ಕರ್ನಾಟಕದಲ್ಲಿ ಗುಡವಿ ಪಕ್ಷಿಧಾಮ, ಕಾರಂಜಿಕೆರೆ, ಕೊಕ್ಕರೆ ಬೆಳ್ಳೂರು, ಕುಕ್ಕರಹಳ್ಳಿಕೆರೆ, ಕುಂತೂರು ಕಲ್ಲೂರು ಕೆರೆಗಳು, ಲಿಂಗಾಂಬುಧಿ ಕೆರೆ ಮತ್ತು ಸುತ್ತಲಿನ ಪ್ರದೇಶ, ಮಾಗಡಿ ಮತ್ತು ಶೆಟ್ಟಿಹಳ್ಳಿ ತೇವ ಪ್ರದೇಶ (ಗದಗ), ನರಸಾಂಬುಧಿ ಕೆರೆ, ಸೂಳೆಕೆರೆ… ಹೀಗೆ ಒಟ್ಟು ಹತ್ತು ತಾಣಗಳು ರಾಮ್‍ಸಾರ್ ತಾಣಗಳಾಗಲು ಅರ್ಹತೆ ಹೊಂದಿವೆ.
.
ಪಕ್ಷಿ ಸಂರಕ್ಷಣೆ- 20
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird
ಕಳೆದ ಎರಡು ವಾರಗಳಿಂದ ನಾವು ಒಂದು ತಾಣ ರಾಮ್‍ಸಾರ್ ತಾಣವೆಂದು ಘೋಷಿತವಾಗಲು ಇರಬೇಕಾದ ಅರ್ಹತೆಗಳನ್ನು ಕುರಿತಾಗಿ ತಿಳಿದುಕೊಂಡೆವು. ಈ ನಿಯಮಗಳು ಅದೆಷ್ಟು ಸಮರ್ಪಕವಾಗಿವೆ. ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿವೆ ಎಂಬುದು ನಮ್ಮ ಮನಸ್ಸಿಗೆ ಬಾರದಿರದು. ಈ ನಿಯಮಗಳು ನಮ್ಮ ನೆಲದ ಜೀವಿವೈವಿಧ್ಯವನ್ನೂ ಸಮೃದ್ಧಿಯನ್ನು ರಕ್ಷಿಸುತ್ತವೆ. ಅರಿತೋ ಅರಿಯದೆಯೋ ಮಾನವನ ಚಟುವಟಿಕೆಗಳಿಂದ ಜೀವಿಗಳಿಗೆ ಸಂರಕ್ಷಣೆಯ ಅವಶ್ಯಕತೆ ಬಂದಿದೆ. ಇದು ಜೀವಿಗಳ ಬದುಕುವ ಹಕ್ಕನ್ನು ಕಾಪಾಡುವ, ನಮ್ಮ ಅಂದರೆ ಮಾನವರ ನೈತಿಕತೆಯನ್ನು ಸ್ಥಾಪಿಸುವ ಹಾಗೂ ಮನುಕುಲ ಬದುಕಿ ಉಳಿಯುವ ಮಾರ್ಗವೂ ಹೌದು.
ಇಷ್ಟು ಸೊಗಸಾದ ಗಟ್ಟಿ ನಿಯಮಗಳಿಗೆ ಅನುಗುಣವಾದ ರಾಮ್‍ಸಾರ್ ತಾಣಗಳು ಭಾರತದಲ್ಲಿ ಹತ್ತೊಂಬತ್ತು ಇದ್ದು ಇದೀಗ ರಂಗನತಿಟ್ಟು ಆ ಪಟ್ಟಿಗೆ ಸೇರಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಲ್ಲವೆ? ಇಷ್ಟು ಮಾತ್ರವಲ್ಲ ರಾಮ್‍ಸಾರ್ ತಾಣವಾಗಲು ಅರ್ಹವಾದ ಇನ್ನೂ ಅನೇಕಾನೇಕ ಸ್ಥಳಗಳು ಭಾರತದಲ್ಲಿ ಇವೆ, ಕರ್ನಾಟಕದಲ್ಲಿಯೂ ಇವೆಯೆಂದರೆ ನಾವು ಅದೆಷ್ಟು ಸಮೃದ್ಧವಾದ, ಅಷ್ಟೇ ಪ್ರಮುಖವಾದ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅವನ್ನು ಉಳಿಸುವತ್ತ ಪ್ರಾಮಾಣಿಕ ಪ್ರಯತ್ನಗಳನ್ನು ಸದಾ ಮಾಡುತ್ತಿರಬೇಕು.
