Wednesday, July 6, 2022

ಕಾರ್ಬನ್ ನೆರಳು ಮತ್ತು ನಾವು…

Follow Us

ಪರಿಸರಕ್ಕೆ ಏನು ಒಳ್ಳೆಯದು ಮಾಡಿದರೂ ಅದು ನಮಗೆ ಹಾಗೂ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಒಳ್ಳೆಯದು ಮಾಡಿಕೊಂಡಂತೆ ಎಂಬುದನ್ನು ಮರೆಯಬಾರದು.
ಜಾಗತಿಕವಾಗಿ ಪರಿಗಣಿಸಿದರೆ ಅಭಿವೃದ‍್ಧಿ ಹೊಂದಿರುವ ರಾಷ್ಟ್ರಗಳೇ ಹೆಚ್ಚು ಕಾರ್ಬನ್ ನೆರಳಿಗೆ ಕಾರಣವಾಗಿರುವುದು ತಿಳಿಯುತ್ತದೆ.

ಪಕ್ಷಿ ಸಂರಕ್ಷಣೆ- 6

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com

ಳೆದ ಬಾರಿ ವಿಶ್ವ ಪರಿಸರ ದಿನದ ಅಂಗವಾಗಿ ಕಾರ್ಬನ್ ಫುಟ್‍ಪ್ರಿಂಟ್‍ ಬಗ್ಗೆ ತಿಳಿದುಕೊಂಡೆವು. ಈ ಬಾರಿ ಆ ಕುರಿತಾಗಿ ವಿಸ್ತೃತವಾಗಿ ತಿಳಿದಕೊಳ್ಳೋಣ. ಮುಖ್ಯವಾಗಿ ನಮ್ಮ ಎಲ್ಲ ಕಾರ್ಯಚಟುವಟಿಕೆಗಳು ಪರಿಸರದ ಮೇಲೆ ಬೀರುವ ಪರಿಣಾಮವೇ ಕಾರ್ಬನ್ ಫುಟ್‍ಪ್ರಿಂಟ್‍. ಕನ್ನಡದಲ್ಲಿ ಬೇಕಾದರೆ ಇದನ್ನು ಕಾರ್ಬನ್‍ ನೆರಳು ಎಂದು ಕರೆಯಬಹುದು. ಕಳೆದ ವಾರ ಒಂದು ಉದಾಹರಣೆಯ ಮೂಲಕ ಇದರ ಇದರ ಅರ್ಥವನ್ನು ತಿಳಿದೆವಾದರೂ ಇದನ್ನು ತಾಂತ್ರಿಕವಾಗಿ ಒಬ್ಬ ವ್ಯಕ್ತಿ, ಸಂಸ್ಥೆ, ಉತ್ಪನ್ನ ಇಲ್ಲವೆ ಒಂದು ಚಟುವಟಿಕೆ ಉಂಟುಮಾಡುವ ಹಸಿರು ಮನೆ ಅನಿಲಗಳ ಒಟ್ಟಾರೆ ಪ್ರಮಾಣವೇ ಕಾರ್ಬನ್‍ ಫುಟ್‍ಪ್ರಿಂಟ್ ಅಥವಾ ಕಾರ್ಬನ್‍ ನೆರಳು. ಇದನ್ನು ಕಾರ್ಬನ್ನಿನ ಸಮಾನ ಎಂದು ಗುರುತಿಸಲಾಗುತ್ತದೆ. ಹೆಚ್ಚಿನ ವಿವರಗಳು ಸದ್ಯಕ್ಕೆ ಬೇಡ.

