ಪಕ್ಷಿ ಸಂರಕ್ಷಣೆ 50. .
♦ ಕಲ್ಗುಂಡಿ ನವೀನ್
ಅಂಕಣಕಾರರು, ವನ್ಯಜೀವಿ ತಜ್ಞರು
ksn.bird@gmail.com
newsics.com@gmail.com
ಸಂರಕ್ಷಣೆಯ ವಿವಿಧ ಆಯಾಮಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಕಾನೂನುಗಳನ್ನು ಸಹ ನೋಡಿದೆವು. ಅಂತಾರಾಷ್ಟ್ರೀಯ ಒಪ್ಪಂದಗಳು, ಕಾರ್ಯಚಟುವಟಿಕೆಗಳನ್ನು ಸಹ ಈ ಅಂಕಣದಲ್ಲಿ ನೋಡಿದೆವು. ಅಲ್ಲಿನ ನಿಯಮಾವಳಿಗಳನ್ನು ಅರಿತೆವು. ಮಾನವ ತನ್ನ ಉಳಿವಿಗಾಗಿ ಮಾತ್ರವೇ ಇವೆಲ್ಲವನ್ನು ಮಾಡುತ್ತಾ ಬಂದಿದ್ದಾನೆಂದೇನೂ ಹೆಳಲಾಗದು. ಅದಕ್ಕೆ ತಾತ್ವಿಕ ನೆಲೆಯೂ ಇದೆ. ಸಂರಕ್ಷಣೆಯ ಅಗತ್ಯದ ಮೊದಲ ಮಾತೇ ಇತರ ಜೀವಿಗಳೂಗೂ ಬದುಕುವ ಹಕ್ಕಿದೆ, ಈ ಭೂಮಿ ಅವುಗಳಿಗೂ ಸೇರಿದ್ದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವು ನಮ್ಮ ಸಹಜೀವಿಗಳು ಎಂಬುದೇ ಆಗಿದೆ. ವಿಜ್ಞಾನದ ದೃಷ್ಟಿಕೋನದಲ್ಲಿ ನೋಡಿದಾಗ ನಾವು ಹಾಗೂ ವನ್ಯ ಎಂಬುದು ಒಂದು ವ್ಯವಸ್ಥೆಯ ಬೇರೆ ಬೇರೆಯಂತೆ ಕಾಣುವ ಭಾಗಗಳು ಅಷ್ಟೆ. ಒಂದು ಮತ್ತೊಂದರ ಮೇಲೆ ಪ್ರಭಾವ ಬೀರುವುದು ಇದ್ದೇ ಇದೆ. ವನ್ಯ ಹಾಗೂ ಮಾನವ ಈ ಎರಡೂ ಜೀವಗಳ ಒಳಿತನ್ನು ಸಾಧಿಸುವುದೇ ಸದ್ಯ ನಮ್ಮ ಮುಂದಿರುವ ಸವಾಲು. ಇಲ್ಲಿ ನಾವು ಮಾನವನ ಸ್ವಾರ್ಥವನ್ನು ಬದಿಗಿಟ್ಟರೆ ಪರಿಗಣಿಸಬೇಕಾಗುವುದು ಆರ್ಥಿಕತೆ ಮಾತ್ರ. ವನ್ಯಸಂರಕ್ಷಣೆ ಆರ್ಥಿಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಅದರಲ್ಲಿಯೂ ಕೃಷಿ ಮುಂಗಾರಿನ ಮೇಲೆ ಅವಲಂಬಿತವಾದ ಭಾರತದಂತಹ ದೇಶದ ಆರ್ಥಿಕತೆಯ ಮೇಲೆ. ಇರಲಿ.
