Friday, January 27, 2023

ಜೀವಜಾಲದ ಸಂರಕ್ಷಣೆ ಸಂಕ್ರಾಂತಿ ಹೊತ್ತಿನ ನಮ್ಮ ಸಂಕಲ್ಪವಾಗಲಿ

Follow Us

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ.
ಪಕ್ಷಿ ಸಂರಕ್ಷಣೆ 37

ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
ksn.bird@gmail.com
newsics.com@gmail.com

ಹೊಸ ವರ್ಷದ ಸಂಕಲ್ಪದಲ್ಲಿ ಪರಿಸರಕ್ಕೆ ಪಾಲಿರಲಿ ಎಂದದ್ದಾಯಿತು. ಪರಿಸರ ಹಾಳಾಗದಿರಲು ಜನಸಾಮಾನ್ಯರಾಗಿ ಏನು ಮಾಡಬೇಕು? ಏನು ತಿಳಿದಿರಬೇಕು ಎಂಬುದನ್ನು ಸಹ ನೋಡಿದೆವು. ಈ ಬಾರಿ ಅದನ್ನು ಮುಂದುವರಿಸೋಣ.

ಬಹಳ ಮುಖ್ಯವಾಗಿ:

1. ಅರಣ್ಯ ಛಿದ್ರೀಕರಣವಾಗದಂತೆ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಇದು ಬಹಳ ಮುಖ್ಯವಾದದ್ದು. ಈ ಅರಣ್ಯ ಛಿದ್ರೀಕರಣ (Forest fragmentation) ಎಂಬುದನ್ನು ಅನೇಕ ಬಾರಿ ತಿಳಿದಿದ್ದೇವಾದರೂ ಅದರ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಮತ್ತೊಮ್ಮೆ ಮೆಲುಕು ಹಾಕೋಣ. ಒಂದು ವಿಶಾಲವಾದ ಅರಣ್ಯಪ್ರದೇಶದಲ್ಲಿ ಅನೇಕ ಬೇಟೆಗಾರ ಹಾಗೂ ಬಲಿ ಪ್ರಾಣಿಗಳು ಇರುತ್ತವೆ (ಪ್ರಿಡೇಟರ್ ಅಂಡ್ ಪ್ರೇ). ಅವುಗಳಿಗೆ ತಮ್ಮದೇ ಆದ ವಲಯಗಳಿರುತ್ತವೆ (ಹೋಂ ರೇಂಜ್). ಉದಾಹರಣೆಗೆ ನಮ್ಮ ಬೀದಿಯನಾಯಿ, ನಮ್ಮ ಬೀದಿಯನ್ನು ಅದರ ವಲಯ ಎಂದು ಗುರುತಿಸಿಕೊಂಡಿರುತ್ತದೆ. ಬೇರೆ ನಾಯಿ ಬಂದರೆ ಜಗಳಾಡಿ ಓಡಿಸುತ್ತದೆ. ಹಾಗೆಯೇ, ಬೇಟೆಗಾರ ಪ್ರಾಣಿಗಳು ತಮ್ಮ ವಲಯಗಳನ್ನು ನಿರ್ಮಿಸಿಕೊಂಡಿರುತ್ತವೆ. ಉದಾಹರಣೆಗೆ ಹುಲಿಯನ್ನು ತೆಗೆದುಕೊಂಡರೆ ಹೆಣ್ಣು ಹುಲಿ ಒಂದಷ್ಟು ಸ್ಥಳವನ್ನು ತನ್ನ ವಲಯ ಎಂದು ಗುರುತಿಸಿಕೊಂಡಿರುತ್ತದೆ. ಗುರುತಿಗೆ ಮೂತ್ರದಂತಹ ವಸ್ತುವನ್ನು ಸಿಂಪಡಿಸಿರುತ್ತದೆ. ಇದು ನಮ್ಮ ಸಿಮ್‍ ಕಾರ್ಡಿನಂತೆ! ಬೇರೆ ಹುಲಿಗಳಿಗೆ ಇದು ಎಚ್ಚರಿಕೆ ಸಹ. ಗಂಡು ಹುಲಿ, ಇಂತಹ ಮೂರು ನಾಲ್ಕು ಹೆಣ್ಣುಹುಲಿಗಳ ವಲಯಗಳನ್ನು ಸೇರಿಸಿ ತನ್ನ ವಲಯವನ್ನು ಸ್ಥಾಪಿಸಿಕೊಂಡಿರುತ್ತದೆ ಹಾಗೂ ಇಲ್ಲಿನ ಹೆಣ್ಣು ಹುಲಿಗಳನ್ನು ಕೂಡಿ ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತದೆ. ಹಾಗೆಯೇ ಚಿರತೆ ಹಾಗೂ ಇತರ ಪ್ರಾಣಿಗಳು. ಈಗ ಒಂದು ರಸ್ತೆಯೋ ಅಥವಾ ಅಣೆಕಟ್ಟೆಯೋ ಇಲ್ಲವೆ ಗಣಿಗಾರಿಕೆಯೋ ಇಂತಹ ವಿಸ್ತಾರವಾದ ಅರಣ್ಯದಲ್ಲಿ ಆರಂಭವಾದರೆ ಇವುಗಳ ವಲಯ ಹರಿದುಹಂಚಿಹೋಗುತ್ತದೆ, ಕಿರಿದಾಗುತ್ತದೆ ನಾಶವೂ ಆಗುತ್ತದೆ. ಇದು ಪ್ರಾಣಿಪಕ್ಷಿಗಳ ಸಂತಾನಾಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಾಡೂ ನಾಶವಾಗುತ್ತಾ ಹೋಗುತ್ತದೆ ಇದೇ ಛಿದ್ರೀಕರಣ. ದೊಡ್ಡ ವಿಸ್ತಾರವಾದ ಅರಣ್ಯಪ್ರದೇಶ ಚಿಕ್ಕಚಿಕ್ಕ ಭಾಗಗಳಾಗಿ ಹೋಗುವುದರಿಂದ ಭಾರಿ ದೂರಗಾಮಿ ದುಷ್ಪರಿಣಾಮಗಳು ಉಂಟಾಗುತ್ತವೆ. ಪ್ರಾಣಿಗಳ ನಡವಳಿಕೆ ಸಹ ಬದಲಾಗಿಬಿಡುತ್ತದೆ. ಹಾಗಾಗಿ, ಇದು ದೊಡ್ಡ ಅರಣ್ಯ ಪ್ರದೇಶವಿದೆಯಲ್ಲಾ? ಒಂದು ರಸ್ತೆ ಮಾಡಿದರೆ, ಅಣೆಕಟ್ಟಿದರೆ ಏನು ತೊಂದರೆ ಎಂಬಂತಹದ್ದಲ್ಲ. ಸಮಗ್ರವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನೋಡಬೇಕಾಗುತ್ತದೆ. ಈ ಅರಿವು ಬಹಳ ಮುಖ್ಯ. ನಿಮ್ಮ ಊರಿನ ಸಮೀಪದ ಕಾಡಿನಲ್ಲಿ ಯೋಜನೆ ಬರುವುದಾದರೆ ಅರಣ್ಯ ಛಿದ್ರೀಕರಣವಾಗುತ್ತಿದೆಯೇ? ಎಂದು ಗಮನಿಸಿ ನೋಡಿ. ಇದನ್ನು ತಡೆಯಲೇ ಬೇಕು.

2. ಬೇಟೆ ನಡೆಯದಂತೆ ನೋಡಿಕೊಳ್ಳಬೇಕು. ಮೊದಲು ಬೇಟೆಯನ್ನು ಕಳ್ಳಬೇಟೆ ಎನ್ನುತ್ತಿದ್ದರು. ಆದರೆ, ಕಾನೂನಿನ ದೃಷ್ಟಿಯಲ್ಲಿ ಬೇಟೆ ಬೇರೆಯಲ್ಲ, ಕಳ್ಳಬೇಟೆ ಬೇರೆಯಲ್ಲ! ಬೇಟೆಗೆ ಅವಕಾಶವೇ ಇಲ್ಲದಿರುವುದರಿಂದ ಎಲ್ಲ ಬೇಟೆಯೂ ಕಳ್ಳಬೇಟೆಯೇ! ಇದನ್ನು ತಡೆಯುವುದು ಬಹಳ ಮುಖ್ಯ.

3. ಬೇಟೆಯಿಂದ ಒಂದು ಪ್ರಾಣಿ ಮಾತ್ರ ಸಾಯುತ್ತದೆ ಎಂಬುದು ಸತ್ಯವಲ್ಲ. ಪ್ರಾಣಿ ಸಸ್ಯಾಹಾರಿಯಾಗಿದ್ದರೆ ಒಂದು ಮಾಂಸಾಹಾರಿ ಪ್ರಾಣಿಯ (ಬೇಟೆಗಾರ ಪ್ರಾಣಿ-ಪ್ರಿಡೇಟರ್) ಆಹಾರವನ್ನು ಮನುಷ್ಯರು ಕಸಿದುಕೊಂಡಂತಾಗುತ್ತದೆ. ಹುಲಿ ಚಿರತೆಯಂತಹ ಪ್ರಾಣಿಗಳನ್ನು ಬೇಟೆಯಾಡಿದರೆ ಅಳಿವಿನಂಚಿನಲ್ಲಿರುವ ಆ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿ ಸಸ್ಯಾಹಾರಿ-ಮಾಂಸಾಹಾರಿ ಪ್ರಾಣಿಗಳು ಹಾಗೂ ಕಾಡಿನ ವಿನ್ಯಾಸದ ಮೇಲೆಯೇ ದುಷ್ಪರಿಣಾಮ ಬೀರುತ್ತದೆ. ಮಾಂಸಾಹಾರಿ ಪ್ರಾಣಿಗಳನ್ನು ನೇರವಾಗಿ ಕೊಲ್ಲುವುದಕ್ಕಿಂತ ಅವುಗಳ ಆಹಾರ ಪ್ರಾಣಿಗಳನ್ನು ಕೊಲ್ಲುವುದೇ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಕುಸಿಯಲು ಕಾರಣ ಎಂಬುದು ಸಂಶೋಧನೆಗಳಿಂದ ಧೃಡಪಟ್ಟಿದೆ. ಹಾಗಾಗಿ ಬೇಟೆ ಎಂಬುದು ನಾವು ತಿಳಿದುಕೊಂಡಿರುವುದಕ್ಕಿಂತ ಗಂಭೀರ ಅಪಾಯವನ್ನು ತಂದೊಡ್ಡುವ ಸಂಗತಿ.

