ಪಕ್ಷಿ ಸಂರಕ್ಷಣೆ 38. .
♦ ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
ಚಿತ್ರಗಳು: ಪ್ರೊ.ಎಸ್. ಶಿಶುಪಾಲ/ ನವೀನ್
ksn.bird@gmail.com
newsics.com@gmail.com
ಕಳೆದ ಬಾರಿ ನಗರದ ಪ್ರದೇಶಗಳಲ್ಲಿ ಸಂರಕ್ಷಣೆ ಕುರಿತಾಗಿಯೂ ನೋಡಿದೆವು. ಇಲ್ಲಿ ಇನ್ನು ಅನೇಕ ವಿಷಯಗಳಿಗೆ. ಅವನ್ನು ನಾವು ಪರಿಗಣಿಸಿ ಆಡಳಿತದ ಗಮನಕ್ಕೆ ತಂದು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಮೊಟ್ಟಮೊದಲಿಗೆ ಅಜ್ಜಂಪುರ ಕೃಷ್ಣಸ್ವಾಮಿಯವರ ಯೋಜನೆಯಾದ ಪ್ರತಿ ವಲಯಗಳಲ್ಲಿಯೂ ಪುಟ್ಟ ಅರಣ್ಯದಂತಹ ಆವಾಸವನ್ನು ನಾವು ಹುಟ್ಟುಹಾಕಬೇಕು. ಇದು ಬಹಳ ದೊಡ್ಡ ಪ್ರಯೋಜನವನ್ನು ತಂದುಕೊಡುತ್ತದೆ. ಇನ್ನು ಬಹಳ ದೊಡ್ಡ ಸಂಪನ್ಮೂಲವನ್ನು ನಾವು ಹಾಳುಮಾಡುತ್ತಿದ್ದೇವೆ. ಅದೇ ತರಗೆಲೆಗಳು! ತರಗೆಲೆಗಳನ್ನು ಒಂದೋ ಕಸದ ಜೊತೆಗೆ ಬೆರೆಸಿ ತಪ್ಪಾಗಿ ವಿಲೇವಾರಿ ಮಾಡುತ್ತಿದ್ದೇವೆ. ಇಲ್ಲವೇ ಸುಟ್ಟು ಮಾಲೀನ್ಯ ಉಂಟುಮಾಡಿಕೊಳ್ಳುತ್ತಿದ್ದೇವೆ.
ತರಗೆಲೆಗಳು ಬಹುದೊಡ್ಡ ಬಯೋಮಾಸ್. ಇದು ಸತ್ವವನ್ನು “ಮರಳಿ ಮಣ್ಣಿಗೆ” ಸೇರಿಸುವ ಶಕ್ತಿಯಿರುವ ಆಕರ. ಅನೇಕ ಉದ್ಯಾನಗಳಲ್ಲಿ ಬಿದ್ದ ಒಣ ಎಲೆಗಳನ್ನು ಸಂಗ್ರಹಿಸಿ ಸುಟ್ಟುಹಾಕುತ್ತಾರೆ. ರಸ್ತೆ ಬದಿಗಳಲ್ಲಿಯೂ ಇದೇ ಕಾರ್ಯ ನಡೆಯುತ್ತದೆ. ಬದಲಿಗೆ ಇವನ್ನು ಉದ್ಯಾನದಲ್ಲೇ ಬಿಟ್ಟರೆ ಅತ್ಯುತ್ತಮ ಗೊಬ್ಬರವಾಗುತ್ತದೆ. ರಸ್ತೆಯಲ್ಲಿ ಬಿದ್ದಿರುವ ಎಲೆಗಳನ್ನು ಸಂಗ್ರಹಿಸಿ ಕಾಂಪೋಸ್ಟ್ ಮಾಡಿದರೆ ಮಣ್ಣಿಗೆ ಸತ್ವ ತುಂಬಿದಂತಾಗುತ್ತದೆ. ನಿಸರ್ಗದಲ್ಲಿ ವ್ಯರ್ಥ ಎಂಬುದಿಲ್ಲ. ಮಣ್ಣಿನಲ್ಲಿರುವ ಸಾಯವಯ ಇಂಗಾಲ ಬಹಳ ಮುಖ್ಯ (ಸಾಯಿಲ್ ಕಾರ್ಬನ್). ಇದಕ್ಕಾಗಿ ಕೇಂದ್ರ ಸರ್ಕಾರದ ಸಂಸ್ಥೆಗಳೇ ಇವೆ, ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರೀಸರ್ಚ್ನ ಅಡಿಯಲ್ಲಿ ಇವು ಬರುತ್ತವೆ. ನಮ್ಮ ರೈತರು ಇವುಗಳ ಪ್ರಯೋಜನ ಪಡೆಯಬೇಕು (ಆಸಕ್ತರು https://iiss.icar.gov.in/ https://csmrs.gov.in/ ಗಳನ್ನು ನೋಡಬಹುದು. ಇನ್ನೂ ಕೆಲವು ರಾಜ್ಯ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿವೆ). ಆದರೆ, ರೈತರು ಹಾಗೂ ಸಾಮಾನ್ಯ ಜನರಲ್ಲಿ ಈ ಸಾವಯವ ಇಂಗಾಲವನ್ನು ಕುರಿತ ಮಾಹಿತಿಯೇ ಇಲ್ಲ. ಪ್ರಸಿದ್ಧ ಸಾವಯವ ಕೃಷಿಕ ಡಾ ನಾರಾಯಣ ರೆಡ್ಡಿಯವರು ಮಣ್ಣಿನಲ್ಲಿನ ಸಾವಯವ ಇಂಗಾಲ ಎರಡು ಇದ್ದರೆ ಈ ದೇಶದಲ್ಲಿ ಕೃಷಿಗೆ ಉಳಿಗಾಲವಿದೆ ಎಂದೇ ಹೇಳಿದ್ದರು. ತಮ್ಮ ಜಮೀನಿನಲ್ಲಿ ಕೇವಲ ಉದುರಿದ ಎಲೆಗಳನ್ನು ತೆಗೆಯದೇ ಸಾವಯವ ಇಂಗಾಲವನ್ನು ಹೆಚ್ಚಿಸಿದ್ದರು. ನಮ್ಮ ದೇಶದ ಎಷ್ಟೋ ಕೃಷಿ ಪ್ರದೇಶದಲ್ಲಿ ಎರಡು ಇರಲಿ 0.2 ಸಹ ಸಾವಯವ ಇಂಗಾಲ ಇಲ್ಲ! ಸಾವಯವ ಇಂಗಾಲವನ್ನು ಹೆಚ್ಚಿಸಲು ಒಣಗಿ ಬಿದ್ದ ತರಗೆಲೆಗಳ ಸದ್ವಿನಿಯೋಗ ಸರಳ, ಖರ್ಚಿಲ್ಲದ ಉಪಾಯ. ತರಗೆಲೆ ಕಸವಲ್ಲ, ಕಸವರ (ಕಸವರ=ಚಿನ್ನ) ಎಂಬುದನ್ನು ನಾವು ಅರಿಯಬೇಕಾಗಿದೆ.
ಹಾಗೆ ನೋಡಿದರೆ, ರಸ್ತೆ ಬದಿಯ ಪಾದಚಾರಿ ಮಾರ್ಗದ ಬುಡದಲ್ಲಿ ಶೇಖರವಾಗುವ ಮಣ್ಣು ಸಹ ಬಹಳ ಫಲವತ್ತಾದದ್ದು. ಜರ್ಮನಿಯಂತಹ ದೇಶಗಳಲ್ಲಿನ ರಸ್ತೆಗಳ ಮಧ್ಯೆ ಹಾಗೂ ಉದ್ಯಾನಗಳಲ್ಲಿ ಇಂತಹ ಮಣ್ಣನ್ನು ಬಳಸಲಾಗಿದೆ. ನಮ್ಮಲ್ಲಿ ಇನ್ನು ಉದಯಿಸಬೇಕಾದ ವಿಷಯವಿದು. ಹಾಗಾಗುತ್ತದೆ ಎಂದು ಹಾರೈಸೋಣ.