ಸಂರಕ್ಷಣೆಗೆ ತಾತ್ತ್ವಿಕ ದೃಷ್ಟಿಕೋನ ಕೊಟ್ಟರೆ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಅಂದರೆ ಇಡೀ ಚರಾಚರ ವಸ್ತುಗಳು ಒಂದೇ ಅಲ್ಲವೇ ಎಂದುಕೊಂಡು ಸರ್ವಹಿತ ಕೋರುವ ಅದಕ್ಕಾಗಿ ಶ್ರಮಿಸುವ ದೃಷ್ಟಿಕೋನ. ಖಂಡಿತವಾಗಿ ಇದು ನಮ್ಮೆಲ್ಲರ ಶ್ರೇಯಸ್ಸನ್ನು ತಂದುಕೊಂಡುತ್ತದೆ. ಆದರೆ, ಇಂದಿನ ದಿನಮಾನದಲ್ಲಿ ಆ ಭಾವ ತರುವುದು ಬಹಳ ಬಹಳ ಕಷ್ಟವಾದದ್ದು. ಪ್ರವಾಹದ ವಿರುದ್ಧ ಈಜುವುದು ಸದಾ ಕಷ್ಟದ ಕಾರ್ಯವೇ. ಆದರೆ, ಅದು ದೊಡ್ಡ ಯಶಸ್ಸನ್ನು ಖಂಡಿತ ತಂದುಕೊಡುತ್ತದೆ. ಈ ಕುರಿತಾದ ಚಿಂತನೆಗಳು ಸಾಕಷ್ಟು ನಡೆದಿವೆ ಕೂಡ. ಸಂರಕ್ಷಣೆ ನಿಟ್ಟಿನಲ್ಲಿ ಹಾಗೂ ಆರ್ಥಿಕತೆಯ ನಿಟ್ಟಿನಲ್ಲಿಯೂ ನಡೆದಿದೆ.
ಒಟ್ಟಾರೆಯಾಗಿ, ನಮ್ಮ ಜೀವನದ ದೃಷ್ಟಿಕೋನವೇ ಸರ್ವರ ಹಿತ ಎಂದು ಹೊರಟಾಗ ಸಾಕಷ್ಟು ಸಾಧ್ಯವಾಗುತ್ತದೆ. ಭಾರತ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಈ ನಿಟ್ಟಿನ ಆಲೋಚನೆ ಬಹಳ ಬಹಳ ಮುಖ್ಯ.
ಈ ಕುರಿತಾಗಿ ರಮಣ ಮಹರ್ಷಿಗಳ ಜೀವನದ ಒಂದು ವಿಷಯವನ್ನು ಪ್ರಸ್ತಾಪಿಸುವೆ. ಪ್ರಾಣಿಗಳು ಹಾಗೂ ರಮಣರ ಒಡನಾಟದ ಒಂದು ಪುಸ್ತಕವಿದೆ. ಅದನ್ನು ಓದಿದಾಗ ಮೊದಲಿಗೆ ನನಗನ್ನಿಸಿದ್ದು, ರಮಣರು ತಮ್ಮ ಪೂರ್ವಾಶ್ರಮದಲ್ಲಿ ಪ್ರಾಣಿವಿಜ್ಞಾನವನ್ನು ಓದಿರಬೇಕೆಂದು. ಆದರೆ, ನಂತರ ತಿಳಿಯಿತು ಹಾಗೇನೂ ಇಲ್ಲವೆಂದು. ಕೇವಲ ಅರುಣಾಚಲ ಬೆಟ್ಟದ ಗುಹೆಗಳಲ್ಲಿ ಜೀವಿಸುವಾಗ ಅವರು ಕಂಡಿದ್ದ ಪ್ರಾಣಿಗಳ ಜೀವನವನ್ನು ಅದೆಷ್ಟು ಸೊಗಸಾಗಿ ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಅದು ಆಧುನಿಕ ವಿಜ್ಞಾನಕ್ಕೆ ಎಷ್ಟು ಹೊಂದುತ್ತದೆ ಎಂದು ನೋಡಿ ಆಶ್ಚರ್ಯಪಟ್ಟಿದ್ದೇನೆ. ಕೇವಲ ತಾಳ್ಮೆ, ಗಮನವಿಟ್ಟು ನೋಡುವುದರಿಂದ ಇಷ್ಟು ಸಾಧ್ಯವಾದರೆ ಮಾನವನ ಸಾಧನೆಗಳಿಗೆ ಕೊನೆ ಎಂಬುದು ಬರುತ್ತದೆಯೇ? ಇಲ್ಲಿ ನಾವೆಲ್ಲರೂ ಯೋಚಿಸಬೇಕಾದ ವಿಷಯಗಳು ಬಹಳ ಇವೆ. ಒಂದು ತಾತ್ವಿಕ, ಆಧ್ಯಾತ್ಮಿಕ ದೃಷ್ಟಿಕೋನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಯೋಚಿಸೋಣ.