೆ ಎಷ್ಟು? ಕಳೆದ ಬಾರಿ ಮಧ್ಯಪ್ರದೇಶದ ನಂತರದ ಸ್ಥಾನ ನಮ್ಮದಾಗಿತ್ತು. ಈ ಬಾರಿ ಹೇಗೆ ಎಂಬ ಕುತೂಹಲ ಸಹಜವೇ! ಎಷ್ಟೇ ಆದರು ಕರ್ನಾಟಕ ಹುಲಿಗಳ ಒಂದು ಗಟ್ಟಿನೆಲೆಯಲ್ಲವೇ! ಕೆಲವು ವರದಿಗಳ ಪ್ರಕಾರ ಕರ್ನಾಟಕ ಈ ಬಾರಿ ದೇಶದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ರಾಜ್ಯ. ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ, ಇರಲಿ.
ಹಾಗೆ ನೋಡಿದರೆ ಹುಲಿಗಳಿಗೆ ಭಾರತ ಬಹುಮುಖ್ಯವಾದ ನೆಲೆ. ಭಾರತದಲ್ಲಿ ಹುಲಿ ಉಳಿಯಬೇಕಾದ ತಾಂತ್ರಿಕ ಅವಶ್ಯಕತೆ ಇದೆ. ಅದೇ ಇನ್ನೊಂದು ವಿಷಯ. ಮತ್ತೊಮ್ಮೆ ಆ ಕುರಿತಾಗಿ ತಿಳಿದುಕೊಳ್ಳೋಣ. ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಅಂಕಿಅಂಶಗಳ ಆಧಾರದಲ್ಲಿ ನಿಜ. ಆದರೆ, ಇದು ಭಾರತದಲ್ಲಿ ಹುಲಿ ಉಳಿಯುವುದೇ ಎಂಬ ಆತಂಕವನ್ನು ತೊಡೆದು ಹಾಕುವುದೇ? ಎಂಬ ಪ್ರಶ‍್ನೆ ಜೀವಂತವಾಗಿಯೇ ಇದೆ. ಈ ಕುರಿತಾಗಿ ನಾವು ಬಹಳ ಎಚ್ಚರಿಕೆಯಿಂದ ಮುಂದೆ ಸಾಗಬೇಕು ಎಂಬುದನ್ನು ಇತಿಹಾಸ ತಿವಿದು ಹೇಳುತ್ತದೆ. ಹಿಂದೊಮ್ಮೆ ಭಾರತದ ಹುಲಿಗಳ ಸಂಖ್ಯೆ ಎಲ್ಲ ಆತಂಕಗಳನ್ನೂ ಮೀರಿಬಿಟ್ಟಿದೆ ಎಂದು ಹುಯಿಲೆಬ್ಬಿಸಿ ನಿರಾಳರಾಗಿಬಿಟ್ಟಿದ್ದೆವು. ಆನಂತರ ಒಂದೊಂದೇ ನೆಲೆಗಳಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಂಡುಬಂದಿತು. ಸಾರಿಸ್ಕಾದಲ್ಲಿ ಹುಲಿಗಳೇ ಇಲ್ಲ ಎಂಬ ಅಂಶ ಬಯಲಾಗಿ ಲೋಕಸಭೆಯವರೆಗೂ ಚರ್ಚೆಗಳಾಗಿ ಹುಲಿ ಸಂರಕ್ಷಣೆ ಕುರಿತಾಗಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಪ್ರಾಧಿಕಾರವನ್ನು ರಚನೆಯಾಯಿತು. ಈಗ ಭಾರತದಲ್ಲಿನ ಹುಲಿಗಳ ಸಂಖ್ಯೆ ಅಂದಿಗಿಂತ ಹೆಚ್ಚಿದೆ ಎಂದರೆ ಈಗ ಹೇಳಿದ ಘಟನೆ ಕಲಿಸಿದ ಪಾಠ ನಮಗೆ ಎಚ್ಚರಿಕೆಯನ್ನಷ್ಟೇ ಬೋಧಿಸುತ್ತದೆ. ಎಚ್ಚರದಿಂದಿರೋಣ. ಸಂರಕ್ಷಣೆಯತ್ತ ಗಮನಹರಿಸೋಣ. ಆ ಕುರಿತ ಮಾಹಿತಿ ಹಂಚಿಕೊಳ್ಳುವುದೇ ಈ ಅಂಕಣದ ಉದ್ದೇಶವೂ ಆಗಿದೆ. ಹುಲಿ ಸಂರಕ್ಷಣೆ ಕುರಿತಾಗಿ ಕೆಲವು ವಿಚಾರಗಳನ್ನು ನೋಡೋಣ.
