ಹೆಸರು ಪನ್ನಾಗರಿ ಎಂದು. ಇಂಗ್ಲಿಷಿನಲ್ಲಿ Crested Serpent-Eagle Spilornis cheela ಎನ್ನುತ್ತಾರೆ. ಆಹಾರ ಪ್ರಧಾನವಾಗಿ ಹಾವುಗಳು. ಕಪ್ಪೆ, ಹಲ್ಲಿ, ಇಲಿಗಳನ್ನೂ ತಿನ್ನುತ್ತದೆ. ಕಾಯಿಲೆ ಬಂದಿರುವ ಹಕ್ಕಿಗಳನ್ನು ತಿನ್ನುತ್ತದೆ. ಒಮ್ಮೆ ಹಾವುಮೀನನ್ನು ತಿಂದ ದಾಖಲೆ ಇದೆ
ಪಕ್ಷಿನೋಟ – 75
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್.ಶ್ರೀನಾಥ
newsics.com@gmail.com
www.facebook.com/ksn.bird
ksn.bird@gmail.com
ನಮ್ಮಲ್ಲಿ ಹಾಡುಹಕ್ಕಿಗಳು, ನೀರಹಕ್ಕಿಗಳು ಹಾಗೇ ಬೇಟೆಗಾರ ಹಕ್ಕಿಗಳು ಎಂಬ ಹಕ್ಕಿಗಳ ವಿಂಗಡಣೆ ಇದೆ. ಇವುಗಳ ಹೆಸರೇ ಅವನೆಂದು ಹೇಳುತ್ತವೆ. ಗೂಬೆ, ಹಾಗೂ ಕಳೆದೆರೆಡು ವಾರಗಳಿಂದ ನಾವು ಪರಿಚಯ ಮಾಡಿಕೊಳ್ಳುತ್ತಿರುವ ಹದ್ದು, ಗರುಡ, ಬಿಜ್ಜು ಈ ಎಲ್ಲವೂ ಬೇಟೆಗಾರ ಹಕ್ಕಿಗಳ ಪಂಗಡಕ್ಕೇ ಸೇರಿದ್ದು.
ಇಂದು ಅಂತಹದ್ದೇ ಒಂದು ಹಕ್ಕಿಯನ್ನು ಪರಿಚಯ ಮಾಡಿಕೊಳ್ಳೋಣ. ಆದರೆ, ಇದು ಆ ಹಕ್ಕಿಗಳಷ್ಟು ಸೌಮ್ಯವಲ್ಲ. ಕಾಡಿನಲ್ಲಿ ಮಾತ್ರ ಕಂಡುಬರುವಂತಹವು. ದೊಡ್ಡಗಾತ್ರದ, ಹಳದಿ ಮುಖ, ಕಪ್ಪು ಕಣ್ಣುಳ್ಳ, ಕಂದು ಹಕ್ಕಿ. ಮೈಮೇಲೆ ಬಿಳಿ ಇಲ್ಲವೆ ನಸುಬಿಳಿ ಚುಕ್ಕೆಗಳಿರುತ್ತವೆ. ಇದಕ್ಕೆ ಶಿಖೆ ಇದ್ದು ಹಕ್ಕಿ ಅದನ್ನು ಬಿಚ್ಚಿ ಪ್ರದರ್ಶಿಸಿದಾಗ ರುದ್ರರಮಣೀಯವಾಗಿರುತ್ತದೆ. ಹೆಸರು ಪನ್ನಾಗರಿ ಎಂದು. ಇಂಗ್ಲಿಷಿನಲ್ಲಿ Crested Serpent-Eagle Spilornis cheela ಎನ್ನುತ್ತಾರೆ.
ಆಹಾರ ಪ್ರಧಾನವಾಗಿ ಹಾವುಗಳು. ಕಪ್ಪೆ, ಹಲ್ಲಿ, ಇಲಿಗಳನ್ನೂ ತಿನ್ನುತ್ತದೆ. ಕಾಯಿಲೆ ಬಂದಿರುವ ಹಕ್ಕಿಗಳನ್ನು ತಿನ್ನುತ್ತದೆ. ಒಮ್ಮೆ ಹಾವುಮೀನನ್ನು ತಿಂದ ದಾಖಲೆ ಇದೆ.
ಎತ್ತರದ ಮರದ ಮೇಲೆ ವಿಶಾಲವಾದ ಗೂಡು ನಿರ್ಮಿಸುವ ಇದು ಒಂದೇ ಮೊಟ್ಟೆ ಇಡುವುದು ವೈಶಿಷ್ಟ್ಯ. ಗಂಡು ಹೆಣ್ಣು ಎರಡೂ ಗೂಡುನಿರ್ಮಿಸುವುದರಿಂದ ಹಿಡಿದು ಮರಿಗಳಿಗೆ ಆಹಾರ ಕೊಡುವವರೆಗೆ ಎಲ್ಲ ಕಾರ್ಯಗಳನ್ನು ಹಂಚಿಕೊಳ್ಳುತ್ತದೆ. ಕಾಡಿನ ಆರೋಗ್ಯಕ್ಕೆ ಇಂತಹ ಹಕ್ಕಿಗಳ ಕೊಡುಗೆ ಅಪಾರ.
ಇದು ನಿಮಗೆ ಕಾಣಬಹುದಾದ ಸಾಧ್ಯತೆ ಕಾಡಿನಲ್ಲಿ ಪಕ್ಷಿವೀಕ್ಷಣೆ ಮಾಡಿದಾಗ ಇಲ್ಲವೆ, ಸಫಾರಿ ಹೋದಾಗ. ಇದು ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.
ಅಂದಹಾಗೆ, ಇದು 75ನೇ ಅಂಕಣ! ಅಮೃತಮಹೋತ್ಸವ! ಸಂಪಾದಕರ ಪ್ರೀತಿವಿಶ್ವಾಸ ಅಮೃತಧಾರೆ ಕೂಡ. ಹಾಗೆಯೇ ಶ್ರೀ ಜಿ.ಎಸ್. ಶ್ರೀನಾಥರ ಕೊಡುಗೆ. ಎಲ್ಲ ಓದುಗರಿಗೂ ಹಾಗೂ ನಿಮ್ಮ ಇಡೀ ತಂಡಕ್ಕೆ ಹೃತ್ಪೂರ್ವಕ ನಮಸ್ಕಾರಗಳು!