****
ಕಳೆದ ಬಾರಿಯ ಅಂಕಣ ಓದಿ ಹಿರಿಯ ವಿಜ್ಞಾನಿಗಳಾದ ಶ್ರೀ ಸಿ ಆರ್ ಸತ್ಯ ಅವರು ಕರೆ ಮಾಡಿ ಮಾತನಾಡಿದರು. ಅವರು ಈ ಅಂಕಣವನ್ನು ಓದುತ್ತಿದ್ದಾರೆ ಎಂಬುದೇ ನನಗೆ ಆಶೀರ್ವಾದ, ನನ್ನ ಹೆಮ್ಮೆ. ಅವರು ನಗರ ಪ್ರದೇಶಗಳಲ್ಲಿನ ಆವಾಸ ರಕ್ಷಣೆ ಕುರಿತಾಗಿ ಮಾತನಾಡಿದರು. ನಮ್ಮಲ್ಲಿ ಅನೇಕ ಬಗೆಯ ಸಾಧ್ಯತೆಗಳಿವೆ. ಪಕ್ಷಿಗಳಿಗಾಗಿ ಗೂಡು ಇಡಬಹುದು ಎಂಬ ವಿಷಯವೂ ಬಂದು ಹೋಯಿತು. ಅವರ ವಿನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಮುಖ್ಯವಾಗಿ ತೊಂದರೆಯಾಗುತ್ತಿರುವುದು ರಾತ್ರಿ ವಿಶ್ರಮಿಸಲು ಬೃಹತ್ ಮರಗಳೇ ಇಲ್ಲವಾಗುತ್ತಿರುವುದು. ಅನೇಕ ಕಾರಣಗಳಿಂದಾಗಿ ಬೃಹತ್ ಮರಗಳ ತೆರವು ನಡೆಯುತ್ತಿದೆ. ಇದರಿಂದಾಗಿ ಗಿಳಿ, ಗೊರವಂಕ ಹಾಗೂ ಇತರ ಅನೇಕ ಹಕ್ಕಿಗಳಿಗೆ ರಾತ್ರಿ ಹಾಗೂ ಬಾವಲಿಗಳಿಗೆ ದಿನದ ಸಮಯದಲ್ಲಿ ವಿಶ್ರಮಿಸಲು ಸ್ಥಳವೇ ಇಲ್ಲದಂತಾಗಿದೆ. ಹಾಗಾಗಿ ದೊಡ್ಡ ಮರಗಳ ಅವಶ್ಯಕತೆ ನಗರ ಪ್ರದೇಶಗಳಲ್ಲಿ ತುಂಬ ಇದೆ.
ಇನ್ನೊಂದು ಬಹಳ ಮುಖ್ಯವಾದ ಹಾಗೂ ನಾವು ಅನೇಕರು ಮಾಡಬಹುದಾದ ಕೆಲಸವೆಂದರೆ ನಮ್ಮ ಮನೆಗಳಲ್ಲಿನ ತೋಟ. ಇಲ್ಲಿ ಎರಡು ಬಗೆಯ ತೋಟಗಳಿವೆ. ಒಂದು ಬಗೆಯದ್ದು ನಮ್ಮ ಅಂಕಣಗಳಿಗೆ ಸದಾ ಚಿತ್ರ ಒದಗಿಸುವ ಶ್ರೀನಾಥ ಅವರದು. ಅವರು ಸುಮ್ಮನೆ ಒಂದಷ್ಟು ಗಿಡಗಳನ್ನು ಹಾಕಿ ವನ್ಯದಂತೆ ಬೆಳೆಯಲು ಬಿಟ್ಟುಬಿಟ್ಟಿದ್ದಾರೆ. ನೀರು ಹಾಕುವುದು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಯಾವುದೇ ಗೊಬ್ಬರ ಅಥವಾ ಕೀಟನಾಶಕವನ್ನು ಹಾಕುವುದಿಲ್ಲ. ಕಳೆಯನ್ನೂ ಕೀಳುವುದಿಲ್ಲ. ಹುಲ್ಲು ಯಥೇಚ್ಛವಾಗಿ ಬೆಳೆದಿದೆ. ಕೆಲವು ಬೀಜಗಳನ್ನು ಬಿಟ್ಟಿವೆ. ಈ ಬೀಜಗಳನ್ನು ತಿನ್ನಲು ಮುನಿಯಾಗಳು ಬರುತ್ತವೆ! ಸಿಂಪಿಗ (ಟೇಲರ್ ಬರ್ಡ್) ಆಗಾಗ ಬಂದು ಹೋಗುತ್ತದೆ. ಬುಲ್ ಬುಲ್ ಹಕ್ಕಿಗಳು ದಿನಕ್ಕೆ ಒಮ್ಮೆಯಾದರೂ ಹಾಜರಿ ಹಾಕಿ ಹೋಗುತ್ತವೆ. ಸೂರಕ್ಕಿಗಳು ಹಾಗೂ ಸಿಪಿಲೆಗಳು (ವಾಗ್ಟೇಲ್ಸ್) ಗೌರವ ಅತಿಥಿಗಳಂತೆ ಬಂದು ಹೋಗುವುದೂ ಉಂಟು. ಕಳೆ ಗಿಡದ ಕಾಳಿನಂತಹ ಬೀಜ ಹಾಗೂ ಆ ಗಿಡಕ್ಕೆ ಬರುವ ಕೀಟಗಳು ಪಕ್ಷಿಗಳನ್ನು ಆಕರ್ಷಿಸುತ್ತವೆ. ಇದನ್ನು ಜನ ಯೋಚಿಸಬಹುದು. ಇಲ್ಲಿ ಒಂದು ಅರಳೀಮರವೂ ಬೆಳೆದಿದೆ! ಸಾಮಾನ್ಯವಾಗಿ ಮನೆಯಲ್ಲಿ ಅರಳೀಮರ ಬೆಳೆಸುವ ಪದ್ಧತಿಯಿಲ್ಲ. ಒಳ್ಳೆಯದಲ್ಲ ಎನ್ನುತ್ತಾರೆ. ಕೆಲವರು ಅದರ ಬೇರು ಮನೆಯ ಪಾಯಕ್ಕಿಳಿದುಬಿಡುತ್ತದೆ ಎಂದೂ ಹೇಳುತ್ತಾರೆ. ಆದರೆ, ದಶಕಗಳಿಂದ ಮನೆಯ ಪಕ್ಕದಲ್ಲೇ ದೊಡ್ಡ ಅಶ್ವತ್ಥಕಟ್ಟೆಯಿರುವ ಅನೇಕ ಪ್ರದೇಶಗಳನ್ನು ಬೆಂಗಳೂರಿನಲ್ಲಿ ನಾನು ನೋಡಿದ್ದೇನೆ!
ಇನ್ನೊಂದು ಬಗೆಯದ್ದು ಮನೆಯ ಸುತ್ತಲಿನ ಅಥವಾ ಮೇಲಿನ (ಟಾರಸಿ) ತೋಟ. ಹೀಗೆಂದ ಕೂಡಲೆ ನನಗೆ ನೆನಪಿಗೆ ಬರುವುದು ನಮ್ಮ ಡಾ.ಎಸ್. ಶಿಶುಪಾಲ ಅವರ ಮನೆಯ ತೋಟ. ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಪ್ರಾಧ್ಯಾಪಕರು. ತಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಕಷ್ಟು ಮರಗಳನ್ನು ಬೆಳೆಸಿದ್ದಾರೆ. ಇವರು ಪಕ್ಷಿತಜ್ಞರು, ವನ್ಯಜೀವಿ ಛಾಯಾಗ್ರಾಹಕರು ಸಹ. ಇದಕ್ಕೂ ಮುಖ್ಯವಾಗಿ ಒಳ್ಳೆಯ ವಿಜ್ಞಾನ ಲೇಖಕರು. ಅವರೂ ಅನೇಕ ಲೇಖನಗಳು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ವಿಜ್ಞಾನ ಲೋಕ”, ಪ್ರಜಾವಾಣಿ ಹಾಗೂ ಇತರ ಅನೇಕ ಸ್ಥಳೀಯ ಪತ್ರಿಕೆಗಳಲ್ಲಿ ಬಂದಿವೆ. ವಿಜ್ಞಾನದ ಮಹತ್ವದ ಸಂವಹನಕಾರರು. ಇವರ ಸಾಮರ್ಥ್ಯವನ್ನು ಪ್ರಕಾಶಕರು ಇನ್ನು ಬಳಸಿಕೊಳ್ಳಬೇಕಿದೆ. ಇವರು ತಮ್ಮ ಮನೆಯಲ್ಲಿಯೇ ಎಲ್ಲರೂ ಅಸೂಯೆಪಡುವಂತಹ ಸುಂದರ ತೋಟವನ್ನು ಬೆಳೆಸಿದ್ದಾರೆ. ಇದು ಸಾಕಷ್ಟು ಶ್ರಮ, ನಿಗಾವಣೆಯಿಂದ ಮಾಡಿರುವಂತಹದ್ದು. ಅನೇಕಾನೇಕ ಸಸ್ಯಜಾತಿಗಳನ್ನು ತಂದು ಜತನದಿಂದ ಕಾಪಾಡಿದ್ದಾರೆ. ಅದನ್ನು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದಾರೆ. ಇವರ ಮನೆಯ ತೋಟದಲ್ಲಿ ಅದೆಷ್ಟೋ ಹಕ್ಕಿಗಳ, ಅದೆಷ್ಟೋ ಸಂತತಿಗಳು ಆಗಿಹೋಗಿವೆ. ಇಂತಹ ತೋಟಗಳು ಸಹ ಪಕ್ಷಿಗಳಿಗೆ ಹಾಗೂ ಕೀಟಗಳಿಗೆ ಆಶ್ರಯತಾಣಗಳೇ. ಮನೆ ತೋಟದಲ್ಲಿ ಸಿಂಪಿಗ, ಸೂರಕ್ಕಿಗಳು ಗೂಡು ಕಟ್ಟುವುದು ಸಾಮಾನ್ಯ. ಇದನ್ನು ಜನರು ಯೋಚಿಸಬಹುದು.
ಅಂತೆಯೇ, ರಾಯಚೂರಿನ ಸರ್ಕಾರಿ ಶಾಲೆಯ ಶಿಕ್ಷಕ ಶ್ರೀ ವೀರಣ್ಣ ಮಡಿವಾಳರ ತಮ್ಮ ಶಾಲೆಯಲ್ಲಿ ತೇಜಸ್ವಿ ಜೀವಾಕಾಶ ಎಂದು ಸೊಗಸಾದ ಕೇಂದ್ರವನ್ನು ನಿರ್ಮಿಸಿದ್ದಾರೆ ಹಾಗೂ ಪೈಪುಗಳನ್ನು ಬಳಸಿ ಹಕ್ಕಿಗಳಿಗೆ ಗೂಡುಗಳನ್ನು ನಿರ್ಮಿಸಿದ್ದಾರೆ. ಗುಬ್ಬಿಯೂ ಸೇರಿದಂತೆ ಅನೇಕ ಹಕ್ಕಿಗಳು ಇವನ್ನು ಬಳಸಿಕೊಂಡಿವೆ. ಇದು ಅನುಕರಣೀಯ. ವೀರಣ್ಣ ನಮ್ಮ ನಡುವಿನ ಮಹತ್ವದ ಕವಿ ಹಾಗೂ ಶಿಕ್ಷಕರು. ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಆಯ್ಕೆಯಾಗಿದ್ದವರು ಇವರು. ಇವರ ಸಾಧನೆಯನ್ನು ಕುರಿತಾಗಿ ಇತ್ತೀಚೆಗೆ ಡೆಕ್ಕನ್ ಹೆರಾಲ್ಡ್ ಲೇಖನ ಪ್ರಕಟಿಸಿತ್ತು. ಇದೂ ಅನುಕರಣೀಯ.
ಯಾರಿಗೆ ಸಾಧ್ಯವಿದೆಯೋ ಅವರು ಇಂತಹ ತೋಟಗಳನ್ನು ನಿರ್ಮಿಸಿ ಪಕ್ಷಿಗಳಿಗೆ ಆಸರೆಯನ್ನು ಮತ್ತು ಮಾನವರಿಗೂ ಒಳ್ಳೆಯ ಪರಿಸರವನ್ನು(ಭವಿಷ್ಯವನ್ನು?!) ನಿರ್ಮಿಸಬಹುದು. ಇದು ತುಂಬ ಕಷ್ಟವೇನೂ ಅಲ್ಲ. ಗೂಡುಗಳು ಕೊಳ್ಳಲು ಲಭ್ಯ. ನಾವೂ ವಿನ್ಯಾಸ ಮಾಡಿ ಮನೆಯ ಮೇಲೆ ಕಟ್ಟಬಹುದು. ಆದರೆ, ಹಕ್ಕಿಗಿಂತ ಮೊದಲೇ ಅಳಿಲುಗಳು ಬಂದು ಸೇರಿಕೊಳ್ಳಬಹುದು. ಆದರೆ, ಕ್ರಮೇಣ ಹಕ್ಕಿಗಳು ಬರುತ್ತವೆ.