4. ಕಾಡಿನ ಬೆಂಕಿ ಇನ್ನೊಂದು ಬಹುದೊಡ್ಡ ಕುತ್ತು, ನಮ್ಮ ಪಕ್ಷಿ,ಪ್ರಾಣಿ ಹಾಗೂ ಇಡೀ ಕಾಡಿಗೆ. ಆದ್ದರಿಂದ ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳಬೇಕು. ಪದೇ ಪದೇ ಕಾಡಿಗೆ ಬೆಂಕಿ ಬೀಳುತ್ತಿದ್ದರೆ ಬೆಂಕಿಯನ್ನು ನಿರೋಧಿಸುವ ಕೆಲವು ಪ್ರಭೇದಗಳು ಮಾತ್ರವೇ ಹೆಚ್ಚು ಬೆಳಯತೊಡಗಿ ಕಾಡಿನ ವೈವಿಧ್ಯ ಹಾಗೂ ಭರಿಸುವಿಕೆ ಕಡಿಮೆಯಾಗುತ್ತದೆ. ಕಾಡಿಗೆ ಬೆಂಕಿ ಬಿದ್ದರೆ ನಾವೇನು ಮಾಡಲಾಗುತ್ತದೆ ಎಂಬ ಪ್ರಶ್ನೆ ಬರಬಹುದು. ಆದರೆ, ಭಾರತದಂತಹ ಕಾಡುಗಳಲ್ಲಿ ಸಹಜವಾಗಿ ಬೆಂಕಿ ಬೀಳುವುದಿಲ್ಲ. ಎಲ್ಲ ಕಾಡ್ಗಿಚ್ಚುಗಳೂ ಮಾನವಕೃತವೇ. ಎಷ್ಟೋಬಾರಿ ಉದ್ದೇಶ ಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಾಕಿರುತ್ತಾರೆ. ಇದು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಇರಬಹುದು, ಇಲ್ಲವೆ ಬೇಟೆಯಾಡಲು ಇರಬಹುದು, ಇಲ್ಲವೆ ಕಟ್ಟುನಿಟ್ಟಿನ ಅರಣ್ಯಾಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲೂ ಇರಬಹುದು. ಕಾರಣ ಯಾವುದೇ ಇದ್ದರೂ ನಮ್ಮ ಅರಣ್ಯವೇ ನಾಶವಾಗಿ ಪೀಳಿಗೆ ಪೀಳಿಗೆಗಳು ಅನುಭವಿಸುವಂತಹ ಸ್ಥಿತಿ ಏರ್ಪಡುತ್ತದೆ. ಹಾಗಾಗಿ ಕಾಡನ್ನು ಬೆಂಕಿಯಿಂದ ರಕ್ಷಿಸಬೇಕು.

5. ಬೀಜದುಂಡೆಯಂತಹ ವಿನಾಶಕಾರಿ ಕೃತ್ಯಗಳನ್ನು ಕಾಡಿನಲ್ಲಿ ಎಂದಿಗೂ ಮಾಡಬಾರದು. ಬೀಜದುಂಡೆಯಿಂದ ಕಾಡುಬೆಳೆಯುತ್ತದೆ ಎಂಬುದು ಒಂದು ಮೂಢನಂಬಿಕೆ. ಹಾಗೆಯೇ, ಅದರಿಂದ ಒಳ್ಳೆಯದಾಗುತ್ತದೆ ಎಂಬುದೂ ಮೂಢನಂಬಿಕೆಯೇ! ಇದು ಅತ್ಯಂತ ಅವೈಜ್ಞಾನಿಕವಾದ ವಿಧಾನ. ಬೀಜದುಂಡೆ ಎಸೆದರೆ (ಒಂದು ವೇಳೆ ಆ ಬೀಜಗಳು ಮೊಳೆತರೂ) ಕಾಡಿನ ಸಹಜ ಬೆಳವಣಿಗೆಗೆ ಧಕ್ಕೆ ಉಂಟಾಗುತ್ತದೆ. ವಿಕಾಸದ ಹಂದರದಲ್ಲಿ ಬರುತ್ತಿದ್ದ ಕಾಡು ಹಾದಿತಪ್ಪುತ್ತದೆ. ಕೇವಲ ಕೆಲವೇ ಪ್ರಭೇದಗಳು ಹೆಚ್ಚಿ ರೋಗ ಹರಡಲು ಕಾರಣವಾಗುತ್ತದೆ. ಕಾಡಿನಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಎಚ್ಚರಿಕೆಯಿಂದ ಬೀಜದುಂಡೆಯನ್ನು ತಯಾರಿಸಿದರೂ ಪಾರ್ಥೇನಿಯಂನಂತಹ ಆಕ್ರಮಣಕಾರಿ ಸಸ್ಯಗಳ ಬೀಜಗಳು ಸೇರಿ ಕಾಡು ಹಾಳಾಗುತ್ತದೆ. ಇನ್ನು ಅನೇಕ ದುಷ್ಪರಿಣಾಮಗಳು ಬೀಜದುಂಡೆಗಿದೆ. ಹಾಗಾಗಿ, ಇದನ್ನು ಯಾವಕಾರಣಕ್ಕೂ ಹಾಕಬಾರದು. ಇದು ಪರಿಸರಕ್ಕೆ ಹಾಕುವ ಬಾಂಬ್‍.

6. ಕಾಡಿಗೆ ಏನೂ ಮಾಡದೆ ಅದರಷ್ಟಕ್ಕೇ ಬಿಡುವುದು ನಾವು ನಿಜವಾಗಿ ಮಾಡಬೇಕಾದ ಕಾರ್ಯ. ಅದನ್ನು ಈಗಿರುವಂತೆ ರಕ್ಷಿಸಿದರೆ ಸಾಕು.

7. ಇನ್ನು ನಗರಪ್ರದೇಶಗಳಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಬರುತ್ತದೆ. ಕಾಡುಗಳನ್ನು ಸಂರಕ್ಷಿಸುವುದು ನಗರಪ್ರದೇಶಗಳ ಪರಿಸರದ ದೃಷ್ಟಿಯಿಂದಲೂ ತುಂಬ ಮುಖ್ಯ! ನಮ್ಮೆಲ್ಲ ನಗರಪ್ರದೆಶಗಳಲ್ಲಿ ಬಳಸುತ್ತಿರುವ ಕುಡಿಯುವ ನೀರು ಬರುವುದೇ ಕಾಡುಗಳಿಂದ! ಹಾಗಾಗಿ, ಕಾಡಿನ ಸಂರಕ್ಷಣೆ ನಗರಕ್ಕೂ ಮುಖ್ಯ. ನಗರಗಳಲ್ಲಿ ರಸ್ತೆ ಬದಿಯ ಮರಗಳನ್ನು ಉಳಿಸಿಕೊಳ್ಳಲು ಆನೇಕ ಹೋರಾಟಗಳು ನಡೆದಿವೆ, ನಡೆಯುತ್ತಿವೆ. ಇದು ಸಂತೋಷದ ವಿಷಯವೇ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ರಸ್ತೆ ಬದಿಯ ಮರಗಳನ್ನು ರಕ್ಷಿಸಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಸ್ಥಳೀಯ ಮರಗಳನ್ನು ನೆಡಬೇಕು. ಆದರೆ, ಅನೇಕ ಕಾರಣಗಳಿಂದ ನಗರ ಪ್ರದೇಶಗಳಲ್ಲಿ ರಸ್ತೆ ಬದಿಯ ಮರಗಳು ಹೋಗುತ್ತಿವೆ. ಇದಕ್ಕೆ ಇತ್ತೀಚೆಗೆ ತೀರಿಕೊಂಡ ವಯೋವೃದ್ಧ ಹಾಗೂ ಜ್ಞಾನವೃದ್ಧ ನಿವೃತ್ತ ಅರಣ್ಯಾಧಿಕಾರಿ ಅಜ್ಜಂಪುರ ಕೃಷ್ಣಸ್ವಾಮಿಗಳು ಒಂದು ಉಪಾಯ ಮಾಡಿದ್ದರು. ಅದೇ ನಗರದ ಆಯ್ಧ ಭಾಗಗಳಲ್ಲಿ ಉದ್ಯಾನವನ್ನು ರಚಿಸುವುದು, ಆದರೆ, ಅದು ಕೇವಲ ಅಲಂಕಾರಿಕ ಉದ್ಯಾನವಲ್ಲ, ಸ್ಥಳೀಯ ಮರಗಳಿಂದ ಕೂಡಿದ, ನಗರ ಪ್ರದೇಶಕ್ಕೆ ಪೂರಕಶ್ವಾಸಕೋಶದಂತಹ ಉದ್ಯಾನಗಳ ನಿರ್ಮಾಣ. ಅಲ್ಲಿ ಮಾವು, ಬೇವು, ಹೊಂಗೆ (ಹೊಂಗೆ ನೆರಳು ತಾಯಿ ಮಡಿಲು ಎಂಬ ಗಾದೆಯನ್ನು ಪದೇ ಪದೇ ಹೇಳುತ್ತಿದ್ದರು), ಆಲದ ಜಾತಿಯ ಮರಗಳು, ಬಿದಿರು ಹಾಗೂ ಒಂದು ಪುಟ್ಟ ನೀರಿನಾಸರೆ. ಅದರ ಸುತ್ತಲೂ ದಟ್ಟವಾದ ಪೊದೆ ಸಸ್ಯಗಳ ಬೆಳವಣಿಗೆ. ಇದು ಎಂತಹ ಅದ್ಭುತವಾದ ಯೋಚನೆ ಎಂಬುದು ನಮಗೆ ಥಟ್ಟನೆ ತಿಳಿಯದು. ಪಕ್ಷಿಗಳಿಗೆ ಆವಾಸ, ಆಹಾರವಾಗುತ್ತದೆ, ಧೂಳು ಹಾಗೂ ಶಬ್ದ ಮಾಲೀನ್ಯ ಕಡಿಮೆಯಾಗುತ್ತದೆ. ನಗರದ ಹವಾಮಾನದ ಮೇಲೆ ಸ್ಥಳೀಯವಾದ ಪರಿಣಾಮ ಬೀರುತ್ತದೆ. ಇಷ್ಟೆಲ್ಲ ಪಾರಿಸಾರಿಕ ಸೇವೆಗಳ ಜೊತಗೆ ನಗರಕ್ಕೊಂದು ಶೋಭೆಯೂ ಆಗುತ್ತದೆ. ಇನ್ನೂ ಸಾಕಷ್ಟು ಅನುಕೂಲತೆಗಳಿವೆ. ಉದಾಹರಣೆಗೆ ನಗರದಲ್ಲಿನ ವನ್ಯಜೀವಿಗಳಿಗೆ ಆಶ್ರಯವಾಗುತ್ತದೆ. ಇದರಿಂದಾಗಿ ಮಾನವ ವನ್ಯಜೀವಿ ಸಂಘರ್ಷ ತಪ್ಪುತ್ತದೆ. ಈ ಎಲ್ಲವೂ ಕಡಿಮೆ ಅನುಕೂಲತೆಗಳಲ್ಲ. ಕೃಷ್ಣಸ್ವಾಮಿಗಳು ತಮ್ಮ ಮನೆ ಎದುರೇ ಇಂತಹ ಒಂದು ಮಾದರಿ ಉದ್ಯಾನವನ್ನು ನಿರ್ಮಿಸಿದ್ದರು. ಅವರಿಲ್ಲದ ಇಂದು ಅವರ ಹೆಸರಿನಲ್ಲಿ ಇಂತಹ ಉದ್ಯಾನಗಳನ್ನು ನೂರರ ಸಂಖ್ಯೆಯಲ್ಲಿ ನಿರ್ಮಿಸಬೇಕಾದ ಅವಶ್ಯಕತೆಯಿದೆ.

