ನಮ್ಮ ಪಯಣ ನಮ್ಮ ಮನೆಯ ಹತ್ತಿರದ ಉದ್ಯಾನದಿಂದಲೇ ಆರಂಭವಾಗಲಿ. ಬೆಳಗಿನ ನಡಿಗೆಯಲ್ಲಿ ಕಾಣುವ ಹಕ್ಕಿ, ಕೇಳುವ ಇಂಚರ, ಆಡುವ ಸಸ್ಯಗಳನ್ನು ನೋಡಿ ಆನಂದಿಸೋಣ.
ಪಕ್ಷಿ ಸಂರಕ್ಷಣೆ 35
♦ ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
ಚಿತ್ರ: ಕ್ಲೆಮೆಂಟ್ ಎಂ. ಫ್ರಾನ್ಸಿಸ್
ksn.bird@gmail.com
newsics.com@gmail.com
ಹೊಸ ವರ್ಷ ಕಾಲಿಟ್ಟಿದೆ. ಹೊಸ ಭರವಸೆಗಳಿರುತ್ತವೆ, ಹೊಸ ಜೀವನವಿರುತ್ತದೆ ಎಂಬ ಅದಮ್ಯ, ಅಚಲ ನಂಬಿಕೆಯಿಂದ ಕುಣಿದು ಕುಪ್ಪಳಿಸಿದ್ದಾಗಿದೆ. ಆನಂದವೇ ನಮಗೆ ಬೇಕಾಗಿರುವ ವಾಸ್ತವ. ಸರಿ. ಆದರೆ, ಆ ನಮಗೆ ಬೇಕಾಗಿರುವ ಆನಂದದ ವಾಸ್ತವವನ್ನು ತಾವು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ! ಯೋಚಿಸೋಣ. ನಮಗೆ ಬೇಕಾದ ವಾಸ್ತವವನ್ನು ನಾವು ಸೃಷ್ಟಿ ಮಾಡಿಕೊಳ್ಳಬೇಕು.
ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ನಮ್ಮ ಸಹಜೀವಿಗಳಾದ ಪ್ರಾಣಿ ಪಕ್ಷಿ ಸಸ್ಯವರ್ಗಗಳು ನಳನಳಿಸುತ್ತಿದ್ದರೆ ನಾವೂ ನಳನಳಿಸುತ್ತೇವೆ. ಇದೇನು ಭಾರಿ ತತ್ತ್ವವಲ್ಲ, ಕಣ್ಣಿಗೆ ಸುಲಭವಾಗಿ ಗೋಚರವಾಗುವ ಸತ್ಯ. ಮಾನವನು ಇದನ್ನು ಅರಿತಾಗಿದೆ. ಅವನ್ನು ಸರಿಯಾಗಿ ಇರಿಸಲು ಬೇಕಾದ ನಿಯಮನಿರ್ದೇಶನಗಳನ್ನು ಬರೆದಿಟ್ಟಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಗಳಾಗಿವೆ. ಸಾಕಷ್ಟು ಸಾಹಿತ್ಯ ಸೃಷ್ಟಿಯೂ ಆಗಿರುವುದುಂಟು. ಆದರೆ, ಪಾಲನೆ? ಒಂದು ನೆಲೆಯಲ್ಲಿ ಇದೂ ಆಗಿರುವುದುಂಟು. ಆದರೆ, ಆಗಿರುವುದು ಸಾಕೇ ಎಂಬುದು ಪ್ರಶ್ನೆ. ಇದು ಹೇಗೆಂದರೆ, ಬಹಳ ಸರಳವಾಗಿ ಹೇಳುವುದಾದರೆ. ಒಂದು ಅಗುಳನ್ನಷ್ಟೇ ತಿಂದವನನ್ನು ಹೊಟ್ಟೆ ತುಂಬಿದೆ ಎಂದು ಭಾವಿಸಿದಂತೆ! ತಿಂದದ್ದು ನಿಜ! ಅನುಷ್ಠಾನವಾಗಬೇಕಾಗಿರುವುದು ಸಾಕಷ್ಟಿದೆ.
ಇದರ ಜತೆಜತೆಗೆ ಜನರು ಅರ್ಥ ಮಾಡಿಕೊಂಡು ಪರಿಸರಪೂರಕ ಭೌದ್ಧಿಕ ವಲಯವನ್ನು ಸೃಷ್ಟಿಸುವ ಅಗತ್ಯವೂ ಇದೆ. ಹೀಗಾಗಿ ನಾವು ಪರಿಸರವನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳಬೇಕು. ಹವಾಮಾನ ಬದಲಾವಣೆಯ ಇಂದಿನ ದಿನಮಾನದಲ್ಲಿ ನಾವು ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ನಾವು ಮತ್ತು ನಮ್ಮ ಮಕ್ಕಳು ಮೊಮ್ಮಕ್ಕಳ ಸುಂದರ ಬದುಕಿಗೆ ಕಾರಣವಾಗುತ್ತದೆ.
ನಮ್ಮ ಪಯಣ ನಮ್ಮ ಮನೆಯ ಹತ್ತಿರದ ಉದ್ಯಾನದಿಂದಲೇ ಆರಂಭವಾಗಲಿ. ಬೆಳಗಿನ ನಡಿಗೆಯಲ್ಲಿ ಕಾಣುವ ಹಕ್ಕಿ, ಕೇಳುವ ಇಂಚರ, ಆಡುವ ಸಸ್ಯಗಳನ್ನು ನೋಡಿ ಆನಂದಿಸೋಣ. ಇತರರಿಗೂ ಹೇಳೋಣ. ನಾವು ಪ್ರವಾಸ ಮಾಡುವ ಸ್ಥಳಗಳು ಜಾಗತಿಕವಾಗಿ ಅವೆಷ್ಟು ಮುಖ್ಯ ಎಂಬುದನ್ನು ಇಲ್ಲಿ ನೋಡುತ್ತಲೇ ಬಂದಿದ್ದೇವೆ. ನಮ್ಮ ಪುಣ್ಯಕ್ಷೇತ್ರಗಳ ಸುತ್ತಲಿನ ಅರಣ್ಯ ನಮ್ಮನ್ನು ಪೊರೆಯುತ್ತಲಿದೆ. ಅವಕ್ಕೆ ನಾವೇನು ಮಾಡುತ್ತಿದ್ದೇವೆ? ಎಂದು ಪ್ರಶ್ನಿಸಿಕೊಳ್ಳಲು ಇದು ಸಕಾಲ.
ಈ ಹೊಸವರ್ಷದ ಸಂಭ್ರಮಾಚರಣೆಯಲ್ಲಿ, ಮಾಡುವ ಸಂಕಲ್ಪಗಳಲ್ಲಿ ಪರಿಸರಕ್ಕೂ ಒಂದು ಪಾಲಿರಲಿ. ಅಂದಹಾಗೆ, ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ನಾವು ನದಿಯಲ್ಲಿ ಸ್ನಾನ ಮಾಡುವಾಗ ಮೈಯ್ಯಿಗೆ ರಾಸಾಯನಿಕಗಳನ್ನು ಬಳಸಬಾರದು, ಮಲಮೂತ್ರಗಳನ್ನು ವಿಸರ್ಜಿಸಬಾರದು ಎಂದಿದೆ. ಆದರೆ, ಇಂದು ನಾವೇನು ಮಾಡುತ್ತಿದ್ದೇವೆ?
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು! ಶುಭವಾಗಲಿ! ಪ್ರೀತಿಯೆಂಬ ಬೆಳಕು ಎಲ್ಲರ ಜೀವನವನ್ನು ಬೆಳಗಲಿ!