ಹೆಜ್ಜಾರ್ಲೆಗಳು ದೊಡ್ಡಗಾತ್ರದ ಹಕ್ಕಿಗಳು. ದೂರದೂರಿಂದ ಕೊಕ್ಕರೆ ಬೆಳ್ಳೂರಿಗೆ ಬಂದು ಮರಿ ಮಾಡಿಕೊಂಡು ಹೋಗುತ್ತವೆ! ದೊಡ್ಡಗಾತ್ರದ ನಿಸ್ಸೀಮ ಹಾರುವ ಹಾಗೂ ಈಜುವ ಪಕ್ಷಿಯಿದು.
ಪಕ್ಷಿನೋಟ 41

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com
ಬೆಂ ಗಳೂರಿನಿಂದ ನೂರು ಕಿಲೋಮೀಟರಿನ ಆಸುಪಾಸಿನ ಒಂದು ಪುಟ್ಟ ಹಳ್ಳಿ ಕೊಕ್ಕರೆ ಬೆಳ್ಳೂರು! ಇಲ್ಲಿನ ವಿಶೇಷವೆಂದರೆ, ದೂರದೂರಿಂದ ಈ ಹಳ್ಳಿಗೆ ದೊಡ್ಡಗಾತ್ರದ ಪಕ್ಷಿಗಳು ಬಂದು ಮರಿ ಮಾಡಿಕೊಂಡು ಹೋಗುತ್ತವೆ! ಅಲ್ಲಿನ ಜನರೂ “ಹೆರಿಗೆಗೆ ಬಂದ ಮಗಳು” ಎಂಬ ಭಾವಸಂಭ್ರಮದಲ್ಲಿಯೇ ಇವನ್ನು ಸ್ವಾಗತಿಸಿ, ಕಾಪಾಡುತ್ತಾರೆ! ದೊಡ್ಡ ಸಂಖ್ಯೆಗಳಲ್ಲಿ ಅಲ್ಲಿ ಇವು ಬರುತ್ತವೆ. ಕೊಕ್ಕರೆ ಬೆಳ್ಳೂರಿನಲ್ಲಿ ಒಂದು ಪವಿತ್ರವನವೂ ಇದೆ.
ಮೀನು ತಿನ್ನುವ ಕಲೆ…
ಈ ಹೆಜ್ಜಾರ್ಲೆಗಳು ದೊಡ್ಡಗಾತ್ರದ ಹಕ್ಕಿಗಳು. ಮೀನೇ ಪ್ರಧಾನವಾದ ಆಹಾರ. ದಕ್ಷಿಣ ಏಷ್ಯಾದಲ್ಲಿ ಮೂರು (ಈ ಮೂರೂ ಭಾರತದಲ್ಲಿಯೂ ಕಂಡುಬರುತ್ತವೆ) ಜಗತ್ತಿನಾದ್ಯಂತ ಎಂಟು ಪ್ರಭೇದದ ಹೆಜ್ಜಾರ್ಲೆಗಳು ಕಂಡುಬರುತ್ತವೆ. ದೊಡ್ಡಗಾತ್ರದ ನಿಸ್ಸೀಮ ಹಾರುವ ಹಾಗೂ ಈಜುವ ಪಕ್ಷಿಯಿದು. ಇವು ಬೇಟೆಯಾಡುವ ರೀತಿ ಕುತೂಹಲಕರವಾದದ್ದು. ಇವು ಗುಂಪಾಗಿ ಅರ್ಧ ವೃತ್ತಾಕಾರವಾಗಿ ನೀರಿನಲ್ಲಿ ಈಜುತ್ತಾ ಅಲ್ಲಿನ ಮೀನುಗಳನ್ನು ಮುಂದಕ್ಕೆ ಹೋಗಿ ಒಂದು ಸಣ್ಣ ಜಾಗಕ್ಕೆ ಸೀಮಿತವಾಗುವಂತೆ ಮಾಡುತ್ತವೆ. ನಂತರ ಬಟ್ಟಲಿನಿಂದ ದ್ರಾಕ್ಷಿ ತೆಗೆದುಕೊಂಡು ತಿನ್ನುವಂತೆ ಅವುಗಳ ಉದ್ದವಾದ ಕೊಕ್ಕನ್ನು ಬಳಸಿ ಮೀನನ್ನು ಎತ್ತಿ ತಿನ್ನುತ್ತವೆ. ಅಂದಹಾಗೆ ಇವಕ್ಕೆ ಕೊಕ್ಕಿನ ಕೆಳಗೆ ಉದ್ದವಾದ ಹೆಚ್ಚು ಆಳವಿಲ್ಲದ ಚೀಲವಿದ್ದು ಮೀನು ಹಿಡಿಯಲು ಸಹಾಯ ಮಾಡುತ್ತದೆ.ಭಾರತದಲ್ಲಿ ಕಂಡುಬರುವ ಹೆಜ್ಜಾರ್ಲೆಗಳಲ್ಲಿ ಚುಕ್ಕೆಕೊಕ್ಕಿನ ಹೆಜ್ಜಾರ್ಲೆ ಮಾತ್ರ ಇಲ್ಲಿ ಮರಿಮಾಡುವುದು. ಉಳಿದ ಎರಡು ಪ್ರಭೇದಗಳು ಯೂರೋಪ್ ಮುಂತಾದ ಕಡೆ ಮರಿಮಾಡುತ್ತವೆ. ಪರಿಸರದಲ್ಲಿನ ಕೀಟನಾಶಕಗಳಿಗೆ, ಗಲಾಟೆಗೆ ಬಹುಬೇಗ ಸ್ಪಂದಿಸುತ್ತವೆ.
