Tuesday, August 9, 2022

ಚಾತಕ ಪಕ್ಷಿ

Follow Us

  ಪಕ್ಷಿನೋಟಕೆ ಮಳೆ ಸಂಭ್ರಮದ ತೆರೆ!  

ಕಪ್ಪುಬಿಳಿ ಬಣ್ಣದ ತಲೆಯ ಮೇಲೆ ಚೊಟ್ಟಿಯಿರುವ ಹಕ್ಕಿ ಚಾತಕ. ಇಂಗ್ಲಿಷಿನ ಜಾಕೊಬಿನ್ ಎಂದರೂ ಅದೇ, ಕಪ್ಪುಬಿಳುಪು ಬಣ್ಣದ ಉಡುಪು. ಪ್ರಾನ್ಸಿನ ಒಂದು ಧಾರ್ಮಿಕ ಪಂಗಡ ಇದೇ ಮಾದರೆ ಉಡುಪನ್ನು ಧರಿಸುತ್ತದೆ. ಅವರನ್ನು ಜಾಕೊಬಿನ್‍ಗಳು ಎಂದೇ ಕರೆಯುತ್ತಾರೆ.

   ಪಕ್ಷಿನೋಟಕ್ಕೆ – 104   


ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ ಎಸ್ ಶ್ರೀನಾಥ
newsics.com@gmail.com
www.facebook.com/ksn.bird
ksn.bird@gmail.com

ಭಾರತಕ್ಕೆ, ಭಾರತದಂತಹ ದೇಶಕ್ಕೆ ಮಳೆ ಅದರಲ್ಲಿಯೂ ಮುಂಗಾರು ಮಳೆ ಜೀವಕ್ಕೆ ಚೈತನ್ಯ ತುಂಬುವ ದೈವ ಶಕ್ತಿ. ಅಂತಹ ಮಳೆಗಾಗಿ ಕಾಯುವ ಪಕ್ಷಿ ಚಾತಕ! ಕಾಳಿದಾಸ ತನ್ನ ಮೇಘದೂತದಲ್ಲಿ ಇದನ್ನು ರೂಪಕವಾಗಿ ಬಳಸಿದ. ಚಾತಕದಂತೆ ಕಾಯುತ್ತಾನೆ/ಕಾಯುತ್ತಿದ್ದೇನೆ ಎನ್ನುವುದು ಸಾಮಾನ್ಯ. ಹಾಗೆಯೇ, ಅದು ಕಾಯುವಿಕೆಗೂ ಪ್ರತೀಕ. ಇದರ ಕೂಗು ಮುಂಗಾರು ತರಿಸುತ್ತದೆ ಎಂಬ ಭಾವನೆಯಿದೆ. ಇವೆಲ್ಲ ಏನೇ ಇದ್ದರೂ ನಮ್ಮ ಜನರು ಪಕ್ಷಿಗಳನ್ನು ಗಮನಿಸುತ್ತಿದ್ದರು ಎಂಬುದಕ್ಕೆ ಇವು ಉದಾಹರಣೆಯೂ ಹೌದು, ಸಾಕ್ಷಿಯೂ ಹೌದು.

ಕಪ್ಪುಬಿಳಿ ಬಣ್ಣದ ತಲೆಯ ಮೇಲೆ ಚೊಟ್ಟಿಯಿರುವ ಹಕ್ಕಿ ಚಾತಕ. ಇಂಗ್ಲಿಷಿನ ಜಾಕೊಬಿನ್ ಎಂದರೂ ಅದೇ, ಕಪ್ಪುಬಿಳುಪು ಬಣ್ಣದ ಉಡುಪು. ಪ್ರಾನ್ಸಿನ ಒಂದು ಧಾರ್ಮಿಕ ಪಂಗಡ ಇದೇ ಮಾದರೆ ಉಡುಪನ್ನು ಧರಿಸುತ್ತದೆ. ಅವರನ್ನು ಜಾಕೊಬಿನ್‍ಗಳು ಎಂದೇ ಕರೆಯುತ್ತಾರೆ.

ತಲೆಯ ಮೇಲೆ ಚೊಟ್ಟಿಯುಳ್ಳ, ಕಪ್ಪುಬಿಳಿ ಬಣ್ಣದ ಸುಂದರವಾದ ಹಕ್ಕಿ. (Pied Cuckoo, Clamator jacobinus) ಮಿಡತೆ, ಉದ್ದಕೂದಲುಳ‍್ಳ ಹಾಗೂ ಕೂದಲಿರದ ಕಂಬಳಿ ಹುಳಗಳು, ನೆಲದ ಮೇಲಿನ ಮೃದ್ವಂಗಿಗಳು, ಇರುವೆಗಳು ) ಕೆಲವು ಓಟೆಯಿಲ್ಲದ ಹಣ್ಣುಗಳೂ ಸೇರಿದಂತೆ ಗಾಳಿಯಲ್ಲಿ ಹಾರಾಡುತ್ತಲೇ ಹಿಡಿಯುವ ಹುತ್ತದಿಂದ ಹೊರಬರುವ ಗೆದ್ದಲುಗಳು ಇದರ ಆಹಾರ. ಇದರ ವಿಶೇಷ ಗುಣವೆಂದರೆ ಕೊಗಿಲೆಯಂತೆ  ಇದು ಪರಪುಟ್ಟ! ಐವತ್ತಕ್ಕೂ ಹೆಚ್ಚು ಪ್ರಭೇದದ ಕುಕ್ಕೂ ಹಕ್ಕಿಗಳು ಪರಪುಟ್ಟ ಹಕ್ಕಿಗಳು ಎಂಬುದನ್ನು ನಾವು ತಿಳಿದಿದ್ದೇವಷ್ಟೆ? ಇದು ಮುಖ್ಯವಾಗಿ ಹರಟೆ ಮಲ್ಲ ಹಕ್ಕಿಯ ಗೂಡಿನಲ್ಲಿ ತನ್ನ ಮೊಟ್ಟೆಯಿಡುತ್ತದೆ. ಹರಟೆಮಲ್ಲಗಳ ಮರಿಮಾಡುವ ಕಾಲವೇ ಇದರದ್ದೂ ಜೂನ್‍ ನಿಂದ ಆಗಸ್ಟ್!

ಭಾರತದಾದ್ಯಂತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ,ಮಾಯನ್ಮಾರ್‍ಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಎರಡು ಪಂಗಡಗಳಿವೆ. ಸಾಮಾನ್ಯವಾಗಿ ಮರವಾಸಿಯಾದ ಇದು ಯಾವುದಾದರು ಕೀಟವನ್ನು ಹಿಡಿಯಲು.ಅಪರೂಪವಾಗಿ ನೆಲದ ಮೇಲೆ ಬರುತ್ತದೆ. ಕೆಲವು ಬೇಟೆಗಾರ ಹಕ್ಕಿಗಳ ಆಹಾರವೂ ಆದ ಇದು ಆಹಾರ ಸರಪಳಿಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಮಿಡತೆಗಳು, ಕಂಬಳಿಹುಳು ಹಾಗೂ ಮೃದ್ವಂಗಿಗಳನ್ನು ತಿನ್ನುವುದರಿಂದ ರೈತನ ಮಿತ್ರನೂ ಹೌದು. ಇಂತಹ ವಿಶೇಷ ಹಕ್ಕಿಯನ್ನು ನಾವು ಸಂರಕ್ಷಿಸಬೇಕು. ಇವು ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.

……………………………………………………..

