Thursday, December 2, 2021

ಒಲವೆಂಬ ಹೊತ್ತಗೆಯಲಿ

Follow Us

* ಸನಿಹ
response@134.209.153.225

“ಒಲವೆಂಬ ಹೊತ್ತಗೆ ಹೊತ್ತು ತಂದವ ನಾನು, ಹೆಕ್ಕಿಕೋ ಒಂದೆರಡು ಪದಗಳನ್ನಾದರು” ಹ್ಹ ಹ್ಹ ಸನಿ ನಗು ಬಂತ. ನಗು ಬರದೆ ಮತ್ತೇನು? ಯಾವಾಗಲು ಸಿಗರೇಟು ಸೇದುತ್ತ ಕಂಪ್ಯೂಟರ್‌ನ ಪರದೆಯಲಿ ಕಣ್ಣು ನೆಡುವ ನಾನು ಏಕಾಏಕಿ ಹೀಗೆ ಹೇಳಿದರೆ ನಗು ಬರದೆ ಮತ್ತೇನು. ಸದ್ಯ ನೀನು ನನ್ನ ಪದ್ಯ ಓದಿ ಗಾಬರಿಯಾಗದಿದ್ದರೆ ಸಾಕು. ನಿಜ ಸನಿ ಈ ಪ್ರೀತಿಯೇ ಹೀಗೆ ಪತಾಕೆಯ ಹಾಗೆ ಬದುಕಿನ ಭಾರಗಳ ನಿಂತ ಕಂಬಗಳಿಗೆ ಒರಗಿಸಿ ತಾನು ಮಾತ್ರ ಇನ್ನಿಲ್ಲದಂತೆ ಬೀಸುವ ಗಾಳಿಗೆ ತುಯ್ದಾಡುತ್ತಿರುತ್ತದೆ. ಅಲೆಗಳ ತೋಳಿನಲಿ ಮೀಯುತ್ತ ಜಗದ ಜಂಜಡಗಳ ತೇವ ತಾಕದಂತೆ ಓಡುತ್ತದೆ.
ನೂರು ಕಣ್ಣು ನೂರು ಭಾವ ಅಲೆವ ನೋಟ ನೂರು..
ನನ್ನ ಉಸಿರ ಜೋಳಿಗೆಗೆ ಬೆಳಕು ಬೀರು ಚೂರು
ಅದು ಬಿಡು ಯಾಕಷ್ಟು ದುಗುಡದಲ್ಲಿ ಪತ್ರ ಬರೆದಿದ್ದಿ. ಸಾವು ಗೀವು ಅಂತೆಲ್ಲ, ಎಲ್ಲೊ ಇರುವ ನಾನು ತಲೆ ಹಾಳು ಮಾಡಿಕೊಳ್ಳುವ ಹಾಗೆ. ಯಾಕೆ ಮತ್ತೆ ಡಿಪ್ರೆಶನ್‌ಗೆ ಹೋಗ್ತಿದ್ದಿ. ನಿಜ ಹೇಳಲಾ ನೀನು ಹಾಗೊಂದು ಪತ್ರ ಬರೆಯದೆ ಇದ್ದಿದ್ದರೆ ಚನ್ನಾಗಿತ್ತು ಎಂದು ನನಗೆ ಓದಿದ ತಕ್ಷಣಕ್ಕೆ ಅನ್ನಿಸಿತು. ಈ ಲೋಕ ಇದೆಯಲ್ಲ ಸನಿ ಅಂದರೆ ನಾನು ನೀನು ಕಟ್ಟಿಕೊಂಡ ಒಲುಮೆಲೋಕ ಅದರಲ್ಲಿ ನಾವು ಏನು ನಿರೀಕ್ಷೆ ಮಾಡ್ತೀವಿ ಹೇಳು. ಇರುವ ವಾಸ್ತವಿಕ ಕನವರಿಕೆಗಳಿಂದ ಮುಕ್ತರಾಗಿ ನಿನ್ನ ತೋಳುಗಳಲ್ಲಿ ನಾನು ನನ್ನ ಬೆರಳು ಹಿಡಿದು ನೀನು ನಡೆಯುತ್ತ, ಎಲ್ಲ ಎಲ್ಲ ರಗಳೆ ಮರೆಯಬೇಕು ಎನ್ನುವುದನ್ನ ತಾನೆ. ಆದರೆ ನೀನು ಮಾಡ್ತಿರೋದು ಏನು ಈ ನಮ್ಮ ಪ್ರಪಂಚಕ್ಕೆ ಕೂಡ ನೀನು ಅದೇ ದು:ಖದ ಎಳೆಗಳನ್ನು ತಂದು ಹಾಕಿಕೊಳ್ಳುತ್ತಿದ್ದಿ. ಸ್ಸಾರಿ ನಿನಗೆ ನಾನು ಹೀಗೆ ಹೇಳಿದರೆ ಕೋಪ ಬರತ್ತೆ ಗೊತ್ತು. ಪ್ರೀತಿಯೆಂದ ಮೇಲೆ ನೋವು ಇದ್ದೇ ಇರತ್ತೆ ಎಂದು ನೀನು ವಾದಿಸುತ್ತಿ. ನಾನು ಇಲ್ಲ ಎನ್ನಲಾರೆ. ನೋಡು ನಿನ್ನ ಬಿಟ್ಟು ನಾನು. ನನ್ನ ಬಿಟ್ಟು ನೀನು ಹೀಗೆ ದೂರದ ದಡಗಳಲ್ಲಿ ಕೂತು ಎದುರು ಸುರಿವ ಚಂದಿರನ ಬೆಳಕಲ್ಲಿ ಮನಸ್ಸಿನ ಆಲಯಗಳ ಸುಟ್ಟುಕೊಳ್ಳುತ್ತ ನೋವು ಪಡುವುದು ಬೇರೆ. ಅದು ವಿರಹ, ಪ್ರೀತಿಯ ಕಡಲಿನಲ್ಲಿ ಈ ತೆರೆಗಳು ಇದ್ದೇ ಇರುತ್ತವೆ. ಅದು ನನಗೂ ಗೊತ್ತು. ಆದರೆ ಅದಕ್ಕೆ ಸಂಬAಧಿಸದ ಸಮಸ್ಯೆಗಳ ಜಾಡಿಗೆ ಜೋತುಬಿದ್ದು ಮನಸ್ಸನ್ನ ಕಹಿ ಮಾಡಿಕೊಂಡು… ಊಹೂಂ ಇಲ್ಲ ಸನಿ ಇದನ್ನು ನಾನು ಒಪ್ಪಲಾರೆ. ಹಾಗಂತ ನೀನು ನನ್ನ ಎಂದಿಗು ಮುದಗೊಳಿಸುತ್ತಲೇ ಇರಬೇಕು. ಅಥವಾ ನೀನು ಕಳಿಸುವ ಪತ್ರಗಳಲ್ಲಿ ಒಲವಿನ ನಿನಾದವೆ ಉಕ್ಕಿ ಮೊರೆಯುತ್ತಿರಬೇಕು ಎಂದೇನು ನಾನು ಬಯಸುತ್ತಿಲ್ಲ. ಆದರೆ ನೀನು ಇದೀಗ ಹಚ್ಚಿಕೊಂಡ ನೋವು ಯಾಕೋ ಕಿರಿಕಿರಿ ಉಂಟು ಮಾಡುತ್ತಿದೆ. ಅದೆಲ್ಲೋ ಚೈನಾದಲ್ಲಿ ಕೊರೋನದ ವಿಚಾರ ಪ್ರಸ್ತಾಪಿಸಿದ್ದಿ ಪ್ರೀತಿ ಅಗಲಿಕೆ ಎಂದೇನೊ ಬಡಬಡಿಸಿದ್ದಿ. ನನ್ನ ಕಂದಮ್ಮ ಈ ಪ್ರಪಂಚದಲ್ಲಿ ಸಾವು ಜಯಿಸಿದವರು ಯಾರಿದ್ದಾರೆ ಹೇಳು? ಹುಟ್ಟಿದ ಮರುಗಳಿಗೆಯಿಂದಲೇ ನಾವು ಸಾಯುವ ಸಮಯ ಕ್ರಮಿಸುತ್ತೇವೆ. ಬದುಕುವುದು ಯಾಕೆ ಎಂದು ಯಾರಾದರು ಕೇಳಿದರೆ ಸಾಯುವುದಕ್ಕೆ ಎಂಬುದೆ ಉತ್ತರ. ಆದರೆ ನಾವು ಓಡುತ್ತೇವೆ. ಗೊತ್ತಿದ್ದು ಓಡುತ್ತೇವೆ. ಮತ್ತೆ ಮತ್ತೆ ಓಡುತ್ತೇವೆ. ಓಡುವುದರ ಜೊತೆಗೆ ಅಂತರ ಏರ್ಪಡಿಸಿಕೊಳ್ಳುವ ಹುಚ್ಚುತನ ನಮ್ಮದು. ಆದರೆ ಅದು ನಮ್ಮ ಬೆನ್ನು ಸನಿ ಕಾಣಿಸುವುದಿಲ್ಲ ಜೊತೆಗಿರುತ್ತದೆ. ಆದರೆ ವಾಸ್ತವ ಗೊತ್ತಿದ್ದು ಗೊತ್ತಿಲ್ಲದವರ ಹಾಗೆ ಬದುಕುವ ಹಠಕ್ಕೆ ಬೀಳುತ್ತೇವಲ್ಲ ಅದು ಬದುಕು. ಅದು ನಿರಂತರವಾದ್ದು ಅದು ಸೊಗಸಾದ್ದು ಅಂತ ಏನನ್ನೊ ಬೇಡದ ಮಾತುಗಳ ಆಡುತ್ತ ನಮಗೆ ನಾವೇ ಸಮಜಾಯಿಸಿ ಕೊಟ್ಟುಕೊಳ್ಳುತ್ತ ಸಾವಿನ ಭಯದಿಂದ ಮುಕ್ತರಾಗುವ ಮಾರ್ಗ ಹುಡುಕುತ್ತೇವೆ. ಸನಿ ಸಾವು ಎನ್ನುವ ಸಾಹುಕಾರ ಬಂದಾಗ ಪ್ರತಿಯೊಬ್ಬರು ಎದ್ದು ನಡೆಯಲೇ ಬೇಕು. ಅದು ನೀನಾದರೂ ಸರಿ ನಾನಾದರೂ ಸರಿ. ಆದರೆ ಅದಕ್ಕಾಗಿ ಕೊರಗುತ್ತ ಕೂರುವುದರಲ್ಲಿ. ಕಾಯುತ್ತ ಕರಗುವುದರಲ್ಲಿ ಅರ್ಥವಿದೆ ಎಂದು ನಿನಗೆ ಅನ್ನಿಸುತ್ತದೆಯಾ? ನೀನು ಹೇಳುವ ಹಾಗೆ ನನ್ನ ಪ್ರಾಜೆಕ್ಟ್ ಕೆಲಸ ಇನ್ನು ಒಂದು ವರ್ಷ ಮುಗಿಯುವುದಿಲ್ಲ. ಅದು ಹೊಟ್ಟೆ ಪಾಡು ನೋಡು. ಈ ಹೊಟ್ಟೆ ಪಾಡು ಕೂಡ ನನಗೆ ಎಷ್ಟೋ ಬಾರಿ ತಮಾಷೆ ಎನ್ನಿಸುತ್ತದೆ. ಕಟ್ಟುವ ಇನ್ಯೂರೆನ್ಸ್ಗಳು, ಕಷ್ಟಪಟ್ಟು ಮಾಡಿಸುವ ಸೇವಿಂಗ್ಸ್ ಅಕೌಂಟ್‌ಗಳು ಈ ಎಲ್ಲದಕ್ಕು ಅರ್ಥ ಇದೆಯಾ ಹೇಳು. ಏಳುವ ಮುಳುಗುವ ಷೇರು ಪೇಟೆ. ಯಾರೋ ಗೆದ್ದರೆ ಮತ್ಯಾರದೋ ಸೋಲು. ಇನ್ಯಾರೊ ನಕ್ಕರೆ ಮತ್ಯಾರೊದೊ ಬಿಕ್ಕು. ಆದರೆ ಈ ಎಲ್ಲವನ್ನು ಪರಿಗಣಿಸದೆ ಬದುಕ ಹೊರಡುತ್ತೇª. ಕಾರಣ ಗೊತ್ತ ಈ ಅಗೋಚರ ಸುಳ್ಳು ನಮ್ಮನ್ನು ಆ ಕ್ಷಣದಲ್ಲಿ ಬದುಕಿಸುತ್ತಿರುತ್ತವೆ. ನಾವು ನಾಳೆಯೂ ಇರುತ್ತೇವೆ ಎನ್ನುವ ಕನಸುಗಳನ್ನು ಭರವಸೆಗಳನ್ನು ಹುಟ್ಟು ಹಾಕುತ್ತಿರುತ್ತವೆ. ನಾನು ನನ್ನದು ನನ್ನ ವಂಶ ನನ್ನ ಜಾತಿ ನನ್ನ ಮನೆ. ನನ್ನ.. ನನ್ನ.. ಥೋ ನಾನು ನೋಡು ನೀನು ಹೇಳಿದ್ದನ್ನೆ ಹೇಳಿ ಹೇಳಿ ಅಲ್ಲೆ ಸುತ್ತುತ್ತಿದ್ದೇನೆ. ಬದುಕು ಹೀಗೆ ಯಾವುದರಿಂದ ನಾವು ಮುಕ್ತರಾಗಬಯಸುತ್ತೇವೆಯೋ ಅದನ್ನೆ ಹುಡುಕುತ್ತಿರುತ್ತೇವೆ. ಈ ಹೇಳಿಕೆಯು ನಿನ್ನ ಸಹವಾಸ ದೋಷ ಮಹರಾಯ್ತಿ.
ಸನಿ ಮೊನ್ನೆ ಇಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ರಲ್ಲ ನನಗೆ ಎಷ್ಟು ನೆನಪಾದೆ ಗೊತ್ತ ನೀನು. ನೀನೊಬ್ಬಳೆ ಅಲ್ಲ ಸನಿ ಊರು, ಕಡಲು, ದಡ, ಅಮ್ಮ, ತಮ್ಮ, ಭಾರತದ ನೆಲ, ನೀರು, ಗಾಳಿ, ಎಲ್ಲ ಎಲ್ಲವೂ. ಅವೆಲ್ಲ ಎಷ್ಟು ನನಗೆ ಮುಖ್ಯ ಅನ್ನಿಸಿ ಐದು ನಿಮಿಷ ಮುಖ ಮುಚ್ಚಿ ಅತ್ತುಬಿಟ್ಟೆ. ನಿಜ ಸನಿ ಜೊತೆಗಿದ್ದ ಯಾವ ವಸ್ತುಗಳಿಗೆ ಬೆಲೆ ಎನ್ನುವುದು ಇರಲ್ಲ. ಆದರೆ ಅವೆಲ್ಲವನ್ನು ಬಿಟ್ಟು ದೂರ ನೆಲೆಗಳಿಗೆ ನಾವು ಹೊರಟುಬಿಡುತ್ತೀವಲ್ಲ. ಆಗ ಈ ಅನಾಥತೆ ಎನ್ನುವುದು ನಮಗೇ ಗೊತ್ತಿಲ್ಲದ ಹಾಗೆ ಹೆಗಲೇರಿ ಬಿಟ್ಟಿರತ್ತೆ. ಅದು ನಮ್ಮನ್ನ ಸಾಧ್ಯವಾದಷ್ಟು ಓಡಲು ಬಿಟ್ಟು ನಿರೀಕ್ಷಿತ ಗೆರೆ ತಲುಪಿದ ತಕ್ಷಣಕ್ಕೆ ದಪ್ಪ ಹಗ್ಗದ ಹುರಿಯ ಹಾಗೆ ಕುತ್ತಿಗೆ ಜಗ್ಗುವುದಕ್ಕೆ ಶುರು ಮಾಡತ್ತೆ. ರಾಶಿ ರಾಸಿ ಸಂಬಳದ ಈ ಕೆಲಸ ಬೇಡ ಎನ್ನಿಸುತ್ತದೆ. ಅಲ್ಲೆ ಎಲ್ಲಿಯಾದರೂ ಯಾವುದೋ ಬಸ್‌ಸ್ಟಾಂಡಿನ ಬಳಿಯಲ್ಲಿ ಗೋಲ್‌ಗಪ್ಪ ಮಾರುತ್ತ ಹಾಯಾಗಿ ನಿಮ್ಮಗಳ ಜೊತೆ ಇದ್ದುಬಿಡಬೇಕಿತ್ತು ಎನ್ನಿಸುತ್ತದೆ. ನಿಜ ಸನಿ ನಾವು ಎಷ್ಟೇ ದೂರ ಕ್ರಮಿಸದ ಮೇಲೆಯು ಏನೆಲ್ಲ ಮಾಡುತ್ತೇವೆ ಎಂದು ಹಾರಾಡಿದರು ನಮ್ಮ ಮೂಲ ಸೆಲೆಗಳು ನಮ್ಮನ್ನು ಸೆಳೆಯುತ್ತಲೇ ಇರುತ್ತವೆ. ಬೇರುಗಳ ಆಚೆಗೆ ಬದುಕು ಹುಡುಕುವ ಮನಸ್ಥಿತಿ ಇದೆಯಲ್ಲ ಅದು ಕೂಡ ಒಂದು ರೀತಿಯ ತಮಾಷೆಯೆ. ನಾನೇನೋ ಮುಂದಿನ ವರ್ಷಕ್ಕೆ ಬರುತ್ತೇನೆ ಬಿಡು. ಆದರೆ ಇಲ್ಲಿ ಬಹಳಷ್ಟು ಜನ ಇಲ್ಲಿನ ಸಿಟಿಜನ್ ಶಿಪ್ ತೆಗೆದುಕೊಂಡು ಬದುಕುತ್ತಿದ್ದಾರೆ. ಯಾವ ಗಳಿಗೆಯಲ್ಲಿ ಅವರೆಲ್ಲ ಆ ನಿರ್ಧಾರ ತೆಗೆದುಕೊಂಡರೊ ಅಥವಾ ಆ ಅವರ ನಿರ್ಧಾರಗಳಿಗೆ ಕಾರಣವೇನೊ ಅದ್ಯಾವುದನ್ನು ನಾನು ಕೇಳಿಲ್ಲ ಕೇಳುವುದು ಇಲ್ಲ. ಆದರೆ ನಾನು ಗಮನಿಸಿದ ಅಂಶವೆAದರೆ ಅವರುಗಳು ಭಾರತದಲ್ಲಿ ಸಣ್ಣ ಇರುವೆ ಮಿಸುಕಾಡಿದರು ಕೂಡ ಇಲ್ಲಿ ಹೊಯ್ದಾಡುತ್ತಾರೆ. ಇಂಡಿಯಾದಲ್ಲಿ ಹಾಗಾಯಿತಂತೆ ಹೀಗಾಯಿತಂತೆ ಎನ್ನುತ್ತ ಸಣ್ಣ ಮುಖ ಮಾಡಿ ಒದ್ದಾಡುತ್ತಾರೆ. ಈಗ ಭಾರತದಲ್ಲಿ ಚಳಿಗಾಲ ಅಲ್ವಾ, ಈ ಮಳೆ ಸುರೀತಾ ಇರಬಹುದು ಅಲ್ವಾ ಎಂದು ಕೇಳುತ್ತಿರುತ್ತಾರೆ. ಭಾರತದಿಂದ ಯಾರು ಬಂದರು ಕೂಡ ನಿಮ್ಮ ರ‍್ಯಾವುದು ಎನ್ನುತ್ತ ತನ್ನ ಊರಿನ ಸವಿವರಗಳ ಬಿಚ್ಚಿಡುತ್ತಾರೆ. ನೀನು ಏನೆ ಹೇಳು ಎದೆಯೊಳಗೆ ಕೂತ ನೆಲದ ಘವ ಅಷ್ಟು ಸುಲಭಕ್ಕೆ ಹೋಗುವಂತದ್ದಲ್ಲ. ಅದು ದೇಹದ ಜೊತೆಗಿನ ಬೆವರಿದ್ದ ಹಾಗೆ.
ನಾನು ಕೂಡ ಅಲ್ಲಿದ್ದಾಗ ಅದು ಸರಿಯಿಲ್ಲ ಇದು ಸರಿಯಿಲ್ಲ ವ್ಯವಸ್ಥೆ ಸರಿಯಿಲ್ಲ ಶಿಕ್ಷಣ ಸರಿಯಿಲ್ಲ ಎಂದು ಏನೋನು ಫೇಸ್‌ಬುಕ್ಕಿನಲಿ ಕೂಗುತ್ತಲೆ ಇರುತ್ತಿದ್ದೆ. ನನಗೆ ಅಲ್ಲಿ ಯಾವುದು ಸರಿ ಇಲ್ಲ ಎನ್ನಿಸುತ್ತಿತ್ತು. ನಿಜ ನಿ ಇದ್ದಾಗ ನಮಗೆ ಅದರ ಬೆಲೆ ಗೊತ್ತಿರುವುದಿಲ್ಲ. ಆದರೆ ಇಲ್ಲಿಗೆ ಬಂದ ಕ್ಷಣದಿಂದ ಈವರೆಗೂ ವಾಪಾಸ್ ಹೋಗುವ ಗಳಿಗೆ ಎಂದು ಬರುತ್ತದೆಯೊ ಎಂದು ಹಪಹಪಿಸುವಂತಾಗಿದೆ. ಇಲ್ಲಿನ ನೆಲ, ಗಾಳಿ, ನೀರು ಯಾವುದು ನನ್ನದಲ್ಲ ಎನ್ನಿಸುವ ಭಾವ ಬಲವಾಗ ತೊಡಗಿದೆ. ನೆಂಟಸ್ತಿಕೆ ಎನ್ನುವ ಈ ಕೊಂಡಿಗಳು ಎಷ್ಟು ಬಲವಾದ್ದು ಎನ್ನುವುದು ಇಲ್ಲಿಗೆ ಬಂದ ಮೇಲೆಯೆ ನನಗೆ ಅರಿವಾದ್ದು. ತುಟಿಯಂಚ ನಗುವಿಗು ಎದೆಯ ಅಳುವಿಗು ಇಷ್ಟೆ ವ್ಯತ್ಯಾಸ ನೋಡು. ನಗು ಯಾರ ಸಲುವಾಗಿ ಬೇಕಿದ್ದರು ಹರವ ಬಹುದು. ಆದರೆ ದು:ಖ ಅದು ಎದೆಯ ನಿಜದ ಬನಿ ಹಾಗೆಲ್ಲ ಎಲ್ಲಿ ನೀಡಲಾದಿತು ಹೇಳು. ನೆಲದ ಪ್ರೇಮವು ಹಾಗೆ.
