- ವಿಷ್ಣು ಭಟ್ ಹೊಸ್ಮನೆ
response@134.209.153.225
2019ರ ಓದಿನಲ್ಲಿ ಕಾಡಿದ್ದು ಕೆಲವು. ಅವುಗಳಲ್ಲಿ ಬಹುವಾಗಿ ಕಾಡಿದ್ದು ಗೋಪಾಲಕೃಷ್ಣ ಕುಂಟಿನಿಯವರ ಪೂರ್ಣ ತೆರೆಯದ ಪುಟಗಳು ಕಥಾಸಂಕಲನದ ಯಸ್ಯಸ್ಮರಣ ಮಾತ್ರೇಣ ಕಥೆ. ಇಡೀ ಸಂಕಲನವೇ ಕಾಡುವ ಕಥೆಗಳ ಹೊತ್ತು ತಂದ ಈ ಹೊತ್ತಿಗೆ ಕಥೆಕೂಟ ಪ್ರಕಾಶನದಿಂದ ಪ್ರಕಟಿತ. ಇದರಲ್ಲಿನ ಹದಿಮೂರು ವಿಶೇಷ ಕಥೆಗಳ ಕಿರಣಗಳಲ್ಲಿ ಇಹದ-ಪರದ ತಂತು ಕಾಣುತ್ತದೆ.
“ನಿನಗೆ ಬೆಳಕು ಕಂಡರೂ ಭಯ, ಕತ್ತಲು ಕಂಡರೂ ಭಯ. ಹೌದು ತಾನೇ?” ಎಂದ ಅವಧೂತ. ಈ ಕಾಯಿಲೆ ವಿಚಿತ್ರವಾಗಿದೆ. ಇಂತದ್ದೊಂದು ಕಾಯಿಲೆ ಯಾರಿಗಾದರೂ ಇದ್ದೀತೆ? ಇದ್ದರೆ ಬದುಕಲಾದೀತೇ? ಎಂಬ ಪ್ರಶ್ನೆ ಕಾಡುತ್ತ ಈ ಭಯ ನನ್ನನ್ನು ಆವರಿಸಿ ಕೊಂಡಿತು. ಕಥೆಯೊಳಗಿನ ಪಾತ್ರವೂ ನಾನೇ ಆಗಿ ನಾನೇ ಆಗಿ, ಸಣ್ಣ ಎದೆನಡುಕದ ಜೊತೆಗೆ ಕಥೆ ಓದುತ್ತಾ ಹೋದೆ. ಮುಂದೇನು ಎಂಬ ಕುತೂಹಲ, ಕಾತರ. ನಿದ್ದೆ ಬಾರದೆ ಹೊರಳಿದ ರಾತ್ರಿಗಳು ನೆನಪಾದವು. ನೂರರಿಂದ ಒಂದರತನಕ ಎಣಿಸಿ ಎಣಿಸಿ ಸುಸ್ತಾಗಿದ್ದು, ಒಂದೊಂದು ನಿಮಿಷವೂ ಗಂಟೆಯಷ್ಟು ದೀರ್ಘವೆನಿಸಿ ಕಣ್ಣು ಮುಚ್ಚಿದರೂ ಭಯ, ಬಿಟ್ಟರೂ ಭಯ, ಹಗಲಿಗಾಗಿ ಕಾದ ಕ್ಷಣಗಳು ನನ್ನನ್ನು ಸುತ್ತಿಕೊಂಡವು. ಕಥೆಯ ಪಾತ್ರಕ್ಕೂ ನನಗೂ ಒಂದೇ ಬಗೆಯ ತಳಮಳ. ಮತ್ತೆ ಬಂದವ ಅವಧೂತ. ಅವ ಎಲ್ಲವನ್ನೂ ಬದಲಾಯಿಸಿದ್ದ.
ಅಧ್ಯಾತ್ಮದ ನೀಲಾಂಜನ ಅಲ್ಲಿ ಉರಿಯುತ್ತದೆ. ಅವಧೂತ ಹೇಳುತ್ತಾನೆ. ” ಒಳಗೆ ಕತ್ತಲಿದೆ, ಹೊರಗೆ ಬೆಳಕಿದೆ. ಹೊರಗಿನ ಬೆಳಕು ಕಾಣಲು ಒಳಗಿನ ಕತ್ತಲನ್ನು ಹರಿದು ಹಾಕು, ಒಳಗಿನ ಕತ್ತಲನ್ನು ಕಾಣಲು ಹೊರಗಿನ ಬೆಳಕನ್ನು ಹುಡುಕು.”
ಬೆಳಕನ್ನು ಹುಡುಕುತ್ತ ಕೊನೆಗೆ ಅವರು ಕತ್ತಲೂ ಇಲ್ಲದ ಬೆಳಕೂ ಇಲ್ಲದ ಜಾಗದಲ್ಲಿ ಬಂದು ನಿಲ್ಲುತ್ತಾರೆ. ಕಥೆ ಮುಗಿಯುತ್ತದೆ.
ನನ್ನ ಓದು ಮುಗಿದಿಲ್ಲ. ಯಾಕೋ ಪದೇ ಪದೇ ಕಾಡುತ್ತದೆ. “ಎಲ್ಲೋ ಎಲ್ಲವೂ ಸರಿಯಿದೆ ಎಂದುಕೊಳ್ಳುವಾಗ ನಾಳೆ ಏನಾದರೂ ಠಣಠಣ ಆಗಿ ಬಿಟ್ಟರೆ” ಎಂಬ ಸಾಲು ತೆರೆದಿಡುವ ಭವದ ಹೆದರಿಕೆ ಆಗಾಗ ಇಣುಕುತ್ತಲೇ ಇರುತ್ತದೆ. ಈ ಅವಧೂತ ಜೊತೆಗೇ ಇದ್ದಾನೆ ಎಂಬ ಭಾವ ಧೈರ್ಯ ತುಂಬುತ್ತದೆ. ಬೆಳಕು – ಕತ್ತಲು ನಡುವೆ ಬದುಕು ಮತ್ತು ಅವಧೂತನೆಂಬ ಬೆರಗು!
ಈ ಯಸ್ಯ ಸ್ಮರಣ ಮಾತ್ರೇಣ ಕತೆಯ ಕತ್ತಲು ಬೆಳಕಿನ ಭಯದ ರೂಪ ನೆನಪಾಗುತ್ತಲೇ ಇರುತ್ತದೆ. ಕತ್ತಲೆಯನ್ನು ಅರಿಯಲು ಸಣ್ಣ ಬೆಳಕೂ, ಬೆಳಕನ್ನು ತಿಳಿಯಲು ಪುಟ್ಟ ನೆರಳೂ ಬೇಕೇ ಬೇಕು. ದೇವರ ಮುಂದಿನ ದೀಪ ನಮ್ಮೊಳಗೆ ಬೆಳಗುತ್ತ, ನಮ್ಮೊಳಿನ ನಾವು ಅರಿವಾಗುತ್ತ ಕತ್ತಲೂ ಬೆಳಕನ್ನು ಮೀರಿದ ಅಲ್ಲಿ ನಾವು ಸಲ್ಲಬೇಕು. ಇದು ನನಗೆ ಈ ಕತೆಯಲ್ಲಿ ಹೊಳೆದದ್ದು. ಈ ಕತೆಯ ಓದು ಓದಿನ ಆನಂದದ ಜೊತೆಗೆ ಇಹದ ಪರದ ನೀಲಾಂಜನದ ಬೆಳಕು ಬದುಕಿಗೆ ಉಲ್ಲಾಸವನ್ನು ತುಂಬುತ್ತದೆ. ಇಹದ ಸುಖ-ದುಃಖದ ಕತೆಗಳನ್ನು ಓದುತ್ತಿರುವ ಈ ಕಾಲದಲ್ಲಿ ಹೊಸದೇ ಬಗೆಯ, ನಮ್ಮ ಅರಿವಿನ ಪರಿಧಿಯಲ್ಲಿ ಸಾಗುವಂತೆ ಮಾಡುವ ಗೋಪಾಲಕೃಷ್ಣ ಕುಂಟಿನಿಯವರ ಯಸ್ಯಸ್ಮರಣ ಮಾತ್ರೇಣ ಕತೆ ಕಾಡುತ್ತಲೇ ಇರುತ್ತದೆ ಮತ್ತು ಬದುಕಿಗೆ ಕತ್ತಲೆಯಲ್ಲಿ ಬೆಳಕನ್ನು, ಬೆಳಕಿನಲ್ಲಿ ನೆರಳನ್ನು ತೋರುತ್ತಲೇ ಇರುತ್ತದೆ.