Wednesday, July 6, 2022

ಸಂರಕ್ಷಣೆ ಕುರಿತ ಮೂಢನಂಬಿಕೆಗಳು!

Follow Us

ಹಲಸು, ಸಪೋಟ ಇತ್ಯಾದಿ ಹಣ್ಣುಗಳ ಬೀಜಗಳನ್ನು ಸಗಣಿ, ಗೊಬ್ಬರ ಇತ್ಯಾದಿಗಳೊಂದಿಗೆ ಸೇರಿಸಿ ಅದಕ್ಕೆ ಮಣ್ಣನ್ನು ಮಿಶ್ರಮಾಡಿ ಉಂಡೆ ಕಟ್ಟುವುದು. ಈ ಉಂಡೆಗಳನ್ನು ಕಾಡುಗಳಲ್ಲಿ ಎಸೆದುಬಿಡುವುದು. ಇದೇ ಬೀಜದುಂಡೆ ಹಾಗೂ ಅದರ ಪ್ರಯೋಗ. ಮೇಲ್ನೋಟಕ್ಕೆ ವ್ಹಾ! ಎಂತಹ ಒಳ್ಳೆಯ ಆಲೋಚನೆ! ಎನಿಸದಿರದು! ಆದರೆ, ಇದು ನಿಜವಾಗಿ ಪರಿಸರದ ಮೇಲೆ ಹಾಕುವ ಬಾಂಬ್‍!

   ಪಕ್ಷಿ ಸಂರಕ್ಷಣೆ-3   


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು

www.facebook.com/ksn.bird
ksn.bird@gmail.com
newsics.com@gmail.com

ಇಂದಿನ ವಿಷಯಕ್ಕೆ ಬರುವುದಕ್ಕೆ ಮೊದಲು ಎಲ್ಲರಿಗೂ ವಿಶ್ವ ಜೀವಿವೈವಿಧ್ಯ ದಿನದ ಶುಭಾಶಯಗಳು!  ಇಂದು ಅಂದರೆ ಮೇ 22 ನಮ್ಮ ಅಂಕಣದ ದಿನವೇ ಬಂದಿರುವುದು ಒಂದು ಯೋಗಾಯೋಗ! ಇಸ್ವಿ 2000ದಿಂದ ಪ್ರತಿ ಮೇ 22ನೇ ತಾರೀಖಿನಂದು ವಿಶ್ವ ಜೀವಿವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ. ಹಾಗೆ ಆಚರಿಸಬೇಕೆಂದು ವಿಶ್ವಸಂಸ್ಥೆ ಹೇಳಿದೆ. ಜೀವಿವೈವಿಧ್ಯ ಜೀವಜಗತ್ತಿನ ಜೀವಾಳ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ನಮ್ಮಲ್ಲಿರುವ ವಿವಿಧ ಬಗೆಯ ಜೀವಿಗಳೇ ಜೀವಿ ವೈವಿಧ್ಯ. ವೈವಿಧ್ಯ ಹೆಚ್ಚಾದಷ್ಟೂ ಸಮೃದ್ಧಿ ಹೆಚ್ಚಾಗುತ್ತದೆ. ನಮ್ಮ ಜೀವನ ಅಷ್ಟು ಹಸನಾಗುತ್ತದೆ. ವೈವಿಧ್ಯ ಸೌಂದರ್ಯವನ್ನೂ ತರುತ್ತದೆ. ಆದರೆ, ಅದಕ್ಕೂ ಹೆಚ್ಚಾಗಿ ನಮ್ಮ ಉಳಿವಿಗೆ ದಾರಿಯಾಗುತ್ತದೆ. ಸರಳವಾಗಿ ನೋಡಿದರೆ ಕಾಡು ಮತ್ತು ಸಾಗರಗಳು ಅಗಾಧ ಪ್ರಮಾಣದ ಜೀವಿಗಳಿಗೆ ಆಶ್ರಯ ಕೊಡುತ್ತವೆ. ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ಒಂದು ಪ್ರಮುವಾದ ವಿಷಯವನ್ನು ಪರಿಗಣಿಸೋಣ: ಕಾಡು ಹಾಗೂ ಸಮುದ್ರ ಅಗಾಧ ಪ್ರಮಾಣದ ಕಾರ್ಬನ್‍ ಡೈ ಆಕ್ಸೈಡ್‍ ಅನ್ನು ಹೀರಿಕೊಳ್ಳುತ್ತದೆ. ಇನ್ನು ಅನೇಕ ಪ್ರಯೋಜನಗಳು ನಮಗೆ ಕಾಡು ಹಾಗೂ ಸಾಗರಗಳಿಂದ ಆಗುತ್ತದೆ. ಆದರೆ, ಇದೊಂದನ್ನು ಗಣಿಸಿದರೆ ಸಾಕು ಇವು ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಲು. ಹಾಗಾಗಿ, ಜೀವಿ ವೈವಿಧ್ಯ ಮುಖ್ಯ. ಇಲ್ಲೊಂದು ಆಘಾತಕಾರಿ ಸಂಗತಿಯಿದೆ. ಇನ್ನು ಕೆಲವೇ ಕಾಲದಲ್ಲಿ ಕಾಡುಗಳು ಹೀರಿಕೊಳ್ಳುವ ಕಾರ್ಬನ್ ಡೈ ಆಕ್ಸೈಡ್‍ಗಿಂತಲೂ ಅವು ಬಿಡುಗಡೆ ಮಾಡುವ ಕಾರ್ಬನ್ ಡೈ ಆಕ್ಸೈಡ್‍ ಪ್ರಮಾಣವೇ ಹೆಚ್ಚಾಗಲಿದೆ ಎಂಬ ಅಂಶ. (ಗಿಡಗಳು ಉಸಿರಾಡುವಾಗ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ದ್ಯುತಿ ಸಂಶ್ಲೇಷಣೆ ನಡೆಯುವಾಗ ಮಾತ್ರ ಕಾರ್ಬನ್ ಡೈ ಆಕ್ಸೈಡ್ ಬಳಕೆಯಾಗಿ ಆಕ್ಸಿಜನ್ ಬಿಡುಗಡೆಯಾಗುತ್ತದೆ). ಅಂದರೆ, ನಮ್ಮ ಪರಿಸರದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ ಹಾಗೂ ನಾವು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ತೋರಿಸುತ್ತದೆ. ಇದೊಂದು ಬಹುದೊಡ್ಡ ಎಚ್ಚರಿಕೆಯ ಗಂಟೆ.

ವಿಶ್ವ ಜೀವಿವೈವಿಧ್ಯ ದಿನದ ಅಂಗವಾಗಿ ನಾವು ವೈವಿಧ್ಯತೆಯ ವಿಚಾರವನ್ನು ತಿಳಿದೆವು. ಸಂರಕ್ಷಣೆಗೆ ಇದೂ ಮುಖ್ಯವೇ ತಾನೆ?
ಈಗ ಇಂದಿನ ವಿಚಾರಕ್ಕೆ ಬರೋಣ. ಸಂರಕ್ಷಣೆ ಕುರಿತ ಮೂಢ ನಂಬಿಕೆಗಳು. ಸಂರಕ್ಷಣೆ ಕುರಿತ ಮೂಢನಂಬಿಕೆಗಳೂ ಇವೆಯೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಅವು ಇರುವುದು ಸತ್ಯ. ಯಾವುದನ್ನು ಕುರಿತು ನಾವು ವಸ್ತುನಿಷ್ಠವಾಗಿ ಅಧ್ಯಯನ ಮಾಡಿರುವುದಿಲ್ಲವೋ ಆ ಎಲ್ಲವನ್ನು ಕುರಿತಾಗಿಯೂ ಮೂಢನಂಬಿಕೆಗಳು ಇರುತ್ತವೆ. ವನ್ಯ ಸಂರಕ್ಷಣೆಯೂ ಇದಕ್ಕೆ ಹೊರತಲ್ಲ.

ತುಂಬ ಪ್ರಚಲಿತವಾಗಿರುವ ಮೂಢನಂಬಿಕೆ ಎಂದರೆ ಬೀಜದುಂಡೆಗಳನ್ನು ಎಸೆಯುವುದರಿಂದ ಕಾಡು ಬೆಳೆಯುತ್ತದೆ ಎಂಬುದು. ಇಂದು ಇದರಿಂದ ಉಂಟಾಗುವ ಸಮಸ್ಯೆಗಳನ್ನು ತಿಳಿಯಲು ಅಂಕಣದ ಉಳಿದ ಭಾಗವನ್ನು ಮೀಸಲಿಡೋಣ.

