Wednesday, November 30, 2022

ಯೋಗ ಜೀವನ ಶೈಲಿಯಾಗಲಿ

Follow Us

ಇಂದು ವಿಶ್ವ ಯೋಗ ದಿನ

ಇಂದು ವಿಶ್ವ ಯೋಗ ದಿನ. ಕೊರೋನಾ ಸಂಕಟದ ಸಮಯದಲ್ಲಿ ಯೋಗ ಬದುಕಿನ ಶೈಲಿಯಾಗಬೇಕಿದೆ. ಇಂದು ಮಾತ್ರವಲ್ಲ, ಎಂದೆಂದಿಗೂ ಯೋಗ ಬದುಕಿನ ಉಸಿರಾದರೆ ಅದೆಂಥದ್ದೇ ವೈರಸ್‌ ಅನ್ನು ದೃಢವಾಗಿ ಎದುರಿಸಬಲ್ಲೆವು. ಮನಸ್ಸಿಗೆ ಶಕ್ತಿ ನೀಡಿ, ದೇಹಕ್ಕೆ ಸದೃಢತೆ ತುಂಬುವ ಯೋಗದಿಂದ ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳೋಣ.

♦ ಸುಮನಾ ಲಕ್ಷ್ಮೀಶ
newsics.com@gmal.com

“ಏಪ್ರಿಲ್‌ ತಿಂಗಳ ಅಂತ್ಯದ ಸಮಯ. ಮನೆಯವರೆಲ್ಲರಿಗೂ ಕೊರೋನಾ ಸೋಂಕು ಬಂತು. ನಾವೆಲ್ಲರೂ ದೃಢವಾಗಿ ಸೋಂಕನ್ನು ಎದುರಿಸಬೇಕೆಂದು ಪಣ ತೊಟ್ಟೆವು. ದಿನವೂ ಉಸಿರಾಟದ ವ್ಯಾಯಾಮ, ಲಘು ಯೋಗಾಸನಗಳನ್ನು ಮಾಡುತ್ತ ಬಂದೆವು. ಇದರಿಂದಾಗಿ ಮನೆಯಲ್ಲಿ ಯಾರಿಗೂ ಆಮ್ಲಜನಕದ ಕೊರತೆಯಾಗಲೀ, ಹೆಚ್ಚಿನ ಸಮಸ್ಯೆಯಾಗಲೀ ಆಗಲಿಲ್ಲ. ಮೂರು ವರ್ಷದ ಮಗುವಿನಿಂದ ಹಿಡಿದು ಎಂಬತ್ತರ ವಯೋಮಾನದವರೆಗಿನ ಎಂಟು ಜನರಲ್ಲಿ ಸೋಂಕು ಕಂಡುಬಂದಿತ್ತು. ಈ ಸಮಯದಲ್ಲಿ ನಾವು ಅನುಸರಿಸಿದ ಜೀವನಶೈಲಿಯೇ ನಮ್ಮನ್ನು ಕಾಪಾಡಿತು. ನಮ್ಮ ದೈಹಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚಿಸುವಲ್ಲಿ ಯೋಗದ ಕೊಡುಗೆಯನ್ನು ಅರಿತೆವು. ಹೀಗಾಗಿ, ಯೋಗವನ್ನು ಜೀವನಪೂರ್ತಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆʼ ಎನ್ನುವುದು ತುಮಕೂರಿನ ಮಧುಸೂದನ್‌ ಹಾಗೂ ಅವರ ಪತ್ನಿ ವೀಣಾ ಅವರ ಖಚಿತ ಮಾತು.
ಹೌದು, ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡಿರುವ ಯಾರನ್ನೇ ಕೇಳಿ, ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಯೋಗದ ಮೊರೆ ಹೋಗಿರುತ್ತಾರೆ. ಬುದ್ಧಿ, ಮನಸ್ಸು, ದೇಹಗಳನ್ನು ಬೆಸೆಯುವ ಯೋಗದಿಂದ ಅದೆಷ್ಟೋ ಜನ ಕೊರೋನಾ ಸೋಂಕನ್ನು ಯಶಸ್ವಿಯಾಗಿ ಮಣಿಸಿದ್ದಾರೆ. ಯೋಗದ ಮತ್ತೊಂದು ಮಗ್ಗಲುಗಳು