* ಸನಿಹ
response@134.209.153.225
ಮನು,
ನಿನ್ನ ಪತ್ರ ಬಂದು ಬಹಳ ದಿನಗಳೇ ಕಳೆದವು. ಗೊತ್ತು ನೀನು ಕಾಯುತ್ತಿರುತ್ತಿ ಅಂತ. ಕಾಯುವುದರಲ್ಲಿ ಎಷ್ಟು ಸುಖವಿದೆ ಅಲ್ವಾ. ನಿರೀಕ್ಷೆಗಳ ಮೆರವಣಿಗೆಯಲಿ ಸುತ್ತಲ್ಲ ನಿಟ್ಟುಸಿರುಗಳ ಮಹಲು ಹೆಣೆದು. ಕಣ್ಣ ಛಾವಣಿಯಲ್ಲಿ ಮಂಕು ಮಂಕು ಕನಸಿನ ದೀಪ ಹಚ್ಚಿ ಈಗಲೋ ಆಗಲೋ ಬರಬಹುದಾದ ಒಂದು ಕರೆಗೋ, ಸನ್ನೆಗೋ ಅಥವಾ ಇದೇ ರೀತಿಯ ಪತ್ರಕ್ಕೋ ಕಾಯುತ್ತ ಕೂರುವುದಿದೆಯಲ್ಲ ಆಹ್ ಎಷ್ಟು ಮಧುರ. ಮೈಯ್ಯ ನರಗಳೆಲ್ಲ ಒಲಿದವನ ಹೆಸರು ನುಡಿವಾಗ, ಇರುಳೆಲ್ಲ ಹೆಬ್ಬಾವಿನ ಹಾಗೆ ಸುತ್ತಿನ ನರಳಿಸುವಾಗ, ಎದೆಯೊಳಗೆ ಸಾವಿರ ಚೂರಿಗಳು ಇಳಿದು ಎಲ್ಲಿ ನಿನ್ನವ ಎಂದು ಇರಿಯುವಾಗ ಸ್ವರ್ಗದ ಚೂರೊಂದು ಹೆರಳಿಗೆ ಅಂಟಿಕೊಂಡಂತೆ ಅನ್ನಿಸುತ್ತದೆ ಮನು. ಗೊತ್ತು ಗೊತ್ತು ಬಿಡು ನೀನು ಇವೆಲ್ಲ ಸುಳ್ಳು ಎನ್ನುತ್ತಿ. ತಲೆ ಸರಿ ಇಲ್ಲ ನಿಂಗೆ ಅನ್ನುತ್ತಿ. ಪತ್ರ ಬರೆಯದೆ ಇರುವುದಕ್ಕೆ ಕಾರಣ ಕೊಡುತ್ತಿದ್ದಿ ಎನ್ನುತ್ತಿ. ಕವಿತೆ ಬರೆಯೋದು ಕಡಿಮೆ ಮಾಡು ಎನ್ನುತ್ತಿ. ಆದರೆ ನನಗೆ ಈ ಯಾವುದನ್ನು ಬಿಡುವುದು ಸಾಧ್ಯವಿಲ್ಲ ಮನು. ಹೇಳು ಕನಸುಗಳ ನಾವೆ ಇಲ್ಲದೆ ಬದುಕ ಸಾಗರ ದಾಟುವುದು ಹೇಗೆ. ವಾಸ್ತವದ ಕನವರಿಕೆಗಳಿಂದ ನಾವು ಕೊಂಚವಾದರೂ ಆಚೆ ಇರದೇ ಇದ್ದರೆ ತುಟಿಯಂಚ ನಗುವ ಕಾಪಿಟ್ಟುಕೊಳ್ಳುವುದು ಹೇಗೆ ಹೇಳು. ಇನ್ನು ಪತ್ರ ಬರೆಯದೆ ಇದ್ದದ್ದು ಯಾಕೆ ಎಂದು ನೀನು ಕೇಳುವುದಿಲ್ಲ ಗೊತ್ತು. ಆದರೆ ಕೋಪದಲ್ಲಿ ಗಂಟಿಕ್ಕುವ ನಿನ್ನ ಹುಬ್ಬು, ಕಿರಿದಾಗಿ ದಿಟ್ಟಿಸುವ ನಿನ್ನ ನೋಟಗಳ ನಾನು ಇಲ್ಲಿಂದಲೇ ಅಂದಾಜಿಸಬಲ್ಲೆ. ಹೇಳುತ್ತ ಹೋದರೆ ನೂರು ಕಾರಣ. ಆದರೆ ಅಸಲಿ ಯಾವುದಕ್ಕು ಕಾರಣವಿರುವುದಿಲ್ಲ. ಕಾರಣಗಳನ್ನು ನಾವು ಸೃಷ್ಟಿಸಿಕೊಳ್ಳುತ್ತೇವೆ ಅಂತಲೇ ಅನ್ನಿಸುತ್ತದೆ. ನಿನಗೆ ಪತ್ರ ಬರೆಯಲು ಸಮಯವಿರಲಿಲ್ಲ ಎಂದು ಹೇಳುವ ಕ್ಷಣದಲ್ಲಿಯೇ ನಾನು ಐಸ್ ಕ್ರೀಮನ್ನೋ, ದೋಸೆಯನ್ನೋ ತಿನ್ನುತ್ತೇನೆಂದರೆ ನೀನೆ ಹೇಳು, ಈ ನೆವಗಳಿಗೆ ಅರ್ಥವಿದೆಯಾ. ಮನುಷ್ಯ ಮೂಲತಃ ಸ್ವಾರ್ಥಿ ಮನು. ತನ್ನ ಎಲ್ಲ ಕೆಲಸದ ನಂತರವಷ್ಟೆ ಅವ ಬೇರೆಯವರ ಬೇಕು ಬೇಡಗಳನ್ನು ನೋಡುತ್ತ ಹೋಗುತ್ತಾನೆ. ಅದಕ್ಕೆ ನಾನು ನೀನು ಮತ್ತು ಜಗತ್ತಿನ ಇನ್ನು ಇತರೆಯವರು ಕೂq. ಅದಕ್ಕೆ ಈ ಪ್ರೀತಿ ಕೂಡ ಹೊರತಲ್ಲ. ನಾನೊಮ್ಮೆ ಎಲ್ಲಿಯೋ ಓದಿದ್ದೆ ಮನು. ಈ ಜಗತ್ತಿನಲ್ಲಿ ಬ್ಯುಸಿ ಎನ್ನುವ ಪದವೇ ಶುದ್ಧ ಸುಳ್ಳು. ಮನುಷ್ಯ ತನಗೆ ಬೇಕಾದ ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳುತ್ತಾನೆ. ಆದರೆ ಬೇಡವೆನ್ನಿಸಿದ್ದಕ್ಕೆ ಸಮಯದ ಕಾರಣ ಹೇಳುತ್ತ ನೆಂಟಸ್ತಿಕೆ ಮುರಿದುಕೊಳ್ಳುವ ಯತ್ನ ಮಾಡುತ್ತಾನೆ. ಹೇ ಚಂದ್ರಮ ಕೋಪಗೊಳ್ಳಬೇಡವೋ ಲೋಕಾರೂಢಿ ಮಾತುಗಳ ಹೇಳಿದೆನಷ್ಟೆ. ನಿಜಕ್ಕೂ ನಿನ್ನ ಪತ್ರಕ್ಕೆ ಅಂದೇ ಉತ್ತರಿಸಬೇಕೆಂದುಕೊಂಡಿದ್ದೆ. ಆದರೆ ಮನಸ್ಸು ಕಲಕಿತ್ತು. ಯಾಕೆ ಏನು ಕೇಳಬೇಡ. ನಂಗೆ ಗೊತ್ತು ಏನನ್ನು ಕೇಳದೆ ನನ್ನ ಆವರಿಸಿಕೊಂಡವನು ನೀನು. ನಿನ್ನ ಆ ನಿಷ್ಕಾರಣ ಒಲವೇ ನಾನು ನಿನ್ನ ಮಿಡಿತಗಳಲ್ಲಿ ಸೇರುವಂತೆ ಮಾಡಿದ್ದು. ಎದೆಯ ಆಕಾಶದಲ್ಲಿ ಬಣ್ಣದ ಓಕುಳಿ ಎರಚಿಕೊಂಡಿದ್ದು, ಮತ್ತು ಚಿಟ್ಟೆಯಂತೆ ರೆಕ್ಕೆಗಳ ಕಟ್ಟಿಕೊಳ್ಳುತ್ತ ನಕ್ಷತ್ರಗಳ ನಾಡಿನಲ್ಲಿ ಅಲೆಯುವಂತೆ ಮಾಡಿದ್ದು. ನೀ ಬಿಡಿಸಿದ ಬೆಳಕಿನುಂಗುರದಲಿ ಮಿಂದೇಳುತ್ತ ಮುಂಗುರುಳ ತೀಡಿಕೊಂಡಿದ್ದು. ನನ್ನ ಬಣ್ಣದ ಕನಸು ನೀನು ಕಣೋ ಗೂಬೆ. ಯಾರೊಂದಿಗೂ ಈ ನಂಟಿನ ಹಂಗಿಲ್ಲ. ನೂರು ದಾರಿಗಳ ಭಾವವಿಲ್ಲ. ಆದರೂ ಈ ಮನಸ್ಸು ಕೆಲವೊಮ್ಮೆ ಮುದುಡಿಬಿಡುತ್ತದೆ. ಕಾಡುತ್ತದೆ. ವಾಸ್ತವದ ನೇವರಿಕೆಗಳಲಿ ಬಳಲಿ ಬಾಯಾರಿ ಬಿಡುತ್ತವೆ. ಆಗೆಲ್ಲ ಯಾವುದು ಬೇಡ ಅನ್ನಿಸುತ್ತದೆ ಮನು. ಮನುಷ್ಯ ಏಕಾಂಗಿತನ ಸೀದಾ ಎದುರು ನಿಂತು ಬಾ ನನ್ನೆಡೆಗೆ ಉಳಿದ ಎಲ್ಲವೂ ನಶ್ವರ ಎಂದು ಕರೆಯತೊಡಗುತ್ತದೆ. ಎಂದಿದ್ದರೂ ಬಿಟ್ಟು ಹೋಗುವ ಬದುಕಿಗಾಗಿ ರಗಳೆ ಯಾತಕ್ಕೆ ಅನ್ನಿಸುತ್ತದೆ. ಗುರುಗುಟ್ಟಬೇಡವೋ ಮಹರಾಯ ಮತ್ತೆ ನಾನೇನು ಡಿಪ್ರೆಶನ್‍ಗೆ ಹೋಗಿಲ್ಲ. ಆದರೆ ಇಲ್ಲಿನ ವ್ಯವಸ್ಥೆಗಳು ಅದರಲ್ಲೂ ಹೆಂಗಸರ ಸ್ಥಿತಿಗತಿಗಳ ನೋಡಿದಾಗಲೆಲ್ಲ ಈ ರೀತಿಯಾದ್ದು ಏನೇನೋ ಕಾಡಿ ಬಿಡುತ್ತದೆ. ನೀನು ನೋಡಿದೆಯೋ ಇಲ್ಲವೋ ಗೊತ್ತಿಲ್ಲ. ಮೊನ್ನೆ ಉತ್ತರ ಪ್ರದೇಶದಲ್ಲಿ ಅರವತ್ತು ವರ್ಷದ ಮುದುಕಿಯೊಬ್ಬಳು ಇಪ್ಪತ್ತೆರಡರ ಯುವಕನನ್ನ ಮದ್ವೆಯಾದಳು. ಅವರಿಬ್ಬರದು ವಿಚಿತ್ರ ಪ್ರೇಮ ಬಿಡು ಅದು ಹೇಳಿ ಮುಗಿಯುವಂಥದ್ದಲ್ಲ. ಆದರೆ ಅವರಿಬ್ಬರ ವ್ಯವಹಾರದಿಂದಾಗಿ ಸಮಾಜಕ್ಕೆ ತೊಂದರೆಯಾಗುತ್ತದೆ ಎಂದು ಎಫ್‍ಐಆರ್ ದಾಖಲಾಗಿದೆಯೆಂದು ಓದಿದೆ. ಪ್ರೇಮಕ್ಕೆ ಯಾವ ವಯಸ್ಸುಂಟು ಮನು. ನಿಜ ಹೇಳಲಾ ಆ ವಿಚಾರ ನಂಗೂ ಸ್ವಲ್ಪ ಕಿರಿ ಕಿರಿ ಮಾಡಿತು. ಸಾಂಪ್ರದಾಯಿಕ ಮನಸ್ಸು ನೋಡು, ಹಾಗಾಗಿ. ಬಿಡು ಅವರಿಬ್ಬರು ಏನಾದರೂ ಮಾಡಿಕೊಳ್ಳಲಿ ವಿಚಾರ ಅದಲ್ಲ. ಅದೇ ಅರವತ್ತ ಮುದುಕನೊಬ್ಬ ಹೀಗೆ ಇಪ್ಪತ್ತರ ಹೆಣ್ಣು ಮಗಳನ್ನು ಮದುವೆಯಾಗಿದ್ದರೆ ಹೀಗೆ ದೂರು ದಾಖಲಿಸುತ್ತಿದ್ದರಾ ಎನ್ನುವುದು ಪ್ರಶ್ನೆ. ಯಾಕೆ ಪ್ರತಿಯೊಂದಕ್ಕೂ ಹೆಣ್ಣನ್ನು ಗುರಿಯಾಗಿಸ್ತಾರೆ? ಯಾವ ಪುರುಷಾರ್ಥವನ್ನು ಸಾಧಿಸಿ ಹೋಗುವುದಿದೆ ಹೇಳು. ಜೀವನ ಎಷ್ಟು ನಶ್ವರ ಅಲ್ವಾ. ಈಗಿದ್ದವರು ಇನ್ನೊಂದು ಕ್ಷಣಕ್ಕಿಲ್ಲ ಅಂತಹದ್ದೊಂದು ಸತ್ಯವನ್ನು ಎದುರಿದ್ದರು ಶಾಶ್ವತ ಸತ್ಯ ತಾವೇ ಎನ್ನುವಂತೆ ನಡೆದುಕೊಳ್ತಾರಲ್ಲ ಇದು ಹುಚ್ಚು ಮಾನಸಿಕತೆಯ ವಿಪರೀತದ ಹಂತ ಎನ್ನಿಸತ್ತೆ. ನಂಗೆ ಗೊತ್ತು ಮತ್ತೆ ನಾನು ಅಲ್ಲಿಗೆ ಬಂದೆ ಎಂದು ಹೇಳಿ ತಕರಾರು ತೆಗೆಯುತ್ತಿ. ನಿಜ ಹೇಳಲಾ ಮನು ನಿನ್ನ ಈ ತಕರಾರು ನನಗಿಷ್ಟು. ನಿನ್ನೊಲವ ಹೂವೊಂದು ಹೀಗೆ ಬೊಗಸೆ ತುಂಬಿಸಿರುವಾಗ ಕೆಲವೊಮ್ಮೆ ನಿನ್ನ ತಕರಾರುಗಳ ಗಾಳಿ ಮೊರೆತಕ್ಕೆ ಅದು ತುಳುಕಾಡಿ ಎಲ್ಲಿ ಸೋರಿ ಬಿಡುತ್ತದೆಯೋ ಎನ್ನುವ ಭಯದಲ್ಲಿ ಮತ್ತೆ ನಾನದನ್ನು ಹಿಡಿದಿಡುವ ಪ್ರಯತ್ನ ಮಾಡುತ್ತೀನಲ್ಲ ಅದು ಕೂಡ ನನಗಿಷ್ಟ. ಯಾಕೋ ಗೊತ್ತಿಲ್ಲ ಮನು ನೀನು ಏನೆಲ್ಲ ಹೇಳಿದ ಮೇಲೆಯೂ ನಾನು ಅಲ್ಲಿಯೇ ಸುತ್ತುತ್ತಿದ್ದೇನೆ. ನಿಂಗೆ ಗೊತ್ತಾ, ನೀನು ಪರಿಚಯವಾದ ಕ್ಷಣದಿಂದ ಈ ಎಲ್ಲ ಆಲೋಚನೆಗಳು ಮೊಳೆಯತೊಡಗಿದ್ದು. ನೀನು ಏನೆ ಹೇಳು ಅರಳಲು ಕಾದಿರುವ ಮಣ್ಣ ಬೀಜಕ್ಕೆ ಅದರ ಬಿಸುಪಿಗೊಪ್ಪವ ಮಳೆ ಬೇಕು. ಹಾಗಿದ್ದರೆ ಮಾತ್ರ ಚಿಗುರು. ಹಾಗೆಯೇ ನೀನು. ಬಂದ ಘÀಳಿಗೆಯಿಂದ ನನ್ನ ತಲೆಯನ್ನು ಅಸಂಖ್ಯ ಆಲೋಚನೆಗಳ ಗೋಪುರ ಮಾಡಿ ಹಾಕಿದ್ದಿ ನೀನು. ಪ್ರೀತಿ ಎನ್ನುವುದು ಏನು ಎನ್ನುತ್ತಿ ನಾನು ಹೇಳುವ ಉತ್ತರಕ್ಕೆ ನಿನ್ನ ತಲೆ ಎಂದು ಬೈಯ್ಯುತ್ತಿ. ಮತ್ತೆ ಕೆಲವೊಮ್ಮೆ ನೀನೇ ಏನೇನೋ ವ್ಯಾಖ್ಯಾನ ಹೇಳಿ ನೀನು ಹೇಳಿದ್ದು ಸುಳ್ಳೇ ಸುಳ್ಳು ಎಂದು ವಾದಿಸುತ್ತಿ. ನಾನು ತುಸು ಮುದುಡಿದರೂ ಅಯ್ಯೋ ಕಂದಮ್ಮ ಎನ್ನುತ್ತ ಎದೆಗೊತ್ತಿಕೊಳ್ಳುತ್ತಿ. ಯಾಕೋ ಮನು ಈ ಎಲ್ಲವನ್ನೂ ಎಲ್ಲಿ ಕಳೆದುಕೊಳ್ಳುವೆನೋ ಎನ್ನುವ ಸಣ್ಣ ಆತಂಕ. ಇದು ನಿನ್ನ ಕುರಿತಾದ ಭಯವಲ್ಲ ಮನು. ಅನುಮಾನವೂ ಅಲ್ಲ. ಹೇಳಿದರೆ ದುಗುಡಗೊಳ್ಳುತ್ತಿ ಎನ್ನುವ ಕಾರಣಕ್ಕೆ ಆಗಿನಿಂದ ನಿನಗೆ ಏನೋ ರಗಳೆ ಹೇಳಿ ಪತ್ರ ಮುಗಿಸುವ ಹುನ್ನಾರ ಹೂಡುತ್ತಿದೆ ಮನಸ್ಸು. ಆದರೆ ಭಾವಗಳು ಬಯಕೆ ಹುಡಿಯಲ್ಲಷ್ಟೇ ರಂಗುಗೊಳ್ಳಲು ಸಾಧ್ಯ ಮನು. ಯಾಕೋ ನಿನ್ನನ್ನು ಈ ಮನಸ್ಸು ವಿಪರೀತ ಬಯಸುತ್ತಿದೆ. ದುಡಿವ ನಾಲ್ಕು ಇಲ್ಲೇ ಇದ್ದು ದುಡಿಯಬಾರದ ಎನ್ನಿಸುತ್ತಿದೆ. ಯಾವುದೋ ದೇಶದಲ್ಲಿ ಅನಾಮಿಕ ಹಾಗೆ ನೀನು. ಇಲ್ಲಿ ಎಲ್ಲರ ನಡುವೆಯೂ ಒಂಟಿ ಬದುಕುವ ನಾನು. ಬೇಡ ಮನು.. ಬಂದು ಬಿಡು. ಇಲ್ಲ ನೀನು ಬರುವುದು ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಿದೆ. ನೀನು ಒಪ್ಪಿಕೊಂಡ ಪ್ರಾಜೆಕ್ಟ್ ಮುಗಿಯುವುದಕ್ಕೆ ಇನ್ನು ಒಂದೂವರೆ ವರ್ಷವಿದೆ. ಆದರೆ ಅಷ್ಟರಲ್ಲಿ.. ನಿಜ ಮನು ನಿನಗೆ ಸಾವೆನ್ನುವುದು ಬಹಳ ದೂರದ ಸಂಗತಿ. ಯಾವತ್ತೋ ಒಂದು ದಿನ ನಿನ್ನ ಪರಿಚಯದವರೋ ಸಂಬಂಧಿಕರೋ ಇಲ್ಲವಾದರಷ್ಟೇ ನಿನಗೆ ತಿಳಿಯುತ್ತದೆ. ಆದರೆ ನಾನಿಲ್ಲಿ ಆಸ್ಪತ್ರೆಯ ಅಂಗಳದಲ್ಲಿ ಅದೆಷ್ಟೋ ಸಾವುಗಳನ್ನು ನೋಡಿದ್ದೇನೆ. ಅವರ್ಯಾರು ನನ್ನವರಿಲ್ಲದೆ ಇರಬಹುದು. ಆದರೆ ಪ್ರತಿಯೊಬ್ಬರನ್ನು ಆಸ್ಪತ್ರೆಯ ಸ್ಟ್ರೆಚರ್‍ನಲ್ಲಿ ನಿಸ್ತೇಜ ನೋಡುವಾಗ ಈ ಬದುಕಿನ ಕುರಿತಾದ ಅಪನಂಬಿಕೆ ಇದ್ದಕ್ಕಿದ್ದ ಹಾಗೆ ಎದ್ದು ನಿಲ್ಲುತ್ತದೆ. ಅರೇ ಯಾವುದರ ಸಲುವಾಗಿ ನೀವೆಲ್ಲ ಹೊಡೆದಾಡುವುದು ಎನ್ನುವಂತೆ ಕೇಳಿ ಕೇಕೆ ಹೊಡೆಯುತ್ತದೆ. ಆ ದಿನವೆಲ್ಲ ನಾನು ಇನ್ನಿಲ್ಲದ ಆತಂಕಕ್ಕೆ ಒಳಗಾಗುವುದಕ್ಕೆ ಶುರುವಾಗಿದ್ದೇನೆ. ಗೊತ್ತಿದೆ ಮನು ಯಾವುದಕ್ಕೂ ಇಲ್ಲಿ ನೆಲೆ ಇಲ್ಲ. ಇರುವ ನಿರಂತರತೆ ಎಂದರೆ ಅದು ಸಾವು ಮಾತ್ರ. ಹೌದು ಮನು ನಾನು ಕಳೆದ ಕೆಲವು ದಿನಗಳಿಂದ ಅಂದರೆ ಚೀನಾದಲ್ಲಿ ಕೋವಿಡ್ (ಕೊರೋನ ವೈರಸ್) ಶುರುವಾಗಿ ಸಣ್ಣ ವೈರಸ್ ಒಂದು ಮನುಷ್ಯನ ನೆಲಗಟ್ಟನ್ನೇ ಹಾಳುಗೆಡವುತ್ತ ರಣಕೇಕೆ ಹಾಕುವಾಗ ಯಾಕೋ ದಿಗಿಲು ಹತ್ತಿ ಹೋಗಿದೆ. ನಾವು ಮನುಷ್ಯರು ಅಸಾಧಾರಣರು ಅಂದುಕೊಳ್ಳುತ್ತೇವೆ. ಆದರೆ ಎಷ್ಟೋ ಭೂತ ಕನ್ನಡಿ ಹಾಕಿ ಹುಡುಕಿದರೂ ಕಾಣದ ಪುಟ್ಟ ವೈರಸ್ ನಮ್ಮನ್ನು ನೋಡಿ ನಗುತ್ತದೆ ಮನು. ನಮ್ಮ ಅಸ್ತಿತ್ವವೇ ಇಲ್ಲದಂತೆ ಅಳಿಸಿ ಹಾಕುತ್ತದೆ. ಎಷ್ಟೆಲ್ಲ ಕನಸುಗಳು ವೆಂಟಿಲೇಟರ್‍ನಲ್ಲಿ ಇದ್ದಿರಬಹುದು ಯೋಚಿಸು. ಎಷ್ಟೆಲ್ಲ ಫ್ಯೂಚರ್ ಪ್ಲಾನ್ಗಳು ಸುಟ್ಟು ಬೂದಿಯಾಗಿರಬಹುದು. ಎಷ್ಟು ಅಸಹಾಯಕರು ನೋಡು ನಾವು. ಹಾಗಿರುವಾಗ ಈ ಧರ್ಮ, ಈ ಸಂಪ್ರದಾಯ, ಈ ಹೊಡೆದಾಟ. ಯಾವುದು