ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು.
.
ಪಕ್ಷಿ ಸಂರಕ್ಷಣೆ- 8
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com
ಇದುವರೆಗೂ ನಾವು ಸಂರಕ್ಷಣೆ ಕುರಿತ ಚರ್ಚೆಯಲ್ಲಿ ಸಂರಕ್ಷಣೆ ಎಂದರೇನು ಹಾಗೂ ಅದಕ್ಕಿರುವ ಅನೇಕ ತೊಡಕುಗಳನ್ನು ತಿಳಿದುಕೊಂಡೆವು. ಹಸಿರು ಮನೆ ಪರಿಣಾಮ, ಕಾರ್ಬನ್ ನೆರಳು ಇತ್ಯಾದಿಗಳ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿದೆವು. ಪಕ್ಷಿ ಸಂರಕ್ಷಣೆ ಎಂಬ ಶೀರ್ಷಿಕೆಯಡಿ ಇಷ್ಟೆಲ್ಲ ತರಲು ಕಾಣವೆಂದರೆ ಇವುಗಳ ನಡುವೆ ಇರುವ ಪರಸ್ಪರ ಸಂಬಂಧ. ನಾವೂ ಸೇರಿದಂತೆ ಎಲ್ಲ ಜೀವಿಗಳು ಪ್ರಕೃತಿಯ ಅಂಗ. ಇದರಲ್ಲಿ ಯಾವುದೂ ಅಮುಖ್ಯವಲ್ಲ. ಆದರೆ, ಮಾನವನ ಮೇಲುಗೈ ಇದೆ ಎಂಬುದು ನಿರ್ವಿವಾದ. ಈ ಮೆಲುಗೈನಿಂದ ಕೂತ ಕೊಂಬೆಯನ್ನೇ ಕಡಿಯುವ ಬುದ್ಧಿವಂತಿಕೆಯನ್ನು ಮಾನವ ತೋರುತ್ತಿದ್ದಾನೆ ಅಥವಾ ಅವನ ದುರಾಸೆ ತೋರಿಸುವಂತೆ ಮಾಡುತ್ತಿದೆ.ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು. ಒಟ್ಟಾರೆಯಾಗಿ ಮಾನವನ ತಿಳಿವಳಿಕೆ ಹೆಚ್ಚಿದಂತೆ, ಪ್ರಜ್ಞೆ ಗಟ್ಟಿಯಾದಂತೆ ಪರಿಸರ ಸಂರಕ್ಷಣೆಯ ಮಾತು ಹಾಗೂ ಕೃತಿ ಜೊತೆ ಜೊತೆಗಲ್ಲದಿದ್ದರೂ ನಡೆಯುತ್ತಿದೆ. ಇಲ್ಲಿಯೂ ಸಹ ಅವನ ಸ್ವಾರ್ಥ ಬಿಟ್ಟಿಲ್ಲ. ಶತಮಾನದಕ್ಕೂ ಮುಂಚೆ ಆರಂಭವಾದ ಹವಾಮಾನ ಬದಲಾವಣೆ ಎಂಬ ಬಹುದೊಡ್ಡ ಕುತ್ತನ್ನು ಅದು ಸುಳ್ಳು ಎಂದು ವಾದಿಸುವ ಬಣ ಹುಟ್ಟಿಕೊಂಡಿತು. ಆ ಕುರಿತಾಗಿ ಅನೇಕ ಗ್ರಂಥಗಳೇ ಬಂದವು! ಇದು ಕನ್ನಡಕ್ಕೂ ಅನುವಾದಗೊಂಡಿತು ಎಂದರೆ ಮಾಫಿಯಾಗಳ ಹಿಡಿತ ಎಷ್ಟಿರಬಹುದು ಎಂಬುದನ್ನು ನಾವು ಊಹಿಸಬಲ್ಲೆವು. ಅಥವಾ ಊಹಿಸಲಾರವೇನೋ! ಇರಲಿ, ಒಟ್ಟಾರೆಯಾಗಿ ಹವಾಮಾನ ಬದಲಾವಣೆ ಎಂಬುದು ಒಂದು ನಾವು ಅಲ್ಲಗಳೆಯಲಾಗದ ಒಂದು ಸತ್ಯ. ಇದರ ಪರಿಣಾಮಗಳನ್ನು ನಾವು ಅನೇಕ ಬಗೆಗಳಲ್ಲಿ ಅನುಭವಿಸುತ್ತಿದ್ದೇವೆ. ಕಣ್ಣಿಗೆ ಕಂಡದ್ದು ಸಾಕಷ್ಟು. ಕಾಣದ್ದು ಎಷ್ಟೋ!