ಎಂದೇ ಕರೆಯಲ್ಪಡುವ ಪ್ರಾಣಾಯಾಮ, ಧ್ಯಾನಗಳಂತೂ ಜೀವಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಕೊರೋನಾ ಎರಡನೇ ಅಲೆಯಿಂದ ದೇಶಕ್ಕೆ ದೇಶವೇ ಈಗಿನ್ನೂ ಚೇತರಿಸಿಕೊಳ್ಳುತ್ತಿದೆ. ಬಹುಶಃ ಈ ಬಾರಿ ಯಾವೊಂದು ಕುಟುಂಬವೂ ಕೊರೋನಾ ಸೋಂಕಿನ ಕರಾಳತೆಯಿಂದ ಮುಕ್ತವಾಗಿಲ್ಲ. ಕೆಲವರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡರೆ, ಅನೇಕರು ಬಂಧು, ಮಿತ್ರರನ್ನು ಕಳೆದುಕೊಂಡಿದ್ದಾರೆ. ಸ್ವತಃ ಸೋಂಕಿನ ತೀವ್ರತೆಯನ್ನು ಅನುಭವಿಸಿದ ಮಂದಿಯಂತೂ ಇನ್ನೊಂದು ಹೊಸ ಜನ್ಮ ದೊರೆತಂತೆ ಭಾವಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಲಕ್ಷಾಂತರ ಕುಟುಂಬಗಳನ್ನು ಪೊರೆದಿರುವುದು ಯೋಗ.
ಹೌದು, ಕೊರೋನಾ ಸನ್ನಿವೇಶದಲ್ಲಿ ಯೋಗವನ್ನು ಅನುಸರಿಸಿದವರು ಹೆಚ್ಚಿನ ಭಾದೆಯಿಲ್ಲದೆ ಪಾರಾಗಿದ್ದಾರೆ. ಯೋಗ-ಪ್ರಾಣಾಯಾಮಗಳನ್ನು ಜೀವನಶೈಲಿಯಲ್ಲಿಯೇ ಅಳವಡಿಸಿಕೊಂಡವರು ಹೆಚ್ಚಿನ ತಾಪತ್ರಯವಿಲ್ಲದೆ ದೈನಂದಿನ ಬದುಕಿಗೆ ಮರಳಿದ್ದಾರೆ. ಅಷ್ಟರಮಟ್ಟಿಗೆ ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಎರಡನೇ ಅಲೆ ಮುಗಿಯುತ್ತಿದೆ ಎಂದಮಾತ್ರಕ್ಕೆ ಕೊರೋನಾ ಸೋಂಕು ಇನ್ನೂ ತೊಲಗಿಲ್ಲ. ಮೂರನೇ ಅಥವಾ ಮುಂದೆ ಮತ್ತೊಂದು ಅಲೆಯ ಭಯವಂತೂ ಇದ್ದೇ ಇದೆ. ಆ ಸಂದರ್ಭವನ್ನೆದುರಿಸಲು ಯೋಗವೇ ಪ್ರಧಾನ ಅಸ್ತ್ರವಾಗಬೇಕಿದೆ.
ಕುಟುಂಬದೊಂದಿಗೆ ಯೋಗ ಮಾಡೋಣ
ಇಂದು (ಜೂನ್‌ ೨೧) ವಿಶ್ವ ಯೋಗ ದಿನ. ಭಾರತದಂತಹ ದೇವಭೂಮಿಯಲ್ಲಿ ಜನ್ಮತಾಳಿದ ಯೋಗಕ್ಕೆ ಇಂದು ವಿಶ್ವಮಾನ್ಯತೆಯಿದೆ. ಈ ಬಾರಿ ಯೋಗ ದಿನವನ್ನು “ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗʼ ಎನ್ನುವ ಥೀಮ್‌ ಅಡಿಯಲ್ಲಿ ಆಚರಿಸಲಾಗುತ್ತಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸಾಮೂಹಿಕ ಯೋಗ ದಿನವನ್ನು ಆಚರಿಸಲಾಗುತ್ತಿಲ್ಲ. ಹೀಗಾಗಿ, ಮನೆಯಲ್ಲೇ ಯೋಗ ಮಾಡುವ ದೃಢ ಸಂಕಲ್ಪ ನಮ್ಮದಾಗಬೇಕಿದೆ.