ಈ ಹುಲಿ, ಹುಲಿ ಎಂದೇಕೆ ಕೂಗುವಿರೋ ಎಂಬ ಮಾತೂ ಕೆಲವೊಮ್ಮೆ ಕೇಳಿ ಬರುತ್ತದೆಯಲ್ಲವೇ? ಮೊದಲಿಗೆ ಇದನ್ನು ಸ್ಪಷ್ಟಪಡಿಸಿಕೊಂಡು ಬಿಡೋಣ. ಹುಲಿ ಸಂರಕ್ಷಣೆ ಎಂದರೆ ಕೇವಲ ಹುಲಿಯನ್ನು ರಕ್ಷಿಸುವುದು ಎಂದಾಗುವುದಿಲ್ಲ. ನಿಧಾನವಾಗಿ ಇದನ್ನು ನೋಡೋಣ. ಹುಲಿಯನ್ನು ಸಂರಕ್ಷಿಸಬೇಕು ಎಂದರೆ ಅದರ ಆಹಾರವಾದ ಜಿಂಕೆ ಜಾತಿಯ ಪ್ರಾಣಿಗಳನ್ನು ರಕ್ಷಿಸಬೇಕು. ಅವುಗಳ ರಕ್ಷಣೆ ಎಂದರೆ ಅವುಗಳ ಆಹಾರವಾದ ಸಸ್ಯರಾಶಿಯನ್ನು ರಕ್ಷಿಸಬೇಕು. ಅವುಗಳ ಬೇಟೆಯನ್ನು ತಪ್ಪಿಸಬೇಕು. [ಹುಲಿಗಳ ಸಂತತಿ ಹುಲಿಗಳನ್ನು ನೇರವಾಗಿ ಕೊಲ್ಲುವುದಕ್ಕಿಂತ ಅವುಗಳ ಆಹಾರ ಪ್ರಾಣಿಗಳನ್ನು (ಬಲಿ ಪ್ರಾಣಿಗಳು ಎನ್ನಲಾಗುತ್ತದೆ, ತಾಂತ್ರಿಕವಾಗಿ ಪ್ರೇ ಬೇಸ್‍) ಕೊಲ್ಲುವುದರಿಂದ ಬೇಗ ನಾಶವಾಗುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿರುವ ವಿಷಯ]. ಹುಲಿಯ ಆವಾಸವಾದ ಕಾಡುಗಳನ್ನು ರಕ್ಷಿಸಬೇಕು. ಹೀಗಾಗಿ ಒಟ್ಟಾರೆಯಾಗಿ ಇಡೀ ಕಾಡನ್ನೇ ಸಂರಕ್ಷಿಸಿ, ಅದನ್ನು ಬೇಟೆಗಾರರಿಂದ ಮುಕ್ತಗೊಳಿಸಬೇಕಾಗುತ್ತದೆ. ಆದ್ದರಿಂದ ಹುಲಿ ಸಂರಕ್ಷಣೆಗೆ ಇಷ್ಟು ಮಹತ್ವ. ಅದಕ್ಕಾಗಿ ಪ್ರಾಧಿಕಾರ, ಹುಲಿ ಯೋಜನೆ ಇತ್ಯಾದಿ ಇತ್ಯಾದಿ.