ಹಸಿರು ಮನೆ ಅನಿಲಗಳು ಎಂದರೆ ಏನು ಎಂದು ಈಗ ಸರಳವಾಗಿ ತಿಳಿಯೋಣ. ಕಾರ್ಬನ್ನಿನ ಆಕ್ಸೈಡ್‍ಗಳು, ಮೀಥೇನ್, ನೈಟ್ರೋಜನ್‍ ಆಕ್ಸೈಡ್‍ಗಳು, ಕ್ಲೊರೋಫ್ಲೋರೋ ಕಾರ್ಬನ್‍ ಇತ್ಯಾದಿ ಅನಿಲಗಳು ಪರಿಸರದಲ್ಲಿ ಹೆಚ್ಚಾದಾಗ ಭೂಮಿಯ ಶಾಖ ಸುಲಭವಾಗಿ ಹೊರಗೆ ಹೋಗುವುದಿಲ್ಲ. ಇದೊಂದು ರೀತಿ ಕಂಬಳಿ ಹೊದ್ದು ಮಲಗಿದಂತೆ. ಈ “ಹಸಿರುಮನೆ ಅನಿಲಗಳು” ಹೆಚ್ಚಾದಾಗ ಇಡೀ ಭೂಮಿಗೇ ಕಂಬಳಿ ಹೊದ್ದಿಸಿ ಮಲಗಿಸಿದಂತಾಗುತ್ತದೆ. ವಾತಾವರಣ ಬಿಸಿಯಾಗುತ್ತದೆ. ವಾತಾವರಣ ಹೀಗೆ ಬಿಸಿಯೇರುವುದರಿಂದ ಆಗುವ ಬಹಳ ದೊಡ್ಡ ದುರಂತವೇ ಹವಾಮಾನ ಬದಲಾವಣೆ. ಇತ್ತೀಚೆಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಋತುಗಳಲ್ಲಿ ಏರುಪೇರು ಒಂದು ಸರಳ ಉದಾಹರಣೆ. ಇದರಿಂದ ವಲಸೆ ಹಕ್ಕಿಗಳು ಬೇಗ ವಲಸೆ ಹೋಗುವುದು ಕಂಡುಬಂದಿದೆ. ಇದರಿಂದ ಏನು ತೊಂದರೆ ಎನ್ನಬಹುದು. ಅದೇನೆಂದರೆ, ಬೇಗ ವಲಸೆ ಬರುವ ಹಕ್ಕಿಗೆ ಇಲ್ಲಿನ ವಾತಾವರಣ ಇನ್ನು ಸೂಕ್ತವಾಗಿರುವುದಿಲ್ಲ ಹಾಗೂ ಆಹಾರದ ಕೊರತೆ ಉಂಟಾಗುತ್ತದೆ. ಇದು ಹಕ್ಕಿಗಳ ಸಂಖ್ಯೆಗಳ ಮೇಲೆ ಪರಿಣಾಮ ಬೀರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಹೀಗೆ ಕಾರ್ಬನ್ ನೆರಳು ನಮ್ಮನ್ನು ಕಾಡುವ ದೊಡ್ಡ ಪರಿಸರದ ಸಮಸ್ಯೆ. ಆದ್ದರಿಂದ ನಾವು ಕಾರ್ಬನ್ ನೆರಳನ್ನು ಕಡಿಮೆ ಮಾಡಬೇಕು. ಇಲ್ಲಿ ಕೆಲವು ವಿಚಾರಗಳಿವೆ. ಈಗ ನಾನು ಕಚೇರಿಗೆ ನನ್ನ ವಾಹನದಲ್ಲಿ ಹೋಗುವ ಬದಲು ಸಾರ್ವಜನಿಕ ವಾಹನವನ್ನು ಬಳಸಿದರೆ ಇಲ್ಲವೆ ನಾಲ್ಕೈದು ಜನ ಒಂದೇ ವಾಹನದಲ್ಲಿ ಪ್ರಯಾಣಿಸಿದರೆ ಕಾರ್ಬನ್ ನೆರಳು ಕಡಿಮೆ ಮಾಡಬಹುದು. ಅಂದರೆ, ನಾವು ನಾಲ್ಕೈದು ಜನ ಒಬ್ಬೊಬ್ಬರೂ ಒಂದೊಂದು ಕಾರಿನಲ್ಲಿ ಹೋಗುವ ಬದಲು ಒಂದು ಕಾರಿನಲ್ಲಿಯೇ ನಾಲ್ಕು ಜನ ಹೋದರೆ ಕಾರ್ಬನ್ ನೆರಳು ಕಡಿಮೆಯಾಗುತ್ತದೆ ಅಲ್ಲವೆ? ಇದನ್ನೇ ಕಾರ್ ಪೂಲಿಂಗ್ ಎನ್ನುತ್ತಾರೆ. ಇದು ಅನೇಕ ಕಡೆಗಳಲ್ಲಿ ಪ್ರಸಿದ್ಧಿಗೆ ಬರುತ್ತಿದೆ. ಹಲವಾರು ಕಂಪನಿಗಳಲ್ಲಿ ಇದಕ್ಕೆ ಪ್ರೋತ್ಸಾಹ ಕೊಡುತ್ತಾರೆ, ಕೂಡ.