ಭಾರತದಲ್ಲೇ ಯೋಗ-ಪ್ರಾಣಾಯಾಮ-ಧ್ಯಾನ-ಆಯುರ್ವೇದಗಳ ಜನನವಾಗಿದ್ದರೂ ಈ ವಿಚಾರದಲ್ಲಿ ಭಾರತೀಯರೇ ಹಿಂದುಳಿದಿದ್ದಾರೆ. ಪರಿಣಾಮವೇ ಪ್ರತಿಯೊಂದು ಮನೆಯಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು. ಇನ್ನಾದರೂ ಯೋಗವನ್ನು ಜೀವನಶೈಲಿಯನ್ನಾಗಿ ಅಳವಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಸರಳ ಯೋಗಾಸನಗಳು
ಅಂದ ಹಾಗೆ, ತುಮಕೂರಿನ ಮಧುಸೂದನ್‌ ಮತ್ತು ವೀಣಾ ದಂಪತಿಯ ಪ್ರಕಾರ, ಕೆಲವು ಮಾದರಿಯ ಸರಳ ಆಸನಗಳು ಅವರಿಗೆ ಬಹಳ ಸಹಾಯ ಮಾಡಿವೆ. ಕೊರೋನಾ ನಂತರ ಚೇತರಿಸಿಕೊಳ್ಳಲೂ ಇವು ಅನುಕೂಲವಾಗುತ್ತವೆ. ಅವರು ಸಲಹೆ ನೀಡಿರುವ ಕೆಲವು ಆಸನಗಳೆಂದರೆ, ತಾಡಾಸನ, ಧನುರಾಸನ, ಭ್ರಾಮರಿ ಪ್ರಾಣಾಯಾಮ, ಕಪಾಲಭಾತಿ. ವ್ಯಾಘ್ರಾಸನ. ಇವು ದೇಹ ಹಾಗೂ ಶ್ವಾಸಕೋಶಗಳಿಗೆ ಬಲ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಯೋಗವೆಂದಾಕ್ಷಣ ಅತ್ಯಂತ ಶ್ರಮದಾಯಕ ಭಂಗಿ ಎನ್ನುವ ಗ್ರಹಿಕೆ ಅನೇಕರಿಗಿದೆ. ಖಂಡಿತವಾಗಿ ಯೋಗ ದೇಹಕ್ಕೆ ಶ್ರಮ ನೀಡುವುದಿಲ್ಲ. ಬದಲಿಗೆ ಸರಳವಾಗಿ ದೇಹ ಬಾಗುವುದನ್ನು ಕಲಿಸುತ್ತದೆ. ಈ ಮೂಲಕ, ಎಲ್ಲ ನರಗಳಿಗೂ ಚೈತನ್ಯ ನೀಡಿ, ದೇಹದ ಕೆಲಸಕಾರ್ಯಗಳು ಸುಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಯೋಗದಿಂದ ಏಕಾಗ್ರತೆ, ದೃಢಸಂಕಲ್ಪ ಸಾಧ್ಯವಾಗುತ್ತದೆ. ಹೀಗಾಗಿ, ನಾವು-ನೀವೆಲ್ಲರೂ ಈ ಬಾರಿ ಮನೆಯವರೊಂದಿಗೆ, ಮನೆಯಲ್ಲೇ ಯೋಗ ಮಾಡೋಣ. ಇಂದಿನ ದಿನವೊಂದೇ ಅಲ್ಲ, ಎಂದೆಂದಿಗೂ ಯೋಗವನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳೋಣ.

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...

ಕೊರೋನಾ ಬಳಿಕ ಕೇರಳದಲ್ಲಿ ಇದೀಗ ದಡಾರ ಭೀತಿ

newsics.com ತಿರುವನಂತಪುರಂ:  ಕೇರಳ ಮತ್ತು ಮಹಾರಾಷ್ಟ್ರದಲ್ಲಿ ದಡಾರ ರೋಗ ವ್ಯಾಪಕವಾಗಿ ಹರಡುತ್ತಿದೆ. ಚಿಕ್ಕಮಕ್ಕಳು ಹೆಚ್ಚಾಗಿ ಇದರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾದ ಬಳಿಕ ಕೇರಳದಲ್ಲಿ ಇದೀಗ ದಡಾರ ಹಾವಳಿ ಹೆಚ್ಚಾಗಿದೆ. ಕೇರಳದ  ಮಲಪ್ಪುರಂ ಜಿಲ್ಲೆಯಲ್ಲಿ  130 ದಡಾರ...
- Advertisement -
error: Content is protected !!