ಇರುವ ಕೆಲಸವ ಇದ್ದ ಹಾಗೆ ಬಿಟ್ಟು ಓಡಿ ನನ್ನ ನೆಲದ ಮಣ್ಣಿಗೆ ಹಣೆ ಹಚ್ಚಬೇಕಿನ್ನಿಸಿದೆ. ನಗುತ್ತಿದ್ದೀಯ ನನ್ನ ಈ ಭಾವುಕತೆ ನೋಡಿ. ಇವ ಯಾವಾಗ ಹೀಗಾದ ಎಂದುಕೊಳ್ಳುತ್ತಿದ್ದೀಯ? ಸನಿ ಎಲ್ಲ ಮನುಷ್ಯರು ಎಲ್ಲ ಕಾಲಕ್ಕು ಒಂದೇ ಆಗಿರುವುದಿಲ್ಲ. ವಯಸ್ಸು ಮತ್ತು ವಾತಾವರಣದ ಮೇಲೆ ಈ ಭಾವನೆ ಭಾವುಕತೆ ನಿಂತಿರತ್ತೆ. ಮನಸ್ಸಿನ ವಿಷಯ ಬಂದ ತಕ್ಷಣಕ್ಕೆ ಮೃದುವಾಗುತ್ತಾರೆ. ಈಗ ನನಗಾಗಿರುವುದು ಹಾಗೆಯೇ. ಡೊನಾಲ್ಡ್ ಟ್ರಂಪ್ ವಾಪಾಸ್ ಬಂದ ಮೇಲೆ ಅವರ ಉಸಿರಲ್ಲಿ ನನ್ನ ಮಣ್ಣಿನ ಉಸಿರಿದೆ ಎಂದು ಅನ್ನಿಸಿತ್ತು. ಅದರೊಟ್ಟಿಗೆ ನೀನು, ಅಮ್ಮ, ತಮ್ಮ ಎಲ್ಲರ ಒಲವ ಗಾಳಿಯೂ ಅದರಲ್ಲಿ ಬೆರೆತು ಬಂದಿದೆ ಅನ್ನಿಸಿತು. ಅದು ಈ ಅಮೇರಿಕದ ತುಂಬೆಲ್ಲ ಹರಡಿದೆ ಅನ್ನಿಸಿತು. ಮನುಷ್ಯ ಮಣ್ಣಿಗೆ ಗೆರೆ ಹಾಕಬಹುದು ಸನಿ ಗಾಳಿ, ಬೆಳಕು,ಕತ್ತಲು ಆಕಾಶಕ್ಕಲ್ಲ. ಅದಕ್ಕೆ ನೋಡು ನಿರಾಕಾರವಾದ್ದು ಎಲ್ಲದು ಶ್ರೇಷ್ಟ ಎನ್ನಿಸೋದು.
ನಿಜ ಹೇಳಲಾ ನಿನ್ನ ಪತ್ರ ಓದಿದ ತಕ್ಷಣ ಕೋಪ ಬಂತಾದರೂ ಆ ನಿಮಿಷದಿಂದ ನಿನ್ನ ನೋಡಲೇಬೇಕೆನ್ನುವ ಉತ್ಕಟತೆ ಕಣ್ಣೊಳಗೆ ಹೊಕ್ಕಿ ಕೂತಿದೆ. ಅದೇ ಕಾರಣಕ್ಕೆ ಏನೆಲ್ಲ ಹೇಳಿಕೊಂಡು ನನ್ನ ನಾನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಏಕೊ ಏನೋ ಸನಿ ಈ ಭಾವಗಳ ಮುಂದೆ ನನಗೆ ಸೋಲುವುದು ಸಹ್ಯವಾಗುವುದಿಲ್ಲ ಪ್ರೀತಿ ಕೆಲವೊಮ್ಮೆ ಸೋಲಿಸಿಬಿಡುತ್ತದೆ. ನಿಜಕ್ಕು ಪ್ರೀತಿ ಶಕ್ತಿ ಅಲ್ಲ ಸನಿ ಅದು ದೌರ್ಬಲ್ಯ. ನಿಜಕ್ಕೂ ದ್ವೇಷವೇ ಸಾಧಿಸುವ ಶಕ್ತಿ. ಅದೇ ಕಾರಣಕ್ಕೆ ಎಲ್ಲಿ ಇಡಿಯಾಗಿ ಸೋಲುತ್ತೇನೊ ಎನ್ನುವ ಭಯ. ಹಾಗಾಗಿಯೇ ಈ ಪ್ರೇಮದ ವಿಚಾರಕ್ಕೆ ಬಂದಾಗ ನಾನು ಮನಸ್ಸನ್ನು ಬೇಕಂತಲೆ ಆಚೆಗಿಟ್ಟು ಬುದ್ದಿಯಿಂದ ಯೋಚಿಸುತ್ತೇನೆ. ಇದು ನಿನ್ನನ್ನು ಹೊರಗಿಡುವ ಪ್ರಯತ್ನ ಎಂದುಕೊಳ್ಳಬೇಡವೇ. ಇದು ನನ್ನನ್ನು ನಾನು ಕಾಪಾಡಿಕೊಳ್ಳುವ ವ್ಯಾಖ್ಯೆ. ಬದುಕು