ಹಾಗಾಗಿ, ನಾವು ಸಂರಕ್ಷಣೆ ಎಂದರೆ ಹಿಂದಿನಂತೆ ಕಡೆಗಣಿಸುವಂತಿಲ್ಲ. ಈ ಭೂತ ನಮ್ಮ ಮನೆ ಬಾಗಿಲಿಗೇ ಬಂದು ನಿಂತಿದೆ. ನಾವು ಬಾಗಿಲು ತೆಗೆಯಬೇಕಷ್ಟೇ! ಹಾಗಾದರೆ, ನಾವೇನು ಮಾಡಬಹುದು ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರವಾಗಿ ಕೆಲವು ಅಂಶಗಳು ಈಗಾಗಲೇ ಈ ಅಂಕಣದಲ್ಲಿ ಚರ್ಚೆಯಾಗಿವೆ. ನಾವು ಸರಳ ಜೀವನವನ್ನು ಅಳವಡಿಸಿಕೊಳ್ಳುವುದು ಮುಖ್ಯವೇ ಆದರೂ ಅದು ಆಗಲೇ ಬೇಕಾದಂತಹದ್ದಾದರೂ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆ. ದೊಡ್ಡ ದೊಡ್ಡ ಕಾರ್ಖಾನೆಗಳಿಂದ ಉಂಟಾಗುವ ಮಾಲೀನ್ಯ, ನಾವು ಅಂದರೆ ಜನಸಾಮಾನ್ಯರಿಂದ ಆದ ಸಂರಕ್ಷಣಾ ಕಾರ್ಯಗಳನ್ನು ನುಂಗಿ ನೊಣವಿ ಬಿಡುವುದು ಸತ್ಯವಷ್ಟೇ! ಹಾಗಾಗಿ ನಾವು ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಹೇಗಾಗುತ್ತಿದೆ ಎಂಬುದನ್ನು ನೋಡಲೇ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಾವು ಅಂದರೆ ಯಕಶ್ಚಿತ್ ಜನಸಾಮಾನ್ಯರು ಈ ಕುರಿತಾದ ರಾಜಕೀಯ ಇಚ್ಛಾಶಕ್ತಿ ಬೆಳಸುವತ್ತಲೂ ಮುಂದಾಗಬೇಕು ಎಂಬುದು ಭಯಕಾರಕ ಸತ್ಯ. ನಮ್ಮ ಪ್ರಯತ್ನ ಸಾಗಬೇಕು.ಗಾಯಾ ಸಿದ್ಧಾಂತ…
ಈ ಅಂಕಣ ಶೈಕ್ಷಣಿಕವಾಗಿಯೂ ಮುಖ್ಯವಾಗಬೇಕು. ಅಂದರೆ, ಸದ್ಯ ಇರುವ ಸಿದ್ಧಾಂತಗಳ ಚರ್ಚೆಯಲ್ಲದಿದ್ದರೂ ಪ್ರಸ್ತಾಪವಾದರೂ ಆಗಬೇಕು ಎಂಬ ಆಶಯ ನನ್ನದು. ಹಾಗಾಗಿ, ಇಲ್ಲಿ ಹೇಳಿರುವುದಕ್ಕೆ ವಿರುದ್ಧವಾದ ಒಂದು ಪ್ರಮುಖವಾದ ವಾದವನ್ನು ನಾನು ಹೇಳಲೇಬೇಕು. ಅದೇ ಗಾಯಾ ಎಂಬ ಸಿದ್ಧಾಂತ.ಗಾಯಾ ಎಂಬುದು ಗ್ರೀಕ್ ದೇವತೆಯ ಹೆಸರು (Gaia) ಇದನ್ನು ಗಾಯಾ ಎಂದು ಗಾಢವಾಗಿ (ಮಹಾಪ್ರಾಣವಲ್ಲ) ಉಚ್ಛರಿಸುತ್ತಾರೆ. ಇದರ ಪ್ರಕಾರ ಪ್ರಕೃತಿಯು ತನ್ನ ಸಮಸ್ಯೆಗಳನ್ನು ತಾನೇ ನೀಗಿಸಿಕೊಳ್ಳುತ್ತದೆ ಎಂಬುದು. ಇದನ್ನು ಸಮರ್ಥಿಸುವ ಅನೇಕ ತಜ್ಞರು ಇರುವಂತೆ ವಿರೋಧಿಸುವ ದೊಡ್ಡ ಬಣವೇ ಇದೆ. ಇದುವರೆಗೂ ನಾಲ್ಕು ಅಂತಾರಾಷ್ಟ್ರೀಯ ಸಮ್ಮೇಳನಗಳೂ ಗಾಯಾ ಕುರಿತು ನಡೆದಿವೆ. ಆದರೆ, ಇದಮಿತ್ಥಂ ಎಂದು ಏನೂ ಹೇಳಲಾಗದು. ಇದನ್ನು ಒಪ್ಪಲು ಬೇಕಾದ ಸಾಕ್ಷ್ಯ ಇಲ್ಲ ಎಂದೇ ಅನೇಕ ವಿಜ್ಞಾನಿಗಳ ಅಭಿಪ್ರಾಯ. ಹವಾಮಾನ ಬದಲಾವಣೆಯನ್ನು ಗಮನಿಸುವಾಗ ಗಾಯಾ ಸಿದ್ಧಾಂತ ಕುಸಿಯುವಂತೆ ಕಾಣುತ್ತದೆ ಎಂಬ ಭಾವ ಬರುತ್ತದೆ. ಆದರೆ, ಅದನ್ನು ಸಮರ್ಥಿಸುವ ವಿಜ್ಞಾನಿಗಳು ಈ ಬದಲಾವಣೆಯೇ ಗಾಯಾದ ಸಮರ್ಥನೆ ಎನ್ನುತ್ತಾರೆ. ಅದೇನೇ ಇರಲಿ, ಸಂರಕ್ಷಣೆಯನ್ನು ನಮ್ಮ ನೈತಿಕ ಹೊಣೆಗಾರಿಕೆ ಹಾಗೂ ಕರ್ತವ್ಯ ಎಂದು ಪರಿಗಣಿಸಿದಾಗ ಗಾಯಾ ಅಥವಾ ಮತ್ಯಾವುದೇ ಸಿದ್ಧಾಂತ ಅಷ್ಟು ಮುಖ್ಯವಾಗದು.