ಇನ್ನೊಂದು ವಿಚಾರವೆಂದರೆ, ಶ್ರೀನಾಥರ ನಿಗಾವಣೆಯಿಲ್ಲದ “ತೋಟದಲ್ಲಿ” ನೀರು ನಿಲ್ಲುವುದು ಸಾಮಾನ್ಯ. ಹಾಗಾಗಿ ಸೊಳ್ಳೆಗಳು ಬರುತ್ತವೆ. ಅವರು ಕಂಡುಕೊಂಡ ಉಪಾಯ ಒಂದು ಚಮಚೆ ಕೊಬ್ಬರಿ ಎಣ್ಣೆ! ನಿಂತ ನೀರಿಗೆ ಒಂದು ಚಮಚೆ ಕೊಬ್ಬರಿ ಎಣ್ಣೆ ಹಾಕಿದರೆ ಸುಮಾರು ಹದಿನೈದು ದಿನಗಳ ಕಾಲ ಸೊಳ್ಳೆಗಳ ಕಾಟವಿರುವುದಿಲ್ಲ. ಆದರೆ, ಔಷಧಿ ಹೊಡೆದರೆ ಎರಡೇ ದಿನ. ಜತೆಗೆ ನಂತರ ದುಪ್ಪಟ್ಟು ಸೊಳ್ಳೆಗಳು ಬರುತ್ತವೆ. ಅಂತೆಯೇ, ಅವರ ಮನೆಯಲ್ಲಿನ ಇಲಿಗಳ ಕಾಟಕ್ಕೆ ಕಂಡುಕೊಂಡ ಒಂದು ಉಪಾಯ: ಇಲಿ ಒಳಬರುವ ಸ್ಥಳಗಳನ್ನು ಗುರುತಿಸಿದ್ದಾರೆ. ಇದು ಅವರ ಮನೆಯ ಮುಂದಿನ ರಸ್ತೆಯಲ್ಲಿದೆ, ಗೇಟಿನ ಮುಂದೆಯೇ ಇದೆ. ಇಲ್ಲಿ ರಾತ್ರಿ ಒಂದಿಷ್ಟು ಅನ್ನ ಇಟ್ಟುಬಿಟ್ಟರೆ ಮನೆಯೊಳಗೆ ಇಲಿಗಳು ಬರುವುದೇ ಇಲ್ಲ. ಇದು ಕೊಲ್ಲುವುದಕ್ಕಿಂತಲೂ ಒಳ್ಳೆಯ ಉಪಾಯ. ಕೊಲ್ಲುವುದರಿಂದ ಸಮಸ್ಯೆಯೇನೂ ಪರಿಹಾರವಾಗುವುದಿಲ್ಲ! ಈ ಅಂಶಕ್ಕೆ ವನ್ಯಜೀವಿ ವಿಜ್ಞಾನದ ನೆಲೆಗಟ್ಟಿದೆ. ಅದನ್ನು ಮುಂದಿನವಾರ ನೋಡೋಣ.
ಈ ಬಾರಿಯ ಅಂಕಣಕ್ಕೆ ತಮ್ಮ ತೋಟದ ಚಿತ್ರಗಳನ್ನು ಕಳಿಸಿಕೊಟ್ಟ ಹಿರಿಯ ಮೈಕ್ರೊಬಯಾಲಜಿ ತಜ್ಞರೂ ವಿಜ್ಞಾನ ಸಂವಹನಕಾರರೂ ಆದ ಪ್ರೊ. ಎಸ್. ಶಿಶುಪಾಲ ಅವರಿಗೆ ವಿಶೇಷ ಕೃತಜ್ಞತೆಗಳು!