ಪ್ರೀತಿಗಿಂತ ಮುಖ್ಯ ಎಂದು ನಾನು ಹೇಳಲ್ಲ. ಆದರೆ ಪ್ರೀತಿಗೆ ಬದುಕು, ಮತ್ತು ಬದುಕಿಗೆ ಪ್ರೀತಿ ಪೂರಕವಾಗಿರಬೇಕು ಎಂದು ನಂಬಿದವ ನಾನು. ಈಗ ಭಾರತದಲ್ಲು ಕೊರೋನ ದಾಳಿ ಇಟ್ಟಿದೆ ಎಂದು ಗೊತ್ತಾಗಿದೆ. ಇಲ್ಲಿಯೂ ಒಂದು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆ. ಹೆದರಬೇಡ ನಿನ್ನೊಲವಿನ ದೊಡ್ಡ ವೈರಸ್ ನನ್ನ ಜೊತೆಗಿದೆ. ಹಾಗಾಗಿ ಏನು ಆಗಲ್ಲ. ನಿನ್ನ ನೋಡದೆ ಜೀವ ಹೋಗುವುದಿಲ್ಲ. ಆಹ್ ಕೋಪ ಉಕ್ಕಿತಾ? ನಿನ್ನ ಪ್ರೀತಿಯನ್ನು ವೈರಸ್ ಅಂದಿದ್ದಕ್ಕೆ ಕ್ಷಮಿಸು ಪುಟ್ಟ. ನಿನಗೆ ಒಂದಿಷ್ಟು ತರಲೆ ಮಾಡುವ ಅಂತ ಅನ್ನಿಸಿತು. ಸನಿ ನೀನು ನಂಬ್ತೀಯೊ ಇಲ್ಲವೊ ಗೊತ್ತಿಲ್ಲ ಪ್ರತಿಬಾರಿ ಹೊಸ ಹೊಸ ಖಾಯಿಲೆ ಬಂದಾಗಲು ದಿಗಿಲಾಗತ್ತೆ ಎಲ್ಲಿ ನಿನಗೆ ನಿನ್ನ ಆಸ್ಪತ್ರೆಯಲ್ಲಿಯೆ ಯಾವುದಾದರು ಖಾಯಿಲೆ ತಗುಲಿ ಬಿಡುತ್ತದೆಯೊ ಅಂತ. ಆದರೆ ನಿನ್ನ ಒಲುಮೆ ನನ್ನ ಕಾಪಿಡುವ ಹಾಗೆ ನನ್ನೊಲವು ನಿನ್ನ..
ಹೇಳಲಾರೆ ಏನನ್ನು ಸನಿ ನಿನಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ.
ಮಾಸ್ಕ್ ಗ್ಲೌಸ್ ಹಾಕಿಯೇ ಕೆಲಸ ಮಾಡು..
ಕನಸುಗಳು ಸೋತ ನಿನ್ನ ಕಣ್ಣಿನೊಳಗೆ ನಾನೆ ಕನಸಾಗುತ್ತೇನೆ.
ನಂಬಿಸಲಾರೆ ಆದರೆ ನಿರಂತರ ಉಸಿರಾಗುತ್ತೇನೆ.

ನಿನ್ನ….
ಮನು

ಮತ್ತಷ್ಟು ಸುದ್ದಿಗಳು

Latest News

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...

‘ಮಾನ್ಯವರ್‌’ ಬಟ್ಟೆ ಮಳಿಗೆಯಲ್ಲಿ ಅಗ್ನಿ ದುರಂತ

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರುವ 'ಮಾನ್ಯವರ್‌' ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ 'ಮಾನ್ಯವರ್‌' ಬಟ್ಟೆ ಮಳಿಗೆಯಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ...
- Advertisement -
error: Content is protected !!