ಆಕೆ ಸರಸವಾಡುತ್ತಿದ್ದಳು, ತನ್ನೊಳಗಿರುವ ಕೃಷ್ಣನ ಜತೆ. ಆಕೆಯನ್ನು ಬಿಟ್ಟರೆ ಅವನು ಕೃಷ್ಣನಲ್ಲ. ಅವನನ್ನು ಬಿಟ್ಟರೆ ಆಕೆ ರಾಧೆಯಲ್ಲ. ಅವಳ ಪ್ರೀತಿ ಅವನಿಗೆ ಸಂಕೋಲೆಯಾಗಲಿಲ್ಲ. ಅವನ ಪ್ರೀತಿ ಅವಳಿಗೆ ಅಪೂರ್ಣವೆನಿಸಲಿಲ್ಲ…
♥♥♥♥
♦ ಅನಂತ್ ಕಾಮತ್
response@newsics.com
newsics.com@gmail.com
ಹೊ ರಟ.. ಹೊರಟೇ ಬಿಟ್ಟ ನಂದಗೋಕುಲಕ್ಕೆ ಬೆನ್ನು ಹಾಕಿ. ಕರೆಯಲು ಬಂದವನ ಬೆನ್ನಿಗೆ ಮುಖ ನೀಡಿ.
ಹೊರಟಿದ್ದ ಆತ, ಅವನ ಅಳುವಿಗೆ ಕಣ್ಣೀರಾದವರನ್ನು ಬಿಟ್ಟು.
ಅವನ ನಗುವಿಗೆ ಬಿರಿಯುವ ತುಟಿಯಾದವರನ್ನು ಬಿಟ್ಟು.
ಅವನ ಹಸಿವಿಗೆ ಹಾಲಾದವರನ್ನು ಬಿಟ್ಟು.
ಅವನ ಉಸಿರಿಗೆ ಉಸಿರಾದವರನ್ನು ಬಿಟ್ಟು.
ಬಹುದೂರ ಹೋಗುತ್ತಿದ್ದ. ಪಕ್ಕದಲ್ಲಿ ತಲೆಯೆತ್ತಿ ನಿಂತಿರುವ ಬಿದಿರೇಕೋ ಅಳುತ್ತಿದೆ.
“ಚಿಕ್ಕವನಿದ್ದಾಗಲೇ ಸತ್ತಿದ್ದರೆ ನಿನ್ನುಸಿರನ್ನೇ ನನ್ನುಸಿರಾಗಿಸಿಕೊಳ್ಳುವ ಕೊಳಲಾದರೂ ಆಗುತ್ತಿದ್ದೇನಲ್ಲೋ. ಅಯ್ಯೋ ಮತ್ತೆಂದೂ ನಿನ್ನನ್ನು ಕಾಣಲಾಗದೆ..? ನಿನ್ನ ಕೊಳಲ ಧ್ವನಿ ಮತ್ತೆ ಕೇಳಲಾಗದೆ..?”
ಮೆಲ್ಲನೆ ನಕ್ಕನಾತ. ನಗುವಿನಲ್ಲೇ ಉತ್ತರವಿತ್ತು.
ಎಷ್ಟೋ ತಾಯಂದಿರ ಅಳುವಿನ ಧ್ವನಿಗೆ ಉತ್ತರ ಸಿಗುವ ಮೊದಲು ನನ್ನ ಧ್ವನಿ ಮತ್ತೆ ಕೇಳಿಸದು ನಿನಗೆ. ನಿನ್ನೊಳಗಿನ ಗೆಣ್ಣನ್ನು ಕಳೆದುಕೊಂಡು ಹಗುರಾಗು.
ನಿನ್ನುಸಿರೇ ಕೊಳಲ ದನಿಯಾದೀತು..!