ಉಳಿಯುವುದಿಲ್ಲ ಮನು. ನೀನೇ ಯೋಚಿಸು ಚೈನಾದಲ್ಲಿ ಸಾಯುತ್ತಿರುವ ಎಲ್ಲರಿಗೂ ಅವರವರ ಪ್ರಿಯರು ಇದ್ದೇ ಇರ್ತಾರೆ ಅಲ್ವಾ. ಆದರೆ ಯಾರಾರದೂ ಯಾರನ್ನಾದರೂ ಉಳಿಸಿಕೊಳ್ಳುವ ಸ್ಥಿತಿಯಲ್ಲಿ ಇದ್ದಾರ ಹೇಳು. ಮನುಷ್ಯ ಕೊನೆಗೂ ಹೊಡೆದಾಡುವುದು ತನ್ನ ಸಲುವಾಗಿ ಮಾತ್ರ ಮನು ಅದನ್ನ ಬೇಡವೆಂದರೂ ನಾವು ಒಪ್ಪಿಕೊಳ್ಳಲೇಬೇಕು. ಈ ಪ್ರೀತಿ, ಪ್ರೇಮಗಳು ಕೂಡ ಒಂದು ಹಂತದಲ್ಲಿ ಮಾತು ಕಳೆದುಕೊಂಡು ಬಿಡುತ್ತವೆ. ಹಸಿವು ಮತ್ತು ಪ್ರೇಮದ ನಡುವೆ ಗೆಲ್ಲುವುದು ಯಾವುದು ಎನ್ನುವುದು ನಿಂಗೆ ಗೊತ್ತೇ ಇದೆ. ಹಾಗಿರುವಾಗ ಈ ಮಾತುಗಳು ಕೂಡ ಎಷ್ಟು ಪೊಳ್ಳು ಅಲ್ವಾ. ನಿನ್ನ ಸಲುವಾಗಿ ನಾನು ಬದುಕುತ್ತೇನೆ ಎನ್ನುವುದೇ ದೊಡ್ಡ ತಮಾಷೆಯ ಹಾಗೆ ಕಾಣುತ್ತದೆ ನಂಗೆ. ನಂಬು ನಾನು ಇಲ್ಲಿ ನಿನ್ನ ಪ್ರೀತಿಯನ್ನು ಅಪನಂಬಿಕೆಯ ಎಳೆಗಳಲ್ಲಿ ತರುತ್ತಿಲ್ಲ. ಆದರೆ ಬದುಕಿನ ವೈರುಧ್ಯಗಳು ಹಿಂದಿಗಿಂತ ಹೆಚ್ಚು ಈಗೀಗ ನನಗೆ ಕಾಣತೊಡಗಿವೆ. ಈ ಎಲ್ಲದರ ರೂವಾರಿ ನೀನು. ಬಹುಶ: ನೀನಿಲ್ಲದಿದ್ದರೆ ಈ ಗೋಜಲು ಗೋಜಲು ವಿಚಾರಗಳು ನನ್ನ ಕಾಡುತ್ತಲೇ ಇರಲಿಲ್ಲವೇನೋ. ಮತ್ತು ಅವುಗಳಿಗೆ ನಾನು ಉತ್ತರ ಹುಡುಕುತ್ತ ಸ್ಪಷ್ಟಗೊಳ್ಳುತ್ತಲೂ ಇರಲಿಲ್ಲವೇನೋ. ಎಲ್ಲದಕ್ಕ್ಕೂ ಅಭಾರಿ ಮನು. ಸ್ವಲ್ಪ ಭಾವುಕÀಳಂತೆ ಭ್ರಾಮಕಳಂತೆ ತಿಕ್ಕಲು ತಿಕ್ಕಲಾಗಿ ಪತ್ರ ಬರೆದಿದ್ದೇನೆ. ಇದರ ಸಾರ ಏನು ಎತ್ತ ಎಂದೇನು ಹುಡುಕಬೇಡ. ಸುಮ್ಮನೆ ಓದಿ ನಕ್ಕು ಬಿಡು ಮತ್ತು ಆ ನಗುವಿಗಾಗಿ ನಾನು ಸಾಯುತ್ತೇನೆ ಎಂಬುದನ್ನಷ್ಟೇ ನೆನಪಿಡು.
Love you
ಸನಿ