ಹೀಗೆ ರಕ್ಷಣೆಯಾದ ಕಾಡುಗಳಿಂದಾಗಿ ಮಳೆ, ನದಿಯಲ್ಲಿನ ನೀರು ನಮ್ಮ ಕೃಷಿ, ಕುಡಿಯುವ ನೀರು, ಕಾಡಿನಿಂದಾಗುವ ಪ್ರಯೋಜನಗಳು ಈ ಎಲ್ಲಕ್ಕೂ ಹುಲಿಯ ಸಂರಕ್ಷಣೆ ಮೂಲ. ಹಾಗಾಗಿ, ಇದಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ. ಹುಲಿ ಸಂರಕ್ಷಣೆಯ ನೆಪದಲ್ಲಿ ಇಡೀ ಕಾಡು ಸಂರಕ್ಷಣೆಗೆ ಒಳಪಡುವುದಾದರೂ ಕೆಲವು ವಿಶೇಷ ಪ್ರಾಣಿಗಳ (ಉದಾಹರಣೆಗೆ ಬಸ್ಟರ್ಡ್‍ ಹಕ್ಕಿಗಳು, ರಣಹದ್ದುಗಳು) ರಕ್ಷಣೆಗೆ ವಿಶೇಷ ಯೋಜನೆಗಳು ಬೇಕಾಗುತ್ತದೆ. ಅವು ಚಾಲ್ತಿಯಲ್ಲೂ ಇವೆ.
ಹುಲಿ ಬಲಶಾಲಿಯಾದ ಬೇಟಗಾರ ಪ್ರಾಣಿ (ಪ್ರಿಡೇಟರ್‍). ಸಾಮಾನ್ಯವಾಗಿ ಯಾವ ಪ್ರಾಣಿಗೂ ಮತ್ತೊಂದು ಪ್ರಾಣಿಯ ಮೇಲೆ ದ್ವೇಷವಿರದಿದ್ದರೂ ಹುಲಿ ಚಿರತೆಯನ್ನು ಕಂಡರೆ ಅಟ್ಟಾಡುವುದುಂಟು! (ಚಿತ್ರ ನೋಡಿ). ಒಮ್ಮೆ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿ ಅದು ಮರಹತ್ತುವಂತೆ ಮಾಡಿ ದಿನಗಟ್ಟಲೆ ಅಲ್ಲೇ ಇದ್ದು ಕಾದದ್ದನ್ನು ಹೆಸರಾಂತ ವನ್ಯಜೀವಿ ವಿಜ್ಞಾನಿ ಡಾ ಉಲ್ಲಾಸ ಕಾರಂತರು ದಾಖಲಿಸಿದ್ದಾರೆ. ಹಾಗೆಯೇ, ಅವರೇ ದಾಖಲಿಸಿರುವ ಮತ್ತೊಂದು ಅಂಶ: ಹುಲಿ, ತನಗಿಂತಲು ಸರಿಸುಮಾರು ಮೂರುಪಟ್ಟು ಹೆಚ್ಚು ತೂಗುವ (ಅಂದರೆ ಸುಮಾರು ಒಂಭೈನೂರು ಕೆಜಿ) ಕಾಟಿಯನ್ನು (ಇಂಡಿಯನ್ ಗಾರ್) ಕೊಂದು, ಕಳೇಬರವನ್ನು ಮುವತ್ತು ಅಡಿ ಏರಿನ ಮೇಲೆ ಎಳೆದುಕೊಂಡು ಹೋಗಿ ಬಚ್ಚಿಟ್ಟ ಪ್ರಸಂಗ. ಇದು ಹುಲಿಯ ಶಕ್ತಿಯನ್ನು ತೋರುತ್ತದೆ. ಇಂತಹವು ಹುಲಿಗಳೇ ಹೊರತು, ಮೃಗಾಲಯದಲ್ಲಿ ಮಾಂಸದ ಗಾಡಿಯ ಸದ್ದಿಗೆ ಹಾತೊರೆಯುವ ಬಡಕಲು ಪ್ರಾಣಿಯಲ್ಲ! ಇದೂ ಡಾ ಕಾರಂತರ ಮಾತೇ! ಇದನ್ನು ಮೆಲುಕು ಹಾಕೋಣ.
ಈಗ ಪ್ರಸ್ತಾಪಕ್ಕೆ ಬಂದಿರುವ ಮೃಗಾಲಯ ಎಂಬುದನ್ನು ಸಂರಕ್ಷಣೆ ಕುರಿತ ಮುಖ್ಯದಿನದ ಚರ್ಚೆಯಲ್ಲಿ ಚರ್ಚಿಸುವುದು ಅಷ್ಟೇನೂ ಅನುಚಿತವಾಗದು. ನಿಜವಾಗಿ ಭಾರತದ ಮೃಗಾಲಯಗಳು ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆಯೇ? ಎಂದರೆ ಯೋಚಿಸುತ್ತಲೇ ಇರಬೇಕಾಗುತ್ತದೆ. ಅಮೇರಿಕಾ, ಸಿಂಗಪುರ ಇತ್ಯಾದಿ ದೇಶಗಳ ಮೃಗಾಲಯಗಳು ಎಷ್ಟೋ ಮುಂದಿವೆ. ನಮ್ಮಲ್ಲಿನ ಎಷ್ಟೋ ಮೃಗಾಲಯಗಳಲ್ಲಿನ ಪ್ರಾಣಿಗಳ ಸ್ಥಿತಿ ನೋಡಿದರೆ ತಗ್ಗಿಸಿದ ತಲೆ ಎತ್ತಲಾಗುವುದಿಲ್ಲ. ಮೃಗಾಲಯಗಳು ನಿಜಕ್ಕೂ ಅಮಾನವೀಯ. ಜನ ಹುಲಿಯನ್ನು ನೋಡಬೇಡವೇ ಇತ್ಯಾದಿ ಪ್ರಶ್ನೆಗಳು ಮಾನವೀಯತೆಯ ಮುಂದೆ ಪೇಲವವಾಗಿ ಕಾಣುತ್ತವೆ. ಬೇಟೆಯಾಡಲಾಗದ ಹಾಗಾಗಿ ಮಾನವನಿಗೆ ತೊಂದರೆ ಕೊಡತೊಡಗಿದ ಹುಲಿ, ಚಿರತೆಗಳನ್ನು ಮಾತ್ರ ಮೃಗಾಲಯದಲ್ಲಿಟ್ಟು ಸಾಕಬೇಕು. ಇಲ್ಲಿಯೂ ಅವುಗಳು ಹಾಗಾಗಲು ಮಾನವಕೃತ ಕಾರಣಗಳು ಇಲ್ಲವಾಗುವಷ್ಟು ಪ್ರಾಮಾಣಿಕ ಕಾರ್ಯ ನಮ್ಮಲ್ಲಿ ನಡೆಯಬೇಕು. ಮಾನವಕೃತ ಕಾರಣಗಳಿಂದ ಅಳಿವಿನಂಚಿಗೆ ಸರಿಯುತ್ತಿರುವ, ಸರಿದಿರುವ ಪ್ರಾಣಿಗಳ ವಂಶಾಭಿವೃದ್ಧಿಯಂತಹ ಕಾರಣಗಳಿಗೆ ಮಾತ್ರ ಮೃಗಾಲಯ ಉಳಿಯಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕು. ಮುಂದಿನವಾರ ಸಂರಕ್ಷಣೆಯ ಮತ್ತೊಂದು ವಿಚಾರ ಕುರಿತು ತಿಳಿಯೋಣ.
ಎಲ್ಲರಿಗೂ ನಮಸ್ಕಾರಗಳು!

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...
- Advertisement -
error: Content is protected !!