ಎರಡು ವರ್ಷಗಳ ಹಿಂದೆ ನನ್ನ ಸನ್ಮಿತ್ರರಲ್ಲಿ ಒಬ್ಬರಾದ ಪರಮೇಶ್ವರ ಭಟ್ಟರು ತಾವೊಂದು ಹೊಸ ಸಾಹಸ ಮಾಡುತ್ತಿರುವುದಾಗಿಯೂ ಅದರಲ್ಲಿ ನಾನು ಭಾಗವಹಿಸಬೇಕೆಂದು ಕೇಳಿದರು. ನನ್ನ ಭಾಗವಹಿಸುವಿಕೆಯೇ ಈ ಅಂಕಣ. ಅಂದರೆ ಇಂದಿನದು ನೂರಾ ನಾಲ್ಕನೆಯ ಸಂಚಿಕೆ, ಎರಡು ವರ್ಷಗಳು ತುಂಬಿತು! ಇಷ್ಟು ದಿನ ನಡೆಸಿಕೊಂಡು ಬರಲು ಭಟ್ಟರ ಆತ್ಮೀಯತೆಯೇ ಕಾರಣ ಎಂದು ಹೇಳಬೇಕಾಗಿಯೇ ಇಲ್ಲ. ಅವರ ವಿಶ್ವಾಸ, ಅವರ ಸಹೋದ್ಯೋಗಿಗಳ ಸಹಕಾರದಿಂದ ಈ ಅಂಕಣ ಮೂಡಿಬಂದಿದೆ. ಇಲ್ಲಿನ ಲೇಖನಗಳಿಗೆ ನನ್ನ ಕ್ಷೇತ್ರ ಕಾರ್ಯವೂ ಒಂದು ಮುಖ್ಯ ಆಧಾರವಾದರೂ ಅಧ್ಯಯನವೂ ಒಂದು ಮುಖ್ಯವಾದ ಅಂಗ. ಆ ಪುಸ್ತಕಗಳ ಲೇಖಕರಿಗೆ ನಾನು ಕೃತಜ್ಞ. ಸಲೀಂ ಅಲಿ, ದಿಲ್ಲಾನ್ ರಿಪ್ಲಿ, ಪಮೇಲ ರಸ್ಮೆಸನ್‍ ಇಂತಹವರ ಸಾಹಿತ್ಯ ನನಗೆ ಸಹಾಯ ಮಾಡಿದೆ. ಅಂತೆಯೇ ಅನೇಕ ವಿಶ್ವಕೋಶಗಳ ಸಹಾವನ್ನೂ ಪಡೆದಿದ್ದೇನೆ. ಇವುಗಳ ಹಿಂದಿನ ಚೇತನಗಳಿಗೆ ನಮನಗಳು! (ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್‍, ದಿ ಬರ್ಡ್ಸ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್, ಬರ್ಡ್ಸ್ ಆಫ್ ಸೌಥ್ ಏಷ್ಯಾ, ಪೆಟ್ರೋನಿಯಾ ಹೀಗೆ ಅನೇಕ ಗ್ರಂಥಗಳ ಹಾಗೂ ಜೆಬಿಎನ್‍ಎಚ್‍ ನಂತಹ ಸಂಶೋಧನಾ ಪತ್ರಿಕೆಗಳನ್ನು ಬಳಸಿಕೊಂಡಿದ್ದೇನೆ. ಆ ಎಲ್ಲರಿಗೂ ಗೌರವಪೂರ್ವಕ ನಮನಗಳು.‍

