ರಾಮ್ಸಾರ್ ನಿಯಮಾನುಸಾರವಾಗಿ ಭಾರತದಲ್ಲಿ ಅನೇಕ ಪಕ್ಷಿತಾಣಗಳನ್ನು ರಾಮ್ಸಾರ್ ತಾಣಗಳು ಎಂದು ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪಾತ್ರ ಬಹುಹಿರಿದು.
ಪಕ್ಷಿ ಸಂರಕ್ಷಣೆ -14
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರ ಕೃಪೆ: ಶ್ರೀ ಜಿ.ಎಸ್. ಶ್ರೀನಾಥ
newsics.com@gmail.com
www.facebook.com/ksn.bird
ksn.bird@gmail.com
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಯಾಗಿದ್ದು ಆಗಸ್ಟ್ ಐದರಂದು. ಆಗಸ್ಟ್ ತಿಂಗಳ ಮೊದಲ ವಾರ ಅನೇಕ ವಿಶೇಷ ದಿನಗಳಿಗಾಗಿ ಪ್ರಸಿದ್ಧ. ಇದು ಮುಂದುವರೆದು ಪರಿಸರ ಪ್ರಿಯರಿಗೆ ಮರೆಯಲಾಗದಂತಹ ಕೊಡುಗೆ ಸಿಕ್ಕಿದ್ದು ಇದೇ ಅಗಸ್ಟ್ 3ರಂದು! ಇದು ರಾಮ ಭಕ್ತರಿಗೆ ಅಗಸ್ಟ್ ಐದರಂದು ಆದಂತಹ ಸಂತೋಷವನ್ನೇ ತಂದಿದೆ. ಅದೇನೆಂದರೆ, ಕರ್ನಾಟಕದ ಹೆಮ್ಮೆಯ ಪಕ್ಷಿತಾಣಗಳಲ್ಲಿ ಮಹತ್ವದ್ದಾದ ರಂಗನತಿಟ್ಟು ಪಕ್ಷಿಧಾಮ ರಾಜ್ಯದ ಮೊತ್ತಮೊದಲ ರಾಮ್ಸಾರ್ ತಾಣವೆಂದು ಘೋಷಣೆಯಾಗಿದೆ. ಇದೊಂದು ಸಡಗರದ ವಿಷಯ.
ಒಂದು ತಾಣವನ್ನು ರಕ್ಷಿಸುವುದು, ಅದಕ್ಕೆ ಕಾನೂನಿನ ರಕ್ಷಣೆಯನ್ನು ನೀಡುವುದು ಎಷ್ಟು ಮುಖ್ಯ ಎಂಬುದನ್ನು ನಾವು ಈ ಅಂಕಣದ ಮೊದಲ ಲೇಖನಗಳಲ್ಲಿ ತಿಳಿದಿದ್ದೇವೆ. ಸಂರಕ್ಷಣೆ ಕೇವಲ ಒಂದು ದೇಶದ ಕೆಲಸವಾಗಿ ಉಳಿದಿಲ್ಲ. ಅಂತಾರಾಷ್ಟ್ರೀಯ ಸಹಕಾರದಿಂದ ಮಾತ್ರ ಪರಿಣಾಮಕಾರಿ ಸಂರಕ್ಷಣೆ ಸಾಧ್ಯ. ಅನೇಕ ಅಂತಾರಾಷ್ಟ್ರೀಯ ಒಪ್ಪಂದಗಳು ಸಹ ಜಾರಿಯಲ್ಲಿವೆ. (ಅವುಗಳನ್ನು ಕುರಿತಾಗಿ ಈ ಅಂಕಣದಲ್ಲಿ ನಾವು ತಿಳಿಯಲಿದ್ದೇವೆ). ಅಂತಹ ಒಂದು ಒಪ್ಪಂದವೇ ರಾಮ್ಸಾರ್ ಒಪ್ಪಂದ. ಇದು ನಡೆದದ್ದು 1971ರಲ್ಲಿ. 1982ರಲ್ಲಿ ಭಾರತ ಇದಕ್ಕೆ ಸಹಿಹಾಕಿ ಸಹಯೋಗಿ ರಾಷ್ಟ್ರ ಎನಿಸಿಕೊಂಡಿತು. ರಾಮ್ಸಾರ್ ನಿಯಮಾನುಸಾರವಾಗಿ ಭಾರತದಲ್ಲಿ ಅನೇಕ ಪಕ್ಷಿತಾಣಗಳನ್ನು ರಾಮ್ಸಾರ್ ತಾಣಗಳು ಎಂದು ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪಾತ್ರ ಬಹುಹಿರಿದು. ಪರಿಸರಾಸಕ್ತರೆಲ್ಲರೂ ಈ ಸಂಸ್ಥೆಗೆ ಕೃತಜ್ಞರೂ ಆಗಿರಬೇಕು ಬೆಂಬಲಿಸಲೂ ಬೇಕು.
