Tuesday, January 31, 2023

ಗಿರಿಜಾತೆ ಪಾಲಿಸವ್ವ…

Follow Us

  ಇಂದಿನಿಂದ ನವರಾತ್ರಿ ವೈಭವ   
ಇಂದಿನಿಂದ ಶರನ್ನವರಾತ್ರಿ ಆರಂಭ. ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ ಮಾಡುತ್ತ, ಭಕ್ತಿಭಾವಗಳ ಅಮೃತ ಸಿಂಚನದಲ್ಲಿ ಮನಸ್ಸನ್ನು ಪುಳಕಗೊಳಿಸುತ್ತ ನಲಿಯೋಣ. ಕೊರೋನಾ ಕಾಲದ ಸಂಕಟಗಳನ್ನು ಮರೆತು ಸಂಭ್ರಮಿಸೋಣ.

♦ ಸುಮನಾ
newsics.com@gmail.com

ದುರ್ಗಾದೇವಿಯ ವಿರಾಟ್‌ ಸ್ವರೂಪವನ್ನು ಆರಾಧಿಸುವ ನವರಾತ್ರಿ ಇಂದಿನಿಂದ ಆರಂಭವಾಗಿದೆ. ಈ ಬಾರಿ, ಒಂದೇ ದಿನ ಎರಡು ತಿಥಿಗಳ ಸಂಯೋಗದಿಂದಾಗಿ ದೇವಿಗೆ ಎಂಟು ದಿನಗಳ ಪೂಜೆ ಸಲ್ಲಲಿದೆ. ಶರನ್ನವರಾತ್ರಿಯ ಈ ದಿನಗಳು ಆಸ್ತಿಕರಿಗೆ ವಿಶೇಷ ದಿನಗಳಾಗಿವೆ. ಇದನ್ನು ಶಾರದೀಯ ನವರಾತ್ರಿ ಎಂದೂ ಕರೆಯಲಾಗುತ್ತದೆ. ದೇವಿಯ 9 ಸ್ವರೂಪಗಳನ್ನು ಪೂಜಿಸಿ, ಆರಾಧಿಸಿ ಭಕ್ತಿಮಾರ್ಗದ ಮೂಲಕ ಜೀವನದ ಕಷ್ಟಕೋಟಲೆಗಳನ್ನು ನಿರ್ಲಿಪ್ತವಾಗಿ ದಾಟುವುದು, ದೇವಿಯ ಪೂಜೆಯನ್ನು ಸಂಭ್ರಮಿಸುವುದು ನಾವು ಸಾಮಾನ್ಯವಾಗಿ ಕಾಣುವ ನೋಟ.
ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯಿನಿ, ಕಾಲರಾತ್ರೀ, ಮಹಾಗೌರಿ, ಸಿದ್ಧಿಧಾತ್ರಿ ಎನ್ನುವ 9 ರೂಪಗಳನ್ನು ಪೂಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಪೂಜೆ ನಡೆಸುವವರು ಪ್ರತಿದಿನ ದೇವಿ ಪಾರಾಯಣ, ಆಯಾ ಸ್ವರೂಪದ ದೇವಿಯ ಆರಾಧನೆಯೊಂದಿಗೆ ನವರಾತ್ರಿಯನ್ನು ಒಂದು ವ್ರತವನ್ನಾಗಿ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ, ಮನೆಮನೆಗಳಲ್ಲಿ ಸರಸ್ವತಿಯ ಆರಾಧನೆ ಮಾಡುವುದು ಹೆಚ್ಚಾಗಿ ಕಂಡುಬರುತ್ತದೆ. ಸರಸ್ವತಿಯ ಪ್ರತೀಕವಾಗಿ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ. ವಿಜಯದಶಮಿಯಂದು ಮಕ್ಕಳು ಈ ಪುಸ್ತಕಗಳನ್ನು ಓದುತ್ತಾರೆ.
ಮುತ್ತೈದೆಯರ ಊಟ…