ಸಾಮೂಹಿಕ ಜೀವನ…
ಮರದ ಮೇಲೆ ಗುಂಪಾಗಿ ಸಾಮಾನ್ಯವಾಗಿ ಬಣ್ಣದ ಬಕದಂತಹ ಹಕ್ಕಿಗಳೊಂದಿಗೆ ಗೂಡು ಕಟ್ಟುತ್ತವೆ. ಇವುಗಳ ಹಿಕ್ಕೆ ಅತ್ಯುತ್ತಮ ಗೊಬ್ಬರ. ಹಾಗಾಗಿ, ಇವನ್ನು ಸಂರಕ್ಷಿಸುವ ರೈತರಿಗೆ ಇದು ಹೆಚ್ಚುವರಿ ಲಾಭ
ಚುಕ್ಕೆಕೊಕ್ಕಿನ ಹೆಜ್ಜಾರ್ಲೆ ದಕ್ಷಿಣ ಭಾರತದಾದ್ಯಂತ ಹಾಗೂ ಉತ್ತರ ಭಾರತದಲ್ಲಿ ಅಲ್ಲಲ್ಲಿ ಕಂಡುಬರುತ್ತದೆಯಾದರೆ ಉಳಿದೆರಡು ಹೆಜ್ಜಾರ್ಲೆಗಳು ಉತ್ತರ ಭಾರತದ ಕೆಲವೇ ಭಾಗಗಳಿಗೆ ವಲಸೆ ಬರುತ್ತವೆ. ಪ್ರಧಾನವಾಗಿ ಬಿಳಿಬಣ್ಣವನ್ನು ಹೊಂದಿರುವ ದೊಡ್ಡ ಬಿಳಿ ಹೆಜ್ಜಾರ್ಲೆ (ಗ್ರೇಟ್ ವೈಟ್ ಪೆಲಿಕನ್) ದಕ್ಷಿಣ ಭಾರತದಲ್ಲಿ ಅಪರೂಪವಾಗಿ ಕಂಡುಬಂದ ದಾಖಲೆಯಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಂಡಮಾನ್ ನಿಕೋಬಾರ್’ಗಳಲ್ಲಿ ಕಂಡಿದೆ ಎಂಬ ದಾಖಲೆಗಳನ್ನು ಪಕ್ಷಿ ವಿಜ್ಞಾನಿಗಳು ತೀವ್ರ ಸಂದೇಹದಿಂದ ನೋಡುತ್ತಾರೆ ಮತ್ತು ತಪ್ಪಾಗಿ ದಾಖಲಿಸಲಾಗಿದೆ ಎನ್ನುತ್ತಾರೆ.
ನಮ್ಮ ಮನೆ ಮಗಳಾದ ಹಾಗೂ ರೈತ ಮಿತ್ರನಾದ ಈ ಹಕ್ಕಿಯನ್ನು ನೀವು ಕಂಡರೆ ನಮಗೆ ಬರೆದು ತಿಳಿಸಿ. ಫೆಬ್ರವರಿ ನಂತರ ಮೈಸೂರಿಗೆ ಹೋಗುತ್ತಿದ್ದರೆ ಮಂಡ್ಯದ ನಂತರ ಬರುವ ಕೊಕ್ಕರೆ ಬೆಳ್ಳೂರಿಗೆ ನಿಮ್ಮ ವಾಹನ ತಿರುಗಿಸಿ ನೋಡಿ ಬನ್ನಿ. ಅಂದಹಾಗೆ, ಇದು ಗಂಡಾಂತರದಂಚಿನಲ್ಲಿರುವ ಪಕ್ಷಿ.