ಇನ್ನು ನಿರಂತರವಾಗಿ ಚಿತ್ರಗಳನ್ನು ಒದಗಿಸಿದ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕನಾದ ಶ್ರೀ ಜಿ ಎಸ್ ಶ್ರೀನಾಥನ ಸಹಕಾರ ಚಿತ್ರಗಳನ್ನು ಒದಗಿಸುವುದು ಮಾತ್ರವಲ್ಲದೆ ಬರೆಹಗಳನ್ನು ತಿದ್ದುವುದು, ಸಲಹೆ ಕೊಡುವುದಕ್ಕೂ ವಿಸ್ತರಿಸಿತ್ತು. ಎರಡು ವಿಷಮ ಸಂದರ್ಭಗಳು ಈ ಎರಡು ವರ್ಷಗಳಲ್ಲಿ ಉಂಟಾಯಿತು. ಒಂದು ನನ್ನ ತಂಗಿಯ ಆಸ್ಪತ್ರೆವಾಸ ಹಾಗೂ ಮರಣ, ಇನ್ನೊಂದು ನಾನೇ ಕೈಮುರಿದುಕೊಂಡು ತಿಂಗಳಕಾಲ ಆಸ್ಪತ್ರೆಯಲ್ಲಿದ್ದ ಕಾಲ. ಆಗ ಈ ಶ್ರೀನಾಥನ ಬೆಂಬಲದಿಂದಲೇ ಲೇಖನಗಳನ್ನು ಕಳಿಸಲು ಸಾಧ್ಯವಾಗಿದ್ದು. ಧನ್ಯವಾದಗಳು ಎನ್ನುವುದು ಕ್ಲೀಶೆಯಾಗುತ್ತದೆ. ಕೃತಜ್ಞ ಎನ್ನುತ್ತೇನೆ. ಇದು ಔಪಚಾರಿಕತೆಯನ್ನು ಮೀರಿದ್ದು. ಇನ್ನು ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಗುರುಹಿರಿಯರಿಗೂ ತಂದೆತಾಯಿರಿಗೂ ಧನ್ಯವಾದಗಳು. ಕೊನೆಯದಲ್ಲದ ಕೊನೆಯದು ಓದುಗರು! ಅನೇಕರು ನಿರಂತರವಾಗಿ ಪ್ರತಿಕ್ರಯಿಸಿದ್ದೀರಿ. ಸಲಹೆ ಕೊಟ್ಟಿದ್ದೀರಿ. ತಿದ್ದಿದ್ದೀರಿ. ಮಕ್ಕಳಿಗೆ ತೋರಿಸುತ್ತಿದ್ದೇವೆ ಎಂದಿದ್ದೀರಿ. ಪುಸ್ತಕವಾಗಿ ಬರಲಿ ಎಂದು ಹಾರೈಸಿದ್ದೀರಿ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ಕೃತಜ್ಞ. ಇಲ್ಲಿಗೆ ಪಕ್ಷಿಗಳ ಮಾಹಿತಿಯನ್ನು ಕೊಡುತ್ತಿರುವ ಈ ಅಂಕಣ ಮುಕ್ತಾಯವಾಗಲಿದೆ. ಮುಂದಿನವಾರ “ಪಕ್ಷಿಸಂರಕ್ಷಣೆ” ಎಂಬ ಶೀರ್ಷಿಕೆಯ ಪಕ್ಷಿ ಸಂರಕ್ಷಣೆ ಕುರಿತಾದ ಮಾಹಿತಿಯುಳ್ಳ ಹೊಸ ಅಂಕಣ ನಿಮ್ಮ ಮುಂದೆ ತೆರೆದುಕೊಳ್ಳಲಿದೆ.  ಈ ಅಂಕಣಕ್ಕೆ ನೀಡಿದ ಸ್ವಾಗತವನ್ನು ಅದಕ್ಕೂ ನೀಡುತ್ತೀರೆಂದು ಭಾವಿಸಿದ್ದೇನೆ. ಅಂದಹಾಗೆ, ಈ ಅಂಕಣದ ಲೇಖನಗಳು ಪುಸ್ತಕ ರೂಪದಲ್ಲಿ ಬರಲಿ ಎಂಬ ನಿಮ್ಮ ಹಾರೈಕೆ ನಿಜವಾಗಿ, ಈ ಅಂಕಣ ಬರೆಹಗಳೇ ಅಲ್ಲದಿದ್ದರೂ ಅದನ್ನೂ ಮೀರಿದ ಲೇಖನಗಳಾಗಿ ಪುಸ್ತಕ ರೂಪದಲ್ಲಿ ಬರಲಿದೆ ಎಂದು ಹೇಳಲು ಅತೀವ ಸಂತೋಷವಾಗುತ್ತಿದೆ. ವಿವರಗಳನ್ನು ತಿಳಿಸುತ್ತೇನೆ ಎಲ್ಲರಿಗೂ ಧನ್ಯವಾದಗಳು, ಕೃತಜ್ಞ! ನಮ್ಮ ಪರಮೇಶ‍್ವರ ಭಟ್ಟರಿಗೆ ಇನ್ನೂ ಒಂದು ತೂಕ ಹೆಚ್ಚಿನ ಧನ್ಯವಾದಗಳು! ತಮ್ಮೆಲ್ಲರ ಸಹಕಾರ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ. ಇಂದಿನ ಹಕ್ಕಿ ಮಳೆಯ ಹಕ್ಕಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಮಳೆ ಹೀಗೆಯೇ ಇರಲಿ! ಎಲ್ಲರಿಗೂ ನಮಸ್ಕಾರಗಳು.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!