ಮೇವನ್ನು ಮರೆತು ನೋವನ್ನೇ ತಿನ್ನುತ್ತಾ ನೋವನ್ನೇ ಮೇವಾಗಿಸಿಕೊಂಡು ಕಣ್ಣೀರ್ಗರೆಯುತ್ತಾ ಕಣ್ಣೀರನ್ನೇ ಪ್ರಶ್ನೆಯಾಗಿಸಿ ನಿಂತಿದ್ದವು ನಂದಗೋಕುಲದ ಗೋವುಗಳು. “ಮತ್ತೆ ನಮ್ಮನ್ನು ಕಾಯ್ವರಾರು..?” ಅವುಗಳ ಕಣ್ಣೀರಿಗೆ ಅವನ ಕಣ್ಣೇ ಉತ್ತರ.
“ಅಳುವ ಭೂಮಾತೆಯ ಕಣ್ಣೀರು ನಿಲ್ಲುವವರೆಗೂ ನೀವು ಕಾಯಬೇಕು ನನಗಾಗಿ”.
ಓಡಿ ಬಂದರು ಎಲ್ಲಿಂದಲೋ ಗೋಕುಲದ ಗೋಪಿಕೆಯರು.
“ಇನ್ನು ಬೆಣ್ಣೆ ತಿನ್ನಲು ಬರಲಾರೆಯಾ ಕೃಷ್ಣಾ..?
ಯಾರೋ ಹೇಳಿದರು..,
ನೀನು ದೇವ, ನಾವು ಜೀವ.
ನೀನು ಸಿಂಧು, ನಾವು ಬಿಂದು.
ಹ್ಹುಂ.. ನಮಗದು ಗೊತ್ತಿಲ್ಲ ಕೃಷ್ಣಾ.
ನಮ್ಮ ಚೋರ ಕೃಷ್ಣ ಮತ್ತೆ ಸಿಗುವುದೆಂತು..?”
ಮತ್ತೆ ಉತ್ತರಿಸಿತು ಆ ಕಣ್ಣು.
“ನಿಮ್ಮ ಮನಕೆ ಭಕ್ತಿಯ ಕಡೆಗೋಲಿಟ್ಟು ಹದವಾಗಿ ಕಡೆಯಿರಿ. ನಾನೇ ಬರುವೆ ನವನೀತವಾಗಿ”.
ನಿಧಾನವಾಗಿ ದೂರವಾಗುತ್ತಿದ್ದ ನಂದಗೋಕುಲಕ್ಕೆ…!
ಕಳುಹಿಸಲು ಬಂದವರು ಹಿಂಬಾಲಿಸುವುದನ್ನು ನಿಲ್ಲಿಸುವಷ್ಟು ದೂರವಾದನು ಕೃಷ್ಣ…!
ಉಹೂಂ.. ಇಲ್ಲ… ಇಲ್ಲಾ…!
ಆಕೆ ಬರಲೇ ಇಲ್ಲ.
ಆಕೆ ಅಳಲೂ ಇಲ್ಲ.
ಆಕೆ ನಗುತ್ತಿದ್ದಳು.
ಆಕೆ ಸರಸವಾಡುತ್ತಿದ್ದಳು, ತನ್ನೊಳಗಿರುವ ಕೃಷ್ಣನ ಜತೆ.
ಆಕೆಯನ್ನು ಬಿಟ್ಟರೆ ಅವನು ಕೃಷ್ಣನಲ್ಲ.
ಅವನನ್ನು ಬಿಟ್ಟರೆ ಆಕೆ ರಾಧೆಯಲ್ಲ.
ಅವಳ ಪ್ರೀತಿ ಅವನಿಗೆ ಸಂಕೋಲೆಯಾಗಲಿಲ್ಲ.
ಅವನ ಪ್ರೀತಿ ಅವಳಿಗೆ ಅಪೂರ್ಣವೆನಿಸಲಿಲ್ಲ.
ಬದುಕಿದರು ಇಬ್ಬರೂ ಒಬ್ಬರನ್ನೊಬ್ಬರು ಬಿಡದೆ.
ಒಬ್ಬರನ್ನೊಬ್ಬರು ನೋಡದೇ.
ರಾಧಾಕೃಷ್ಣರಾಗಿ…