ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು.
ಪಕ್ಷಿ ಸಂರಕ್ಷಣೆ 51
♦ ಕಲ್ಗುಂಡಿ ನವೀನ್
ಅಂಕಣಕಾರರು, ವನ್ಯಜೀವಿ ತಜ್ಞರು
ksn.bird@gmail.com
newsics.com@gmail.com
ರಮಣರ ಪ್ರಾಣಿವಿಜ್ಞಾನ ಜ್ಞಾನವನ್ನು ನೋಡಿ ಆಶ್ಚರ್ಯಪಡುತ್ತಿದ್ದೆವು. ಅವರು ಕಂಡರಸಿದ ಸತ್ಯ ವೈಜ್ಞಾನಿಕ ಸತ್ಯವೂ ಆಗಿತ್ತು. ಅವರ ಅನುಭವದ ಮುಂದಿನ ಭಾಗವನ್ನೂ ಹಾಗೂ ಆ ಅನುಭವದ ತತ್ತ್ವವನ್ನು ಇಂದಿನ ಪರಿಸ್ಥಿತಿಗೆ ಅನ್ವಯಿಸಿದಾಗ ಉಂಟಾಗುವ ಆಘಾತಕಾರಿ ಸ್ಥಿತಿಗೆ ಕಾರಣವೇನು ಎಂಬ ಜಿಜ್ಞಾಸೆ ಮೂಡುತ್ತದೆ. ಅದನ್ನು ಈ ಬಾರಿ ನೋಡೋಣ.
ಮೊದಲಿಗೆ ರಮಣರು ವಿರೂಪಾಕ್ಷ ಗುಹೆಯಲ್ಲಿದ್ದಾಗಿನ ಘಟನೆ. ಅಲ್ಲಿದ್ದ ಮಂಗಗಳ ಗುಂಪಿನ ನಾಯಕ ಕಾದಾಟದಲ್ಲಿ ಗಾಯಗೊಂಡು ತನ್ನ ಗುಂಪನ್ನು ಕಳೆದುಕೊಳ್ಳುತ್ತದೆ. ಆಗ ರಮಣರಲ್ಲಿಗೆ ಬಂದಿರುತ್ತದೆ. ನಂತರ ಸುಮಾರು ಕಾಲ ಅದು ಮತ್ತೆ ಕಂಡಿರುವುದಿಲ್ಲ. ಎಲ್ಲೋ ತೀರಿಹೋಯಿತೇನೋ ಎಂದುಕೊಳ್ಳುತ್ತಾರೆ ರಮಣರು ಆದರೆ ಮತ್ತೆ ಗುಂಪುಕಟ್ಟಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಅದನ್ನು ಗುರುಗಳಿಗೆ ಅರುಹಲು ಪರಿವಾರ ಸಮೇತ ಬರುತ್ತದೆ! ಈ ಬಾಂಧವ್ಯವೂ ನಮ್ಮನ್ನು ಆಘಾತಕ್ಕೊಳಪಡಿಸುತ್ತದೆಯಲ್ಲವೆ? ಇಷ್ಟರಮಟ್ಟಿಗೆ ಮಾನವ ವನ್ಯಜೀವಿ ಸಂಬಂಧ ಸಾಧ್ಯವೇ ಎಂದು!
ಇರಲಿ, ಈಗ ನಮ್ಮ ಪರಿಸ್ಥಿತಿಯೇನು? ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಎಲ್ಲವೂ ಮಂಗ, ಆನೆ, ಹಂದಿಗಳ ಪಾಲು. ನೀವು ತೇಜಸ್ವಿಯವರ ಸಾಹಿತ್ಯದಲ್ಲಿ ಓದಿಯೇ ಇರುತ್ತೀರಿ. ಏಲಕ್ಕಿ ತೋಟದಲ್ಲಿ ಮಂಗಗಳ ಹಾವಳಿ. ಒಂದೊಂದು ಗಿಡವನ್ನೂ ಕಿತ್ತು ಸೀಳಿ ಹಾಕಿದ್ದವು ಎಂದು. ಅದನ್ನು ನೋಡಿದ ಬೆಳೆಗಾರನಿಗೆ ಏನೆನಿಸಿರಬಹುದು. ಅಲ್ಲೇ “ಮೇಲಿರುವ ಗಡವ, ಅದೇ ಇವುಗಳ ನಾಯಕ, ಹಾಕಿ ಅದಕ್ಕೆ” ಎನ್ನುವ ತೋಟ ಕಾಯುವವರ ಮಾತು ಈ ಎಲ್ಲವೂ ಏನನ್ನು ಸೂಚಿಸುತ್ತದೆ? ಅದಿರಲಿ, ಅವನ್ನು ನಿಗ್ರಹಿಸಲು ಕೋಲು, ಕಲ್ಲುಗಳಿಂದ ತೊಡಗಿ ತುಪಾಕಿಗಳವರೆಗೆ… ಇದೇಕೆ ಹೀಗಾಯಿತು? ಮಾನವ ಕೃಷಿ ಮಾಡಿದ್ದೇ ತಪ್ಪಾಯಿತೇ? ಎಲ್ಲರೂ ರಮಣರಂತೆಯೋ ಇಲ್ಲವೆ ಇತರ ಸಾಧು ಸಂತರಂತೆ ಜೀವಿಸಲು ಸಾಧ್ಯವೇ? ಮನುಷ್ಯರೂ ಪ್ರಾಣಿಗಳಂತೆ ಜೀವಿಗಳಲ್ಲವೇ? ನಮಗೆ ಬದುಕುವ ಹಕ್ಕಿಲ್ಲವೇ ಎಂಬೆಲ್ಲ ಪ್ರಶ್ನೆಗಳು ಏಳಬಹುದು, ಎತ್ತಲೂಬಹುದು.
ಇದಕ್ಕೆ ಕಾರಣವೇನು? ಪರಿಹಾರಗಳೇನು? ಮೊದಲನೆಯದಾಗಿ ಮಾನವ ವನ್ಯಜೀವಿಗಳ ಸ್ಥಳವನ್ನು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದಾನೆ. ಕೃಷಿ ಅರಣ್ಯನಾಶಕ್ಕೆ ಜಗತ್ತಿನ ಮೊತ್ತಮೊದಲ ಅತಿದೊಡ್ಡ ಕಾರಣ. ಅದರೆ ಅದು ಅಗತ್ಯವಾಗಿತ್ತು. ಮಾನವ ತನ್ನ ಆಹಾರವನ್ನು ಬೆಳೆದು ತಿನ್ನತೊಡಗಿದಾಗ “ಆರಂಭ”ವಾದದ್ದಿದು. ಕ್ರಮೇಣ ನಾಗರಿಕತೆ ಬೆಳೆದಂತೆ ದೊಡ್ಡಪ್ರಮಾಣದಲ್ಲಿ ಕಾಡು ನಾಶವಾಗಿ ಮಾನವ ವಸಹಾತುಗಳು ನಿರ್ಮಾಣವಾದವು. ಕಾಡಿನಿಂದ ಕೃಷಿ ದೂರವಾದಷ್ಟೂ ಮಾನವ ವನ್ಯಜೀವಿ ಸಂಘರ್ಷ ಒಂದು ಹಂತಕ್ಕೆ ಕಡಿಮೆಯೇನೋ ಆಯಿತು. ಆದರೆ ಶಾಶ್ವತ ಪರಿಹಾರವಂತೂ ಆಗಲಿಲ್ಲ. ಶಾಶ್ವತ ಪರಿಹಾರ ಸಿಗುವುದೂ ಇಲ್ಲ. ಆದರೆ, ಸಹಬಾಳ್ವೆ ಎಂಬುದು ಸಾಧ್ಯವೇ? ಸಾಧ್ಯ ಎಂದಾದರೆ ಇದುವರೆಗೂ ಏಕೆ ಸಾಧ್ಯವಾಗಿಲ್ಲ? ಎಂಬ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಕಾರಣ ಮಾನವನ ಸ್ವಾರ್ಥ ಮತ್ತು ಅಜ್ಞಾನ.
ಈ ಸ್ವಾರ್ಥ ಮತ್ತು ಅಜ್ಞಾನದ ಹರವನ್ನು ಮುಂದಿನ ದಿನಗಳಲ್ಲಿ ವಿಶ್ಲೇಷಣೆ ಮಾಡೋಣ. ವನ್ಯಜೀವಿಗಳು ನಮ್ಮ ಸಹಜೀವಿಗಳು ಎಂಬ ಭಾವವನ್ನು ಕುರಿತು ಯೋಚಿಸುತ್ತಿರೋಣ…