ಮಲೆನಾಡಿನಲ್ಲಿ ‘ಮುತ್ತೈದೆಯರ ಊಟʼ ನವರಾತ್ರಿ ಸಮಯದ ವಿಶೇಷ. ದಂಪತಿಯನ್ನು ವಿಷ್ಣು-ಲಕ್ಷ್ಮೀಯನ್ನಾಗಿ ಪರಿಭಾವಿಸಿ ಅವರ ಪಾದಪೂಜೆ ಮಾಡಲಾಗುತ್ತದೆ. ಪುಟ್ಟ ಹೆಣ್ಣುಮಕ್ಕಳಿಗೆ ದುರ್ಗಿ ಬಾಗಿನ, ಮುತ್ತೈದೆಯರಿಗೆ ಮುತ್ತೈದೆ ಬಾಗಿನ ಅರ್ಪಿಸಲಾಗುತ್ತದೆ. ಒಂಬತ್ತೂ ದಿನಗಳ ಕಾಲ ಇದನ್ನು ನಡೆಸಿಕೊಂಡು ಬರಲಾಗುತ್ತದೆ. ಮೂರು ದಿನಗಳ ಕಾಲ ಪೂಜೆ ಕೈಗೊಳ್ಳುವವರು ಸಹ ಅತ್ಯಂತ ಶ್ರದ್ಧಾಭಕ್ತಿಯಿಂದ ದೇವಿಯ ಆರಾಧನೆ ಮಾಡುತ್ತಾರೆ. ಹೂವುಗಳ ಸಿಂಗಾರ ದೇವಿಗೆ ಬಲು ಪ್ರೀತಿ. ದಿನಂಪ್ರತಿ ವಿವಿಧ ಸ್ವರೂಪಗಳಲ್ಲಿ ರಾರಾಜಿಸುವ ದೇವಿಗೆ ದಿನವೂ ಆ ಸ್ವರೂಪಕ್ಕೆ ತಕ್ಕ ಅಲಂಕಾರ ಮಾಡಲಾಗುತ್ತದೆ. ಗೆಂಟಿಗೆ, ದಾಸವಾಳ, ಕರವೀರ, ಗಂಟೆ, ನಿತ್ಯಪುಷ್ಪ ಮುಂತಾದ ಹೂವುಗಳ ದಂಡೆ, ಮಾಲೆಗಳು ದೇವಿಯ ಮುಡಿಗೇರಿ ನಲಿಯುತ್ತವೆ.
ಇನ್ನು, ದೇವಿಯ ದೇವಸ್ಥಾನಗಳಲ್ಲಿ ಅದ್ದೂರಿ ಪೂಜೆ, ಅನ್ನಸಂತರ್ಪಣೆ ಸಾಮಾನ್ಯ. ಪ್ರತಿದಿನವೂ ವಿಶೇಷ ಅಲಂಕಾರ, ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಹೂಮಾಲೆಗಳ ಸಿಂಗಾರದಲ್ಲಿ ವಿರಾಜಮಾನಳಾಗುವ ದೇವಿಯನ್ನು ಕಣ್ತುಂಬಿಕೊಳ್ಳುವುದೇ ರೋಮಾಂಚನ.
ಭಕ್ತಿಯ ಸಿಂಚನವೇ ಅಂಥದ್ದು, ಅದೇನೆಂದು ಸರಿಯಾಗಿ ಅರ್ಥವಾಗದಿದ್ದರೂ ಮನಸ್ಸನ್ನು ಪುಳಕಗೊಳಿಸುತ್ತದೆ. ಸ್ಪಷ್ಟವಾಗಿ ಶಬ್ದಗಳಲ್ಲಿ ಹೇಳಲು ಬಾರದ ಅನುಭವಗಳನ್ನು ನೀಡುತ್ತ ನಮ್ಮನ್ನು ಒಂದು ಹಂತಕ್ಕೆ ಮೇಲಕ್ಕೆತ್ತುತ್ತದೆ.
ನವಮೋಹನಾಂಗಿ ಹರಸು ಎಮ್ಮನು…
ದೇವಿಯ ಆಯಾ ಸ್ವರೂಪಗಳ ಕಲ್ಪನೆ ಇಲ್ಲದ ಸಾಮಾನ್ಯರೂ ನವರಾತ್ರಿಯಲ್ಲಿ ದೇವಿಯನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ಆಯಾ ಭಾಗದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ, ಪೂಜಾ ವಿಧಾನಕ್ಕೆ ತಕ್ಕ ಹಾಗೆ ಆರಾಧನೆಗಳನ್ನು ಮಾಡುತ್ತಾರೆ. ಉಪವಾಸ, ವ್ರತಗಳು ಎಲ್ಲೆಡೆ ಸಾಮಾನ್ಯ. ಬೆಂಗಳೂರು, ಮೈಸೂರು ಪ್ರಾಂತ್ಯದಲ್ಲಿ ದಸರಾ ಎಂದರೆ ಮೈಸೂರು ದಸರಾ ಎನ್ನುವ ಭಾವನೆ ಬೇರೂರಿದೆಯೋ ಅದೇ ರೀತಿ, ಶಿವಮೊಗ್ಗ, ಉತ್ತರಕನ್ನಡ ಸುತ್ತಮುತ್ತಲ ಜಿಲ್ಲೆಗಳಲ್ಲಿ ಶೃಂಗೇರಿಯ ಶಾರದಾ ದೇವಿಯ ಪ್ರಭಾವ ಹೆಚ್ಚು ಕಂಡುಬರುವುದರಿಂದ ನವರಾತ್ರಿ ಎಂದರೆ ಶಾರದೆ ಅಥವಾ ಸರಸ್ವತಿಯ ಆರಾಧನೆ ಎನ್ನುವ ಭಾವನೆ ಬೇರೂರಿದೆ. ದಕ್ಷಿಣ ಕನ್ನಡದಲ್ಲಿ ಕೊಲ್ಲೂರಿನ ಮೂಕಾಂಬಿಕೆ, ಹೊರನಾಡಿನ ಅನ್ನಪೂರ್ಣೇಶ್ವರಿಯ ಪ್ರಭಾವ ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗಗಳಲ್ಲಿ ವಿಜಯದಶಮಿಯನ್ನು ಅತ್ಯಂತ ವೈಭವವಾಗಿ ಆಚರಿಸುವುದು ಕಂಡುಬರುತ್ತದೆ.
ಶಂಕರಿ, ಜಗದೀಶ್ವರಿ, ಭುವನೇಶ್ವರಿ, ಸರ್ವೇಶ್ವರಿ, ಗೌರಿಯಾಗಿ ಪ್ರತಿ ಮನೆ-ಮನಸ್ಸುಗಳಲ್ಲಿ ಪೂಜೆಗೊಳ್ಳುವ ದೇವಿ ಎಲ್ಲರಿಗೂ ನೆಮ್ಮದಿಯ ಬದುಕನ್ನು ಕರುಣಿಸಲಿ. ಭಕುತಿಯ ಪರಾಕಾಷ್ಠೆಯಲ್ಲಿ ನಲಿಯುವ ನವರಾತ್ರಿ ಎಲ್ಲರಲ್ಲೂ ಉತ್ಸಾಹ ತುಂಬಲಿ. ಶತ್ರುಗಳನ್ನು ಅರ್ಥಾತ್‌ ಮನುಷ್ಯನ ಮನಸ್ಸಿನೊಳಗಣ ಶತ್ರುಗಳನ್ನು ನಾಶ ಮಾಡುವ ದುರ್ಗಾದೇವಿಯು ಸಂಸಾರದ ಜಂಜಾಟ, ಜಗತ್ತಿನ ನೋವುಗಳನ್ನು ಮರೆಸಿ ಎಲ್ಲರನ್ನೂ ಪೊರೆಯಲಿ.

ಮತ್ತಷ್ಟು ಸುದ್ದಿಗಳು

vertical

Latest News

ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನ ಗುಜರಿಗೆ: ಗಡ್ಕರಿ

newsics.com ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ಇದೇ ಏ. 1ರಿಂದ ರಸ್ತೆಯಿಂದ ಗುಜರಿಗೆ ಹೋಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ...

ತುಳುವಿಗೆ ರಾಜ್ಯ ಭಾಷೆ ಸ್ಥಾನ: ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ

newsics.com ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...

ಕಾಡುಹಂದಿಯೆಂದು ನಾಯಿ ಮಾಂಸ ಮಾರಿದ ಯುವಕರು

newsics.com ಅಂಕೋಲಾ: ಕಾಡುಹಂದಿ ಮಾಂಸವೆಂದು ನಂಬಿಸಿ ಅಪರಿಚಿತ ಯುವಕರು ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನ್ನ ಮಾರಾಟ ಮಾಡಿರುವ ಘಟನೆ ಅಂಕೋಲಾದ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದೆ. ಅಂಕೋಲಾದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಯುವಕರ ತಂಡ,...
- Advertisement -
error: Content is protected !!