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ. ಎಲ್ಲರಿಗೂ ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು! ಶುಭವಾಗಲಿ! ಪ್ರೀತಿಯೆಂಬ ಬೆಳಕು ಎಲ್ಲರ ಜೀವನವನ್ನು ಬೆಳಗಲಿ!

ಮತ್ತಷ್ಟು ಸುದ್ದಿಗಳು

vertical

Latest News

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ...

ನಟಿ ಅದಿತಿಯ ಮಾಜಿ ಪತಿ‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್

newsics.com ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕುರಿತು ನವಜೋಡಿ...

ಖಗೋಳದ ಅಪರೂಪದ ಅತಿಥಿ ಧೂಮಕೇತು ವಿದಾಯಕ್ಕೆ ಸಿದ್ಧ!

newsics.com ನವದೆಹಲಿ: ಖಗೋಳದ ಅಪರೂಪದ ಅತಿಥಿಯೊಂದು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಖಗೋಳದ ಅಪರೂಪದ ಅತಿಥಿ ಹಸಿರು ಬಣ್ಣದ ಸಿ/2022 ಇ3 ದೀರ್ಘಾವಧಿಯ ಧೂಮಕೇತು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಮತ್ತೆ ಇದರ ಭೇಟಿ ಬರೋಬ್ಬರಿ 50,000...
- Advertisement -
error: Content is protected !!