ಆದರೆ, ಒಬ್ಬ ವ್ಯಕ್ತಿ ಇಂತಹ ವ್ಯವಸ್ಥೆ ಮಾಡುವುದರ ಬದಲು ಸರ್ಕಾರವೇ ಈ ಕಾರ್ಯದಲ್ಲಿ ತೊಡಗಿಕೊಂಡರೆ ಹೆಚ್ಚಿನದನ್ನು ಸಾಧಿಸಬಹುದು. ಉದಾಹರಣೆಗೆ ಕಾಲಕ್ಕೆ ಸರಿಯಾಗಿ ತಲಪುವಂತೆ ಹೆಚ್ಚು ಬಸ್ಸಗಳಿದ್ದರೆ ನಾವೇಕೆ ಸ್ವಂತ ವಾಹನ ತೆಗೆಯುತ್ತೇವೆ? ಬಸ್ ಮೆಟ್ರೋ, ಮಾನೋ ರೈಲುಗಳು ಹೆಚ್ಚಾದಂತೆ ಕಾರ್ಬನ್ ನೆರಳು ಸಹ ಕಡಿಮೆಯಾಗುತ್ತದೆ.

ಹೀಗೆಯೇ, ಉತ್ಪಾದನೆಯ ಕ್ಷೇತ್ರದಲ್ಲಿ ಸಹ. ಸರ್ಕಾರ ಬಿಗಿಯಾದ ನಿಯಮಾವಳಿಗಳನ್ನು ಜಾರಿಗೆ ತಂದು ಅದರ ಕಟ್ಟುನಿಟ್ಟಾದ ಅನುಷ್ಠಾನಕ್ಕೆ -ಭ್ರಷ್ಟಾಚಾರಕ್ಕೆ ಎಡೆಗೊಡದೆ- ಮುಂದಾದರೆ ಸಾಕಷ್ಟು ಸಾಧಿಸಿದಂತಾಗುತ್ತದೆ. ಪರಿಸರಕ್ಕೆ ಏನು ಒಳ್ಳೆಯದು ಮಾಡಿದರೂ ಅದು ನಮಗೆ ಹಾಗೂ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಒಳ್ಳೆಯದು ಮಾಡಿಕೊಂಡಂತೆ ಎಂಬುದನ್ನು ಮರೆಯಬಾರದು.

ಜಾಗತಿಕವಾಗಿ ಪರಿಗಣಿಸಿದರೆ ಅಭಿವೃದ‍್ಧಿ ಹೊಂದಿರುವ ರಾಷ್ಟ್ರಗಳೇ ಹೆಚ್ಚು ಕಾರ್ಬನ್ ನೆರಳಿಗೆ ಕಾರಣವಾಗಿರುವುದು ತಿಳಿಯುತ್ತದೆ. ವಿಪರ್ಯಾಸವೆಂದರೆ ಆ ರಾಷ್ಟ್ರಗಳೇ ಇತರ ರಾಷ್ಟ್ರಗಳಿಗೆ ಬುದ್ಧಿ ಹೇಳುವ ಕಾರ್ಯವನ್ನು ಮಾಡುತ್ತಿವೆ! ಅದರಲ್ಲಿ ಅಭಿವೃದ‍್ಧಿ ಹೊಂದಿದ ರಾಷ್ಟ್ರಗಳೇ ಹೆಚ್ಚು ಕಾರ್ಬನ್ ನೆರಳಿಗೆ ಕಾರಣವಾಗಿರುವುದು ಕಂಡುಬರುತ್ತದೆ. ಈಗ ಆ ರಾಷ್ಟ್ರಗಳಿಗೆ “ಬಿಸಿ ಮುಟ್ಟಿಸುವ” ಕಾರ್ಯ ನಡೆಯಬೇಕಿದೆ. ಕಡಿಮೆ ಜನಸಂಖ್ಯೆಯುಳ್ಳ ದೊಡ್ಡ ವಿಸ್ತೀರ್ಣದ ಅಮೆರಿಕದಂತಹ ರಾಷ್ಟ್ರ ಜಗತ್ತಿನ ಅತಿ ಹೆಚ್ಚು ಕಾರ್ಬನ್ ನೆರಳಿಗೆ ಕಾರಣವಾಗುವ ದೇಶಗಳಲ್ಲಿ ಒಂದಾಗಿದೆ! ನಿಜಕ್ಕೂ ಇಲ್ಲಿ ಮಾಲೀನ್ಯ ನಿಯಂತ್ರಿಸಬೇಕಾಗಿರುವುದು ಈ ದೇಶಗಳೇ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾಲಿನ್ಯ ಉಂಟಾಗಲು ಎಷ್ಟೋ ಬಾರಿ ಈ ರಾಷ್ಟ್ರಗಳೇ ಆಗಿರುತ್ತವೆ. ಇಂತಹ ದೇಶಗಳಲ್ಲಿ ಕಡಿಮೆ ಹಣಕ್ಕೆ ಕೆಲಸ ನಡೆಯುತ್ತದೆ ಎಂದು ಅನೇಕ ಕೆಲಸಗಳನ್ನು ಹೊರಗುತ್ತಿಗೆ ನೀಡಲಾಗುತ್ತದೆ. ಮಾಲೀನ್ಯ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉಳಿಯುತ್ತದೆ. ಇದಕ್ಕೆ ನಮ್ಮ ದೇಶದ ಉದಾಹರಣೆ ಎಂದರೆ ಹಡಗು ಒಡೆಯುವ ಉದ್ಯಮ. ಮಾಲೀನ್ಯ ನಿನಗೆ, ಸೌಖ್ಯ ನಮಗೆ ಎಂಬಂತಿದೆ ಇಲ್ಲಿ. ಒಟ್ಟಾರೆಯಾಗಿ, ಕಾರ್ಬನ್ ನೆರಳು ಕಡಿಮೆಯಾಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಲಪ್ರದ ಪ್ರಯತ್ನಗಳು ನಡೆಯಬೇಕು. ಹಣವೇ ಆಳುವ ಇಂದಿನ ದಿನಮಾನದಲ್ಲಿ ಇದು ಎಷ್ಟರಮಟ್ಟಿಗೆ ಸಾಧ್ಯ ಎಂಬುದು ಒಂದು ಪ್ರಶ್ನೆಯೇ.ಇಂತಹ ಸಂದಿಗ್ಧಗಳ ನಡುವೆ ಇಂದು ನಮ್ಮ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯ ನಡೆಬೇಕಿದೆ. ಕಾರ್ಬನ್ ನೆರಳಿಗೆ ಕಾಡು ಕಡಿಯುವುದರ ಕೊಡುಗೆ ಎಷ್ಟೆಂಬುದನ್ನು ಹೇಳಬೇಕಾಗಿಯೇ ಇಲ್ಲ! ಕಾಡು ಮತ್ತು ಸಾಗರಗಳು ದೊಡ್ಡ ಪ್ರಮಾಣದಲ್ಲಿ ಕಾರ್ಬನ್‍ಅನ್ನು ಹೀರಿಕೊಳ್ಳುವ ನೈಸರ್ಗಿಕ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ ಉಂಟುಮಾಡುವ ಯಾವುದೇ ಚಟುವಟಿಕೆ ಹಸಿರು ಮನೆ ಪರಿಣಾಮವನ್ನು ಹೆಚ್ಚಿಸಿ ಹವಾಮಾನ ಬದಲಾವಣೆಗೆ ಇಂಬು ಕೊಡುತ್ತದೆ. ಆದ್ದರಿಂದ ನಾವು, ಅಂದರೆ ನಾಗರಿಕರು ಈ ಕುರಿತಾದ ಅರಿವನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಬೆಳೆಯುವಂತೆ ನೋಡಿಕೊಳ್ಳಬೇಕು. ಇದು ಹೇಗೆ? ಎಂಬ ಪ್ರಶ್ನೆ ಬರುತ್ತದೆ. ಇದು ಸರಳ. ನಮ್ಮ ರಾಜಕೀಯ ನಾಯಕರುಗಳನ್ನು ಈ ನಿಟ್ಟಿನಲ್ಲಿ ಪ್ರಶ್ನೆ ಮಾಡಬೇಕು. ಸಾಮಾನ್ಯವಾಗಿ ನಾವು ನಮ್ಮ ರಾಜೀಕೀಯ ನಾಯಕರುಗಳನ್ನು ನಮಗೆ ಏನಾದರು ಉಪಕಾರ ಮಾಡುವಂತೆ ಕೇಳಿಕೊಳ್ಳುತ್ತೇವೆ. ಎಷ್ಟೋಬಾರಿ, ಅದು ಭ್ರಷ್ಟಚಾರದ ಮೂಲವೂ ಆಗಿರುತ್ತದೆ. ಬದಲಾಗಿ, ನಾವು ನಮ್ಮ ವಿಷಯಗಳನ್ನು ಅಂದರೆ, ಕೆಲಸ ಕೊಡಿಸುವುದು, ಇನ್ಯಾವುದೋ ರಿಜಿಸ್ಟ್ರೇಷನ್ ಮಾಡಿಸುವುದು ಇತ್ಯಾದಿಗಳನ್ನು ನಾವು ನಾವೇ ಮಾಡಿಕೊಳ‍್ಳುತ್ತೇವೆ.ನೀವು ನಮ್ಮ ಕೆರೆ ಕಟ್ಟೆ, ನದಿಗಳನ್ನು ಸರಿಪಡಿಸಿ, ಮಾಲೀನ್ಯ ಮುಕ್ತವನ್ನಾಗಿ ಮಾಡಿ. ಪಶ್ಚಿಮಘಟ್ಟಗಳನ್ನು ಉಳಿಸಿ. ಎಂದು ಕೇಳತೊಡಗಬೇಕು. ಅಂತೆಯೇ, ಹವಾಮಾನ ಬದಲಾವಣೆ ಸರಿಪಡಿಸಲು ಏನು ಮಾಡುತ್ತಿದ್ದೀರಿ ಎಂದು ಕೇಳುವ ಜನಸಾಮಾನ್ಯರು ಹೆಚ್ಚಾಗಬೇಕು. ಆಗ ಮಾತ್ರ ಮುಂದಿನ ಜನಾಂಗ ಒಳ್ಳೆಯ ಪರಿಸರದಲ್ಲಿ ಬಾಳಲು ಸಾಧ್ಯ. ರಾಜಕಾರಣಿಯ ಕಾರ್ಯ ಕಾನೂನು ಸಂವಿಧಾನದ ಮಟ್ಟದಲ್ಲಿ ಎಲ್ಲವನ್ನು ಸರಿಪಡಿಸುವುದೇ ಹೊರತಾಗಿ ನಮ್ಮ ಸ್ವಾರ್ಥ ಇಲ್ಲವೆ ಅಧಿಕಾರಿಗಳು ಮಾಡಬೇಕಾದ ಕಾರ್ಯಗಳನ್ನು ಮಾಡಲು ಅಲ್ಲ ಎಂಬ ಅರಿವು ಜನಸಾಮಾನ್ಯರಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಮೂಡಬೇಕು. ಹಿಂದೆ ಅಂತಹ ಕೆಲವಾದರೂ ಜನಪ್ರತಿನಿಧಿಗಳು ಇದ್ದರು ಎಂಬುದನ್ನು ನಾವು ಮರೆಯಬಾರದು (ಶಾಂತವೇರಿ ಗೋಪಾಲಗೌಡರು, ನೀರ್‍ಸಾಬ್ ಎಂದೇ ಖ್ಯಾತರಾಗಿದ್ದ ನಜೀರ್ ಸಾಬ್ ತಕ್ಷಣದ ಉದಾಹರಣೆಗಳು). ಜನರ ಅರಿವಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲೇ ಬೇಕಾಗುತ್ತದೆ. ಎಚ್ಚೆತ್ತುಕೊಳ್ಳುತ್ತಾರೆ. ಇದು ಅಧಿಕಾರಿಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಒಟ್ಟಾರೆ, ಜನಸಾಮಾನ್ಯರ ಜಾಗೃತಿಯೇ ಎಲ್ಲಕ್ಕೂ ಮೂಲ, ಆದು ಆಗಲಿ.

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!