ಪರಿಸರದ ಸಂರಕ್ಷಣೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಅನೇಕ ಒಪ್ಪಂದಗಳಾಗಿವೆ. ವಿವಿಧ ದೇಶಗಳಲ್ಲಿ ಅಲ್ಲಿನ ಅಗತ್ಯಾನುಸಾರವಾಗಿ ಅನೇಕ ಕಾನೂನುಗಳು ಬಂದಿವೆ. ಅನೇಕ ಸಂಶೋಧನೆಗಳು ಸಂರಕ್ಷಣೆಯ ದೃಷ್ಟಿಯಿಂದಲೇ ನಡೆದಿವೆ, ನಡೆಯುತ್ತಿವೆ.
.
ಪಕ್ಷಿ ಸಂರಕ್ಷಣೆ- 12
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com
ಇದುವರೆಗೂ ನಾವು ಸಂರಕ್ಷಣೆಯ ವಿವಿಧ ಅಂಶಗಳನ್ನು, ಆಯಾಮಗಳನ್ನೂ ನೋಡಿದೆವು. ಅದರ ಅರ್ಥ ತಿಳಿದುಕೊಂಡೆವು. ಆ ಕುರಿತಾಗಿ ಇರುವ ಸಿದ್ಧಾಂತಗಳನ್ನು ನೋಡಿದೆವು. ಇವುಗಳ ವ್ಯಾಪ್ತಿ “ನಾವು” ಮಾಡಬೇಕು ಎನ್ನುವುದರಿಂದ ತೊಡಗಿ ಅದು ತಂತಾನೇ ಆಗುವುದು ಎಂದು ಹೇಳಲಾಗುವ ಸಿದ್ಧಾಂತವಾದ ಗಾಯಾ ಅಥವಾ ಭೂತಾಯಿ ಸಿದ್ಧಾಂತದವರೆಗೆ ಇತ್ತು. ಈ ಎಲ್ಲವನ್ನೂ ನೋಡಿದ ಮೇಲೆ ಈ ಭೂಮಿಯ ಜೀವಿಗಳಾದ ನಾವು ಈ ವ್ಯವಸ್ಥೆಯ ಭಾಗವಾಗಿ ಅಳಿಯದೇ ಉಳಿಯುವುದು ಹೇಗೆ ಎಂಬ ಪ್ರಶ್ನೆಗೆ ನಾವು ಕೊಡುವ ಪ್ರಾಯೋಗಿಕ ಉತ್ತರದ ಮೇಲೆ ನಮ್ಮೆಲ್ಲರ ಅಸ್ಥಿತ್ವ ನಿಂತಿದೆಯೇ ಅಥವಾ ಪ್ರಕೃತಿ ನಮ್ಮ ತಪ್ಪಿಗೆ ಬೇರೆಯೇ ಆದ ರೀತಿಯಲ್ಲಿ ವರ್ತಿಸುತ್ತದೆಯೇ ಎಂಬಲ್ಲಿಗೆ ಬರುತ್ತದೆ.
ಈಗ ನಮ್ಮ ನಿಲುವು ಏನಾಗಿರಬೇಕು ಎಂಬ ಮಹತ್ವದ ಪ್ರಶ್ನೆಗೆ ಬರುತ್ತೇವೆ. ಇದಕ್ಕೆ ಉತ್ತರ ಬಹಳ ಸರಳ. ಸಹಜೀವಿಗಳೊಂದಿಗೆ ಆನಂದದಿಂದ ಬದುಕಲು ಬೇಕಾದ್ದನ್ನು ಮಾಡುವುದು! ಹಿಂದೆ, ಜನಸಂಖ್ಯೆ ಕಡಿಮೆಯಿದ್ದು ಸಂಪನ್ಮೂಲಗಳು ಯಥೇಚ್ಛವಾಗಿದ್ದಾಗ ಮಾನವನ ಚಟುವಟಿಕೆಯ ಪರಿಣಾಮ ಪರಿಸರದ ಮೇಲೆ ಗಣನೀಯವಾಗಿರಲಿಲ್ಲ. ಆದರೂ ಅಂದಿನ ಜನಪದರಲ್ಲಿ ಇವನ್ನು ಸಂರಕ್ಷಿಸಬೇಕು ಎಂಬ ಭಾವವಿದ್ದುದ್ದನ್ನು ಅಂದಿನ ವೈದಿಕ, ಅವೈದಿಕ ಸಾಹಿತ್ಯ ಸಂಸ್ಕೃತಿ ಆಚರಣೆಗಳಲ್ಲಿ ಕಾಣಬಹುದು. ಆದರೆ, ಈಗ? ಮನುಷ್ಯನ ಅಜ್ಞಾನದ ಜೊತೆಗೆ ಸ್ವಾರ್ಥವೂ ಸೇರಿ ಪರಿಸರದ ಸ್ಥಿತಿ ಹದಗೆಟ್ಟಿದೆ. ಇದನ್ನು ಸರಿಪಡಿಸಬೇಕಾದ ತುರ್ತು ಅಗತ್ಯ ಎಂದಿಗಿಂತಲೂ ಇಂದು ಇದೆ.