ಡಾ ಅಸದ್ ರೆಹಮಾನಿ ಎಂಬ ವಿಜ್ಞಾನಿ ಭಾರತದಲ್ಲಿನ ರಾಮ್‍ಸಾರ್ ತಾಣಗಳಾಗಬಲ್ಲ ಸಮರ್ಥ ಸ್ಥಳಗಳನ್ನು, ಗುರುತಿಸಿ ಅಧ್ಯಯನ ಪೂರ್ಣವಾದ ಪುಸ್ತಕ ಬರೆದಿದ್ದಾರೆ ಎಂಬುದನ್ನು ನಾವು ತಿಳಿದಿದ್ದೇವೆ. ಆ ಆಕರ ಗ್ರಂಥದ ಪ್ರಕಾರ ಕರ್ನಾಟಕದಲ್ಲಿ ಗುಡವಿ ಪಕ್ಷಿಧಾಮ, ಕಾರಂಜಿಕೆರೆ, ಕೊಕ್ಕರೆ ಬೆಳ್ಳೂರು, ಕುಕ್ಕರಹಳ್ಳಿಕೆರೆ, ಕುಂತೂರು ಕಲ್ಲೂರು ಕೆರೆಗಳು, ಲಿಂಗಾಂಬುಧಿ ಕೆರೆ ಮತ್ತು ಸುತ್ತಲಿನ ಪ್ರದೇಶ, ಮಾಗಡಿ ಮತ್ತು ಶೆಟ್ಟಿಹಳ್ಳಿ ತೇವ ಪ್ರದೇಶ (ಗದಗ), ನರಸಾಂಭುದಿ ಕೆರೆ, ಸೂಳೆಕೆರೆ ಹೀಗೆ ಒಟ್ಟು ಹತ್ತು ತಾಣಗಳು ರಾಮ್‍ಸಾರ್ ತಾಣಗಳಾಗಲು ಅರ್ಹತೆಯನ್ನು ಹೊಂದಿವೆ! ಈ ಪಟ್ಟಿಯಲ್ಲಿದ್ದ ರಂಗನತಿಟ್ಟು ಪಕ್ಷಿಧಾಮ ಕೆಲವೇ ತಿಂಗಳ ಹಿಂದೆ ರಾಮ್‍ಸಾರ್ ತಾಣವೆಂದು ಘೋಷಿತವಾಯಿತು. ನಮ್ಮ ರಾಜ್ಯವಾದ ಕರ್ನಾಟಕ ಇವುಗಳು ಹಾಗೂ ಪಶ್ಚಿಮಘಟ್ಟಗಳಂತಹ ಪ್ರದೇಶಗಳನ್ನು ಸೇರಿ ಅದೆಷ್ಟು ಅಮೂಲ್ಯವಾದ ಜೀವಾಶ್ರಯ ಪ್ರದೇಶ ಎಂಬುದು ಅಚ್ಚರಿಯ ಭಾವವನ್ನೂ ಗೌರವಭಾವವನ್ನೂ ತರುತ್ತದೆ.
ಆದರೆ, ನಮಗೆ ಇವುಗಳ ಜವಾಬ್ದಾರಿಯೇ ಇರುವಂತೆ ಕಾಣುತ್ತಿಲ್ಲ. ಪೊಳ್ಳು ಅಭಿವೃದ್ಧಿಯ ಸ್ವಾರ್ಥಸಾಧನೆಯ ಹಂದರದಲ್ಲಿ ಜೀವಾವಾಸಗಳು ಸೊರಗುತ್ತಿವೆ. ನಮ್ಮ ಪ್ರಸಿದ್ಧ ಹಾಗೂ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ ಉಲ್ಲಾಸ ಕಾರಂತರು ಒಮ್ಮೆ ಒಂದು ಸಂಗತಿ ಹೇಳಿದ್ದರು: “…ಅನೇಕ ದೇಶಗಳಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ವಿಶೇಷವಾದದ್ದೋ ಗಂಡಾಂತರದಂಚಿನಲ್ಲಿರುವುದೋ ಒಂದು ಜೀವಿ ಕಾಣುತ್ತದೆ. ಅದನ್ನು ನೂರು ವಿದೇಶಿಯರು ಬೈನಾಕ್ಯುಲರ್‍ನಲ್ಲಿ ನೋಡುತ್ತಿರುತ್ತಾರೆ. ನಮ್ಮಲ್ಲಿ ನೂರಾರು ಅಂತಹ ಪಕ್ಷಿಗಳಿವೆ. ಅದನ್ನು ಒಬ್ಬ ವಿದೇಶಿ ದುರ್ಬೀನಿನಲ್ಲಿ ನೋಡುತ್ತಿದ್ದರೆ, ಅವನನ್ನು ನೂರುಜನ ನಮ್ಮವರು ನೋಡುತ್ತಿರುತ್ತಾರೆ” ಎಂದು!
ನಾವು ಬದಲಾಗುತ್ತೀವಿ ಅಲ್ಲವೆ!