ಇದುವರೆಗೂ ದೇಶದಲ್ಲಿ ಅರವತ್ತ ನಾಲ್ಕು ರಾಮ್ಸಾರ್ ತಾಣಗಳಿವೆ. ಕರ್ನಾಟಕದಲ್ಲಿ ಒಂದು, ತಮಿಳುನಾಡಿನಲ್ಲಿ ಐದು, ಗೋವಾ, ಮಧ್ಯಪ್ರದೇಶ ಮತ್ತು ಒಡಿಶ್ಶಾದಲ್ಲಿ ತಲಾ ಒಂದೊಂದು ತಾಣಗಳನ್ನು ರಾಮ್ಸಾರ್ ತಾಣ ಎಂದು ಘೋಷಿಸಲಾಗಿದ್ದು ಸಂರಕ್ಷಣೆಯ ದೃಷ್ಟಿಯಿಂದ ಇದೊಂದು ಮಹತ್ವದ ಮೈಲುಗಲ್ಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಅರಣ್ಯ ಇಲಾಖೆಯನ್ನು ನಾವು ಶ್ಲಾಘಿಸಬೇಕು.
ಇದರಿಂದ ಏನಾಗುತ್ತದೆ?
ರಾಮ್ಸಾರ್ ತಾಣ ಎಂದು ಘೋಷಿಣೆಯಾದ್ದರಿಂದ ರಂಗನತಿಟ್ಟಿಗೆ ರಕ್ಷಣೆ ಹೆಚ್ಚುತ್ತದೆ. ಮಹತ್ವ ಹೆಚ್ಚುತ್ತದೆ. ಅಂತಾರಾಷ್ಟ್ರೀಯವಾಗಿ ರಾಜ್ಯದ ಪ್ರತಿಷ್ಠೆ ಸಹ ಹೆಚ್ಚಾಗುತ್ತದೆ. ಕಾನೂನು ನೀಡುವ ರಕ್ಷಣೆ ಎಂದರೆ ಇದನ್ನು ಡೀನೋಟಿಫೈ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಇನ್ನು ಹೆಚ್ಚುವರಿ ಸ್ಥಳವನ್ನು ತಾಣಕ್ಕೆ ಸೇರಿಸಬಹುದಾಗಿರುತ್ತದೆ.
ಹಿರಿಯ ವಿಜ್ಞಾನಿಗಳಾದ ಡಾ ಎಸ್ ಸುಬ್ರಹ್ಮಣ್ಯ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಇವರು ಕನ್ನಡಿಗರು ಎಂಬುದು ನಮ್ಮಲ್ಲೆರ ಹೆಚ್ಚಿನ ಹೆಮ್ಮೆಗೆ ಕಾರಣವಾಗಬೇಕು. ಇವರು ಡಾ ಸಲೀಂ ಅಲಿ ಅವರ ನೇರ ವಿದ್ಯಾರ್ಥಿಗಳು.
ಬಿಎನ್ಎಚ್ಸ್ನ ನಿರ್ದೇಶಕರಾಗಿದ್ದ ಡಾ ಅಸದ್ ರೆಹಮಾನಿ ಭಾರತದಲ್ಲಿ ರಾಮ್ಸಾರ್ ತಾಣಗಳು ಎಂದು ಘೋಷಿಸಲು ಯೋಗ್ಯವಾದ ತಾಣಗಳ ಪಟ್ಟಿಯನ್ನು ಸಿದ್ಧಪಡಿಸಿ ಆ ಕುರಿತಾದ ಬೃಹತ್ ಗ್ರಂಥವನ್ನು ರಚಿಸಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಇಷ್ಟು ಮಹತ್ವದ ಸುದ್ದಿಯನ್ನು ನಮ್ಮ ಪತ್ರಿಕಾ ಮಾಧ್ಯಮಗಳು ಅಗತ್ಯವಾದ ಪ್ರಚಾರ ಕೊಡಲಿಲ್ಲ ಎಂಬುದು ನಮ್ಮಲ್ಲಿ ಸಂರಕ್ಷಣೆ ಕುರಿತಾದ ಅರಿವಿನ ಕಂದರ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಇರಲಿ, ಆ ಕೊರತೆಯನ್ನು ತುಂಬುವಲ್ಲಿ ಈ ಅಂಕಣ, ತನ್ಮೂಲಕ ಈ ಜಾಲತಾಣ ನ್ಯೂಸಿಕ್ಸ್ ಡಾಟ್ ಕಾಂ (newsics.com) ನಿರಂತರ ಮಾಡುತ್ತಲೇ ಇರುತ್ತದೆ. ಇದರ ಜೀವತಂತುವಾದ ತಂಡಕ್ಕೆ ಧನ್ಯವಾದಗಳು.
ಕರ್ನಾಟಕದ ಇನ್ನು ಅನೇಕ ರಾಮ್ಸಾರ್ ತಾಣಗಳನ್ನು ಕುರಿತು ಈ ಅಂಕಣದಲ್ಲಿ ಬರುವಂತಹ ಕಾಲ ಬರಲಿ ಎಂದು ಆಶಿಸೋಣ. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಇದೊಂದು ರಾಮ್ಸಾರ್ ತಾಣವೆಂಬ ಹೆಮ್ಮೆ ಜಾಗೃತಿ ಎರಡೂ ನಮ್ಮಲ್ಲಿರಲಿ. ಎಲ್ಲರಿಗೂ ಶುಭಾಶಯಗಳು ಹಾಗೂ ನಮಸ್ಕಾರಗಳು. ರಾಮ್ಸಾರ್ ಕುರಿತಾಗಿ ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ವಾರ ಭೇಟಿಯಾಗೋಣ.