ಪರಿಸರದ ಸಂರಕ್ಷಣೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಅನೇಕ ಒಪ್ಪಂದಗಳಾಗಿವೆ. ವಿವಿಧ ದೇಶಗಳಲ್ಲಿ ಅಲ್ಲಿನ ಅಗತ್ಯಾನುಸಾರವಾಗಿ ಅನೇಕ ಕಾನೂನುಗಳು ಬಂದಿವೆ. ಅನೇಕ ಸಂಶೋಧನೆಗಳು ಸಂರಕ್ಷಣೆಯ ದೃಷ್ಟಿಯಿಂದಲೇ ನಡೆದಿವೆ, ನಡೆಯುತ್ತಿವೆ. ಪರಿಸರ ಸಂರಕ್ಷಣೆ ಎಂಬುದು ಅರಿವನ್ನು ಮೂಡಿಸುವ ಕಾರ್ಯವಾದರೂ ಅದರಿಂದಲೇ ಸಂರಕ್ಷಣೆ ಆಗದು. ಅದಕ್ಕೆ ಕಾಯುವುದಂತೂ ಆತ್ಮಹತ್ಯಾಕಾರಕವಾಗಿ ಬಿಡುತ್ತದೆ. ಎಲ್ಲರೂ ಅರಿಯಲಿ ಎಂದು ಕಾಯುತ್ತಾ ಕುಳಿತರೆ ಅಲ್ಲಿಯವರೆಗೂ ನಮ್ಮ ಕಾಡುಗಳು ಉಳಿದಾವೆ? ಹಾಗಾಗಿ ಕಾನೂನು ಕ್ರಮ, ಉಗ್ರ ಕಾನೂನು ಕ್ರಮ ಅರಿವಿನ ಕಾರ್ಯಕ್ರಮದ ಜೊತೆಜೊತೆಗೆ ಅಥವಾ ಇನ್ನು ಮುಂದಾಗಿಯೇ ತಪ್ಪಿತಸ್ಥರ ಮೇಲೆ ಜರುಗಬೇಕು. ಇದು ನಾಡಿನ ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಡಿ ನಡೆಯಬೇಕು.
ಯಾವುದನ್ನು ಸಂರಕ್ಷಿಸಬೇಕು? ಹೇಗೆ ಸಂರಕ್ಷಿಸಬೇಕು? ವಿಧಿವಿಧಾನಗಳೇನು? ಎಂಬ ಬಗೆಗೆ ಸಾಕಷ್ಟು ಕಾರ್ಯ ಈಗಾಗಲೇ ನಡೆದಿದೆ ಹಾಗೂ ಆ ಕುರಿತಾಗಿ ಕೆಲವು ಅಂಶಗಳನ್ನು ಈ ಅಂಕಣದಲ್ಲಿ ಈಗಾಗಲೇ ಅರಿತಿದ್ದೇವೆ. ಇಲ್ಲಿ ಎರಡು ಭಾಗಗಳು ಇವೆ. ಒಂದು ಕಾನೂನಿನ ಅನುಷ್ಠಾನ ಮತ್ತೊಂದು ಕಾನೂನಿಗೆ ಕಾರಣವಾದ ವಿಜ್ಞಾನ. ಈ ಅಂಕಣದಲ್ಲಿ ಮುಖ್ಯವಾಗಿ ಎರಡನೆಯದನ್ನು ಅಂದರೆ, ಕಾನೂನಿಗೆ ಕಾರಣವಾದ ವಿಜ್ಞಾನವನ್ನು ಹೆಚ್ಚು ಹೆಚ್ಚಾಗಿ ತಿಳಿಯುತ್ತಾ ಹೋಗೋಣ. ನಿಮ್ಮ ಅಭಿಪ್ರಾಯಗಳು ಬರಲಿ. ಎಲ್ಲರಿಗೂ ನಮಸ್ಕಾರಗಳು!