ಬೀಜದುಂಡೆಯಿಂದ ತೊಂದರೆಯೇನು ಬಂತು ಎಂಬ ಭಾವವೇ ಅನೇಕರಲ್ಲಿದೆ. ದುರಾದೃಷ್ಟವಶಾತ್ ಎಷ್ಟೋ ಜನ ಪರಿಸರ ಸಂರಕ್ಷಣೆ ಎನ್ನುವವರು ಹಾಗೂ ಜೀವಿವೈವಿಧ್ಯ ಕಾಪಾಡುವ ಜವಾಬ್ದಾರಿ ಸ್ಥಾನಗಳಲ್ಲಿರುವವರೂ ಬೀಜದುಂಡೆಯನ್ನು ಎಸೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಷಯ ತಿಳಿಯದವರಿಗಾಗಿ ಈ ಬೀಜದುಂಡೆ ಎಂದರೇನು ಎಂದು ಮೊದಲು ತಿಳಿಯೋಣ. ನಮ್ಮಲ್ಲಿ ಯಥೇಚ್ಛವಾಗಿ ಸಿಗುವ ಮಾವು, ಹಲಸು, ಸಪೋಟ ಇತ್ಯಾದಿ ಹಣ್ಣುಗಳ ಬೀಜಗಳನ್ನು ಸಗಣಿ, ಗೊಬ್ಬರ ಇತ್ಯಾದಿಗಳೊಂದಿಗೆ ಸೇರಿಸಿ ಅದಕ್ಕೆ ಮಣ್ಣನ್ನು ಮಿಶ್ರಮಾಡಿ ಉಂಡೆ ಕಟ್ಟುವುದು. ಈ ಉಂಡೆಗಳನ್ನು ಕಾಡುಗಳಲ್ಲಿ ಎಸೆದುಬಿಡುವುದು. ಇದೇ ಬೀಜದುಂಡೆ ಹಾಗೂ ಅದರ ಪ್ರಯೋಗ. ಮೇಲ್ನೋಟಕ್ಕೆ ವ್ಹಾ! ಎಂತಹ ಒಳ್ಳೆಯ ಆಲೋಚನೆ! ಎನಿಸದಿರದು! ಆದರೆ, ಇದು ನಿಜವಾಗಿ ಪರಿಸರದ ಮೇಲೆ ಹಾಕುವ ಬಾಂಬ್‍!

ಈಗ ಇದರಿಂದ ಉಂಟಾಗುವ ಸಮಸ್ಯೆಗಳನ್ನು ನೋಡೋಣ. ಬಹಳ ಮುಖ್ಯವಾಗಿ  ಪರಿಸರದಲ್ಲಿ ಜೀವವಿಕಾಸದ ಹಾದಿಯಲ್ಲಿ ಸಾಗಿಬಂದಂತೆ ಹಾಗೂ ಸ್ಥಳೀಯ ಭೂವಿಜ್ಞಾನದಂತೆ ಅಲ್ಲಿನ ಜೀವಿಪರಿಸರ ಸೃಷ್ಟಿಯಾಗಿರುತ್ತದೆ. ಹಾಗಾಗಿ ಕೆಲವೆಡೆ ನಿತ್ಯಹರಿದ್ವರ್ಣದ ಕಾಡುಗಳು ಕಂಡುಬಂದರೆ ಮತ್ತೆ ಕೆಲವೆಡೆ ಕುರುಚಲು ಕಾಡುಗಳಿರುತ್ತವೆ. ಮತ್ತೊಂದೆಡೆ ಹುಲ್ಲುಗಾವಲುಗಳಿದ್ದರೆ, ಮಗದೊಂದು ಕಡೆ ಮರುಭೂಮಿ ಇರುತ್ತದೆ. ಆಯಾ ಪ್ರದೇಶಗಳಲ್ಲಿ ಅಲ್ಲಿನ ಆವಾಸಕ್ಕೆ ಹೊಂದುವಂತಹ ಜೀವಿಗಳು ವಿಕಾಸವಾಗಿರುತ್ತವೆ. ಬೀಜದುಂಡೆ ಅಥವಾ ಯಾವುದೇ ಕಾರಣದಿಂದ ಕುರುಚಲು ಕಾಡಿನಲ್ಲಿ ಗಿಡಗಳನ್ನು ಬೆಳೆಸಿ ದಟ್ಟಕಾಡನ್ನಾಗಿಸಿದರೆ ಕುರುಚಲು ಕಾಡಿನಲ್ಲಿದ್ದ ಪಕ್ಷಿ, ಪ್ರಾಣಿಗಳು ನೆಲೆ ಕಳೆದುಕೊಳ್ಳುತ್ತವೆ. ಉಳಿಸುತ್ತೇವೆ ಎಂದು ಹೋಗಿ ಪರಿಸರ ನಾಶವನ್ನು ನಾವು ಕೈಯ್ಯಾರೆ ಮಾಡಿದಂತಾಗುತ್ತದೆ. ಬೀಜದುಂಡೆಯಲ್ಲಿನ ಬೀಜಗಳು ಮೊಳೆತು ಬೆಳೆದರೆ ಕೆಲವೇ ಬಗೆಯ ಸಸ್ಯಗಳು ಕಾಡಿನಲ್ಲಿ ಹೇರಳವಾಗಿ ಕೆಲವೇ ಬಗೆಯ ಪಕ್ಷಿ ಪ್ರಾಣಿಗಳನ್ನು ಪೋಷಿಸುತ್ತದೆ. ಇದು ಜೀವಿವೈವಿಧ್ಯಕ್ಕೆ ಧಕ್ಕೆ ತರುತ್ತದೆ. ಇದು ಅರಣ್ಯ ಪರಿಸರಕ್ಕೆ ಬಹಳ ದೊಡ್ಡ ಹೊಡೆತ.  ಇನ್ನು ಬೀಜದುಂಡೆಗಳನ್ನು ತಯಾರಿಸುವಾಗ ಎಷ್ಟೇ ಗಮನವಹಿಸಿದರೂ ಬೀಜದುಂಡೆಗಳಲ್ಲಿ ಪಾರ್ಥೇನಿಯಂ, ಲಾಂಟನದಂತಹ ಆಕ್ರಮಣಕಾರಿ ಸಸ್ಯ ಬೀಜಗಳು ಸೇರಿಬಿಡುತ್ತವೆ. ಇವುಗಳ ಗಾತ್ರ ಅತಿ ಸಣ್ಣದಾಗಿರುವುದರಿಂದ ಅವುಗಳ ಇರುವಿಕೆ ಗೊತ್ತಾಗದು. ಇದರಿಂದ ಇಡೀ ಕಾಡು ನಾಶವಾಗುತ್ತದೆ. ಈಗಾಗಲೇ ಭಾರತದ ಕಾಡುಗಳಿಗೆ ಈ ಆಕ್ರಮಣಕಾರಿ ಸಸ್ಯಗಳಿಂದ (invasive species) ವಿಪರೀತ ಹಾನಿಯಾಗಿದೆ. ಇದು ಸಹ ಬಹಳ ದೊಡ್ಡ ತೊಂದರೆಯನ್ನು ನಮ್ಮ ಕಾಡುಗಳಿಗೆ ಒಡ್ಡುತ್ತದೆ. ಹಾಗೆಯೇ, ಜೀಜ, ಗೊಬ್ಬರ ಮಣ್ಣು ಇತ್ಯಾದಿಗಳಲ್ಲಿ ಯಾವುದಾದರೂ ಸಸ್ಯ ರೋಗಕಾರಗಳಿದ್ದರೆ ಅದೂ ಕಾಡಿಗೆ ಹಬ್ಬುತ್ತದೆ. ಇನ್ನು  ಯಾವಯಾವುದೋ ಪ್ರಭೇಧದ ಬೀಜಗಳನ್ನು ಹಾಕುವುದರಿಂದ ಆ ಕಾಡಿನ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗುತ್ತದೆ. ಇದುವರೆಗೂ ಸ್ವಾಭಾವಿಕವಾಗಿ ಕಾಡು ಬೆಳೆದುಕೊಂಡು ಬಂದ ಹಾದಿ ತಪ್ಪಿ ತೊಂದರೆಗಳಾಗುತ್ತವೆ. ಕಾಡುಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಸಂರಕ್ಷಿಸುವುದು ಬಹಳ ಮುಖ್ಯ. ಬೀಜದುಂಡೆ ಅದನ್ನು ತಪ್ಪಿಸುತ್ತದೆ. ಕಾಡಿನ ಅನನ್ಯತೆಯನ್ನು ಕಾಪಾಡುವುದು ಹಲವಾರು ಕಾರಣಗಳಿಂದ ಬಹಳ ಮುಖ್ಯ. ಇದು ಒಂದು ಪುಸ್ತಕ ಬರೆಯಬಹುದಾದಷ್ಟು ವ್ಯಾಪಕವಾದ ವಿಷಯ. ಬೀಜದುಂಡೆ ಇದಕ್ಕೆ ಧಕ್ಕೆ ತರುತ್ತದೆ. ಇವುಗಳನ್ನು ಮನನ ಮಾಡಿರಿ. ಬೀಜದುಂಡೆಯಿಂದ ಕಾಡು ಬೆಳೆಯುತ್ತದೆ ಎಂಬುದು ಎಷ್ಟು ಅಪಾಯಕಾರಿ ಮೂಢನಂಬಿಕೆ ಎಂಬುದನ್ನು ತಿಳಿಯಿರಿ. ಕಾಡಿನ ಸಂರಕ್ಷಣೆಗೆ ಬೀಜದುಂಡೆ ಬಹುದೊಡ್ಡ ಹೊಡೆತವೇ ಸರಿ. ಹಾಗಿದ್ದರೆ ನಾವು ಮಾಡಬೇಕಾಗಿರುವುದು ಏನು ಎಂದರೆ  ಸಂರಕ್ಷಣಾಸಕ್ತರಾಗಿ ನಾವು ಮಾಡಬೇಕಾಗಿರುವುದು ಕಾಡನ್ನು ಅದಿರುವಂತೆ ಕಾಪಾಡುವುದೇ ಆಗಿರುತ್ತದೆ. ಇದು ಬಹಳ, ಬಹಳ ಮುಖ್ಯ ಹಾಗೂ ಇದೇ ನಾವು ಕಾಡಿಗೆ ಮಾಡುವ ಮಹದುಪಕಾರ! ಮತ್ತೊಂದು ಅತಿಮುಖ್ಯವಾಗಿ ನಾವು ಮಾಡಬೇಕಾಗಿರುವುದು ಎಂದರೆ ಕಾಡಿಗೆ ಬೆಂಕಿ ಬೀಳದಂತೆ ತಡೆಯುವುದು. (ಹಾಗೆ ನೋಡಿದರೆ ಬೆಂಕಿ ಕೊಡದಂತೆ ಎನ್ನಬೇಕು! ಭಾರತದಲ್ಲಿನ ಎಲ್ಲ ಕಾಡಿನ ಬೆಂಕಿಗಳು ಮಾನವರಿಂದಲೇ ಆಗುವುದು) ಎಚ್ಚರವಹಿಸುವುದು. ಇಷ್ಟು ಮಾಡಿದರೆ ಬಹಳಷ್ಟು ಸಾಧಿಸಿದಂತೆ ಆಗುತ್ತದೆ. ಇದಕ್ಕೆ ಬೇಕಾದ ಕಾನೂನುಗಳು ಇವೆ. ಅರಣ್ಯ ಇಲಾಖೆಯೊಂದಿಗೆ ಸಂರಕ್ಷಣೆಗೆ ಸಹಕರಿಸಬೇಕು. ನಮ್ಮ ಮಾರ್ಗ ಹೆಚ್ಚೆಚ್ಚು ವೈಜ್ಞಾನಿಕವಾದಷ್ಟೂ ಫಲ ಸೊಗಸಾಗಿರುತ್ತದೆ.

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ವಿಶ್ವ ಜೀವಿವೈವಿಧ್ಯದ ದಿನದಂದು ಸಂರಕ್ಷಣೆಯ ಮೂಢನಂಬಿಕೆಗಳನ್ನು ಕುರಿತು ಅರಿಯಲು ಆರಂಭಿಸಿದ್ದೇವೆ. ಮತ್ತೆ ಮುಂದಿನ ವಾರ ಭೇಟಿಯಾಗಿ ಇದನ್ನು ಮುಂದುವರೆಸೋಣ. ತಮ್ಮ ಅಭಿಪ್ರಾಯಗಳನ್ನು ಬರೆದು ತಿಳಿಸಲು ಮರೆಯಬೇಡಿ.

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!